ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ : ಶ್ಯಾಮನೂರು ಶಿವಶಂಕರಪ್ಪನವರಿಗೆ ಬಸವರಾಜ ಹೊರಟ್ಟಿ ಪತ್ರ

ಶ್ರೀ ಶಾಮನೂರ ಶಿವಶಂಕರಪ್ಪನವರು
ಅಧ್ಯಕ್ಷರು
ಅಖಿಲ ಭಾರತ ವೀರಶೈವ ಮಹಾಸಭಾ (ರಿ)
ಬೆಂಗಳೂರು.

ಸಮಾಜ ಮತ್ತು ಸಮುದಾಯದ ಸಲುವಾಗಿ ತಾವು ಒಂದು ಹೆಜ್ಜೆ ಹಿಂದೆ ಸರಿಯಬಹುದೆ?

ಮಾನ್ಯರೆ,
ಕಳೆದ ಅನೇಕ ದಿನಗಳಿಂದ ವೀರಶೈವ ಲಿಂಗಾಯತ ಹಾಗೂ ಲಿಂಗಾಯತ ಎನ್ನುವ ಈ ವಿಚಾರದಲ್ಲಿ ನಾವು-ನೀವು
ವಿನಾಕಾರಣ ಪರಸ್ಪರ ಆರೋಪ ಮಾಡುತ್ತಿರುವದನ್ನು ಮಾಧ್ಯಮಗಳ ಮೂಲಕ ಇಡೀ ರಾಜ್ಯದ ಜನ ನೋಡುತ್ತಿದ್ದಾರೆ. ನಮ್ಮ- ನಿಮ್ಮ ವಾದ ಪರ-ವಿರೋಧಗಳ ಬಗ್ಗೆ ಹೆಚ್ಚು ಸಮಯ ಕಳೆಯುವದರಲ್ಲಿ ಅರ್ಥವಿಲ್ಲವೆನ್ನುವದು ಸ್ಪಷ್ಟವಾದ ಮಾತು ಅನ್ನುವದನ್ನು
ತಾವು ಒಪ್ಪಿಕೊಳ್ಳುತ್ತೀರೆಂದು ನಾನು ಭಾವಿಸಿದ್ದೇನೆ. ಈ ಹಿನ್ನೆಲೆಯಲ್ಲಿ ನಾನು ಕೆಲವು ವಿಚಾರಗಳನ್ನು ತಮ್ಮ ಗಮನಕ್ಕೆ
ತರಬಯಸುತ್ತೇನೆ. ತಾವು ಹಿರಿಯರು ಮತ್ತು ಸಮಾಜದ ಗಣ್ಯರು ಹೀಗಾಗಿ ತಮಗೆ ಕೊನೆಯದಾಗಿ ವಿನಂತಿಸಿಕೊಳ್ಳಬೇಕೆಂದು
ನನ್ನಲ್ಲಿ ವಿಚಾರ ಬಂದದ್ದರಿಂದ ಈ ಪತ್ರ ಬರೆಯುತ್ತಿದ್ದೇನೆ. ತಾವು ಸಾರಾಸಾರ ವಿಚಾರಮಾಡಿ ಒಂದು ಅಂತಿಮ ತೀರ್ಮಾನ
ಮಾಡುವುದು ಸೂಕ್ತವೆಂದು ನನ್ನ ಭಾವನೆ. ಸದರಿ ವಿಷಯದ ಬಗ್ಗೆ ಅನೇಕ ಹೊಸ ಹೊಸ ವಿಚಾರಗಳು ನಮಗೂ-ನಿಮಗೂ
ಮನವರಿಕೆಯಾಗಿವೆ ಮತ್ತು ದಾಖಲೆಗಳು ಸಹ ಸಿಕ್ಕಿವೆ. ಅವೆಲ್ಲವನ್ನು ಒಂದು ಬದಿಗೆ ಇರಿಸಿ ಒಂದು ಸ್ಪಷ್ಟವಾದ ತೀರ್ಮಾನಕ್ಕೆ
ಬರದಿದ್ದರೆ ಮುಂದಿನ ಪೀಳಿಗೆಗೆ ನೀವು-ನಾವು ಉತ್ತರ ಹೇಳುವ ಜವಾಬ್ದಾರಿಯಿಂದ ತಪ್ಪಿಸಿಕೊಂಡಂತೆ ಆಗುತ್ತದೆ.
ಈ ವಿಷಯವಾಗಿ ವೀರಶೈವ ಮಹಾ ಸಭೆಯ ಕೆಲವು ಪ್ರಮುಖರು, ಲಿಂಗಾಯತರ ಕೆಲವು ಪ್ರಮುಖರು ಕೂಡಿ ಎರಡು
ಬಾರಿ ಚರ್ಚಿಸಿದ್ದು ಆಯಿತು. ಅದರ ಸತ್ಯವೇನೆಂಬುದು ನಮ್ಮ ಮತ್ತು ನಿಮ್ಮ ಅಂತರಂಗದಲ್ಲಿ ಸಂಪೂರ್ಣವಾಗಿ
ಮನವರಿಕೆಯಾಗಿದೆ. ಆದರೆ ಕೆಲವರ ಸಲುವಾಗಿ ನೀವು ಸುಮ್ಮನಿರಬೇಕಾದ ಅನಿವಾರ್ಯತೆ ಆಗಿರುವದು ಸಹ ಎಲ್ಲರಿಗೂ
ಗೊತ್ತಿದ್ದ ಸಂಗತಿ. ವಿಷಯ ಏನೇ ಇರಲಿ ನಮ್ಮ ಕಡೆಯವರ ವಾದ ಇಷ್ಟೇ.

