ಇದು ನನ್ನ ಷರಾ 2 : ಯೋಗೇಶ್ ಮಾಸ್ಟರ್ : ನೀವು ನೋಡುತ್ತಿರುವುದನ್ನೇ ನಾನೂ ನೋಡುತ್ತಿದ್ದೇನೆ …

ಅಕ್ಟೋಬರ್ (2017) ಒಂದರಂದು ದಿನಗೂಲಿ ಮಾಡುತ್ತಿದ್ದ ಜಯೇಶ್ ಸೋಲಂಕಿ ಎಂಬ ಯುವಕ ವಡೋದರಾದ ಜಾವಾ ಗ್ರಾಮದ ಸೋಮೇಶ್ವರ ದೇವಳದ ಹೊರಗಿನ ಪ್ರಾಂಗಣದಲ್ಲಿ ನಡೆಯುತ್ತಿದ್ದ ಗರ್ಭಾ ನೃತ್ಯ ನೋಡಲು ಹೋಗಿದ್ದ. ಹೊರಗಿನ ಗೋಡೆಯ ಮೇಲೆ ಕುಳಿತು ನೃತ್ಯ ನೋಡುತ್ತಿದ್ದಾಗ ಸಂಜಯ್ ಭಾಯ್ ಪಟೇಲ್ ಬಂದು ಇವನನ್ನು ಮತ್ತು ಇವನ ಸಂಗಡಿಗರನ್ನು ಬೈದು, “ಏನನ್ನು ನೋಡುತ್ತಿದ್ದೀರಿ?” ಎಂದು ಕೇಳಿದನಂತೆ. “ನೀವು ನೋಡುತ್ತಿರುವುದನ್ನೇ ನಾನೂ ನೋಡುತ್ತಿದ್ದೇನೆ” ಎಂದು ಜಯೇಶ್ ಉತ್ತರಿಸಿದ್ದಾನಂತೆ. ನಂತರ ಆದದ್ದು ದುರಂತ. ಸಂಜಯ್ ಅಲ್ಲಿಂದ ಹೋದವನೇ ಇನ್ನೂ ಏಳು ಜನರನ್ನು ಕರೆದುಕೊಂಡು ಬಂದು, ಜಗಳಕ್ಕೆದ್ದು, ಜಯೇಶನ ಗೋಡೆಗೆ ಅಪ್ಪಳಿಸಿ, ತುಳಿತುಳಿದು ಕೊಂದ.
ಜಯೇಶ್ ಒಬ್ಬ ದಲಿತನಂತೆ. ಸಂಜಯ್ ಒಬ್ಬ ಪಟೇಲನಂತೆ. ದಲಿತ ತಳವರ್ಗದವನಂತೆ. ಪಟೇಲ್ ಮೇಲ್ವರ್ಗದವನಂತೆ.
ಮೀಸೆ ಬೆಳೆಸಿದ್ದಕ್ಕೆ ದಲಿತರ ಮೇಲೆ ಹಲ್ಲೆಯಾದ ಸುದ್ಧಿಯೂ ಈ ಹೊತ್ತಲ್ಲೇ ಗುಜರಾತಿಂದ ಉಂಟು.

