ಸರ್ಕಾರ ನೀಡಿದ್ದ 10 ಲಕ್ಷ ರೂ ವೈದ್ಯಕೀಯ ಪರಿಹಾರವನ್ನು ನಿರಾಕರಿಸಿದ ಸಾಲುಮರದ ತಿಮ್ಮಕ್ಕ

ಬೆಂಗಳೂರು : ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ಪರಿಸರವಾದಿ ಸಾಲುಮರದ ತಿಮ್ಮಕ್ಕ ಅವರಿಗೆ ವೈದ್ಯಕೀಯ ಖರ್ಚುವೆಚ್ಚಗಳನ್ನು ಬರಿಸಲು ಸರ್ಕಾರ 10 ಲಕ್ಷ ರೂ ಬಿಡುಗಡೆ ಮಾಡಿದೆ. ಆದರೆ ಈ ಹಣದ ಚೆಕ್ಕನ್ನು ತಿಮ್ಮಕ್ಕ ನಿರಾಕರಿಸಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಸರ್ಕಾರ ತಿಮ್ಮಕ್ಕ ಅವರಿಗೆ ಸಾಕಷ್ಟು ಆಸ್ವಾಸನೆಗಳನ್ನು ನೀಡಿತ್ತು. ಆದರೆ ಇದುವರೆಗೂ ಯಾವುದೇ ಭರವಸೆ ಈಡೇರಿಸಿಲ್ಲ. ಆದ್ದರಿಂದ ಮನಸ್ಸಿಗೆ ನೋವಾಗಿದ್ದು, ಆ ಕಾರಣದಿಂದಲೇ ಸರ್ಕಾರದ ಹಣವನ್ನು ನಿರಾಕರಿಸಿರುವುದಾಗಿ ತಿಮ್ಮಕ್ಕ ಖಾಸಗಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.

ಇತ್ತೀಚೆಗಷ್ಟೇ ಸಾಲುಮರದ ತಿಮ್ಮಕ್ಕ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದರು. ಆದಾದ ಮೂರು ದಿನಗಳ ಬಳಿಕ ಮತ್ತೆ ತಿಮ್ಮಕ್ಕ ಅವರಿಗೆ ಉಸಿರಾಟದ ತೊಂದರೆ ಉಂಟಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈಗಾಗಲೆ ಆಸ್ಪತ್ರೆಯ ಖರ್ಚು ವೆಚ್ಚಗಳನ್ನು ಭರಿಸುವುದಾಗಿ ಸರ್ಕಾರ ಹೇಳಿದ್ದು, ಅದರಂತೆ 10 ಲಕ್ಷ ರೂನ ಚೆಕ್‌ ನೀಡಿದೆ. ಅಲ್ಲದೆ ಈಗಾಗಲೇ ಆಸ್ಪತ್ರೆಯ ಬಿಲ್ಲನ್ನು ಸರ್ಕಾರವೇ ಪಾವತಿ ಮಾಡಿದೆ ಎಂದು ಸಚಿವೆ ಉಮಾಶ್ರೀ ಹೇಳಿದ್ದಾರೆ. ಆದರೆ ತಿಮ್ಮಕ್ಕ ನನಗೆ ಸರ್ಕಾರದಿಂದ ಯಾವುದೇ ಸಹಾಯ ಬೇಡ ಎಂದಿದ್ದಾರೆ.