1) ಅಖಿಲ ಭಾರತ ವೀರಶೈವ ಮಹಾ ಸಭಾ(ರಿ) ಬೆಂಗಳೂರು ಅವರು ದಿನಾಂಕ: 2-8-2017 ರ ಪತ್ರಿಕಾ ಹೇಳಿಕೆ ನೀಡಿ
ಮಾಧ್ಯಮದಲ್ಲಿ ಸುದ್ದಿಯಾಗಿರುವದನ್ನು ನಾವು ಗಮನಿಸಿದ್ದೇವೆ. 1904 ರಲ್ಲಿ ಸ್ಥಾಪನೆಯಾದ ಅಖಿಲ ಭಾರತ ವೀರಶೈವ
ಮಹಾ ಸಭೆ, ವೀರಶೈವ/ಲಿಂಗಾಯತ ಯಾಕೆ ಆಯಿತು? ಅದಕ್ಕೆ ಕಾರಣವೇನು ಎನ್ನುವ ಪ್ರಶ್ನೆ ಎಲ್ಲರಲ್ಲೂ ಚರ್ಚೆಯ
ವಿಷಯವಾಗಿದೆ. ಇದಕ್ಕೆ ಸ್ಪಷ್ಟವಾದ ಉತ್ತರ ಯಾಕಿಲ್ಲ ಅನ್ನುವುದು ಒಂದು ಪ್ರಶ್ನೆ.

