ಬಿಬಿಎಂಪಿ ವ್ಯಾಪ್ತಿಯ ರಸ್ತೆ ಡಾಂಬರೀಕರಣಕ್ಕೆ ಇನ್ಮುಂದೆ ಪ್ಲಾಸ್ಟಿಕ್‌ ಬಳಕೆ

ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೊಳ್ಳುವ ರಸ್ತೆ ಡಾಂಬರೀಕರಣದಲ್ಲಿ ಪ್ಲಾಸ್ಟಿಕ್ ಬಳಸಿಕೊಳ್ಳಲು ನಿರ್ಧಾರ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಬಿಬಿಎಂಪಿ ಮತ್ತು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

 ನಗರದಲ್ಲಿ ಪ್ಲಾಸ್ಟಿಕ್ ನಿಷೇಧಿಸಲಾಗಿದೆ. ಆದರೂ ಅದರ ಹಾವಳಿ ಕಡಿಮೆಯಾಗಿಲ್ಲ. ಇದು ಕಸ ವಿಲೇವಾರಿಗೂ ಸಮಸ್ಯೆಯಾಗಿದೆ. ಹೀಗಾಗಿ ಪ್ಲಾಸ್ಟಿಕನ್ನು ಡಾಂಬರೀಕರಣಕ್ಕೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಈ ಕುರಿತು ನಡೆಸಲಾದ ಸಭೆ ಬಳಿಕ ಮಾತನಾಡಿದ ಬಿಬಿಎಂಪಿ ಆಯುಕ್ತ ಸಂಪತ್‌ ರಾಜ್‌, ನಗರದಲ್ಲಿ ಈ ವರೆಗೆ 1 ಲಕ್ಷ ಕೆ.ಜಿ. ಪ್ಲಾಸ್ಟಿಕ್ ವಶಪಡಿಸಿಕೊಂಡು 1.67 ಕೋಟಿ ರೂ. ದಂಡ ವಿಧಿಸಲಾಗಿದೆ. ಆದರೆ, ಕೇಸು ದಾಖಲು ಮಾಡುವ ಅಧಿಕಾರ ನಮಗೆ ಇಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಡಾಂಬರೀಕರಣಕ್ಕೆ ಪ್ಲಾಸ್ಟಿಕ್ ಬಳಸಿಕೊಳ್ಳಲು ನಿರ್ಣಯಿಸಿದೆ ಎಂದು ವಿವರಿಸಿದರು.

ಇದರಲ್ಲಿ ವಿಜಿ-10 ಮತ್ತು ವಿಜಿ-30 ಎಂಬ ಎರಡು ಮಾದರಿಗಳಿವೆ. ವಿಜಿ-30ಯಲ್ಲಿ ಹೈಗ್ರೇಡ್ ವಿಟಮಿನ್ ಇರುತ್ತದೆ. ಇದನ್ನು ಎಸ್‍ಆರ್ ದರದಲ್ಲಿ ಸೇರಿಸಲಾಗಿದೆ. ಡಾಂಬರೀಕರಣದಲ್ಲಿ ಪ್ಲಾಸ್ಟಿಕ್ ಬಳಸುವುದರಿಂದ ಹೆಚ್ಚು ಬಾಳಿಕೆ ಬರುತ್ತದೆ ಎಂದರು. 1 ಟನ್ ವಿಟಮಿನ್‍ಗೆ  32 ಸಾವಿರ ರೂ. ವೆಚ್ಚವಾಗುತ್ತದೆ. ಶೇ. 8ರಷ್ಟು ಪ್ಲಾಸ್ಟಿಕ್  ಬಳಕೆ ಮಾಡುವುದರಿಂದ ವಿಟಮಿನ್‍ಗೆ 2,100 ಹೆಚ್ಚುವರಿ ವೆಚ್ಚವಾಗುತ್ತದೆ. ಆದರೂ ರಸ್ತೆಗಳು ಹೆಚ್ಚು ಬಾಳಿಕೆ ಬರುವುದರ ಜತೆಗೆ ವಾಹನಗಳ ಸಂಚಾರ ಸುಗಮವಾಗಿರುತ್ತದೆ ಎಂದು ತಿಳಿಸಿದರು.

ನಗರದಲ್ಲಿ ಪ್ಲಾಸ್ಟಿಕ್ ಹೆಚ್ಚು ಸಂಗ್ರಹವಾಗುವುದರಿಂದ ಅನುಕೂಲವಾಗುತ್ತದೆ. ಈ ಸಂಬಂಧ ಸೋಮವಾರ ಅಧಿಸೂಚನೆ ಹೊರಬೀಳಲಿದೆ ಎಂದರು.

Leave a Reply

Your email address will not be published.

Social Media Auto Publish Powered By : XYZScripts.com