ಲಂಕೇಶ್ ಪತ್ರಿಕೆಯನ್ನು ಸರ್ಕಾರ ಕೊಂಡುಕೊಳ್ಳುತ್ತಿಲ್ಲ : ಗೌರಿಹತ್ಯಾ ವಿರೋಧಿ ವೇದಿಕೆ ಸ್ಪಷ್ಟನೆ

ಗೌರಿ ಲಂಕೇಶ್ ನಡೆಸುತ್ತಿದ್ದ ಲಂಕೇಶ್ ಪತ್ರಿಕೆಯನ್ನು ಸರ್ಕಾರ ಕೊಂಡುಕೊಳ್ಳುತ್ತಿದೆ ಎಂಬ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಇದರ ಬಗ್ಗೆ “ಗೌರಿಹತ್ಯಾ ವಿರೋಧಿ ವೇದಿಕೆಯ” ಸ್ಪಷ್ಟೀಕರಣ ನೀಡಿದೆ.

ಮಾನ್ಯರೇ,

ನಿನ್ನೆ , ನವೆಂಬರ್ ೫ ರಂದು, ಗೌರಿ ಲಂಕೇಶ್ ಅವರ ಹತ್ಯೆಯಾಗಿ ಎರಡು ತಿಂಗಳು ಕಳೆಯಿತಷ್ಟೆ. ಆದ್ರೂ ಇನ್ನು ಹಂತಕರ ಪತ್ತೆಯಾಗದಿರುವುದು ಮತ್ತು ಗೌರಿ ಲಂಕೇಶ್ ಪತ್ರಿಕೆಯ ಮುಂದುವರಿಕೆ ಹಾಗೂ ಇನ್ನಿತ್ಯಾದಿ ವಿಷಯಗಳ ಕುರಿತು ನಮ್ಮ ವೇದಿಕೆಯು ಒಂದು ರಾಜ್ಯ ಮಟ್ಟದ ಸಮ್ಲೋಚನಾ ಸಭೆಯನ್ನು ನಿನ್ನೆ ಬೆಂಗಳೂರಿನಲ್ಲಿ ಕರೆದಿತ್ತು. ಆ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆಗಳು ನಡೆದು ಕೆಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಆದರೆ ಅದರ ಬಗ್ಗೆ ಪತ್ರಿಕೆಗಳಲ್ಲಿ ತಪ್ಪಾಗಿ ಮಾತ್ರವಲ್ಲದೆ ಸಮಾಜಕ್ಕೆ ತಪ್ಪು ತಿಳವಳಿಕೆ ನೀಡುವ ರೀತಿಯಲ್ಲಿ ವರದಿಯಾಗಿದೆ. ತಮ್ಮ ವರದಿಗಾರು ಆ ಸಭೆಯಲ್ಲಿ ಇರಲೂ ಇಲ್ಲ. ಅಥವಾ ವರದಿ ಮಾಡುವ ಮುನ್ನ ನಮ್ಮಿಂದ ಮಾಹಿತಿಯನ್ನೂ ಪಡೆದುಕೊಳ್ಳಲಿಲ್ಲ. ಇದು ಏಕೆ ಮತ್ತು ಹೇಗೆ ನಡೆಯಿತೆಂದು ಗುರ್ತಿಸಿ ಮುಂದೆ ಹೀಗಾಗದಂತೆ ನೋಡಿಕೊಳ್ಳೂತ್ತೀರೆಂಬ ವಿಶ್ವಾಸದೂಂದಿಗೆ ನಿನ್ನೆ ನಡೆದ ಸಭೆಯ ಬಗ್ಗೆ ಒಂದು ಸ್ಪಷ್ಟೀಕರಣವನ್ನು  ನೀಡುತ್ತಿದ್ದೇವೆ. ಹಾಗೂ ಇದನ್ನು ಯಥಾವತ್ ಪ್ರಕಟಿಸುತ್ತೀರೆಂದು ನಂಬುತ್ತೇವೆ:

