ಈ ವಿಶ್ವವಿದ್ಯಾಲಯದಲ್ಲಿ ಮಾಂಸಾಹಾರಿಗಳಿಗೆ ಇಲ್ಲ ಚಿನ್ನದ ಪದಕದ ಸೌಭಾಗ್ಯ..!

ಪುಣೆಯಲ್ಲಿರುವ ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾನಿಲಯದಲ್ಲಿ ಗೋಲ್ಡ್ ಮೆಡಲ್ ಪಡೆಯಲು ಬರೀ ಹೆಚ್ಚು ಮಾರ್ಕ್ಸ್ ಗಳಿಸಿದರೆ ಸಾಲದು, ಸಂಪೂರ್ಣ ವೆಜಿಟೇರಿಯನ್ ಆಗಿರಬೇಕು. ಅದರ ಜೊತೆಗೆ ನಿಮಗೆ ಮದ್ಯ ಸೇವಿಸುವ ಅಭ್ಯಾಸವೂ ಇರಬಾರದು.

ಪ್ರಪಂಚದ ಯಾವುದೇ ವಿಶ್ವವಿದ್ಯಾಲಯಗಳಲ್ಲಾಗಲೀ, ಸಾಮಾನ್ಯವಾಗಿ ಪರೀಕ್ಷೆಯಲ್ಲಿ ಗರಿಷ್ಟ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಗೋಲ್ಡ್ ಮೆಡಲ್ ನೀಡಲಾಗುತ್ತದೆ. ಆದರೆ ಭಾರತದಲ್ಲಿರುವ ಈ ವಿಶ್ವವಿದ್ಯಾಲಯದಲ್ಲಿ ನೀವು ಎಷ್ಟೇ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರೂ, ಕಷ್ಟ ಪಟ್ಟು ಓದಿ ಎಲ್ಲರಿಗಿಂತ ಗರಿಷ್ಟ ಅಂಕ ಗಳಿಸಿದ್ದರೂ, ನೀವು ಮಾಂಸಾಹಾರಿಗಳಾಗಿದ್ದರೆ, ಮದ್ಯ ಸೇವಿಸುವವರಾಗಿದ್ದರೆ ಗೋಲ್ಡ್ ಮೆಡಲ್ ನೀಡಲಾಗುವುದಿಲ್ಲ.

ಇದಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ ಒಂದು ಸುತ್ತೋಲೆಯನ್ನು ಹೊರಡಿಸಿದೆ. ಗೋಲ್ಡ್ ಮೆಡಲ್ ಪಡೆಯಲು ಗರಿಷ್ಟ ಅಂಕದ ಜೊತೆಗೆ ಏನೇನು ಅರ್ಹತೆ ಇರಬೇಕು ಎಂದು 10 ಅಂಶಗಳಲ್ಲಿ ತಿಳಿಸಲಾಗಿದೆ. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಗಳಲ್ಲಿ ಭಾಗವಹಿಸಿ ಪದಕಗಳನ್ನು ಗೆದ್ದಿರಬೇಕು. ಅದರಲ್ಲೂ ಯೋಗ, ಪ್ರಾಣಾಯಾಮ, ಧ್ಯಾನ ಸ್ಪರ್ಧೆಗಳಲ್ಲಿ ಭಾಗವಹಿಸಿದವರಿಗೆ ಪ್ರಥಮ ಆದ್ಯತೆ.

ವಿದ್ಯಾರ್ಥಿಗಳು ಭಾರತೀಯ ಸಂಸ್ಕೃತಿಯಲ್ಲಿ ನಂಬಿಕೆಯಿಟ್ಟು, ಸಂಪ್ರದಾಯಗಳನ್ನು ಪಾಲಿಸಬೇಕು. ಮಾಂಸಾಹಾರ ಹಾಗು ಮದ್ಯ ಸೇವಿಸುವಂತಿಲ್ಲ. ಅಲ್ಲದೇ ಎಚ್ ಐವಿ ಬಗ್ಗೆ ತಿಳುವಳಿಕೆ , ರಕ್ತದಾನ ಶಿಬಿರ, ಪರಿಸರ ರಕ್ಷಣೆ, ಸಾಕ್ಷರತೆ, ಸ್ವಚ್ಛತಾ ಕಾರ್ಯ ಮುಂತಾದ ಸಾಮಾಜಿಕ ಕೆಲಸಗಳಲ್ಲಿ ಸಕ್ರಿಯವಾಗಿ ಭಾಗವಹಿಸಿರಬೇಕು.

ಸಾವಿತ್ರಿ ಬಾಯಿ ಫುಲೆ ವಿಶ್ವವಿದ್ಯಾಲಯದ SFI ನ ಅಧ್ಯಕ್ಷ ಸತೀಶ್ ಗೋರೆ ಈ ಕ್ರಮವನ್ನು ಬಲವಾಗಿ ಖಂಡಿಸಿದ್ದು, ಕಾಲೇಜು ಹಾಗೂ ವಿಶ್ವವಿದ್ಯಾಲಯದ ತುಂಬ ಬಲಪಂಥೀಯ ವಿಚಾರಧಾರೆಯನ್ನು ಹೇರುವ ಪ್ರಯತ್ನ ನಡೆಯುತ್ತಿದೆ ಎಂದು ಆಪಾದಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com