ಉದ್ಯೋಗಕ್ಕಾಗಿ ಅಲ್ಲ, ಚುನಾವಣೆ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನ : ಉಪ್ಪಿ ಹೊಸ ತಂತ್ರ

ಬೆಂಗಳೂರು : ಮುಂಬರಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶವಿದೆ, ಅರೆ ಇದೇನು ಯಾವುದೋ ಹುದ್ದೆಗೆ ಅರ್ಜಿ ಆಹ್ವಾನಿಸಿದಂತೆ ಚುನಾವಣಾ ಸ್ಪರ್ಧೆಗೆ ಕಣಕ್ಕಿಳಿಯಲು ಆಹತವಾನಿಸಿದ್ದಾರಲ್ಲಾ ಅಂತೀರಾ? ಇದು ಉಪೇಂದ್ರ ಅವರ ಹೊಸ ಪಕ್ಷದ ಹೊಸ ಪ್ಲಾನ್.

ಹೌದು, ರಾಜ್ಯ ರಾಜಕೀಯದಲ್ಲಿ ಮಿಂಚಿನ ಸಂಚಲನ ಮೂಡಿಸಿರುವ ನಟ ನಿರ್ದೇಶಕ ಉಪೇಂದ್ರ ಅವರ ಹೊಸ ರಾಜಕೀಯ ಪಕ್ಷ ಕರ್ನಾಟಕ ಪ್ರಜ್ಞಾವಂತರ ಪಕ್ಷ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಹೊಸ ಮಾರ್ಗವನ್ನು ಅನುಸರಿಸುತ್ತಿದೆ.ಅದಕ್ಕಾಗಿ ವೆಬ್ ಸೈಟ್ ರೂಪಿಸಿದ್ದು ಅಭ್ಯರ್ಥಿಗಳು ಆನ್ ಲೈನ್ ಮೂಲಕವೇ ಅರ್ಜಿ ಸಲ್ಲಿಕೆ ಮಾಡಬೇಕು.

ಈ ಕುರಿತು ಪ್ರೆಸ್ ಕ್ಲಬ್ ನಲ್ಲಿ ನಟ ನಿರ್ದೇಶನ ಪಕ್ಷ ಹಿಸ ಆ್ಯಪ್ ಮತ್ತು ವೆಬ್ ಸೈಟ್ ಪ್ರಜಾಕೀಯವನ್ನು ಲಾಂಚ್ ಮಾಡಿದರು. ನಂತರ ಸುದ್ದಿಗೋಷ್ಠಿ ನಡೆಸಿದ ಉಪೇಂದ್ರ ವೇದಿಕೆಯಲ್ಲಿ ಖಾಲಿ ಆಸನ ಇಟ್ಟು ಇಲ್ಲಿ ಪಕ್ಷದ ಪದಾಧಿಕಾರಿಗಳು ಕುಳಿತುಕೊಳ್ಳಲ್ಲ,ಅಭ್ಯರ್ಥಿಗಳಿಗಾಗಿ ಈ ಆಸನ ಎಂದು ಹೊಸ ಆಲೋಚನೆ‌ ಬಿಚ್ಚಿಟ್ಟರು.

ಪಕ್ಷವನ್ನು ಬೆಳೆಸುವುದಲ್ಲ, ದೇಶವನ್ನು ಬೆಳೆಸಬೇಕು , ಪಕ್ಷದ ಟಿಕೆಟ್ ಸಿಕ್ಕರೆ ಕೋಟಿ ಕೊಡಲಾಗುತ್ತದೆ ಎನ್ನುವ ವಾತಾವರಣ ಸೃಷ್ಠಿಯಾಗಿದೆ. ಅದನ್ನು ಹೊಡೆಯಬೇಕು ಎನ್ನುವುದೇ ನಮ್ಮ ಉದ್ದೇಶ.ಅದಕ್ಕಾಗಿಯೇ ಹೊಸ ಆಲೋಚನೆ,ಚಿಂತನೆಯೊಂದಿಗೆ ಪಕ್ಷ ಕಟ್ಟಲಾಗಿದೆ ಎಂದರು.

