Nev 8 Black Day : ಆಗುವುದೆಲ್ಲ ಒಳ್ಳೆಯದಕ್ಕೆ ಎಂದು ಇನ್ನೂ ಸುಮ್ಮನೆ ಕೂರಬೇಕಾ….?

           ಪ್ರತಿಧ್ವನಿ ಪ್ರದೀಪ್‌ ಎಂ.ಪಿ

‘ಬಡವರ ಒಡಲಿನ ಬಡಬಾ ನಲದಲ್ಲಿ ಸುಡು ಸುಡು ಪಂಜು ಕೈಯೊಳಗಿತ್ತೊ; ಕುರುಡು ಕಾಂಚಾಣ ಕುಣಿಯುತಲಿತ್ತು’, ದ.ರಾ ಬೇಂದ್ರೇಯವರು ಬರೆದ ಈ ಕವನದ ಸಾಲು ಪ್ರಸ್ತುತ ದಿನದ ರಾಜಕೀಯದ ಮತ್ತು ಅರ್ಥ ವ್ಯವಸ್ಥೆಗೆ ಬರೆದ ಮುನ್ನುಡಿಯಂತಿದೆ. ಅದಕ್ಕೊಂದು ಗಮನಾರ್ಹವಾದ ಉದಾಹರಣೆಯೆಂದರೆ 2016ರ ನವೆಂಬರ್ 8 ರಂದು ಜಾರಿಗೆ ಬಂದ ನೋಟು ಅಮಾನ್ಯೀಕರಣ. ಈ ಯೋಜನೆಯ ನೇರ ಉದ್ದೇಶಗಳಲ್ಲಿ ಒಂದು ಎಂದರೆ ಕೇಂದ್ರ ಸರ್ಕಾರ ಓಟಿಗಾಗಿ ನೀಡಿದ (ಕಪ್ಪು ಹಣ ತಡೆಯುವುದು) ಆಶ್ವಾಸನೆಯನ್ನು ನೆರವೇರಿಸುವುದು, ಎರಡನೆಯದಾಗಿ ದೇಶದಲ್ಲೆಡೆ ತಮ್ಮ ಗುರುತನ್ನು ಉಳಿಸಿಕೊಳ್ಳುವುದು. ಈ ಪ್ರಯತ್ನದ ಪ್ರಾರಂಭದಲ್ಲಿ ಪ್ರಜಾಪ್ರಭುತ್ವ, ದೇಶದ ಮಾನ್ಯ ಪ್ರಜೆಗಳು, ಪ್ರಧಾನಿಯವರ ಈ ಕಾರ್ಯವನ್ನು ಕಂಡು ಕೊಂಚ ಗಲಿಬಿಲಿಗೊಂಡಿದ್ದರೂ ಸಹ ಗೀತೆಯಲ್ಲಿ ಹೇಳಿರುವಂತೆ ‘ಆಗುವುದೆಲ್ಲಾ ಒಳ್ಳಯದಕ್ಕೆ’ ಎಂಬ ಸಾರವನ್ನು ನೆನೆದು ಬದಲಾವಣೆಗಳು ಕಾಣುಬಹುದೆಂಬ ಆಶಾಭಾವನೆಯಲ್ಲಿದ್ದರು.

 

