ಲಿಂಗಾಯಿತರಾಗಿದ್ದ ನಮ್ಮನ್ನು ಮೈಸೂರು ದಿವಾನರು ಶೂದ್ರರ ಪಟ್ಟಿಗೆ ಸೇರಿಸಿದ್ದರು : ಎಂ.ಬಿ ಪಾಟೀಲ್‌

ಹುಬ್ಬಳ್ಳಿ : ವೀರಶೈವ ಹಾಗೂ ಲಿಂಗಾಯಿತ ಇಬ್ಬರೂ ಒಂದೇ ಎಂದು ಹೇಳುತ್ತಾ ಇಷ್ಟು ದಿನ ನಾವು ಕತ್ತಲೆಯಲ್ಲಿದ್ದೆವು ಎಂದು ವಿಧಾನಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಲಿಂಗಾಯತ ಸ್ವತಂತ್ರ್ಯ ಧರ್ಮದ ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಅವರು, ಲಿಂಗಾಯಿತರು-ವೀರಶೈವರು ಒಂದೇ ಎನ್ನುತ್ತಾ ನಮ್ಮನ್ನು ದುರುಪಯೋಗ ಮಾಡಿಕೊಂಡರು. ಆದರೆ ಈಗ ಲಿಂಗಾಯಿತರು ಜಾಗೃತರಾಗಿದ್ದಾರೆ. ಲಿಂಗಾಯಿತರಿಗೆ ಇಷ್ಟು ದಿನ ಮೋಸ ಮಾಡಿದವರ ಆಟ ಇನ್ನು ಮುಂದೆ ನಡೆಯುವುದಿಲ್ಲ ಎಂದಿದ್ದಾರೆ.

ವೀರಶೈವರು ಲಿಂಗಾಯಿತ ಧರ್ಮದ ಒಂದು ಪಂಗಡವಷ್ಟೇ. ಪ್ರತ್ಯೇಕ ಧರ್ಮದ ಕುರಿತು ಬಡ್ಡಿ ವ್ಯವಹಾರ ಮಾಡುವ ದಿಂಗಾಲೇಶ್ವರ ಸ್ವಾಮೀಜಿಯ ಟೀಕೆಗೆ ನಾವೆಂದೂ ಬಗ್ಗುವುದಿಲ್ಲ ಎಂದಿದ್ದಾರೆ.

ಇದೇ ವೇಳೆ ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ನಮ್ಮ ಹೋರಾಟಕ್ಕೆ 900 ವರ್ಷಗಳ ಇತಿಹಾಸವಿದೆ. ಸಂವಿಧಾನ ರಚನೆಯಾಗುವ ಮುನ್ನವೇ ಪ್ರತ್ಯೇಕ ಧರ್ಮಕ್ಕಾಗಿ ಬೇಡಿಕೆ ಇಡಲಾಗಿತ್ತು. 1871ರಲ್ಲಿ ನಾವು ಲಿಂಗಾಯಿತರಾಗಿದ್ದೆವು. ಆದರೆ ಹಿಂದೂಗಳ ಭಾಗವಾಗಿರಲಿಲ್ಲ. ಮೈಸೂರಿನ ದಿವಾನರು ನಮ್ಮನ್ನು ಶೂದ್ರರ ಪಟ್ಟಿಯಲ್ಲಿ ಸೇರಿಸಿದರು ಎಂದಿದ್ದಾರೆ.

ವೀರಶೈವ ಮಹಾಸಭಾದ ವಿರುದ್ದ ಕಿಡಿ ಕಾರಿದ ಎಂ.ಬಿ ಪಾಟೀಲ್‌, ನೀವು ಬಸವಣ್ಣನಿಗಿಂತ ರೇಣುಕಾಚಾರ್ಯರೇ ದೊಡ್ಡವರು ಎನ್ನುತ್ತೀರಿ. ಅದನ್ನು ನಾವು ಒಪ್ಪುತ್ತೇವೆ. ರೇಣುಕಾಚಾರ್ಯರ ತಂದೆ ತಾಯಿ ಯಾರು ಎಂದರೆ ಅವರು ಕಲ್ಲಿನಿಂದ ಉದ್ಭವವಾಗಿದ್ದಾರೆ ಎನ್ನುತ್ತೀರಿ. ಆದರೆ ಇದನ್ನು ನ್ಯಾಯಾಲಯ ನಂಬುವುದಿಲ್ಲ ಎಂದಿದ್ದಾರೆ.

ಸಮಾವೇಶದಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಲಕ್ಷಾಂತರ ಮಂದಿ ಆಗಮಿಸಿದ್ದು, ಸುಮಾರು 150ಕ್ಕೂ ಹೆಚ್ಚು ಮಂದಿ ಮಠಾದೀಶರು ಭಾಗಿಯಾಗಿದ್ದಾರೆ.

 

 

Leave a Reply

Your email address will not be published.