ನೋಟ್ ಬ್ಯಾನ್ ಬಡವರಿಗೆ ಮಾಡಿದ ಮಹಾನ್ ದ್ರೋಹವಾಗಿದೆ : ಸಿದ್ದರಾಮಯ್ಯ

ನೋಟು ಅಮಾನ್ಯಗೊಂಡು ಒಂದು ವರ್ಷವಾದ ಹಿನ್ನೆಲೆಯಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಅಯೋಜಿಸಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಿದ್ದರು.

ದೇಶದಲ್ಲಿ ನೋಟು ಅಮಾನ್ಯದ ಉದ್ದೇಶ ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಮಾಡುವ ಹುನ್ನಾರವೇ ಹೊರತು ದೇಶದಲ್ಲಿ ಆರ್ಥಿಕ ಸುಭದ್ರತೆ ತರಲು ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಇಂದು ಏರ್ಪಡಿಸಿದ್ದ ಭಾರತ ನರಳುತ್ತಿದೆ ಪ್ರತಿಭಟನಾ ಧರಣಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಿಸಿ ವರ್ಷ ಮುಗಿದಿದ್ದು ಇದು ದೇಶದ ಜನತೆಗೆ ಕರಾಳ ದಿನವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ನೋಟು ರದ್ದತಿಯಿಂದ ತೊಂದರೆಗೊಳಗಾದವರು ರೈತರು, ಕೂಲಿ ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಮಧ್ಯಮ ವರ್ಗದವರೇ ಹೊರತು ಶ್ರೀಮಂತರಲ್ಲ.

ಕೇಂದ್ರ ಸರ್ಕಾರ  ರೂ. ೫೦೦ ಹಾಗೂ ೧೦೦೦ ಮುಖ ಬೆಲೆಯ ನೋಟುಗಳನ್ನು ರದ್ದು ಪಡಿಸಿ ಜನ ಸಾಮಾನ್ಯರ ನೆಮ್ಮದಿಗೆ ಭಂಗವನ್ನುಂಟು ಮಾಡಿದೆ. ಇದರಿಂದ ದೇಶದ ಜನತೆಗೆ ಮಾಡಿದ ಮಹಾನ್ ದ್ರೋಹವಾಗಿದೆ ಎಂದರು.

ದೇಶದಲ್ಲಿ ಈಗ ಆಥಿಕ ವ್ಯವಸ್ಥೆ ಕುಂಠಿತಗೊಳ್ಳಲು, ಉತ್ಪಾದನಾ ಕ್ಷೇತ್ರ ತಲ್ಲಣಗೊಳ್ಳಲು ಯುವಕರಿಗೆ ಉದ್ಯೋಗ ಕಡಿಮೆಗೊಳ್ಳಲು ಕಾರಣ ಪ್ರಧಾನಿ ನರೇಂದ್ರ ಮೋದಿ. ಅವರ ನೋಟು ಅಮಾನ್ಯೀಕರಣ ಇದರ ಮೇಲೆ ಪರಿಣಾಮ ಬೀರಿದೆ.

ಮೋದಿ ಅವರು ಆಂದು  ಭಂಡ ನಿರ್ಧಾರದಿಂದ ನೂರಕ್ಕು ಅಧಿಕ ಅಮಾಯಕ ಜನರ ಪ್ರಾಣವನ್ನು ಬಲಿತೆಗೆದುಕೊಂಡಿದ್ದಾರೆ. ಕಪ್ಪು ಹಣವನ್ನು ಪತ್ತೆ ಮಾಡುವ ಉದ್ದೇಶದಿಂದ ಹಾಗೂ ನಕಲಿ ನೋಟುಗಳಿಗೆ ಕಡಿವಾಣ ಹಾಕುವ ಸಲುವಾಗಿ ನೋಟು ರದ್ದತಿಯನ್ನು ಸಮರ್ಥಿಸಿಕೊಂಡ ಪ್ರಧಾನಿಯವರು ಇದುವರೆವಿಗೂ ಕಪ್ಪು ಹಣದ ಬಗ್ಗೆ ಒಂದು ನಯಾ ಪೈಸೆಯ ಮಾಹಿತಿಯನ್ನು ನೀಡಿಲ್ಲ ಎಂದರು.

