ಇದುವರೆಗೂ ಡಿನೋಟಿಫಿಕೇಶನ್‌ ಮಾಡಿಲ್ಲ ಎಂದ ಮೇಲೆ ಆರೋಪ ಎಲ್ಲಿಂದ ಬರಬೇಕು : ಸಿಎಂ

ಬೆಂಗಳೂರು : ನಮ್ಮ ಸರ್ಕಾರ ಈವರೆಗೆ ಯಾವುದೇ ಡಿನೋಟಿಫಿಕೇಷನ್ ಮಾಡಿಲ್ಲ. ಹೀಗಿರುವಾಗ ಆರೋಪ ಎಲ್ಲಿಂದ ಬರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಹೇಳಿದ್ದಾರೆ. ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಬಿ.ಜೆ. ಪುಟ್ಟಸ್ವಾಮಿ ಅವರು ಮಾಡಿರುವ ಆರೋಪ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, ವಿಧಾನಸಭೆಗೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಸುಳ್ಳು ಆರೋಪಗಳನ್ನು ಮಾಡುತ್ತಿದೆ.

ಈ ಮೂಲಕ ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದೆ. ಆದರೆ, ಬಿಜೆಪಿಯವರು ಮಾಡುತ್ತಿರುವ ಆಪಾದನೆಗಳು ಸುಳ್ಳು ಎಂಬುದು ಜನರಿಗೂ ಗೊತ್ತಿದೆ. ಎಲ್ಲವೂ ಅವರಿಗೆ ಅರ್ಥವಾಗುತ್ತದೆ ಎಂದಿದ್ದಾರೆ.

ಈ ರೀತಿಯ ಸುಳ್ಳು ಆರೋಪಗಳು ಮುಂದೆ ಒಂದು ದಿನ ಬಿಜೆಪಿಗೇ ತಿರುಗುಬಾಣವಾಗಲಿದೆ. ತಮ್ಮ ಪಕ್ಷದ ಹೈಕಮಾಂಡ್‍ಗೆ ಕಪ್ಪ ನೀಡಿರುವ ವಿಚಾರವನ್ನು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಅನಂತಕುಮಾರ್ ಅವರೇ ಹೇಳಿರುವುದು ಸಿಡಿ ಮೂಲಕ ಸಾಬೀತಾಗಿದೆ. ಬೇಕಾದರೆ ಅವರು ಸಂಪೂರ್ಣ ಸಿಡಿ ಬಿಡುಗಡೆ ಮಾಡಲಿ. ಸಿಡಿಯಲ್ಲಿನ ಧ್ವನಿ ಅವರದ್ದೇ ಎಂಬುದು ತನಿಖೆಯಿಂದಲೂ ಗೊತ್ತಾಗಿದೆ. ಅವರು ಮಾನನಷ್ಟ ಮೊಕದ್ದಮೆ ದಾಖಲು ಮಾಡುತ್ತಾರಂತೆ. ನಾನೂ ವಕೀಲ. ಎಲ್ಲವೂ ನನಗೆ ತಿಳಿದಿದೆ. ಸುಳ್ಳು ಆರೋಪ ಮಾಡುತ್ತಿರುವ ಬಿ.ಜೆ. ಪುಟ್ಟಸ್ವಾಮಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು ಮಾಡುವ ಕುರಿತು ವಕೀಲರ ಜೊತೆ ಮಾತನಾಡಿದ್ದೇನೆ ಎಂದಿದ್ದಾರೆ.

Comments are closed.

Social Media Auto Publish Powered By : XYZScripts.com