ನೋಟು ಅಮಾನ್ಯೀಕರಣ ವಿಚಾರವಾಗಿ ಕೆಲ ದಿನಗಳ ಬಳಿಕ ಜನಸಾಮಾನ್ಯರ ಸಹನೆ ಕಟ್ಟೆಯೊಡೆಟಯತೊಡಗಿತು. ಅದಕ್ಕೆ ಕಾರಣ; ಹಣಕ್ಕಾಗಿ ಬ್ಯಾಂಕಿನಲ್ಲಿ ಕ್ಯೂ ನಿಲ್ಲುವುದು, ಚಿಲ್ಲರೆಗಾಗಿ ಒದ್ದಾಡುವುದು, ಕ್ಯೂನಲ್ಲಿ ತಮ್ಮ ಜೊತೆಗಿದ್ದವನು ಬಿದ್ದು ಸಾಯುವುದನ್ನು ನೋಡುವುದು, ಹಳೆಯ ಐದುನೂರು ರೂಪಾಯಿಗೆ ಚಿಲ್ಲರೆ ಸಿಗದೆ ಅದೇ ಹಣವನ್ನು ಸ್ತ್ರೀ ಶಕ್ತಿ ಸಂಘಕ್ಕೆ ಕಟ್ಟಲು ಹೋದಾಗ ಮಹಿಳೆಯರು ಛಿಮಾರಿಯಾಕಿದಕ್ಕೆ ಆತ್ಮಹತ್ಯೆ ಮಾಡಿಕೊಂಡ ತಿಪಟೂರಿನ ಶಾಹಿನಾ, ಹಣವನ್ನು ಬದಲಿಸಲು ಕ್ಯೂನಲ್ಲಿ ನಿಂತು ಹಣವನ್ನು ಕಳೆದುಕೊಂಡ ಹೃದಯಾಘಾತದಿಂದ ಮೃತಪಟ್ಟ ಚೆಂಡೂರಿನ ಈಶ್ವರಮ್ಮ, ಅಮರಾವತಿ ನಿವಾಸಿ ಅಯ್ಯನಗೌಡರ ಶೇಖರಗೌಡ, ತಂಜವೂರಿನಲ್ಲಿ ಸುಬ್ರಮಣ್ಯನ್, ಉತ್ತರ ಪ್ರದೇಶದಲ್ಲಿ ರಜಿಯಾ ಹೀಗೆ ಸುಮಾರು 95 ಕ್ಕೂ ಅಧಿಕ ಜನಸಾಮಾನ್ಯರು ನೋಟಿ ಅಮಾನ್ಯೀಕರಣಕ್ಕೆ ಬಲಿಯಾದವರು.

ಈ ನಷ್ಟಗಳನ್ನು ಹೇಳಿದ ಕಾರಣಕ್ಕೆ ಇದು  ವಿರೋದ ಪಕ್ಷದವರ ಅಪಪ್ರಚಾರವೆಂದು ಕೇಂದ್ರ ಸರ್ಕಾರ  ನುಣುಚಿಕೊಂಡಿತು. ನೋಟು ಅಮಾನ್ಯಿಕರಣದ ಘಟನೆಯಿಂದ ನೊಂದ ಕುಟುಂಬಗಳು ಇದೇ ವರ್ಷ ಕಳೆದುಕೊಂಡ ವ್ಯಕ್ತಿಯನ್ನು ನೆನೆದು ತಿಥಿಕಾರ್ಯವನ್ನು ಮಾಡುತ್ತಿರುವಾಗ, ಹಣಕಾಸು ಸಚಿವರಾದ ಆರುಣ್ ಜೇಟ್ಲಿ ನವೆಂಬರ್ 8ನ್ನು ‘ಕಪ್ಪು ಹಣ ವಿರೋಧಿ ದಿನ’ ವೆಂದು ಆಚರಿಸಲು ಹೊರಟಿರುವುದು ಸತ್ಯವೆಂಬ ಗಾಯವನ್ನು ಬಟ್ಟೆಯಿಂದ ಕಟ್ಟಲು ಹೊರಟಂತೆಯೇ ಸರಿ.