ಮೋದಿಯವರು ಹೇಳುವ ಅಚ್ಚೇ ದಿನ್ ಆಯೇಗಾ ಎಂಬ ಮಾತು ದೇಶದಲ್ಲಿ ಯಾವಾಗ ಬರುತ್ತದೆ ಎಂದು ನಾನು ಕಾದು ಕುಳಿತ್ತಿದ್ದೇನೆ. ಆ ಅಚ್ಚೇ ದಿನ್ ಈಗ ಬಂದಿರುವು ಕೇವಲ ಬಿಜೆಪಿ ನಾಯಕರ ಕುಟುಂಬ ವರ್ಗದವರಿಗೆ. ಕೇವಲ ಒಂದೇ ವರ್ಷದಲ್ಲಿ ಬಿಜೆಪಿ ನಾಯಕರ ಆಸ್ತಿಯಲ್ಲಿ ದುಪ್ಪಟ್ಟಾಗಿರುವುದಕ್ಕೆ ನಮ್ಮ ಮುಂದೆ ನಿದರ್ಶನಗಳಿವೆ.

ಸ್ವಾತಂತ್ರ್ಯ ಬಂದಾಗಿನಿಂದ ದೇಶದ ಜನತೆ ಕಂಡ ಒಬ್ಬ ಸುಳ್ಳು ಪ್ರಧಾನಿಯಾಗಿದ್ದಾರೆ ಮೋದಿ. ಅವರು ಪ್ರಧಾನಿ ಸ್ಥಾನಕ್ಕೆ ಅಗೌರವ ತರುತ್ತಿದ್ದಾರೆ. ಭಯೋತ್ಪಾದಕತೆ ನಿಯಂತ್ರಿಸುತ್ತೇವೆ ಎಂದು ಪ್ರಧಾನಿಯವರು ಹೇಳುತ್ತಾರೆ. ಆದರೆ ಈ ವರ್ಷ ಭಯೋತ್ಪಾದನಾ ಚುಟುವಟಿಕೆ ಶೇ. ೩೩% ಅಧಿಕಗೊಂಡಿದೆ. ನೋಟು ಅಮಾನ್ಯೀಕರಣದಿಂದ ದೇಶದಲ್ಲಿ ಜಿಡಿಪಿ ದರ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದ್ದು, ಆರ್ಥಿಕ ವ್ಯವಸ್ಥೆಯನ್ನು ತಲ್ಲಣಗೊಳಿಸಿದೆ ಎಂದರು. ನೋಟು ಅಮಾನ್ಯೀಕರಣದ ಮೂಲಕ ಜನರು ತಮ್ಮ ಹಣ ತಾವು ವೆಚ್ಚ ಮಾಡುವ ಸಂವಿಧಾನಬದ್ಧ ಹಕ್ಕನ್ನು ಹತ್ತಿಕ್ಕಲಾಯಿತು.

ಕೇಂದ್ರ ಹಣಕಾಸು ಸಚಿವಾಲಯದ ವರದಿ ಅನುಸಾರ ನೋಟು ಅಮಾನ್ಯೀಕರಣದ ನಂತರ ಹೊಸ ತೆರಿಗೆದಾರರ ವಾರ್ಷಿಕ ಪ್ರಗತಿ ಶೇ.27.6ರಿಂದ ಶೇ.26ಕ್ಕೆ ಕುಸಿದಿದೆ. ನೋಟು ಅಮಾನ್ಯೀಕರಣದಿಂದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿಲ್ಲ. ಈ ಕ್ಷೇತ್ರದ ಸರಾಸರಿ ಪ್ರಗತಿ ಶೇ.4.66ರಿಂದ ಶೇ.-0.27ಕ್ಕೆ ಕುಸಿಯಿತು.