2) ದಿನಾಂಕ: 7-7-2013 ರಂದು ಅಂದಿನ ಯು.ಪಿ.ಎ. ಸರಕಾರದ ಗ್ರಹ ಮಂತ್ರಿಗಳಾಗಿದ್ದ ಶ್ರೀ ಸುಶೀಲ್ ಕುಮಾರ ಶಿಂಧೆಯವರನ್ನು ನಿಯೋಗದಲ್ಲಿ ಭೇಟಿಯಾಗಿದ್ದ ಮಹಾಸಭೆ ನಿಯೋಗ ವೀರಶೈವ-ಲಿಂಗಾಯತಕ್ಕೆ ಸ್ವತಂತ್ರ ಧರ್ಮದ
ಸ್ಥಾನ-ಮಾನ ನೀಡುವಂತೆ ಮನವಿ ಸಲ್ಲಿಸಿತ್ತು. ಅದಾದ ನಂತರ ದಿನಾಂಕ: 25-7-2013 ರಂದು ನೂತನವಾಗಿ
ಚುನಾಯಿತರಾದ ನಮ್ಮ ಸಮಾಜದ ಸಚಿವರು, ಸಂಸದರು, ಶಾಸಕರಿಗೆ ಸಲ್ಲಿಸಿದ ಅಭಿನಂದನಾ ಸಮಾರಂಭದಲ್ಲಿ
ನಿರ್ಣಯವೊಂದನ್ನು ಅಂಗೀಕರಿಸಿ ದೇಶದಲ್ಲಿರುವ 4 ಕೋಟಿ ವೀರಶೈವ-ಲಿಂಗಾಯತರನ್ನು ಒಗ್ಗೂಡಿಸುವ ದೃಷ್ಟಿಯಿಂದ
ಸಾಮಾಜಿಕ ನ್ಯಾಯದ ಹಿನ್ನಲೆಯಲ್ಲಿ ವೀರಶೈವ-ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ನೀಡುವಂತೆ
ನಿರ್ಣಯ ಅಂಗೀಕರಿಸಲಾಯಿತು. 56 ಜನ ಸಚಿವರು, ಸಂಸದರು, ಶಾಸಕರು ಅಂದಿನ ಕೇಂದ್ರ ಗೃಹ ಮಂತ್ರಿಗಳಾಗಿದ್ದ
ಶ್ರೀ ಸುಶೀಲ್‍ಕುಮಾರ ಶಿಂಧೆಯವರಿಗೆ ದಿನಾಂಕ: 31-7-2013 ರಂದು ಸಲ್ಲಿಸ ಬಯಸಿದ್ದ ಮನವಿಗೆ ಸಹಿ ಹಾಕಿದ್ದರು.
ತದನಂತರ ದಿನಾಂಕ: 26-9-2013 ರಂದು ಯು.ಪಿ.ಎ. ಅಧ್ಯಕ್ಷರಾಗಿದ್ದ ಶ್ರೀಮತಿ ಸೋನಿಯಾ ಗಾಂಧಿಯವರಿಗೆ,
ಕೇಂದ್ರ ಸಚಿವರುಗಳಾಗಿದ್ದ ಶ್ರೀ ಮಲ್ಲಿಕಾರ್ಜುನ ಖರ್ಗೆ, ಡಾ: ಎಂ.ವೀರಪ್ಪ ಮೊಯಿಲಿ, ಶ್ರೀ ಕೆ.ಹೆಚ್.ಮುನಿಯಪ್ಪ, ಶ್ರೀ
ರಹಮಾನ್ ಖಾನ್ ದೆಹಲಿಯಲ್ಲಿ ಭೇಟಿಯಾಗಿ ಅಂದಿನ ಸಾಮಾಜಿಕ ನ್ಯಾಯ ಸಚಿವರಾಗಿದ್ದ ಕುಮಾರಿ ಶೆಲ್ಜಾ ಅವರಿಗೆ
ಮಹಾಸಭೆಯ ಅಧ್ಯಕ್ಷರಾದ ತಮ್ಮೊಂದಿಗೆ ತೆರಳಿ ನಿಯೋಗವು ಮನವಿ ನೀಡಿ ವಿನಂತಿಸಲಾಯಿತು. ಇವರೆಲ್ಲ
ಮಹಾಸಭೆಯ ಮನವಿಗೆ ಸೂಕ್ತವಾಗಿ ಸ್ಪಂಧಿಸಿ ತಮ್ಮ ಶಿಫಾರಸ್ಸುಗಳನ್ನು ಕೇಂದ್ರ ಸರ್ಕಾರದ ಸಂಬಂಧಿತ ಇಲಾಖೆಗೆ
ಕಳುಹಿಸಿದ್ದರು. ನಮ್ಮ ಮನವಿ ಪರಿಶೀಲನೆಯ ಹಂತದಲ್ಲಿರುವಾಗಲೇ ಲೋಕಸಭಾ ಚುನಾವಣೆ ಘೋಷಣೆಯಾಗಿ
ಮನವಿ ಇನ್ನೂ ಇತ್ಯರ್ಥವಾಗಬೇಕಾಗಿದೆ. ಇಲ್ಲಿಯವರೆಗೆ ಈ ಕುರಿತು ಯಾವ ಉತ್ತರವೂ ಬಂದಿಲ್ಲವೆಂದು ತಾವೇ
ಹೇಳಿದ್ದೀರಿ. ಇದಕ್ಕೆ ಮಹಾಸಭಾದವರ ಉತ್ತರವೇನು ಎನ್ನುವ ಪ್ರಶ್ನೆ ಉದ್ಭವಾಗಿದೆ.

