ಕ್ರಿಕೆಟ್ : ಧವನ್ – ಕಾರ್ತಿಕ್ ತಾಳ್ಮೆಯ ಬ್ಯಾಟಿಂಗ್ : ಟೀಮ್ ಇಂಡಿಯಾಗೆ 6 ವಿಕೆಟ್ ಜಯ

ಪುಣೆಯಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ 6 ವಿಕೆಟ್ ಜಯಗಳಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲೆಂಡ್ ನಿಗದಿತ 50 ಓವರುಗಳಲ್ಲಿ 230 ರನ್ ಮೊತ್ತ ಸೇರಿಸಿತು. ಆರಂಭಿಕ ಬ್ಯಾಟ್ಸಮನ್ ಗಳ ವೈಫಲ್ಯದಿಂದ ಅಲ್ಪಮೊತ್ತಕ್ಕೆ ಆಲೌಟ್ ಆಗುವ ಹಂತದಲ್ಲಿದ್ದ ನ್ಯೂಜಿಲೆಂಡ್ ತಂಡಕ್ಕೆ ಹೆನ್ರಿ ನಿಕೋಲ್ಸ್ 42, ಗ್ರ್ಯಾಂಡ್ ಹೋಮ್ 41, ಟಾಮ್ ಲಥಾಮ್ 38 ರನ್ ಗಳಿಸಿ ಆಸರೆಯಾಗಿ 200 ರನ್ ಗಡಿ ದಾಟಲು ಕಾರಣರಾದರು. ಭಾರತದ ಪರವಾಗಿ ಭುವನೇಶ್ವರ್ ಕುಮಾರ್ 3 ಹಾಗೂ ಜಸ್ಪ್ರೀತ್ ಬುಮ್ರಾ 2 ವಿಕೆಟ್ ಪಡೆದರು.

ಚೇಸ್ ಮಾಡಲಿಳಿದ ಭಾರತ 46 ಓವರುಗಳಲ್ಲಿ 232 ರನ್ ಗಳಿಸಿ ಗೆಲುವು ಸಾಧಿಸಿತು. ರೋಹಿತ್ ಶರ್ಮಾ ಅವರಿಗೆ ಎರಡಂಕಿಯನ್ನು ತಲುಪಲು ಸಾಧ್ಯವಾಗಲಿಲ್ಲ. ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದ ಶಿಖರ್ ಧವನ್ (68) ಹಾಗೂ ದಿನೇಶ್ ಕಾರ್ತಿಕ್ (64) ಅರ್ಧಶತಕ ಗಳಿಸಿದರು. 3 ವಿಕೆಟ್ ಪಡೆದ ಭುವನೇಶ್ವರ್ ಕುಮಾರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. 3 ಪಂದ್ಯಗಳ ಏಕದಿನ ಸರಣಿ 1-1 ರಿಂದ ಸಮವಾಗಿದೆ.

ಸರಣಿಯ ಮೂರನೇ ಹಾಗು ಕೊನೆಯ ಪಂದ್ಯ ಅಕ್ಟೊಬರ್ 29 ರಂದು ಕಾನ್ಪುರದಲ್ಲಿ ನಡೆಯಲಿದ್ದು, ಸರಣಿ ಗೆಲುವಿಗಾಗಿ ಹೋರಾಟ ನಡೆಯಲಿದೆ.