ಸಿಎಂಐಇ ಸಮೀಕ್ಷೆ ಅನುಸಾರ ನೋಟು ಅಮಾನ್ಯೀಕರಣದಿಂದಾಗಿ ದೇಶದಲ್ಲಿ 15 ಲಕ್ಷ ಉದ್ಯೋಗಗಳು ನಾಶಗೊಂಡವು. ಜಿಡಿಪಿಗೆ ರೂ.3 ಲಕ್ಷ ಕೋಟಿ ನಷ್ಟವಾಗಿದೆ. ನೋಟು ಅಮಾನ್ಯೀಕರಣದಿಂದ ಅದಾನಿ, ಅಂಬಾನಿಗಳು ಚನ್ನಾಗಿದ್ದಾರೆ. ನೋಟ್ ಬ್ಯಾನ್ ಬಡವರಿಗೆ ಮಾಡಿದ ಮಹಾನ್ ದ್ರೋಹವಾಗಿದೆ. ನೋಟು ಅಮಾನ್ಯೀಕರಣ ಕೃಷಿ ಕ್ಷೇತ್ರದ ಮೇಲೂ ಗಂಭೀರ ಪರಿಣಾಮ ಬೀರಿತು. ಕೃಷಿ ಕ್ಷೇತ್ರದ ಸರಾಸರಿ ಪ್ರಗತಿ ಶೇ.2.3ಕ್ಕೆ ಕುಸಿದಿದ್ದು, ಕಳೆದ 5 ತ್ರೈಮಾಸಿಕಗಳಲ್ಲೇ ಇದು ಕನಿಷ್ಠವಾಗಿದೆ.

ಗುಜರಾತ್ ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಅಲ್ಲಿಂದ ಬಿಜೆಪಿ ಪತನ ಆರಂಭವಾಗಲಿದೆ. ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿ ಪ್ರತಿಯೊಬ್ಬರ ಖಾತೆಗೆ ತಲಾ ರೂ.15 ಲಕ್ಷ ಜಮಾ ಮಾಡುವುದಾಗಿ ಹೇಳಿದ್ದರು. ಆದರೆ ಇದುವರೆಗೂ 15 ಪೈಸೆಯೂ ಜಮಾ ಮಾಡಲಿಲ್ಲ.

ನರೇಂದ್ರ ಮೋದಿ ಹಾಗೂ ಅಮಿತ್ ಶಾ ಇಬ್ಬರು ಬಿಜೆಪಿಯಲ್ಲಿ ಕ್ರಿಮಿನಲ್ ಮೈಂಡ್‌ಗಳಿದ್ದಂತೆ. ಬಿಜೆಪಿಯ ಎಲ್ಲಾ ನಾಯಕರನ್ನು ಅವರು ಮೂಲೆ ಗುಂಪು ಮಾಡಿದ್ದಾರೆ. ನಮ್ಮ ಸರ್ಕಾರ ಹಗರಣ ಮುಕ್ತ ಆಡಳಿತನ್ನು ನೀಡಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಜೈಲಿಗೆ ಹೋಗಿ ಬಂದವರಿಂದ ನಾನು ಪಾಠ ಕಲಿಯಬೇಕಿಲ್ಲ. ಯಾರು ಭ್ರಷ್ಟರು ಎಂಬುದನ್ನು ಒಂದು ವೇದಿಕೆ ನಿರ್ಮಿಸಿ ಚರ್ಚೆಗೆ ಆಗಮಿಸಲಿ. ಆಗ ಯಾರು ಎಷ್ಟು ಶುದ್ದವಾಗಿದ್ದಾರೆ ಎಂದು ಜನತೆಗೆ ತಿಳಿಯುತ್ತದೆ ಎಂದರು.

