ಕಿಚ್ಚ ಸುದೀಪ್ ನಟನೆಯ ಹಾಲಿವುಡ್ ಸಿನಿಮಾ ತಡವಾಗ್ತಿರೋದಕ್ಕೆ ಕಾರಣ ಇದಂತೆ !

ಕಿಚ್ಚ ಸುದೀಪ್ ಹಾಲಿವುಡ್ ಚಿತ್ರವೊಂದರಲ್ಲಿ ನಟಿಸುತ್ತಿರುವುದು ಈಗಾಗ್ಲೇ ಗೊತ್ತಿರುವ ವಿಚಾರ. ರೈಸನ್ ಎನ್ನುವ ಚಿತ್ರದಲ್ಲಿ ಸುದೀಪ್ ನಾಯಕನಾಗಿ ನಟಿಸುವುದು ಪಕ್ಕಾ ಆಗಿದೆ. ಆದ್ರೆ ಈಗಾಗಲೇ ಶೂಟಿಂಗ್ ಶುರುವಾಗಿರುವ ಈ ಚಿತ್ರದಲ್ಲಿ ಸುದೀಪ್ ಶೆಡ್ಯೂಲ್ ಇನ್ನೂ ಆರಂಭವೇ ಆಗಿಲ್ಲ. ಇದಕ್ಕೆ ಕಾರಣ ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಎನ್ನಲಾಗಿದೆ.

ಸುದೀಪ್ ರೈಸನ್ ಗಿಂತ ಮುಂಚೆ ದಿ ವಿಲನ್ ಮತ್ತು ಪೈಲ್ವಾನ್ ಚಿತ್ರಗಳ ಶೂಟಿಂಗ್ ಮುಗಿಸಬೇಕಿತ್ತು. ಇವೆರಡೂ ಚಿತ್ರಗಳ ಕೆಲಸ ಮುಗಿದ ನಂತರ ರೈಸನ್ ಶೂಟಿಂಗ್ ಗಾಗಿ ಆಸ್ಟ್ರೇಲಿಯಾಗೆ ಹಾರಬೇಕಿತ್ತು. ಆದರೆ ಈ ಬಾರಿ ಮಳೆ ಸ್ವಲ್ಪ ತಡವಾಗಿ ಆರಂಭವಾಗಿರುವುದರಿಂದ ಇನ್ನೂ ಸುರಿಯುತ್ತಲೇ ಇದೆ. ಇದರಿಂದ ಈ ಚಿತ್ರಗಳ ಔಟ್ ಡೋರ್ ಶೂಟಿಂಗ್ ಮುಂದಕ್ಕೆ ಹೋಗಿದೆ.

ಇದೆಲ್ಲದರಿಂದ ಹಾಲಿವುಡ್ ಚಿತ್ರದ ಶೆಡ್ಯೂಲ್ ಗೂ ಪೆಟ್ಟು ಬಿದ್ದಂತಾಗಿದೆ. ಇಲ್ಲಿನ ಕಮಿಟ್ಮೆಂಟ್ ಮುಗಿಯದೇ ಸುದೀಪ್ ಹಾಲಿವುಡ್ ಚಿತ್ರಕ್ಕೆ ತೆರಳುವಂತಿಲ್ಲ. ಇದರಿಂದಾಗಿ ಈಗಾಗಲೇ ಚಿತ್ರೀಕರಣ ಆರಂಭವಾಗಿರುವ ರೈಸನ್ ತಂಡವನ್ನು ಸುದೀಪ್ ತಡವಾಗಿ ಸೇರಲಿದ್ದಾರೆ. ಹಾಗಾಗಿ ಅಂದುಕೊಂಡದ್ದಕ್ಕಿಂತ ಚಿತ್ರ ಲೇಟ್ ಆಗಿ ತೆರೆಗೆ ಬರಲಿದೆ ಎನ್ನಲಾಗಿದೆ.

ಸೈಂಟಿಫಿಕ್ ಥ್ರಿಲ್ಲರ್ ಚಿತ್ರವಾಗಿರುವ ರೈಸನ್ ನ್ನು ಎಡಿ ಆರ್ಯ ಎನ್ನುವ ಹಾಲಿವುಡ್ ಡೈರೆಕ್ಟರ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಸುದೀಪ್ ಗೆ ಇಬ್ಬರು ನಾಯಕಿಯರು. ಒಬ್ಬಳು ಭಾರತೀಯಳಾದ್ರೆ ಮತ್ತೊಬ್ಬಳು ವಿದೇಶಿ ಯುವತಿ ಇರಲಿದ್ದಾಳೆ. ವಿದೇಶಿ ಹುಡುಗಿಯ ಪಾತ್ರದಲ್ಲಿ ನಿಕೋಲ್‌ ಶಾಲ್ಮೋ ನಟಿಸುತ್ತಿದ್ದಾರೆ. ಈಕೆ ಮೂಲತಃ ರಂಗಭೂಮಿ ನಟಿ. ಇವರು ತಮ್ಮ ದೃಶ್ಯಗಳ ಶೂಟಿಂಗ್‌ನಲ್ಲಿ ಈಗಾಗಲೇ ಪಾಲ್ಗೊಂಡಿದ್ದಾರೆ. ಭಾರತೀಯ ಮೂಲದ ನಾಯಕಿ ಪಾತ್ರಕ್ಕಾಗಿ ಇನ್ನೂ ಕಲಾವಿದರು ಫೈನಲ್ ಆಗಿಲ್ಲ.

Comments are closed.

Social Media Auto Publish Powered By : XYZScripts.com