ನೋಟು ಅಮಾನ್ಯಿಕರಣದಿಂದ ದೇಶದಲ್ಲಿನ ಕಪ್ಪು ಹಣ, ಖೋಟಾ ನೋಟು, ಭಯೋತ್ಪಾದನೆ ಮತ್ತು ಭ್ರಷ್ಟಾಚಾರವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಈ ಮಹಾಯೋಜನೆಯನ್ನು ಜಾರಿಗೆ ತಂದಿತ್ತಾದರೂ ಇದೊಂದು ಮೂರ್ಖ ಕೆಲಸವೆಂದು ತಿಳಿದದ್ದು ಆರ್‌ಬಿಐ ವೆಬ್ ಸೈಟ್‍ನಲ್ಲಿ ಪ್ರಕಟಿಸಿದ ವಿಷಯವನ್ನು ಕಂಡಾಗಲೆ; ಪ್ರಕಟಣೆಯಲ್ಲಿ ರೂ.1000 ಮುಖ ಬೆಲೆಯ 8,925 ಕೋಟಿಯಷ್ಟು ಹಣ ಬ್ಯಾಂಕಿಗ್, ಖಜಾನೆ ಮತ್ತು ಸಾರ್ವಜನಿಕರ ಬಳಿಯಿಂದ ಭಾರತೀಯ ರಿಸರ್ವ್ ಬ್ಯಾಂಕಿಗೆ ಮರಳಿದೆ ಎಂದು ತಿಳಿಸಲಾಗಿತ್ತು. ಅಂದರೆ ಶೇಕಡ 100 ರಲ್ಲಿ 98.7 ರಷ್ಟು ಹಣ ಮರಳಿ ಬಂದಿದೆಯೆಂದಾದರೆ ಉಳಿದ ಶೇಕಡ 1.3 ರಷ್ಟು ಮಾತ್ರ ಇನ್ನು ಮರಳಿ ಬ್ಯಾಂಕಿಗೆ ಬರಲು ಬಾಕಿ ಉಳಿದದಾಗಿತ್ತು, ರೂ 500ರ ಮುಖಬೆಲೆಯ ಎಷ್ಟು ನೋಟುಗಳು ಮರಳಿ ಬ್ಯಾಂಕಿಗೆ ಬಂದಿದೆ ಎಂಬ ಮಾಹಿತಿಯನ್ನು ಆರ್‌ಬಿಐ ಪ್ರಕಟಿಸಿಲ್ಲವೆಂದು ಆಗಸ್ಟ್ 2017ರಂದು ಟೈಮ್ಸ್ ಆಫ್ ಇಂಡಿಯ ಪತ್ರಿಕೆ ವರದಿ ಮಾಡಿತ್ತು. ಉಳಿದ ಶೇಕಡ 1.3ರಷ್ಟು ಹಣ ಜನಸಾಮಾನ್ಯರಲ್ಲಿ ದಿನದ ವಹಿವಾಟಿಗೆ ಉಳಿಸಿರಬಹುದು ಮತ್ತು ಬಾಕಿ ಉಳಿದ ಹಣವನ್ನು ಕಪ್ಪು ಹಣವೆಂದು ಲೆಕ್ಕ ಹಾಕಿದರೂ ಸಹ ಈ ಕಡಿಮೆ ಸಂಖ್ಯೆಯ ಹಣವನ್ನು ಬಯಲಿಗೆಳೆಯಲು ನೂರಾರು ಜನರ ಪ್ರಾಣವನ್ನು ಬಲಿ ಪಡೆಯಬೇಕಿತ್ತೆ? ಎಂಬ ಪ್ರಶ್ನೆ ಮೂಡುತ್ತದೆ.  ಇದು ಒಂದು ರೀತಿಯಲ್ಲಿ ಕಳ್ಳ ಬಸಿರನ್ನು ತೆಗೆದು ಹಾಕಲು ವಿಷವನ್ನು ಕುಡಿದಂತಾಗಲಿಲ್ಲವೆ ಎಂಬ ಪ್ರಶ್ನೆ ಮೂಡುವುದು ಸಹಜ.