ದೇಶದಲ್ಲಿ ಸುಮಾರು ೧೫ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಅದರೆ ಯಾವ ರಾಜ್ಯದಲ್ಲಿ ಬಡವರ ಹಸಿವು ನೀಗಿಸಲು ೭ ಕೆ.ಜೆ. ಅಕ್ಕಿಯನ್ನು ನೀಡುತ್ತಿದೆ ತೋರಿಸಲಿ. ಅಲ್ಲದೇ ಯಾವ ರಾಜ್ಯ ನಮ್ಮ ರಾಜ್ಯದಷ್ಟು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ ಎಂಬುದನ್ನು ತೋರಿಸಲಿ ಎಂದು ಸಿಎಂ ಪ್ರತಿಪಕ್ಷಗಳಿಗೆ ಸವಾಲೆಸೆದರು.

ರಾಜ್ಯದ ಜನರ ಮನಸ್ಸಿನಲ್ಲಿರುವ ನಮ್ಮ ಮೇಲಿನ ಪ್ರೀತಿಯನ್ನು ಯಾವ ಪರಿವರ್ತನಾ ರ್ಯಾಲಿಯಾಗಲಿ, ವಿಕಾಸ ಯಾತ್ರೆಯಾಗಲಿ ಬದಲಾಯಿಸಲು ಸಾಧ್ಯವಿಲ್ಲ. ಬಿಜೆಪಿಯವರು ತಾವು ಮಾಡುವ ಪರಿವರ್ತನಾ ರ್ಯಾಲಿ ಕಾರ್ಯಕ್ರಮಕ್ಕೆ ಹಣ, ಸೀರೆಯ ಆಮಿಷಗಳನ್ನು ಒಡ್ಡಿ ಜನರನ್ನು ಕರೆ ತರುತ್ತಿದ್ದಾರೆ. ಇದು ಯಾವ ರೀತಿಯ ಪರಿವರ್ತನೆ ಎಂಬುದನ್ನು ಬಿಜೆಪಿ ನಾಯಕರೇ ಅರ್ಥೈಸಿಕೊಳ್ಳಲಿ.

ರಾಜ್ಯದ ಬಿಜೆಪಿಯಲ್ಲಿ ಈಗ ಯಾವುದೇ ನಾಯಕರಿಲ್ಲ, ಪಕ್ಷ ಕೇವಲ ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಬಿ.ಜೆ. ಪುಟ್ಟಸ್ವಾಮಿ ಈ ಮೂವರ ಕೈಯಲ್ಲಿ ಮಾತ್ರವಿದೆ. ಬೇರೆ ಯಾವ ನಾಯಕರು ಸಹ ಬಿಜೆಪಿಯಲ್ಲಿ ಇಲ್ಲ ಎಂದರು. ೧೦೦ ಮಂದಿ ಮೋದಿ ಹಾಗೂ ೧೦೦ ಮಂದಿ ಯಡಿಯೂರಪ್ಪನವರು ಬಂದರು ೨೦೧೮ರ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದರು.

ಕುಮಾರಸ್ವಾಮಿ ಅವರು ಈಗ ಕರ್ನಾಟಕ ವಿಕಾಸ ಮಾಡಲು ರಾಜ್ಯ‌ ಪ್ರವಾಸ ಆರಂಭಿಸಿದ್ದಾರೆ. ಹಾಗಾದರೆ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಯಾವುದೇ ವಿಕಾಸವನ್ನು ಮಾಡಿಲ್ಲವೇ? ರಾಜ್ಯದ ರೈತರಿಗೆ ಇಸ್ರೇಲ್ ಮಾದರಿಯಲ್ಲಿ ವ್ಯವಸಾಯ ಮಾಡುವ ಪದ್ಧತಿಯನ್ನು ಜಾರಿಗೆ ತರುತ್ತೇನೆ ಎಂದು ಹೇಳುತ್ತಿದ್ದಾರೆ. ಅದು ಎಷ್ಟರ ಮಟ್ಟಿಗೆ ಸರಿ ಎಂದು ಅವರೇ ತಿಳಿದಕೊಳ್ಳಬೇಕು.

