ಇದು ತಮಿಳಿನ ‘ವಿಕ್ರಂ-ವೇದ’ ಅಲ್ಲ ಕನ್ನಡದ ‘ವೇದ-ವ್ಯಾಸ’

ಕನ್ನಡ ಚಿತ್ರರಂಗದಲ್ಲಿ ಹಲವಾರು ಸೂಪರ್ ಹಿಟ್ ಚಿತ್ರಗಳ ಮೂಲಕ ಹೆಸರಾದವರು ನಿರ್ದೇಶಕರಾದ ಓಂ ಪ್ರಕಾಶ್ ರಾವ್. ಅದ್ಭುತವಾದ ಆ್ಯಕ್ಷನ್ ಚಿತ್ರಗಳನ್ನು ನಿರ್ದೇಶಿಸಿದ ಪ್ರಖ್ಯಾತಿ ಇವ್ರದ್ದು. ಈಗ ಇವ್ರ ಮತ್ತೊಂದು ಹೊಸ ಚಿತ್ರ ಸ್ಯಾಂಡಲ್‍ವುಡ್‍ನಲ್ಲಿ ಕುತೂಹಲ ಮೂಡಿಸಿದೆ. ವಿನೋದ್ ಪ್ರಭಾಕರ್ ಹಾಗೂ ಮದರಂಗಿ ಕೃಷ್ಣ ಅವರ ಕಾಂಬಿನೇಷನ್‍ನಲ್ಲಿ “ವೇದ-ವ್ಯಾಸ” ಚಿತ್ರವನ್ನು ನಿರ್ದೇಶಿಸಲಿರುವ ಓಂ ಪ್ರಕಾಶ್ ರಾವ್ ಅವ್ರು ಈ ಚಿತ್ರಕ್ಕಾಗಿ ಇತ್ತೀಚೆಗಷ್ಟೇ ಚೆನ್ನೈನ ಎ.ವಿ.ಎಂ ಸ್ಟುಡಿಯೋದಲ್ಲಿ ವಿಶೇಷವಾದ ಫೋಟೋ ಶೂಟ್ ಮಾಡಿದ್ದಾರೆ.

ಹೆಸ್ರು ಕೇಳಿದ್ಕೂಡ್ಲೇ ಇದು ತಮಿಳಿನ ಸೂಪರ್ ಹಿಟ್ ಚಿತ್ರ ಮಾಧವನ್ ಹಾಗು ವಿಜಯ್ ಸೇತುಪತಿ ನಟಿಸಿದ ವಿಕ್ರಂ-ವೇದ ಅಂದ್ಕೊಳ್ಬೇಡಿ. ಇದು ಮಂಡ್ಯದಲ್ಲಿ 1973-74ರಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದ ಸಿನಿಮಾ. ಈ ವೆರೈಟಿ ಚಿತ್ರವನ್ನು ರೇಣುಕ ಮೂವಿ ಮೇಕರ್ಸ್ ಬ್ಯಾನರಿನಡಿಯಲ್ಲಿ ಎ.ಎಂ.ಉಮೇಶ್ ರೆಡ್ಡಿ ಅವರು ನಿರ್ಮಿಸುತ್ತಿದ್ದಾರೆ.  ಇದೇ ಅಕ್ಟೋಬರ್ 20ರಂದು ಹಂಸಲೇಖ ಅವರ ಸ್ಟುಡಿಯೋದಲ್ಲಿ ಚಿತ್ರದ ಹಾಡುಗಳ ಧ್ವನಿಮುದ್ರಣ ಪ್ರಾರಂಭವಾಗಲಿದೆ. ಹಂಸಲೇಖ ಅವರ ಗೀತ ರಚನೆ ಮತ್ತು ಸಂಗೀತವಿರುವ “ವೇದ-ವ್ಯಾಸ” ಓಂ ಪ್ರಕಾಶ್ ರಾವ್ ನಿರ್ದೇಶನದ 48ನೇ ಚಿತ್ರ ಎಂಬುದು ವಿಶೇಷ.

ಈ ಚಿತ್ರಕ್ಕೆ ಇವರ ಶ್ರೀಮತಿ ಡೆನ್ನಿಸಾ ಪ್ರಕಾಶ್ ಅವರೇ ಕಥೆ ಬರೆದಿದ್ದಾರೆ.  ಡಿಸೆಂಬರ್ 3ರಿಂದ ಚಿತ್ರೀಕರಣ ಪ್ರಾರಂಭವಾಗಲಿರುವ ಈ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಬೇಕಿದೆ. ‘ವೇದ-ವ್ಯಾಸ’ ಚಿತ್ರಕ್ಕೆ ಎಂ.ಎಸ್.ರಮೇಶ್ ಅವರು ಸಂಭಾಷಣೆ ಬರೆದಿದ್ದು, ವಿ.ರವಿಕುಮಾರ್ ಛಾಯಾಗ್ರಹಣ, ಕಲೈ ಅವರ ನೃತ್ಯ ನಿರ್ದೇಶನ, ಕಿಂಗ್ ಪಳನಿರಾಜ್ ಅವರ ಸಾಹಸ ನಿರ್ದೇಶನವಿರುತ್ತದೆ. ಓಂ ಪ್ರಕಾಶ್ ರಾವ್ ಅವರ ಚಿತ್ರಕಥೆ-ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ವಿನೋದ್ ಪ್ರಭಾಕರ್, ಮದರಂಗಿ ಕೃಷ್ಣ, ಅಭಿಮನ್ಯು ಸಿಂಗ್, ಶ್ರೀನಿವಾಸಮೂರ್ತಿ, ಅವಿನಾಶ್, ರಂಗಾಯಣ ರಘು, ಶೋಭರಾಜ್, ಪ್ರೇಮ್ (ತಮಿಳು), ಚಿತ್ರಾ ಶೆಣೈ, ಸುಧಾ ಬೆಳವಾಡಿ, ಸ್ವಸ್ತಿಕ್ ಶಂಕರ್ ಮುಂತಾದವರಿದ್ದಾರೆ.

 

Comments are closed.