ಹಲ್ಲಿ ತುಳಿದ… ತಿಂಗಳ ನಂತರ ಹೆಂಡತಿಗೆ ಹೆಣವಾಗಿ ಸಿಕ್ಕ !

ಹಲ್ಲಿ ಮೇಲೆ ಕಾಲಿಟ್ಟ ಪರಿಣಾಮ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು ಒಂದು ತಿಂಗಳ ನಂತರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹೈದರಾಬಾದಿನಲ್ಲಿ ನಡೆದಿರುವ ಈ ಘಟನೆ ಸಾಕಷ್ಟು ವಿಚಿತ್ರ ತಿರುವುಗಳಿಂದ ಕೂಡಿದ್ದು ಅಚ್ಚರಿ ಮೂಡಿಸಿದೆ.

ಹೈದರಾಬಾದಿನ ಅಪಾರ್ಟಮೆಂಟಿನಲ್ಲಿ ವಾಸವಿದ್ದ ಲಕ್ಷ್ಮಿನಾರಾಯಣ ಮೂರ್ತಿ ಒಂದು ತಿಂಗಳ ಹಿಂದೆಯೇ ತಮ್ಮ ಸ್ವಗ್ರಹದಲ್ಲಿ ಸಾವನ್ನಪ್ಪಿದ್ರು. ಆದ್ರೆ ವಿಚಾರ ಬೆಳಕಿಗೆ ಬಂದಿದ್ದು ಆತನ ಪತ್ನಿ ಮತ್ತು ಮಗಳು ಅಮೇರಿಕಾದಿಂದ ವಾಪಸ್ ಬಂದಾಗಲೇ. ಅಪಾರ್ಟಮೆಂಟಿನ ತುತ್ತತುದಿಯ ಫ್ಲಾಟ್ ನಲ್ಲಿ ವಾಸವಿದ್ದ ಮೂರ್ತಿ ಆಗಸ್ಟ್ 18ರಂದು ತಮ್ಮ ಮನೆಯಲ್ಲಿ ಹಲ್ಲಿಯೊಂದರ ಮೇಲೆ ಕಾಲಿಟ್ಟು ಗಾಬರಿಯಲ್ಲಿ ಆಯತಪ್ಪಿ ಬಿದ್ದಿದ್ದರು. ಆಗ ತಲೆಗೆ ಪೆಟ್ಟಾಗಿ ರಕ್ತಸ್ರಾವ ಹೆಚ್ಚಾದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಲಕ್ಷ್ಮಿನಾರಾಯಣ ಮೂರ್ತಿಯ ಇಬ್ಬರು ಹೆಣ್ಣುಮಕ್ಕಳು ಅಮೇರಿಕಾದಲ್ಲಿ ವಾಸವಾಗಿದ್ದಾರೆ. ಸಾಕಷ್ಟು ಸಮಯದಿಂದ ಅಲ್ಲಿಗೆ ಬರುವಂತೆ ತಮ್ಮ ತಂದೆಯನ್ನು ಅವರು ಅದೆಷ್ಟೇ ಒತ್ತಾಯಿಸಿದ್ದರೂ ಇವರು ಹೋಗಲು ಒಪ್ಪಿರಲಿಲ್ಲ. ಜುಲೈ ತಿಂಗಳಲ್ಲಿ ಹೆಂಡತಿ ಒಬ್ಬರನ್ನೇ ಅಮೇರಿಕಾದ ಮಗಳ ಮನೆಗೆ ಕಳುಹಿಸಿದ್ದರು. ಅಪಘಾತವಾಗುವಾಗ ಲಕ್ಷ್ಮಿನಾರಾಯಣ ಮೂರ್ತಿಯ ಫೋನ್ ಚಾರ್ಜಿನಲ್ಲಿಡಲಾಗಿತ್ತು. ಹಾಗಾಗಿ ಪ್ರತೀ ಬಾರಿ ಹೆಂಡತಿ ಅಥವಾ ಮಗಳು ಕರೆ ಮಾಡಿದರೂ ಫೋನ್ ರಿಂಗ್ ಆಗುತ್ತಿತ್ತೇ ವಿನಃ ಯಾರೂ ರಿಸೀವ್ ಮಾಡುತ್ತಿರಲಿಲ್ಲ.

ತಾನು ಗಂಡನನ್ನು ಒಬ್ಬರನ್ನೇ ಬಿಟ್ಟು ಅಮೇರಿಕಾಗೆ ಹೋಗಿದ್ದರಿಂದ ಆತ ಕೋಪಗೊಂಡು ತಮ್ಮ ಬಳಿ ಮಾತು ಬಿಟ್ಟಿದ್ದಾರೆ ಎಂದೇ ಪತ್ನಿ ಮತ್ತು ಮಕ್ಕಳು ಭಾವಿಸಿದ್ದರು. ಒಂದು ತಿಂಗಳಿನಿಂದ ಮಾತು ಇಲ್ಲದೇ ಇರೋದ್ರಿಂದ ತಾವೇ ಖುದ್ದು ಭೇಟಿಯಾಗಲು ತರಾತುರಿಯಲ್ಲಿ ಓಡಿ ಬಂದಿದ್ದರು. ಎಷ್ಟು ಬಾರಿ ಕರೆದರೂ ಮನೆಯ ಬಾಗಿಲು ತೆಗೆಯದೇ ಇದ್ದಿದ್ದರಿಂದ ಬಾಗಿಲು ಒಡೆದು ಮನೆಯೊಳಗೆ ಹೋದರು. ಒಳಗೆ ಬಹುಪಾಲು ಕೊಳೆತ ಸ್ಥಿತಿಯಲ್ಲಿ ಲಕ್ಷ್ಮಿನಾರಾಯಣ ಮೂರ್ತಿಯ ಮೃತದೇಹ ಪತ್ತೆಯಾಗಿದ್ದು ಮನೆಯವರಿಗೆ ಆಘಾತವಾಗಿದೆ.

ನಂತರ ಪೋಲೀಸ್ ತನಿಖೆಯಲ್ಲಿ ಶವದ ಬಳಿ ಇದ್ದ ಸತ್ತ ಹಲ್ಲಿ ಇಡೀ ಪ್ರಕರಣದ ಕಥೆ ಹೇಳಿದೆ. ತಾನೊಬ್ಬನೇ ಇಲ್ಲಿ ಇರುವುದಾಗಿ ಹಠ ಮಾಡಿ ಉಳಿದುಕೊಂಡಿದ್ದ ಮೂರ್ತಿಯವರು ಕೊನೆಗೆ ಶವವಾಗಿ ಪತ್ತೆಯಾಗಿದ್ದು ಕುಟುಂಬಸ್ಥರಿಗೆ ದೊಡ್ಡ ಶಾಕ್ ಕೊಟ್ಟಿದೆ.

Social Media Auto Publish Powered By : XYZScripts.com