ಶಾಸಕರು, ಎಂಪಿಗಳು ಬಂದಾಗ ಅಧಿಕಾರಿಗಳು ಎದ್ದು ನಿಂತು ಗೌರವ ನೀಡಬೇಕು : ಯೋಗಿ ಸರ್ಕಾರದ ಹೊಸ ರೂಲ್ಸ್‌

ಲಖನೌ : ಉತ್ತರ ಪ್ರದೇಶ ಸರ್ಕಾರ ತಮ್ಮ ರಾಜ್ಯದಲ್ಲಿ ಮತ್ತೊಂದು ಆದೇಶ ಹೊರಡಿಸಿದ್ದು, ಸಚಿವರು, ಶಾಸಕರು, ಎಂಪಿಗಳು ಬಂದಾಗ ಎದ್ದು ನಿಂತು ಗೌರವ ಸೂಚಿಸುವಂತೆ ಆದೇಶ ಹೊರಡಿಸಿದೆ. ಅಲ್ಲದೆ ಅವರು ಹೊರ ಹೋಗುವಾಗಲೂ ಅದೇ ರೀತಿ ಎದ್ದು ನಿಂತು ಗೌರವ ಸೂಚಿಸಬೇಕು ಎನ್ನಲಾಗಿದೆ.

ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ರಾಜೀವ್‌ ಕುಮಾರ್ ಈ ಆದೇಶ ಹೊರಡಿಸಿದ್ದು, ಸಾರ್ವಜನಿಕ ಪ್ರತಿನಿಧಿಗಳ ಶಿಷ್ಟಾಚಾರದ ದೃಷ್ಠಿಯಿಂದ ಈ ನಿಯಮ ಜಾರಿಗೆ ತರಲಾಗಿದೆ. ಸಚಿವರು, ಶಾಸಕರು ಹೀಗೆ ಜನಪ್ರತಿನಿಧಿಗಳು ಬಂದಾಗ ಅಧಿಕಾರಿಗಳು ಎದ್ದು ನಿಂತು ಗೌರವ ನೀಡಬೇಕು. ಜೊತೆಗೆ ಜನಪ್ರತಿನಿಧಿಗಳು ಹೊರಡುವ ಮುನ್ನವೂ ಅದೇ ಶಿಷ್ಟಾಚಾರ ಮೆರೆಯಬೇಕು ಎಂದಿದ್ದಾರೆ.

ಈ ನಿಯಮವನ್ನು ಪಾಲಿಸದೇ ಇದ್ದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದಿದ್ದಾರೆ. ಜೊತೆಗೆ ಎಂಪಿಗಳು, ಶಾಸಕರು ಹೇಳಿದ ಕೆಲಸವನ್ನು ಸರಿಯಾಗಿ ಮಾಡದೇ ಇದ್ದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ತಮ್ಮ ಸಮಸ್ಯೆ ಏನೆಂಬುದನ್ನು ಅಧಿಕಾರಿಗಳು ವಿನಯತೆಯಿಂದ ಶಾಸಕರು, ಸಚಿವರಿಗೆ ಮನವರಿಕೆ ಮಾಡಿಕೊಡಬೇಕು ಎಂದಿದ್ದಾರೆ.

ಕೆಲ ತಿಂಗಳಿನಿಂದ ಅನೇಕ ಸಚಿವರು ಹಾಗೂ ಶಾಸಕರು, ಅಧಿಕಾರಿಗಳು ತಮಗೆ ಗೌರವ ನೀಡುತ್ತಿಲ್ಲ, ತಮ್ಮನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಯೋಗಿ ಅವರ ಬಳಿ ದೂರು ನೀಡಿದ್ದರು.  ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಸಾರ್ವಜನಿಕರಿಗೆ ಸಂಬಂಧಪಟ್ಟ ಯಾವುದೇ ಕೆಲಸ ಮಾಡಿಸಲು, ಜನಪ್ರತಿನಿಧಿಗಳು ಅಧಿಕಾರಿಗಳ ಬಳಿ ಬಂದರೆ ಅಂತಹವರಿಗೆ ಅಧಿಕಾರಿಗಳು ಸಂಪೂರ್ಣ ಗೌರವ ನೀಡಬೇಕು ಜೊತೆಗೆ ತಮ್ಮ ಸ್ಥಾನದಿಂದ ಎದ್ದು ನಿಂತು ಅವರಿಗೆ ಮರ್ಯಾದೆ ನೀಡಬೇಕು ಎಂದಿದ್ದಾರೆ. ಅಲ್ಲದೆ ಜನಪ್ರತಿನಿಧಿಗಳು ಕಳುಹಿಸಿದ ಎಲ್ಲಾ ಲೆಟರ್‌ಗಳಿಗೂ ಉತ್ತರಿಸಬೇಕು. ಅವರ ಕರೆಗಳನ್ನು ಸ್ವೀಕರಿಸಿ, ಸರಿಯಾದ ಉತ್ತರ ನೀಡುವಂತೆ ಆದೇಶಿಸಿದ್ದಾರೆ.