3) 2014 ರಲ್ಲಿ ಮಹಾರಾಷ್ಟ್ರದಲ್ಲಿ ಕಾಶಿ ಹಾಗೂ ಕೇದಾರ ಜಗದ್ಗುರುಗಳು ಧಾರೇಶ್ವರ ಮಹಾಸ್ವಾಮಿಗಳ ಮುಖಾಂತರ
ಲಿಂಗಾಯತರಲ್ಲಿ ಬರುವ ಉಪಜಾತಿಗಳಿಗೆ ಮೀಸಲಾತಿ ಕಲ್ಪಿಸಬೇಕು ಅನ್ನುವ ಮನವಿಯನ್ನು ವಿರೋಧಿಸಿ ವೀರಶೈವ
ಹೆಸರಿನಲ್ಲಿ ಮೀಸಲಾತಿ ಕಲ್ಪಿಸಬೇಕೆಂದು ಒತ್ತಡವನ್ನು ಹೇರಲಾಯಿತು. ಆಗ ಮಹಾರಾಷ್ಟ್ರ ಸರಕಾರ ವೀರಶೈವ
ಲಿಂಗಾಯತರ ಮನವಿಗಳನ್ನು ಕಾನೂನಾತ್ಮಕವಾಗಿ ಪರಿಶೀಲಿಸಿ ವೀರಶೈವರನ್ನು ಪರಿಗಣಿಸದೇ ಲಿಂಗಾಯತರನ್ನು
ಪುರಸ್ಕರಿಸಲಾಯಿತು. ಅಲ್ಲದೆ ಅಖಿಲ ಭಾರತ ವೀರಶ್ವವ ಮಹಾಸಭೆಯು 1990 ರಲ್ಲಿ ಕರ್ನಾಟಕ ಉಚ್ಛ
ನ್ಯಾಯಾಲಯದಲ್ಲಿ ಕೇವಲ ವೀರಶೈವಕ್ಕೆ ಮಾತ್ರ ಕೇಂದ್ರ ಸರಕಾರ ಪ್ರತ್ಯೇಕ ಕಾಲಂ ನೀಡಬೇಕು ಎಂಬ ದಾವೆ ಹೂಡಿತು
ಅಲ್ಲಿಯೂ ಈ ದಾವೆ ತಿರಸ್ಕೃತಗೊಂಡಿತು. ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಯಾರದ್ದೋ ವಿರುದ್ಧ ಅಥವಾ
ಕೆಲವರ ಪ್ರತಿಷ್ಠೆ ಅಲ್ಲವೇ ಅಲ್ಲ. ಇದು ಲಿಂಗಾಯತ ಸಮಾಜದ ಜನ ಸಾಮಾನ್ಯರ ಹಕ್ಕೊತ್ತಾಯದ ಪ್ರತೀಕವಾಗಿದೆ
ಎಂಬುದನ್ನು ಹಿರಿಯರಾದ ತಮಗೆ ಬೇರೆ ಹೇಳಬೇಕಾಗಿಲ್ಲ.

ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟಕ್ಕೆ ಅದರದ್ದೆಯಾದ ಮಹತ್ವವಿದೆ. ಲಿಂಗಾಯತ ಧರ್ಮ ಪ್ರತ್ಯೇಕ
ಎನ್ನುವುದಕ್ಕೆ ಅನೇಕ ಪ್ರಬಲ ಸಾಕ್ಷ್ಯಾಧಾರಗಳು ಇವೆ. 1966 ರಲ್ಲಿ ಸುಪ್ರೀಂಕೋರ್ಟನ ಪ್ರಕರಣವೊಂದರಲ್ಲಿ ನ್ಯಾ.
ಗಜೇಂದ್ರಗಡ್ಕರ್ ಅವರು ಬಸವಣ್ಣ ಲಿಂಗಾಯತ ಧರ್ಮದ ಸಂಸ್ಥಾಪಕರೆಂದು ಪ್ರಸ್ತಾಪಿಸಿದ್ದಾರೆ. ಅಲ್ಲದೆ ಬ್ರಿಟಿಷ್ ಕಾಲದ
ಅನೇಕ ಪ್ರವಾಸಿಗರು ಲಿಂಗಾಯತ ಧರ್ಮದ ಪ್ರಸ್ತಾಪ ಮಾಡಿದ್ದಾರೆ. ಮೈಸೂರು ಮಹಾರಾಜರ ಕಾಲದ
ಜನಗಣತಿಯಲ್ಲೂ “ಲಿಂಗಾಯತ ಧರ್ಮದ” ಪ್ರಸ್ತಾಪ ಇದೆ ಎಂಬುದು ತಮಗೆ ನಾನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಈ ಹಿಂದೆ “ವೀರಶೈವ” ಎಂದು ಪ್ರತ್ಯೇಕ ಧರ್ಮಕ್ಕೆ ಪ್ರಸ್ತಾಪಕ್ಕೆ ಮನ್ನಣೆ ಸಿಕ್ಕಿಲ್ಲ ಎಂಬುದು ಎಲ್ಲರಿಗೂ ತಿಳಿದ
ವಿಷಯವಾಗಿದೆ. ಅದೇ ರೀತಿ ವೀರಶೈವ-ಲಿಂಗಾಯತ ಪ್ರಸ್ತಾಪಕ್ಕೂ ಮನ್ನಣೆ ಸಿಕ್ಕಿಲ್ಲ. ಸಮಾಜದ ಹಿತದೃಷ್ಟಿಯಿಂದ
ಜನರ ಭಾವನೆಗೆ ಪೂರಕವಾಗಿ ಒಮ್ಮೆ “ಲಿಂಗಾಯತ” ಎಂದಷ್ಟೆ ನಮೂದಿಸಿ ಸ್ವತಂತ್ರ ಧರ್ಮಕ್ಕೆ ಪ್ರಸ್ತಾಪ ಮಾಡಿದರೆ
ತಪ್ಪೇನು? ಒಮ್ಮೆ ಪ್ರಯತ್ನಿಸಿ ನೋಡೋಣ ಯಶಸ್ವಿಯಾದರೆ ಸಮಾಜಕ್ಕೆ ಹಾಗೂ ತಮ್ಮಂತಹ ಹಿರಿಯ ನಾಯಕರಿಗೆ
ಇದಕ್ಕಿಂತ ಬೇರೆನು ಬೇಕು ಹೇಳಿ? ಇದು ಒಂದು ಸಾರಿ ಸಮಾಜದ ಹಿತಕ್ಕಾಗಿ ನಿಮ್ಮಂತಹ ಹಿರಿಯರು ಒಂದು ಹೆಜ್ಜೆ
ಹಿಂದೆ ಸರಿದು ಸ್ವತಂತ್ರ ಧರ್ಮದ ಪ್ರಸ್ತಾಪ ಹಾಗೂ ಸೌಲಭ್ಯ ಪಡೆಯಲು ಒತ್ತಡಕ್ಕೆ ಧ್ವನಿಗೂಡಿಸಿದರೆ ಸಮಾಜ ಹಾಗೂ
ಭವಿಷ್ಯದ ಇತಿಹಾಸ ತಮ್ಮಂತಹವರನ್ನು ಸ್ಮರಿಸದೆ ಇರದು ಎಂಬುದು ನನ್ನಂತಹವರ ಸ್ಪಷ್ಟ ಅಭಿಪ್ರಾಯ. ಹಿರಿಯರಾದ ತಮಗೆ ನನ್ನ ಮನವಿ ಇಷ್ಟೆ, ಇಲ್ಲಿ ಯಾರ ಪ್ರತಿಷ್ಟೆಯೂ ಇಲ್ಲ, ಯಾರ ವಿರುದ್ಧದ ಯತ್ನವೂ
ಅಲ್ಲ. ಸಮಾಜದ ಹಿತಕ್ಕಾಗಿ ಯಾವ ಪೂರ್ವಾಗ್ರಹ ಪೀಡಿತವಲ್ಲದ ರೀತಿಯಲ್ಲಿ ಯೋಚಿಸಿ ಸ್ವತಂತ್ರ ಲಿಂಗಾಯತ
ಧರ್ಮ ಪ್ರಸ್ತಾಪಕ್ಕೆ ಒಂದು ಹೆಜ್ಜೆ ಮುಂದಿಡಿ ಎಂಬುದು ನನ್ನ ಮತ್ತು ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದಲ್ಲಿ
ತೊಡಗಿದವರ ಮನವಿಯಾಗಿದೆ.
ಅಲ್ಪಸಂಖ್ಯಾತ ಧರ್ಮಕ್ಕೆ ಸಂಬಂಧಿಸಿದ ಮನವಿ ಸಲ್ಲಿಸುವ ಕುರಿತು, ಮುಂದಿನ ತೀರ್ಮಾನ ತಮ್ಮದು. ತಮ್ಮಿಂದ
ಆಶಾದಾಯಕ ಸ್ಪಂದನೆಯ ನಿರೀಕ್ಷೆ ಲಿಂಗಾಯತ ಸಮಾಜದ್ದಾಗಿದೆ. ಈ ಹೋರಾಟದಲ್ಲಿ ನನಗೆ ಹಾಗೂ ತಮಗೆ
ರಾಜಕೀಯ ಲಾಭದ ಉದ್ದೇಶ ಅಥವಾ ವೈಯಕ್ತಿಕ ಹಿತಾಸಕ್ತಿ ಯಂತೂ ಇಲ್ಲವೇ ಇಲ್ಲ. ಅದೇನಿದ್ದರೂ ಸಮಾಜದ
ಸರ್ವತೋಮುಖ ಹಿತಾಸಕ್ತಿ ಎಂಬುದನ್ನು ಮತ್ತೊಮ್ಮೆ ಒತ್ತಿ ಹೇಳುವೆ.
ವಂದನೆಗಳೊಂದಿಗೆ,
ತಮ್ಮ ವಿಶ್ವಾಸಿ
(ಬಸವರಾಜ ಹೊರಟ್ಟಿ)

Leave a Reply

Your email address will not be published.

Social Media Auto Publish Powered By : XYZScripts.com