ಹಿಂದುಳಿದ ವರ್ಗದ ಪತ್ರಕರ್ತರಿಗೆ ಮಾಧ್ಯಮ ಕಿಟ್ : ಸಚಿವ ಆಂಜನೇಯ

ಬೆಂಗಳೂರು : ಹಿಂದುಳಿದ ವರ್ಗಗಳ ಪತ್ರಕರ್ತರ ಅಭಿವೃದ್ದಿಗೆ ಸರ್ಕಾರ ಕಟಿಬದ್ಧವಾಗಿದ್ದು ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಪತ್ರಕರ್ತರಿಗೆ ನೀಡಿದಂತೆ ಹಿಂದುಳಿದ ವರ್ಗದ ಪತ್ರಕರ್ತರಿಗೂ ಮಾದ್ಯಮ ಕಿಟ್ ಗಳನ್ನು ನೀಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಹೇಳಿದರು.
ಭಾರತೀಯ ವಿದ್ಯಾಭವನದಲ್ಲಿ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ  ಸಂಪಾದಕರ ಮತ್ತು ವರದಿಗಾರರ ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡಿದ ಅವರು  ರಾಜ್ಯ ಮಟ್ಟದ ಪತ್ರಿಕೆಗಳಿಗಿಂತ ಗ್ರಾಮೀಣ ಪತ್ರಿಕೆಗಳು ಅಗತ್ಯವಾಗಿವೆ. ಸಾರ್ವಜನಿಕರಿಗೆ ಸುದ್ದಿ ತಲುಪಿಸುವಲ್ಲಿ ಸರ್ಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸುವಲ್ಲಿ ಪ್ರಾದೇಶಿಕ ಪತ್ರಿಕೆಗಳ ಪಾತ್ರ ಮಹತ್ವ ವಾಗಿದೆ. ಮಾಧ್ಯಮ ಕ್ಷೇತ್ರದಲ್ಲಿ ಹಿಂದುಳಿದ ವರ್ಗದವರು ದಲಿತರು ಸಂಘಟಿತರಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಸಮಾಜ ಕಲ್ಯಾಣ ಇಲಾಖೆವತಿಯಿಂದ ಮಾಧ್ಯಮ ಕ್ಷೇತ್ರದ  ಅಭಿವೃದ್ದಿಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಪರಿಶಿಷ್ಟ ಪಂಗಡದ ಪತ್ರಕರ್ತರಿಗೆ ಎಸ್‌ಸಿಎಸ್‌ಟಿ ಉಪಧನ ಯೋಜನೆ  ಅನುದಾನದಡಿಯಲ್ಲಿ ಮಾಧ್ಯಮ ಕಿಟ್ ಗಳನ್ನು ವಿತರಿಸಲಾಗುತ್ತಿದೆ. ಅದೇ ರೀತಿ ತಮ್ಮ ಬೇಡಿಕೆಯಂತೆ ನವೆಂಬರ್ ಒಳಗಾಗಿ ಹಿಂದುಳಿದ ವರ್ಗಗಳ ಪತ್ರಕರ್ತತರಿಗೂ ಮಾಧ್ಯಮ ಕಿಟ್ ಗಳನ್ನು ನೀಡಲಾಗುವುದು ಎಂದು ಹೆಚ್.ಆಂಜನೇಯ ತಿಳಿಸಿದರು.

ಇದಕ್ಕೂ ಮುನ್ನ ಸಮಾರಂಭವನ್ನು ಉದ್ಘಾಟಿಸಿದ ಸಾರಿಗೆ ಸಚಿವರಾದ ಶ್ರೀ ಹೆಚ್.ಎಂ.ರೇವಣ್ಣ ಮಾತನಾಡಿ ಮಾಧ್ಯಮ ಕ್ಷೇತ್ರಗಳಲ್ಲಿ ಇತ್ತೀಚೆಗೆ ಹಿಂದುಳಿದ ವರ್ಗಗಳು ಸಂಘಟಿತರಾಗುತ್ತಿದ್ದು ಉತ್ತಮ ಬೆಳವಣಿಗೆ. ಎಲ್ಲ ಕ್ಷೇತ್ರಗಳಲ್ಲೂ ಈ ರೀತಿ ಆಗಬೇಕು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ನಾವು ಸಂಘಟಿತರಾಗುವುದು ತಪ್ಪೇನಿಲ್ಲ. ಸರ್ಕಾರದ ಕಾರ್ಯಕ್ರಮಗಳನ್ನು ಜನತೆಗೆ ತಲುಪಿಸುವಲ್ಲಿ ನಿಮ್ಮ ಜವಾಬ್ದಾರಿ ಬಹಳ ಮುಖ್ಯವಾಗಿದೆ. ಸರ್ಕಾರ ನಿಮ್ಮೊಂದಿಗಿದೆ ನೀವೂ ಕೂಡ ವಾಸ್ತವಕ್ಕೆ ಪೂರಕವಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಉದಯವಾಣಿ ಲಕ್ಷ್ಮೀನಾರಾಯಣ, ಉದಯ ಟಿವಿ ಹಿರಿಯ ವರದಿಗಾರರಾದ ಆರ್.ಹೆಚ್.ನಟರಾಜ್, ಅಭಿಮನ್ಯು ಪತ್ರಿಕೆ ಸಂಪಾದಕರಾದ ಬಿ.ಎನ್.ರಮೇಶ್, ಲಿಂಗರಾಜ್ ನೋಣವಿನಕೆರೆ, ಸಂಗಮದೇವ, ಸೇರಿದಂತೆ ಹಲವಾರು ಹಿರಿಯರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಮಾರಂಭದಲ್ಲಿ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಸಿದ್ದರಾಜು, ಬೆಂಗಳೂರು ವಿವಿ ರಿಜಿಸ್ಟಾರ ಡಾ.ಬಿ.ಕೆ.ರವಿ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕಾಂತರಾಜು ಮುಂತಾದವರು ಭಾಗವಹಿಸಿದ್ದರು.

Social Media Auto Publish Powered By : XYZScripts.com