ವಿದೇಶದಲ್ಲಿ ಭಾರತಿಯರು ಇಟ್ಟಿರುವ ಕಪ್ಪು ಹಣವನ್ನು ವಾಪಸು ತರುವುದಾಗಿ ಭರವಸೆಯೊಂದಿಗೆ 2014ರ ಲೋಕಸಭಾ  ಚುನಾವಣೆಯಲ್ಲಿ ಗೆದ್ದ ನರೇಂದ್ರ ಮೋದಿ ಸರ್ಕಾರ ಕಪ್ಪು ಹಣ ನಿಗ್ರಹ ಕಾಯ್ದೆಯನ್ನು ಮತ್ತು ದೇಶಿಯ ಕಪ್ಪು ಹಣ ಘೋಷಣೆಗೆ ಅವಕಾಶವನ್ನು ಜಾರಿಗೆ ತಂದರು. ವಿದೇಶದಲ್ಲಿರುವ ಕಪ್ಪು ಹಣ ತನಿಖೆಗಾಗಿ ಮೇ 27 ರಂದು ವಿಶೇಷ ತನಿಖಾ ತಂಡವನ್ನು ಮೋದಿ ಸರ್ಕಾರ ರಚಿಸಿತು. ಈ ತಂಡ ವಿದೇಶಿ ಬ್ಯಾಂಕ್‍ಗಳಲ್ಲಿ ಇಟ್ಟಿರುವ ರೂ.13,000ಕೋಟಿ ಕಪ್ಪು ಹಣವನ್ನು ಪತ್ತೆಹಚ್ಚಿತು, ಎಚ್ ಎಸ್ ಬಿ ಎಸ್ ಬ್ಯಾಂಕ್‍ಗಳಲ್ಲಿ ಭಾರತಿಯರು ಇಟ್ಟಿರುವ ಸುಮಾರು 400 ಪ್ರಕರಣಗಳು ಬೆಳಕಿಗೆ ಬಂದಿದ್ದು, ಅವುಗಳಲ್ಲಿ ರೂ.8,186 ಕೋಟಿ ಹಣ ಪತ್ತೆಯಾಗಿದೆ ಎಂದು ತಿಳಿಸಲಾಯಿತು. ಆದರೆ ಆರ್‌ಬಿಐ ನೀಡಿದ ಪ್ರಕಟಣೆ ಮತ್ತು ಕೇಂದ್ರ ಸರ್ಕಾರದ ವಿವರಗಳನ್ನು ತಾಳೆ ಮಾಡಿದರೆ; ಕೇಂದ್ರ ಸರ್ಕಾರದ ತನಿಖಾ ತಂಡ ನೀಡಿದ ಮಾಹಿತಿ ನಂಬಲರ್ಹವಲ್ಲವೆಂದು ಹಾಗೂ ಸಾಮಾನ್ಯ ಪ್ರಜೆಗಳ ದೃಷ್ಟಿಯನ್ನು ಪೂರ್ಣವಾಗಿ ತಮ್ಮಲ್ಲಿಗೆ ಸೆಳೆಯಬೇಕೆಂಬ ಕುಟಿಲತನವಾಗಿತ್ತೆಂದು ತಿಳಿಯುತ್ತದೆ.

 


