ಜನಾರ್ಧನ ರೆಡ್ಡಿಯ ಜನಶ್ರೀ ಚಾನಲ್‌ನಲ್ಲಿ ಸಂಬಳಕ್ಕಾಗಿ ಅಹೋರಾತ್ರಿ ಧರಣಿ : ಬೀದಿಗಿಳಿಯುವ ಎಚ್ಚರಿಕೆ

ಬೆಂಗಳೂರು : ಜನಾರ್ಧನ  ರೆಡ್ಡಿ, ಶ್ರೀ ರಾಮುಲು ಬೆಂಬಲಿತ ಜನಶ್ರೀ ವಾಹಿನಿಯಲ್ಲಿ ಸಂಬಳಕ್ಕಾಗಿ ಪ್ರತಿಭಟನೆ ಮುಂದುವರಿದಿದೆ. ಸಂಬಳಕ್ಕಾಗಿ ಜನಾರ್ಧನ ರೆಡ್ಡಿ ಅವರ ಬಳಿ ಜನಶ್ರೀ ಸಿಬ್ಬಂದಿ ಮಾತನಾಡಿ, ಡೆಡ್‌ ಲೈನ್‌ ವಿಧಿಸಿದ್ದರು.

ಈ ಕುರಿತು ಜನಾರ್ಧನ ರೆಡ್ಡಿ ಮಾತನಾಡಿದ್ದು, ಜಿಲ್ಲಾ ವರದಿಗಾರರಿಗೆ ಕೇವಲ ನಾಲ್ಕು ತಿಂಗಳ ಸಂಬಳ ಹಾಗೂ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ತಾವು ಕೆಲಸ ಮಾಡಿದ ಅವಧಿಗಿಂತ ಎರಡು ತಿಂಗಳ ವೇತನವನ್ನು ಬಿಟ್ಟು ಉಳಿದ ವೇತನ ನೀಡುವುದಾಗಿ ಹೇಳಿದ್ದಾರೆ. ಇಂದು ಸಂಜೆ ಎಲ್ಲಾ ಸಿಬ್ಬಂದಿಯ ಸಂಬಳ ಕೊಟ್ಟು ಜನಶ್ರೀ ಕಚೇರಿಯ ಬಾಗಿಲು ಹಾಕಿಕೊಂಡು ಹೋಗುವಂತೆ ಸೂಚಿಸಿರುವುದಾಗಿ ಸಿಬ್ಬಂದಿ ಹೇಳಿದ್ದಾರೆ.

ಒಂದು ವೇಳೆ ಗುರುವಾರ ಸಂಬಳ ನೀಡದೇ ಇದ್ದಲ್ಲಿ ಶುಕ್ರವಾರ ಫೇಸ್‌ಬುಕ್‌ ಲೈವ್‌ ಮಾಡಿಕೊಂಡು ಜನಶ್ರೀ ಕಚೇರಿಯಿಂದ ಜನಾರ್ಧನ ರೆಡ್ಡಿ ಮನೆಗೆ ಪ್ರತಿಭಟನಾ ರ್ಯಾಲಿ ಮಾಡುವುದಾಗಿ ಹೇಳಿದ್ದು, ಮುಂದೆ ಆಗುವ ಜವಾಬ್ದಾರಿಗಳಿಗೆ ಜನಶ್ರೀ ಸಿಬ್ಬಂದಿ ಜವಾಬ್ದಾರರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಷ್ಟು ದಿನ ನಡೆಸುತ್ತಿದ್ದ ಪ್ರತಿಭಟನೆಯ ಮುಂದುವರಿದ ಭಾಗವಾಗಿ ಜನಶ್ರೀ ಕಚೇರಿಯಲ್ಲಿ ಗುರುವಾರ ಅಹೋರಾತ್ರಿ ಧರಣಿ ಆರಂಭಿಸುತ್ತಿದ್ದಾರೆ. ಅನೇಕ ಸಿಬ್ಬಂದಿಗೆ ಆರ್ಥಿಕ ತೊಂದರೆಯ ಕಾರಣ ಜನಶ್ರೀ ಕಚೇರಿಯಲ್ಲೇ ಅಡುಗೆ ಮಾಡುವುದಾಗಿ ಹೇಳಿದ್ದಾರೆ.

 

ಕಳೆದ ಅನೇಕ ತಿಂಗಳಿನಿಂದ ಜನಶ್ರೀ ಕಚೇರಿಯಲ್ಲಿ ಸಂಬಳ ನೀಡದೆ ಸಿಬ್ಬಂದಿ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದ್ದು, ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.

Comments are closed.

Social Media Auto Publish Powered By : XYZScripts.com