ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ : ದೆಹಲಿಯಲ್ಲಿ ಬೃಹತ್‌ ಪ್ರತಿಭಟನೆ

ದೆಹಲಿ : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಡೆದು ಇಂದಿಗೆ 1 ತಿಂಗಳು ಕಳೆದಿದೆ. ಇಷ್ಟು ದಿನವಾದರೂ ಹಂತಕರ ಸುಳಿವು ಸಿಗದ ಹಿನ್ನೆಲೆಯಲ್ಲಿ ಗೌರಿ ಲಂಕೇಶ್ ಹತ್ಯಾ ವಿರೋಧಿ ವೇದಿಕೆ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದೆ.

ದೆಹಲಿಯಲ್ಲಿಂಟು ಸಾವಿರಾರು ಮಂದಿ ಸಾಮಾಜಿಕ ಕಾರ್ಯಕರ್ತರು, ಮಾನವ ಹಕ್ಕುಗಳ ಹೋರಾಟಗಾರರು,. ಪತ್ರಕರ್ತರು, ವಿದ್ಯಾರ್ಥಿಗಳು, ಸಾಹಿತಿಗಳು ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಹಂತಕರನ್ನು ಆದಷ್ಟು ಬೇಗ ಪತ್ತೆ ಹಚ್ಚುವಂತೆ ಆಗ್ರಹಿಸಿದರು.

ಹಿಂಸೆ, ಪ್ರೀತಿ ಮತ್ತು ಸಾಮರಸ್ಯವನ್ನು ಕೊಲ್ಲುತ್ತಿದೆ. ಅದರ ವಿರುದ್ದ ದನಿ ಎತ್ತುವ ಕೆಲಸವನ್ನು ಮಾಡುತ್ತಿದ್ದೇವೆ. ಒಬ್ಬ ಗೌರಿಯನ್ನು ಕೊಂದ ಕಾರಣಕ್ಕೆ ನಮ್ಮಂತ ಸಾವಿರ ಗೌರಿಯರ ದನಿಯನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂಬುದನ್ನು ಹಂತಕರಿಗೆ ತಿಳಿಸಲು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಸಾಹಿತಿ ಕಮಲಾ ಭಾಸಿನ್‌ ಹೇಳಿದ್ದಾರೆ.

ನೀವು ಹೂಗಳನ್ನು ಕಿತ್ತು ಹಾಕಬಹುದು. ಆದರೆ ಅದರ ಪರಿಮಳವನ್ನು ತಡೆಯಲು ಸಾಧ್ಯವಿಲ್ಲ. ಇಲ್ಲಿರುವ ಪ್ರತಿಯೊಬ್ಬರೂ ಗೌರಿ ಲಂಕೇಶ್‌ ಆಗಲು ಬಂದಿದ್ದಾರೆ. ಹಿಂಸೆಯ ವಿರುದ್ದ ಮಾತನಾಡಲು ಇಲ್ಲಿಗೆ ಬಂದಿದ್ದೇವೆ. ಆದಷ್ಟು ಬೇಗ ಹಂತಕರನ್ನು ಬಂಧಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಸ್ವರಾಜ್‌ ಅಭಿಯಾನ್‌ ಸಂಘ, ಸೆಂಟ್ರಲ್‌ ಇಂಡಿಯನ್‌ ಟ್ರೇಡ್ ಯೂನಿಯನ್‌, ಪ್ರಗತಿಶೀಲ ಮಹಿಳಾ ಸಂಘ, ಹರಿಯಾಣದ  ಜನ ಸಂಘರ್ಷ ಮಂಚ್‌, ಎಸ್‌ಐಒ, ಪಿಡಿಎಸ್‌ಯು ಸೇರಿದಂತೆ ಬೇರೆ ಬೇರೆ ರಾಜ್ಯಗಳ ಹಲವು ಸಂಘಟನೆಗಳು ಪ್ರತಿಭಟನೆಗೆ ಸಾಕ್ಷಿಯಾಗಿದ್ದವು.

Social Media Auto Publish Powered By : XYZScripts.com