ನಾವು ಜಾರಿಗೆ ತಂದಿರುವ ಜನಪರ ಯೋಜನೆಗಳ ಹೆಸರು ಬದಲಾಯಿಸಿ ಕಾಂಗ್ರೆಸ್ ಸರ್ಕಾರ ಜಾರಿಗೆ ತರುತ್ತಿದೆ ಎಂದು ಜನರಿಗೆ ಸುಳ್ಳು ಹೇಳಿಕೆ ನೀಡುತ್ತಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದರು.

ಇಂತಹ ಹೇಳಿಕೆಗಳನ್ನು ತಮ್ಮ ಆತ್ಮವಂಚನೆ ಮಾಡಿಕೊಂಡು ಹೇಗೆ ಹೇಳುವರೋ ನನಗೆ ತಿಳಿಯುವುದಿಲ್ಲ. ನನ್ನ ೪೦ ವರ್ಷದ ರಾಜಕಾರಣದಲ್ಲಿ ನಾನು ಮಾಡಿರದ ಯೋಜನೆಗಳನ್ನು ನಾನು ಮಾಡಿದೆ ಎಂದು ಹೇಳಿಕೊಂಡು ಓಡಾಡಿದವನಲ್ಲ ಎಂದು ಮುಖ್ಯಮಂತ್ರಿಯವರು ಹೇಳಿದರು. ಪ್ರಜಾಪ್ರಭುತ್ವದಲ್ಲಿ ಜನರಿಗೆ ಸುಳ್ಳು ಹೇಳಿಕೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ.

ನಮ್ಮ ಜನಪರ ಯೋಜನೆಗಳನ್ನು ಮಾತ್ರವೇ ಜನರ ಮುಂದಿಟ್ಟು ಮತಯಾಚಿಸಿ. ಸತ್ಯಕ್ಕೆ ಎಂದಿಗೂ ವಿಜಯ ದೊರೆಯುತ್ತದೆ ಎಂದು ಮುಖ್ಯಮಂತ್ರಿಯವರು ಹೇಳಿದರು. ಟಿಪ್ಪು ಜಂಯತಿಗೆ ಅಡ್ಡಿ ಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ಅನಂತ್ ಕುಮಾರ್ ಹೆಗಡೆ ಅವರು ಒಬ್ಬ ಮತಾಂಧರಾಗಿದ್ದಾರೆ. ಅವರ ಬಗ್ಗೆ ಮಾತನಾಡಲು ನಾನು ಇಷ್ಟಪಡುವುದಿಲ್ಲ ಎಂದರು. ಬಿಜೆಪಿಯವರದ್ದು ಗೂಡ್ಸೆ ಸಂತತಿಯಾಗಿದ್ದು, ಮನಬಂದಂತೆ ವರ್ತಿಸುತ್ತಾರೆ. ನಾವು ಟಿಪ್ಪು ಜಯಂತಿ ಮಾತ್ರವಲ್ಲ, ೨೬ ಮಹಾತ್ಮರ ಜಯಂತಿ ಆಚರಿಸುತ್ತಿದ್ದೇವೆ.

ಬಿಜೆಪಿ ನಾಯಕರಲ್ಲಿ ಯಾರೂ ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಡಿ ಮಡಿದ ಉದಾಹರಣೆಗಳು ನಮ್ಮ ಮುಂದೆ ಇಲ್ಲ. ಅಂತವರಿಂದ ನಾನು ಪಾಠ ಕಲಿಯುವ ಅಗತ್ಯವಿಲ್ಲ. ತಮ್ಮ ಅನುಕೂಲಕ್ಕೆ ತಕ್ಕಂತೆ ಇತಿಹಾಸವನ್ನು ತಿರುಚಿ ಜನತೆಗೆ ತಪ್ಪು ಸಂದೇಶವನ್ನು ಬಿಜೆಪಿ ನಾಯಕರು ರವಾನಿಸುತ್ತಿದ್ದಾರೆ ಎಂದು ಸಿಎಂ ತಿಳಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com