ನಮ್ಮ ಪಕ್ಷ ಅಭ್ಯರ್ಥಿಯಾಗುವ ವ್ಯಕ್ತಿಗಳು ತಾವೇ ಖುದ್ದಾಗಿ ಅವರ ಕ್ಷೇತ್ರದ ಸಮಸ್ಯೆ ಕುರಿತು ಕ್ಷೇತ್ರದ ಜನರೊಂದಿಗೆ‌ ಚರ್ಚಿಸಿದ ವಿವರವುಳ್ಳ ವೀಡಿಯೋ ಕಳಿಸಬೇಕು. ಕೃಷಿ ಸೇರಿದಂತೆ ಎಲ್ಲಾ ಕ್ಷೇತ್ರಗಳ ಸಮಸ್ಯೆ ಪರಿಹಾರ,ಬಜೆಟ್ ವಿವರ ಸೇರಿದಂತೆ
ಸಂಪೂರ್ಣ ವಿವರ ಹಾಗು ಅವರ ಐಡಿಯೋ ಒಳಗೊಂಡ ರಫ್ ಎಸ್ಟಿಮೇಟ್ ಅನ್ನು ನಮ್ಮ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಬೇಕು. ಗ್ರಾಮ ಪಂಚಾಯತ್,ತಾಲ್ಲೂಕು ಪಂಚಾಯತ್,ಜಿಲ್ಲಾ ಪಂಚಾಯತ್, ವಿಧಾನಸಭೆ ಸೇರಿ ಎಲ್ಲದಕ್ಕೂ ಇದು ಅನ್ವಯವಾಗಲಿದೆ.224 ದಿಂದ ಯಾರು ಬೇಕಾದರೂ ಬರಬಹುದು, ಅರ್ಜಿ ಸ್ವೀಕಾರವಾದರೆ,ಅವರ ಯೋಚನೆ ನಮಗೆ ತೃಪ್ತಿಯಾದರೆ ಅವರೊಂದಿಗೆ ಸಾರ್ವಜನಿಕರ ಸಮ್ಮುಖದಲ್ಲಿ ಒನ್ ಟು ಒನ್ ಸಂದರ್ಶನ ನಡೆಸಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ ಎಂದರು.

ಎಲ್ಲಾ ಕ್ಷೇತ್ರಗಳ ಅರ್ಜಿ ಪಡೆದು ಅದನ್ನು ಪರಿಶೀಲಿಸಿ ಸಮಸ್ಯೆ, ಪರಿಹಾರ,ಬಜೆಟ್ ಇತ್ಯಾದಿ ಒಳಗೊಂಡ ಸ್ಥಳೀಯ ಪ್ರಣಾಳಿಕೆ ಮಾಡಲಾಗುತ್ತದೆ, ಅದಕ್ಕೆ ಸಂಶೋಧನೆ ಮಾಡಿಯೇ ಸಿದ್ದಪಡಿಸಲಾಗುತ್ತದೆ. ನಮ್ಮ ಕ್ಷೇತ್ರಾವಾರು ಪ್ರಣಾಳಿಕೆ, ಸ್ಥಳೀಯ ಮಟ್ಟಕ್ಕೆ ಏನು ಬೇಕು ಎನ್ನುವ ನಮ್ಮ ಪ್ರಯೋಗ ನೋಡಿ ಬೇರೆಯವರೂ ಅಳವಡಿಸಿಕೊಳ್ಳಬಹುದು,ಇದರಿಂದ ಸಮಾಜಕ್ಕೆ ಸಹಕಾರಿಯಾಗಲಿದೆ ಎಂದರು.

ನಮ್ಮ ಪಕ್ಷದ ಅಭ್ಯರ್ಥಿಯಾಗಲು ಯಾವುದೇ ವಿದ್ಯಾರ್ಹತೆ ಮಾನದಂಡವಲ್ಲ, ಅರ್ಹತೆಯೇ ಮಾನದಂಡ.ಹೆಬ್ಬೆಟ್ಟಿನಿಂದ ಐಐಟಿ ವರೆಗೂ ಡಾಕ್ಟರ್, ಇಂಜಿನಿಯರ್ ಸೇರಿ ಯಾರು ಬೇಕಾದರೂ ಬರಬಹುದು,  ವೆಬ್ ಸೈಟ್ ಗೊತ್ತಿಲ್ಲದವರು ನಮ್ಮ ಮನೆಗೆ ಅಥವಾ ಕಚೇರಿಗೆ ಬಂದು ಸಲ್ಲಿಕೆ ಮಾಡಬಹುದು.ಇದಕ್ಕಾಗಿ ಒಂದು ತಿಂಗಳ ಕಾಲಾವಕಾಶ ನೀಡುತ್ತೇವೆ. ಅಷ್ಟರಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬೇಕು, ನಮಗೂ ಅರ್ಜಿಗಳ ಪರಿಶೀಲಿಸಲು ಸಮಯ ಬೇಕು, ಇಂಟರ್ ವ್ಯೂ ಮಾಡಬೇಕು,ಲೈವ್ ಸಂದರ್ಶನದ ಮೂಲಕವೇ ಅಭ್ಯರ್ಥಿಯನ್ನು ಅಂತಿಮಗೊಳಿಸಲಾಗುತ್ತದೆ ಎಂದರು.