೧. ನಿನ್ನೆ ನಡೆದ ಸಭೆಯಲ್ಲಿ “ಗೌರಿ ಲಂಕೇಶ್” ಪತ್ರಿಕೆಯನ್ನು ಸರ್ಕಾರವೇ ಕೊಂಡುಕೊಳ್ಳುವ ಬಗ್ಗೆಯಾಗಲೀ, ಅಥವಾ ಸರ್ಕಾರದ ಸಹಾಯದೊಂದಿಗೆ ನಡೆಸುವ ಬಗ್ಗೆಯಾಗಲೀ ಯಾರೂ ಮಾತನ್ನಾಡಲಿಲ್ಲ. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮೀನ್ ಮಟ್ಟು ಅವರಂತೂ ಈ ಬಗ್ಗೆ ಯಾವ ಮಾತುಗಳನ್ನೂ ಆಡಲಿಲ್ಲ. ಬದಲಿಗೆ ಸಭೆಯಲ್ಲಿ ಒಬ್ಬ ಸದಸ್ಯರು ಗೌರಿ ಪತ್ರಿಕೆಯನ್ನು ಮುಂದುವರೆಸಿ  ಅದನ್ನು ಸರ್ಕಾರದ ಸಹಾಯದಿಂದ ಪ್ರತಿಯೊಂದು ಶಾಲಾ ಕಾಲೇಜುಗಳಿಗೂ ತಲುಪಿಸಬಹುದೇ ಎಂದು ಕೇಳಿದರು. ಅದಕ್ಕೆ  ಮಟ್ಟು  ಅವರು ತುಂಬಾ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದೇನೆಂದರೆ ಲಂಕೇಶ್ ಅವರ ಪರಂಪರೆಯೆಂದರೆ ಜಾಹೀರಾತಿಲ್ಲದೆ ಮತ್ತು ಸರ್ಕಾರದ ಸಹಾಯವಿಲ್ಲದೇ ಪತ್ರಿಕೆ ನಡೆಸಿದ್ದು. ಅಂಥಾ ಒಂದು ಸವಾಲನ್ನು ನಾವು ಈಗಲೂ ಸ್ವೀಕರಿಸಿ ಮುಂದುವರೆಯಬೇಕು. ವಿಶೇಷವಾಗಿ ಹೆಚ್ಚೆಚ್ಚು ಓದುಗರನ್ನೂ ಮತ್ತು ಚಂದಾದಾರರನ್ನು ಹುಟ್ಟುಹಾಕಲು ಪ್ರಯತ್ನಿಸುವ ಮೂಲಕ ಗೌರಿ ಮತ್ತು ಲಂಕೇಶರ ಪರಂಪರೆಯನ್ನು ಉಳಿಸಿಕೊಳ್ಳಬೇಕೆ ವಿನಃ ಸರ್ಕಾರವನ್ನು ಆಧರಿಸಬಾರದು ಎಂದು ಹೇಳಿದರು.

ಅದಕ್ಕೆ ಪೂರಕವಾಗಿ ಸಭೆಯನ್ನು ನಡೆಸಿಕೊಡುತ್ತಿದ್ದ ಕೆ.ಎಲ್ ಅಶೋಕ್ ಅವರು ಗೌರಿ ಮತ್ತು ಅವರ ತಂದೆ ಲಂಕೇಶರ ಪತ್ರಿಕಾ ಪರಂಪರೆಯೆಂದರೆ ಶಾಶ್ವತ ವಿರೋಧ ಪಕ್ಷವಾಗಿ ಪ್ರಜಾತಂತ್ರದಲ್ಲಿ ಕೆಲಸ ಮಾಡಿದ್ದು. ಹೀಗಾಗಿ ಯಾವ ಕಾರಣಕ್ಕೂ ಯಾವುದೇ ಬೆಂಬಲಕ್ಕೂ ಸರ್ಕಾರವನ್ನು ಆಶ್ರಯಿಸಬಾರದು. ಬದಲಿಗೆ ಜನರಿಂದ ಚಂದಾ ಮತ್ತು ನಿಧಿಯನ್ನು ಸಂಗ್ರಹಿಸಿ ಪತ್ರಿಕೆಯನ್ನು ನಡೆಸಬೇಕು ಎಂದು ಸ್ಪಷ್ಟವಾಗಿ ಹೇಳಿದರು.

