ನನಗೆ ತಮಿಳು ಸರಿಯಾಗಿ ಬರುವುದಿಲ್ಲ, ಪ್ರಧಾನಿಯವರ ಅವಹೇಳನ ಮಾಡಿಲ್ಲ : ರೋಷನ್ ಬೇಗ್

ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿಯಾಗಿ ಟೀಕೆ ಮಾಡಿದ ಕಾರಣ ಸಚಿವ ರೋಷನ್ ಬೇಗ್ ಅವರನ್ನು ವಜಾಗೊಳಿಸಬೇಕೆಂದು ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲಿ ಆಗ್ರಹಿಸಿದ್ದಾರೆ. ಪ್ರಧಾನಿಗೆ ಮಾಡಿದ ಅವಮಾನ ದೇಶದ 125 ಕೋಟಿ ಜನರಿಗೆ ಅವಮಾನ ಮಾಡಿದಂತೆ. ದೇಶದ ಪ್ರಧಾನಿಯನ್ನು ಅಗೌರವದಿಂದ ಸಂಬೋಧಿಸಿರುವ ರೋಷನ್ ಬೇಗ್ ಅವರನ್ನು ಕೂಡಲೇ ಸಂಪುಟದಿಂದ ಕೈ ಬಿಡಬೇಕೆಂದು ಯಡಿಯೂರಪ್ಪ ಆಗ್ರಹಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ರೋಷನ್ ಬೇಗ್ ‘ ನನಗೆ ಹರಕು ಮುರಕು ತಮಿಳು ಮಾತ್ರ ಬರುತ್ತದೆ. ನನಗೆ ಪ್ರಧಾನಿಯವರ ಬಗ್ಗೆ ಅತ್ಯಂತ ಗೌರವ ಇದೆ. ಅವರು ಬಿಜೆಪಿಯ ಪ್ರಧಾನಮಂತ್ರಿಯಲ್ಲ, ಬದಲಾಗಿ ದೇಶದ ಪ್ರಧಾನಮಂತ್ರಿ. ನನಗೆ ತಮಿಳು ಸರಿಯಾಗಿ ಬರುವುದಿಲ್ಲ. ಜಿಎಸ್ ಟಿ ಹಾಗೂ ನೋಟು ಅಮಾನ್ಯೀಕರಣದ ಬಗ್ಗೆ ವ್ಯಾಪಾರಿಗಳು, ಮಾರ್ವಾಡಿಗಳು, ಸಾಮಾನ್ಯ ಜನರು ಏನು ಹೇಳುತ್ತಿದ್ದಾರೋ ಅದನ್ನೇ ಭಾಷಣದಲ್ಲಿ ಹೇಳಿದ್ದೇನೆ. ನಾನು ಅಂತಹ ಭಾಷೆಯನ್ನು ಯಾವತ್ತೂ ಬಳಸುವುದಿಲ್ಲ. ಪ್ರಧಾನಿಯವರ ಬಗ್ಗೆಯಾಗಲೀ, ಕೆಲಸಗಾರರ ವಿರುದ್ಧವಾಗಲೀ ಅಂತಹ ಭಾಷೆ ಎಂದೂ ಉಪಯೋಗಿಸುವುದಿಲ್ಲ. ಬಿಜೆಪಿಯವರ ಬಳಿ ಮಾತನಾಡಲೂ ಏನೂ ವಿಷಯವಿಲ್ಲ. ಕಾಂಗ್ರೆಸ್ ನಾಯಕರ ಮೇಲೆ ಹರಿಹಾಯುವುದಷ್ಟೇ ಕೆಲಸ. ಇವತ್ತು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಅಷ್ಟೇ ‘ ಎಂದಿದ್ದಾರೆ.

 

Comments are closed.

Social Media Auto Publish Powered By : XYZScripts.com