ಇತರೆ ಪಕ್ಷಗಳ ರೀತಿ ನಾವು ಯಾವುದೇ ರ‌್ಯಾಲಿ ಮಾಡುವುದಿಲ್ಲ.ಇತರೆ ಪಕ್ಷದಂತೆ ನಮ್ಮ ಪಕ್ಷದಲ್ಲಿ‌ ಜಿಲ್ಲಾ ಸಮಿತಿ ಇರಲ್ಲ, ಅಲ್ಲಿ ಅವರೇ ನಿಂತು ಗೆಲ್ಲಬೇಕು,ಅವರ ಪರಿಶ್ರಮ,ಆಲೋಚನೆಗಳೇ ಅವರಿಗೆ ಶ್ರೀರಕ್ಷೆಯಾಗಲಿದೆ. ಮಾಧ್ಯಮಗಳ ಮೂಲಕವೇ ನಾವು ಜನರನ್ನು ತಲುಪುತ್ತೇವೆ, ಮೀಸಲು ಕ್ಷೇತ್ರಗಳಿಗೂ ಇದೇ ಮಾನದಂಡವಿರಲಿದೆ.ನಮಗೆ ಅಭ್ಯರ್ಥಿಗಳ ಕೊರತೆ ಆಗಲ್ಲ.ಈಗಾಗಲೇ 500 ಅರ್ಜಿ ಬಂದಿವೆ ಎಂದರು.

ನಾನು ಕುಂದಾಪುರದಿಂದ ಸ್ಪರ್ಧಿಸುತ್ತೇನೆ ಎನ್ನುವುದು ಊಹಾಪೋಹ, ಕುಂದಾಪುರ,ಉತ್ತರ ಕರ್ನಾಟಕ,ಬೆಂಗಳೂರು ಅಂತಾ ಇನ್ನೂ ಯಾವುದೇ ನಿರ್ಧಾರ ಆಗಿಲ್ಲ, ಅರ್ಜಿ ಸಲ್ಲಿಸುವವರಿಗೆ ಮೊದಲ ಅಧ್ಯತೆ,ನಾನು ನಂತರ ನಿರ್ಧರಿಸುತ್ತೇನೆ ಎಂದರು.

ನಾನು ಕುಟುಂಬ ರಾಜಕಾರಣ ಮಾಡುವುದಿಲ್ಲ. ಪಕ್ಷದ ಘೋಷಣೆಯ ಕಾರ್ಯಕ್ರಮಕ್ಕೆ ಪತ್ನಿಗೆ ಬೇಸರ ಆಗಬಾರದು ಎಂದು ಕರೆದುಕೊಂಡು ಬಂದಿದ್ದೆ ಅಷ್ಟೇ, ಆದರೆ ಅದಕ್ಕೆ ಉಪೇಂದ್ರ ಕುಟುಂಬ ರಾಜಕಾರಣ ಆರಂಭಿಸಿದ್ದಾರೆ ಎಂದು ಆರೋಪಿಸಿದರು.ಹಾಗಾಗಿ ಇಂದು ನನ್ನ ಪತ್ನಿ ಸೇರಿ ಕುಟುಂಬದ ಯಾರನ್ನೂ ಕರೆ ತಂದಿಲ್ಲ ಎಂದು ಉಪೇಂದ್ರ ಸ್ಪಷ್ಟೀಕರಣ ನೀಡಿದರು.

Leave a Reply

Your email address will not be published.

Social Media Auto Publish Powered By : XYZScripts.com