ಡೊನಾಲ್ಡ್ ಟ್ರಂಪ್ಗೆ ಬೆರಳು ತೋರಿಸಿದ ಮಹಿಳೆಗೆ ಸಿಕ್ಕ ಉಡುಗೊರೆ ಏನು..?
ವಾಷಿಂಗ್ಟನ್ : ಸೈಕಲ್ ತುಳಿಯುವ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಬೆರಳು ತೋರಿಸಿದ ಕಾರಣಕ್ಕಾಗಿ ಮಹಿಳೆಯೊಬ್ಬರು ತಮ್ಮ ಕೆಲಸವನ್ನೇ ಕಳೆದುಕೊಂಡಿದ್ದಾರೆ.
ಜೂಲಿ ಬ್ರಿಸ್ಕ್ ಮ್ಯಾನ್ ಎಂಬ ಹೆಸರಿನ 50 ವರ್ಷದ ಮಹಿಳೆ ಅಕ್ಟೋಬರ್ನಲ್ಲಿ ಸೈಕಲ್ ತುಳಿಯುತ್ತಾ ಹೋಗುತ್ತಿದ್ದಳು. ಅದೇ ವೇಳೆ ಟ್ರಂಪ್ ತಮ್ಮ ಬೆಂಗಾವಲು ವಾಹನದ ಜೊತೆ ಗಾಲ್ಫ್ ಕೋರ್ಸ್ಗೆ ತೆರಳುತ್ತಿದ್ದರು. ಆಗ ಮಹಿಳೆ ಟ್ರಂಪ್ನತ್ತ ತನ್ನ ಕೈಯ ಮದ್ಯದ ಬೆರಳನ್ನು ತೋರಿಸಿದ್ದಾಳೆ. ಬೆಂಗಾವಲು ಪಡೆಯ ಜೊತೆಗೆ ತೆರಳುತ್ತಿದ್ದ ಫೋಟೋಗ್ರಾಫರ್ ಆಕೆಯ ಫೋಟೋತೆಗೆದು ಸೋಶಿಯಲ್ ಮೀಡಿಯಾಗಳಲ್ಲಿ ಹಾಕಿದ್ದು, ಆ ಫೋಟೋ ವೈರಲ್ ಆಗಿತ್ತು.
ಈ ಫೋಟೋಗೆ ಸಾಕಷ್ಟು ಮೆಚ್ಚುಗೆ ಹಾಗೂ ಟೀಕೆಗಳು ವ್ಯಕ್ತವಾಗಿದ್ದು, ಮುಂಬರುವ ಚುನಾವಣೆಗೆ ಆಕೆ ನಿಲ್ಲುವಂತೆ ಸಲಹೆ ನೀಡಿದ್ದರು. ಅಲ್ಲದೆ ಅನೇಕ ಕಾರ್ಯಕ್ರಮಗಳಲ್ಲೂ ಈ ವಿಚಾರ ಪ್ರಸ್ತಾಪವಾಗಿತ್ತು. ಆದರೆ ಅವರ ಆ ಫೋಟೋ ಅವರ ಉದ್ಯೋಗಕ್ಕೇ ಮುಳುವಾಗಿದೆ.
ಆಕೆ ಟ್ರಂಪ್ಗೆ ಬೆರಳು ತೋರಿಸಿದ್ದರ ಬಗ್ಗೆ ಆಕೆ ಕೆಲಸ ಮಾಡುತ್ತಿದ್ದ ಕಂಪನಿ ತಕರಾರು ತೆಗೆದಿದ್ದು, ಆಕೆಯನ್ನು ಕೆಲಸದಿಂದ ವಜಾ ಮಾಡಿದೆ. ಆಕೆ ಸಾಮಾಜಿಕ ಮಾಧ್ಯಮದ ನೀತಿಯನ್ನು ಉಲ್ಲಂಘಿಸಿದ್ದಾರೆ. ಇದರಿಂದ ತಮ್ಮ ಕಂಪನಿಗೆ ಕೆಟ್ಟ ಹೆಸರು ಬಂದಿದೆ ಎಂದು ಆರೋಪಿಸಲಾಗಿದೆ.
ಕೆಲಸ ಕಳೆದುಕೊಂಡಿರುವ ಮಹಿಳೆ ಉದ್ಯೋಗಕ್ಕಾಗಿ ಹುಡುಕಾಡತೊಡಗಿದ್ದಾರೆ. ಆದರೆ ನಾನು ಮಾಡಿದ್ದರ ಬಗ್ಗೆ ನನಗೆ ಯಾವುದೇ ಬೇಸರ ಇಲ್ಲ ಎಂದಿದ್ದಾರೆ.