ಹೆಚ್‌ಡಿಕೆ ರಾಜ್ಯ ಪ್ರವಾಸಕ್ಕೆ ‘ಕರ್ನಾಟಕ ವಿಕಾಸ ವಾಹಿನಿ’ ರೆಡಿ… ಬಸ್‌‌‌‌‌‌‌‌‌ನ ವಿಶೇಷತೆಗಳೇನು?!!

ಬೆಂಗಳೂರು : ಬಿಜೆಪಿಯ ನವ ಕರ್ನಾಟಕ ಪರಿವರ್ತನಾ ಯಾತ್ರೆಗೆ ಸೆಡ್ಡು ಹೊಡೆಯಲು ನಿರ್ಧರಿಸಿರುವ ಜನತಾ ದಳ ಪಕ್ಷದಿಂದ ಕರ್ನಾಟಕ ವಿಕಾಸ ವಾಹಿನಿ ಎಂಬ ಬಸ್‌ ಸಿದ್ದಗೊಂಡಿದೆ. ಬಿಜೆಪಿ ಹಾಗೂ ಕಾಂಗ್ರೆಸ್‌ ವಿರುದ್ದ ಎಲ್ಲಾ ಜಿಲ್ಲೆಗಳಲ್ಲೂ ಯಾತ್ರೆ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ವಿಶೇಷ ಬಸ್‌ ಸಿದ್ದವಾಗಿ ನಿಂತಿದೆ.

ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯದಲ್ಲಿ ರಥಯಾತ್ರೆಯ ಪರ್ವ ಮುಂದುವರಿದಿದೆ. ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ ಕುಮಾರಸ್ವಾಮಿ ರಾಜ್ಯ ಪ್ರವಾಸಕ್ಕೆ ಬಸ್ ಸಿದ್ದಗೊಂಡಿದ್ದು, ಅತ್ಯಾಧುನಿಕ ಸೌಲಭ್ಯ  ಹೊಂದಿರುವ ಬಸ್‌ ಇಂದು ಎಚ್‌ಡಿಕೆ ನಿವಾಸ ತಲುಪಿದೆ.

ಬಸ್‌ನ ವಿಶೇಷ : ಕರ್ನಾಟಕ ವಿಕಾಸ ವಾಹಿನಿ ಎನ್ನುವ ಹೆಸರನ್ನು ಈ ಬಸ್‌ಗೆ ಇಡಲಾಗಿದೆ. ಅಶೋಕ ಲೇಲ್ಯಾಂಡ್ ಕಂಪನಿಯ ಬಸ್‌ನ ಬಾಡಿಯನ್ನು ಸೇಲಂನ ಸ್ಪೇಸ್‌ ಟೆಕ್‌ ಕಂಪನಿ ವಿನ್ಯಾಸಗೊಳಿಸಿದೆ. ಪ್ರಕಾಶ್ ಬಸ್‌ ಕವಚ ನಿರ್ಮಾಣ ಸಂಸ್ಥೆಯಲ್ಲಿ ಬಸ್ಸನ್ನು ಸಿದ್ದಪಡಿಸಲಾಗಿದೆ.

ಬಸ್ ತಯಾರಿಕೆಗಾಗಿ 1 ಕೋಟಿ ರೂ ವೆಚ್ಚ ಮಾಡಲಾಗಿದೆ. ಬಸ್‌ ತಯಾರಿಕೆಗಾಗಿ 3 ತಿಂಗಳು ತಗುಲಿದ್ದು, ಹಸಿರು, ಬಿಳಿ ಬಣ್ಣವನ್ನು ಹೊಂದಿರುವ ಬಸ್‌ ಒಳಗೆ ಸಂಪೂರ್ಣ ಹವಾ ನಿಯಂತ್ರಣ ವ್ಯವಸ್ಥೆ ಹೊಂದಿದೆ. ಜೊತೆಗೆ ಬಸ್‌ನೊಳಗೆ ಬೆಡ್‌ರೂಂ, ಬಾತ್ ರೂಂ, ಅಡುಗೆ ಕೋಣೆ ಸಹ ಇದೆ. ಅಲ್ಲದೆ ಮೂವರನ್ನು ಏಕಕಾಲಕ್ಕೆ ಬಸ್‌ ಮೇಲ್ಭಾಗಕ್ಕೆ ಎತ್ತುವ ಹೈಡ್ರಾಲಿಕ್ ಲಿಫ್ಟ್‌ ವ್ಯವಸ್ಥೆ ಸಹ ಮಾಡಲಾಗಿದೆ.

ಮಾಧ್ಯಮಗಳ ವೀಕ್ಷಣೆಗಾಗಿ ಡಿಜಿಟಲ್‌ ಇಂಟರ್‌ನೆಟ್‌ ಟಿವಿ, ಹೋಂ ಥಿಯೇಟರ್‌ ಸೌಲಭ್ಯವಿದೆ. ಮೂರರಿಂದ ನಾಲ್ಕು ಮಂದಿ ಕುಳಿತು ಸಭೆ ನಡೆಸಲು ಅನುವಾಗುವಂತೆ ಸೋಫಾ ವ್ಯವಸ್ಥೆ, ಎಚ್‌ಡಿಕೆ ಅವರಿಗೆ ಕುಳಿತಲ್ಲಿಂದಲೇ ಚಲಿಸುವ ವ್ಯವಸ್ಥೆ ಇರುವ ವಿಶೇಷ ಆಸನವನ್ನು ಬಸ್‌ ಹೊಂದಿದೆ.

 

Leave a Reply

Your email address will not be published.

Social Media Auto Publish Powered By : XYZScripts.com