ಗರಿಷ್ಟ ಮಖ ಬೆಲೆಯ ನೋಟುಗಳನ್ನು ರದ್ದು ಮಾಡಿದ ಕೇಂದ್ರ ಸರ್ಕಾರ ಎರಡು ಸಾವಿರ ಮುಖ ಬೆಲೆಯ ನೋಟನ್ನು ಮತ್ತು ಐದುನೂರರ ಹೊಸ ನೊಟನ್ನು ಪರಿಚಯಿಸಿದರು. ಹೀಗೆ ಹೊಸ ಹೊಸ ನೊಟುಗಳನ್ನು ನಾಣ್ಯವನ್ನು ಪರಿಚಯಿಸುವ  ಕಾರ್ಯ ಮುಂದುವರಿಯುತ್ತಲೇ ಇದೆ. ಇದಲ್ಲವುಗಳ ಮಧ್ಯೆ ನಮ್ಮ ದೇಶದ ಜಿಡಿಪಿ 5.7 ಕ್ಕೆ ಕುಸಿದಿದ್ದು, ಆರ್ಥಿಕತೆಯ ಮೇಲೆ ಭಾರೀ ಹೊಡೆತ ಬಿದ್ದಿದೆ.ಅಲ್ಲದೆ ಇತ್ತೀಚಿಗೆ ಜಾರಿಗೆ ಬಂಜ ಜಿಎಸ್‌ಟಿಯಿಂದಾಗಿ ಸಾಮಾನ್ಯ ವ್ಯಕ್ತಿ ದಾರಿಯೇ ಕಾಣದಂತಾಗಿದ್ದಾನೆ. ಅವಶ್ಯಕವಿರುವ ಎಲ್ಲಾ ಸಾಮಗ್ರಿಗಳ ಮೇಲೆ ಸುಂಕ ವಿಧಿಸಿ ಬಡವನ ನಾಳೆಯ ಅನ್ನವನ್ನು ಕಿತ್ತು ತಿನ್ನುತ್ತಿರುವ ಸರ್ಕಾರ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ವರ್ತಿಸುತ್ತಿರುವುದು ವಿಪರ್ಯಾಸವೇ ಸರಿ.

ಈ ರಾಜಕೀಯದ ಆಟವನ್ನು ನೋಡುತ್ತಿರುವ ಜನ ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ. ಎಚ್ಚೆತ್ತುಕೊಳ್ಳದೇ ಹೋದಲ್ಲಿ ದೇಶದ ದುರಂತ ಕಥೆಗೆ ಮೂಕಸಾಕ್ಷಿಗಳಾಗಬೇಕಾಗುತ್ತದೆ.

ಕಪ್ಪು ಹಣ, ಖೋಟಾ ನೋಟು, ಭಯೋತ್ಪಾದನೆ ನಿಯಂತ್ರಣ ಹಾಗೂ ಭ್ರಷ್ಟಾಚಾರಗಳನ್ನು ಹತ್ತಿಕ್ಕಲು ಮೊದಲು ಭಾರತದ ಪ್ರಜೆಗಳ ಮನಸ್ಥಿತಿ ಬದಲಾಗಬೇಕಿದೆ. ಇವುಗಳ ವಿರುದ್ಧ ಸ್ವಯಂ ಪ್ರೇರಿತವಾಗಿ ಹೋರಾಟ ಮಾಡಬೇಕೇ ಹೊರತು, ಬಣ್ಣ ಬಣ್ಣದ ಆಶ್ವಾಸನೆಗಳನ್ನು ನೀಡಿ ಜನ ಸಾಮಾನ್ಯರ ದುರ್ಬಲತೆಯನ್ನು ಓಟ್‌ ಬ್ಯಾಂಕ್ ಆಗಿ ಪರಿವರ್ತಿಸಿ, ಸೀಟು ಪಡೆದು ನಾಯಕನೆನಿಸಿಕೊಂಡು ತಮ್ಮ ಖಜಾನೆಯನ್ನು ಭರ್ತಿ ಮಾಡಿಕೊಳ್ಳುವವರಿಂದ ಸಾಧ್ಯವಿಲ್ಲ. ಆಗುವುದೆಲ್ಲ ಒಳ್ಳೆಯದಕ್ಕೆ ಎಂದು ಇನ್ನೂ ಸುಮ್ಮನೆ ಕೂತರೆ ಪರಿಸ್ಥಿತಿ ಕೈಮೀರಿ ಹೋಗುವುದರಲ್ಲಿ ಸಂಶಯವಿಲ್ಲ.

Leave a Reply

Your email address will not be published.

Social Media Auto Publish Powered By : XYZScripts.com