ಇಡೀ ಸಭೆ ದಿನೇಶ್ ಅಮೀನ್ ಮಟ್ಟು ಮತ್ತು ಕೆ. ಎಲ್. ಅಶೋಕರ ಮಾತುಗಳನ್ನು ಅನುಮೋದಿಸಿತು.

ಹೀಗಾಗಿ ಸರ್ಕಾರದ ಸಹಾಯದಿಂದ ಪತ್ರಿಕೆಯನ್ನು ನಡೆಸುವ ಅಥವಾ ಸರ್ಕಾರವೇ ಪತ್ರಿಕೆ ನಡೆಸುವ ಯಾವುದೇ ನಿರ್ಣಯವಿರಲಿ  ಪ್ರಸ್ತಾಪವೂ ಸಹ ಸಭೆಯಲ್ಲಿ ಚರ್ಚೆಯಾಗಲಿಲ್ಲ.

ಹೀಗಿರುವಾಗ ಸತ್ಯಕ್ಕೆ ದೂರವಾದ ವರದಿಯು ತಮ್ಮ ಪತ್ರಿಕೆಯಲ್ಲಿ ಪ್ರಕಟವಾಗಿರುವುದು ನಮಗೆ ನಿಜಕ್ಕೂ ಖೇದ ಉಂಟು ಮಾಡಿದೆ.

೨. ಇದಲ್ಲದೆ ಹಂತಕರನ್ನು ಪತ್ತೆ ಹಚ್ಚಲು ಸರ್ಕಾರಕ್ಕೆ ಡಿಸೆಂಬರ್ ೫ ರ ತನಕ ಗಡುವನ್ನು ನೀಡಿ ಆ ನಂತರವೂ ಏನೂ ಪ್ರಗತಿ ಕಾಣದಿದ್ದರೆ ರಾಜ್ಯಾದ್ಯಂತ ಮತ್ತು ದೇಶಾದ್ಯಂತ ಹೋರಾಟಗಳನ್ನು ತೀವ್ರಗೊಳಿಸಲು ನಿರ್ಧರಿಸಲಾಯಿತು.

೩. ಗೌರಿ ಹೆಸರಲ್ಲಿ ರಾಷ್ಟ್ರಮಟ್ಟದ ಒಂದು ಟ್ರಸ್ಟನ್ನು ರಚಿಸಿ ಅದರ ಮೂಲಕ ಪತ್ರಿಕೆಯನ್ನೂ, ಗೌರಿ ನೆನಪಿನ ಕಾರ್ಯಕ್ರಮಗಳನ್ನು, ನಡೆಸಲು ನಡೆಯುತ್ತಿರುವ ಪ್ರಯತ್ನಗಳಿಗೆ ಸಂಪೂರ್ಣ ಬೆಂಬಲ ನೀಡಲು ತೀರ್ಮಾನಿಸಲಾಯಿತು.

೩. ಗೌರಿ ಹತ್ಯಾ ವಿರೋಧಿ ವೇದಿಕೆಯನ್ನು ಬರಖಾಸ್ತುಗೊಳಿಸಿ ರಾಜ್ಯಾದ್ಯಂತ ಎಲ್ಲಾ ಸಮಾನಮನಸ್ಕರನ್ನು ಒಟ್ಟುಗೂಡಿಸಿ ಜಿಲ್ಲಾ ಮಟ್ಟದಲ್ಲಿ ಗೌರಿ ಬಳಗವನ್ನು ಸ್ಥಾಪಿಸಲು ಮತ್ತು ಅದರ ಮುಖೇನ ಗೌರಿ ಪತ್ರಿಕೆ ಮತ್ತು ಇತರ ಚಟುವಟಿಕೆಗಳಿಗೆ ಬೇಕಾದ ಭೂಮಿಕೆಯನ್ನು ರಚ್ಸಿಕೊಳ್ಳಲು ತೀರ್ಮಾನಿಸಲಾಯಿತು.

Leave a Reply

Your email address will not be published.

Social Media Auto Publish Powered By : XYZScripts.com