ಪಂಚಕುಲ ಹಿಂಸಾಚಾರದ ಮಾಸ್ಟರ್ ಮೈಂಡ್‌ ನಾನೇ ಎಂದು ತಪ್ಪೊಪ್ಪಿಕೊಂಡ ಹನಿಪ್ರೀತ್‌

ಹರಿಯಾಣ : ಗುರ್ಮಿತ್ ರಾಂ ರಹೀಮ್ ಅತ್ಯಾಚಾರಿ ಎಂದು ಸಾಬೀತಾದ ಬಳಿಕ ನಡೆದ ಹಿಂಸಾಚಾರದಲ್ಲಿ 38 ಮಂದಿ ಅಸುನೀಗಿದ್ದು, ಈ ಹಿಂಸಾಚಾರದ ಮಾಸ್ಟರ್‌ ಮೈಂಡ್ ನಾನೇ ಎಂದು ಗುರ್ಮಿತ್ ದತ್ತುಪುತ್ರಿ ಹನಿಪ್ರೀತ್ ಒಪ್ಪಿಕೊಂಡಿದ್ದಾಳೆ.

ತೀರ್ಪು ಹೊರಬಂದ ಬಳಿಕ ಪಂಚಕುಲಾದಲ್ಲಿ ಗಲಭೆ ಎಬ್ಬಿಸಲು ಮೊದಲೇ ಸೂಚಿಸಲಾಗಿತ್ತು. ಅಲ್ಲದೆ ಅದಕ್ಕಾಗಿ ಮೊದಲೇ ಹಣ ಸಂದಾಯ ಮಾಡಲಾಗಿತ್ತು ಎಂದು ಹನಿಪ್ರೀತ್‌ ಒಪ್ಪಿಕೊಂಡಿರುವುದಾಗಿ ಆಕೆಯನ್ನು ವಿಚಾರಣೆ ನಡೆಸುತ್ತಿರುವ ಹರಿಯಾಣ ಪೊಲೀಸರು ಹೇಳಿದ್ದಾರೆ.

ಪಂಚಕುಲಾದಲ್ಲಿ ಗಲಭೆ ಎಬ್ಬಿಸಬೇಕು ಎಂದು ಆಗಸ್ಟ್ 17ರಂದು ನಡೆದ ಡೇರಾ ಆಶ್ರಮದ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಅದರಂತೆ ಆಗಸ್ಟ್ 25 ರಂದು ತೀರ್ಪು ಹೊರಬರುತ್ತಿದ್ದಂತೆ ಎಲ್ಲೆಡೆ ಹಿಂಸಾಚಾರ ಭುಗಿಲೆದ್ದಿತು. ಇದೆಲ್ಲವೂ ಪೂರ್ವ ನಿಯೋಜಿತ ಎಂದು ಹನಿಪ್ರೀತ್‌ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಅಲ್ಲದೆ ಹನಿಪ್ರೀತ್‌ ಬಳಿ ಇರುವ ಲ್ಯಾಪ್‌ಟಾಪ್‌ನಲ್ಲಿ ಡೇರಾ ಸಚ್ಚಾ ಸೌದ ಆಶ್ರಮದ ಇಂಚಿಂಚೂ ಮಾಹಿತಿ ಇದ್ದು, ಡೇರಾ ಆಶ್ರಮದ ಅಕ್ರಮಗಳು, ಪಂಚಕುಲಾ ಹಿಂಸೆ ಸೇರಿದಂತೆ ಎಲ್ಲವುಗಳ ಮಾಹಿತಿ ಇದೆ. ಅದನ್ನು ಸದ್ಯದಲ್ಲೇ ವಶಪಡಿಸಿಕೊಂಡು ನ್ಯಾಯಾಲಯದ ಮುಂದೆ ಹಾಜರು ಪಡಿಸುವುದಾಗಿ ಪೊಲೀಸರು ಹೇಳಿದ್ದಾರೆ.