ಈ ಬಾರಿ ಕಂಪ್ಲೀಟ್ ಬದಲಾಗಿದೆ ಸ್ವರೂಪ : ಶೀಘ್ರದಲ್ಲೇ ನಿಮ್ಮ ಮನೆ ಟಿವಿಯಲ್ಲಿ ಮತ್ತೆ ಬಿಗ್ ಬಾಸ್

ಬೆಂಗಳೂರು: ಬಹುನಿರೀಕ್ಷೆಯ ಬಿಗ್ ಬಾಸ್ ಐದನೇ ಅವತರಣಿಕೆಗೆ ಕ್ಷಣಗಣನೆ ಶುರುವಾಗಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಹಂಚಿಕೊಳ್ಳಲು ಕಲರ್ಸ್ ಕನ್ನಡ ಮುಖ್ಯಸ್ಥ ಪರಮೇಶ್ ಗುಂಡ್ಕಲ್ ಮತ್ತು ಕಾರ್ಯಕ್ರಮದ ಹೋಸ್ಟ್ ಕಿಚ್ಚ ಸುದೀಪ್ ಇಂದು ಖಾಸಗಿ ಹೋಟೆಲಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ರು.

ಬಿಗ್ ಬಾಸ್ ೫ ರಲ್ಲಿ ಈ ಬಾರಿ 17 ಜನ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಈ 17 ರಲ್ಲಿ 6 ಜನ ಸಾಮಾನ್ಯ ಜನ ಇರುತ್ತಾರೆ ಎನ್ನುವುದೇ ಈ ಬಾರಿಯ ಹೈಲೈಟ್. ಸೆಲಬ್ರಿಟಿಗಳನ್ನು ಸ್ಪರ್ಧಿಗಳಾಗಿ ನೋಡುತ್ತಿದ್ದ ವೀಕ್ಷಕರಿಗೆ ಸಾಮಾನ್ಯ ಜನರ ಜೊತೆಗೆ ಸೆಲಬ್ರಿಟಿಗಳನ್ನು ಬಿಗ್ ಬಾಸ್ ಮನೆಯೊಳಗೆ ನೋಡುವ ವಿಶೇಷ ಮನರಂಜನೆ ಸಿಗಲಿದೆ.11 ಸೆಲಬ್ರಿಟಿಗಳು ಮತ್ತು 6 ಸಾಮಾನ್ಯ ಜನರ ಈ ಕಾಂಬಿನೇಶನ್ ಹೇಗೆ ಕೆಲಸ ಮಾಡುತ್ತದೆ ಎನ್ನುವ ಕುತೂಹಲ ಎಲ್ಲರಲ್ಲಿದೆ. ಎಲ್ಲಾ ಸ್ಪರ್ಧಿಗಳ ನಡುವಿನ ಹೊಂದಾಣಿಕೆಯೇ ಈ ಸೀಸನ್ನಿನ ಸ್ಟಾರ್ ಅಟ್ರಾಕ್ಷನ್ ಎನ್ನಲಾಗಿದೆ.

ಅಷ್ಟಕ್ಕೂ ಈ ಸಾಮಾನ್ಯ ಸ್ಪರ್ಧಿಗಳನ್ನು ಆರಿಸುವುದು ಬಿಗ್ ಬಾಸ್ ತಂಡಕ್ಕೆ ಸುಲಭದ ಕೆಲಸವೇನಾಗಿರಲಿಲ್ಲ. ಬರೋಬ್ಬರಿ 40 ಸಾವಿರ ಕಾಮನ್ ಮ್ಯಾನ್ ನ ಅರ್ಜಿಗಳು ಬಂದಿದ್ದವಂತೆ. ಅದರಲ್ಲಿ ಮೊದಲ ಹಂತದಲ್ಲಿ 600 ಜನರನ್ನು ಆರಿಸಲಾಗಿದ್ದು ನಂತರ ಅವರಲ್ಲಿ 150 ಜನರನ್ನು ಶಾರ್ಟ್ ಲಿಸ್ಟ್ ಮಾಡಲಾಯ್ತು. ಇದರಲ್ಲಿ ಮತ್ತೆ 40 ಜನರನ್ನು ಆರಿಸಿ ಅವರಲ್ಲಿ ಕೊನೆಯ 6 ಜನ ಸೆಲೆಕ್ಟ್ ಆಗಿದ್ದಾರೆ.

ಈ ಬಾರಿಯೂ ಬಿಗ್ ಬಾಸ್ ಶೋ ಬೆಂಗಳೂರಿನಲ್ಲಿ ನಡೆಯುತ್ತಿರುವುದು ತಮಗೆ ಬಹಳ ಖುಷಿ ಕೊಟ್ಟಿದೆ ಎಂದು ಕಿಚ್ಚ ಸುದೀಪ್ ಹೇಳಿದ್ರು. ಅಲ್ಲದೇ ಬಿಗ್ ಬಾಸ್ ಈ ಮಟ್ಟಿಗೆ ಯಶಸ್ಸು ಕಾಣಲು ಅನೇಕರು ಕಾರಣರಾಗಿದ್ದಾರೆ ಎಂದು ಈ ಸಂದರ್ಭದಲ್ಲಿ ಪರಮೇಶ್ ಗುಂಡ್ಕಲ್ ಮತ್ತು ಸುದೀಪ್ ನೆನೆಸಿಕೊಂಡರು.