“ಕೊಳದ ಕಪ್ಪೆಯ ಕಥೆ

ನನ್ನ ಬಾಲ್ಯದ ದಿನಗಳಲ್ಲಿ ನಾನೊಂದು ಕಪ್ಪೆಯಾಗಿದ್ದೆ, ಸುಂದರ ಕೊಳದಲ್ಲಿ. ಆ ತೆಳುಗೊಳದಲ್ಲಿ ತಾವರೆಗಳು ಅರಳಿದ್ದವು. ಹಂಸಗಳಾಡುತ್ತಿದ್ದವು. ಆ ಕೊಳವೇ ನನ್ನ ಪ್ರಪಂಚವಾಗಿತ್ತೋ ಅಥವಾ ಇಡೀ ಪ್ರಪಂಚ ಆ ಕೊಳದಂತೆಯೇ ಇದೆ ಎಂದು ಭಾವಿಸಿದ್ದೆನೋ, ಒಟ್ಟಾರೆ ಕುರಿತೋದಿದ ವಿಷಯಗಳಿಂದ ಅಸ್ಪರ್ಷ್ಯತೆಯ ಬಗ್ಗೆ ತಿಳಿದಿದ್ದ ನಾನು ನನ್ನ ಪ್ರಾರಂಭಿಕ ಕೃತಿಗಳಲ್ಲಿ ಒಂದಾನೊಂದು ಕಾಲದಲ್ಲಿ “ಅಸ್ಪರ್ಷ್ಯತೆ ಎಂಬುದು ಆಚರಣೆಯಲ್ಲಿತ್ತಂತೆ” ಎಂದು ಬರೆದಿದ್ದೆ. ನಾನು ಬರೆದಿರುವುದನ್ನು ಓದಿದ ನಮ್ಮನೆಯವರು “ಈಗ್ಲೂ ಎಲ್ಲೋ ಒಂದೊಂದು ಕಡೆ ಜಾತಿ ಮೈಲಿಗೆ ಮಾಡ್ತಾರಂತೆ, ಆದ್ರೆ ಮುಂಚೆ ಇದ್ದಷ್ಟು ಇಲ್ಲ ಬಿಡು. ಇನ್ನು ಐದು ಹತ್ತು ವರ್ಷಗಳ ಹೊತ್ತಿಗೆ ಪೂರ್ತಿ ಇರೋದೇ ಇಲ್ಲ. ಜಾತಿನೂ ಇರೋದಿಲ್ಲ, ಧರ್ಮ ಅಂತಾನೂ ಇರೋದಿಲ್ಲ. ಅವರವರ ಇಷ್ಟದಂಗೆ ಊಟ ಮಾಡ್ತಾರೆ, ಅವರವರಿಗೆ ಬೇಕಾದವರನ್ನ ಮದುವೆ ಆಗ್ತಾರೆ. ಅವರಿಗಿಷ್ಟ ಬಂದ ಕೆಲಸ ಮಾಡ್ತಾರೆ” ಅಂತ ಹೇಳ್ತಿದ್ದರು. ನಾನೂ ನಂಬಿದ್ದೆ

ಚಾಮರಾಜಪೇಟೆಯ ನಾಲ್ಕನೇ ಮುಖ್ಯ ರಸ್ತೆಯ ರಾಮಚಂದ್ರ ಅಗ್ರಹಾರದ ಮನೆಯಲ್ಲಿ ನನ್ನ ಶಾಲೆಯ ಸ್ನೇಹಿತರು ಬಂದರು. ಅವರು ಒಳಗೆ ಬರಲಿಲ್ಲ. ಬಾಗಿಲಲ್ಲೇ ನಿಂತುಕೊಂಡಿದ್ದರು. ನಮ್ಮಜ್ಜಿ ಒಳಗೆ ಬನ್ರೋ ಅಂದರೆ, “ನಾವು ಬರೋದಿಲ್ಲ. ನಾವು ಏ ಕೆ” ಅಂದರು. ಏ ಕೆ ಅಂತ ಅಂದ್ರೇನೂಂತ ನಂಗೂ ಗೊತ್ತಿರಲಿಲ್ಲ. ನಮ್ಮಜ್ಜಿಗೂ ಗೊತ್ತಿರಲಿಲ್ಲ. “ಏನ್ರೋ ಹಂಗಂದ್ರೆ” ಅಂತ ನಮ್ಮಜ್ಜಿ ಕೇಳಿದ್ದಕ್ಕೆ, ಏ ಕೆ ಅಂದರೆ ಆದಿ ಕರ್ನಾಟಕ ಅಂತ ಹೇಳಿ, ಗೋರಿಪಾಳ್ಯದ ಜಗಜೀವನ್ ರಾಮ್ ನಗರದಲ್ಲಿ ವಾಸವಿರುವ ದಲಿತರು ಎಂಬ ವಿಷಯವನ್ನು ವಿವರಿಸಿದ್ದಕ್ಕೆ, “ಥೋ, ಹೋಗ್ರಪ್ಪಾ. ನೀವು ಕಲಿತಿರೋ ಹುಡುಗ್ರು ಇಂಥಾವೆಲ್ಲಾ ಮಾತಾಡ್ಬಾರ್ದು.

ಜಾತಿ ಗೀತಿ ಏನೂ ಇಲ್ಲ. ನೀವೆಲ್ಲಾ ಫ್ರೆಂಡ್ಸು. ಒಳಗೆ ಬನ್ನಿ” ಎಂದು ಅವರನ್ನು ಒಳಗೆ ಕೂರಿಸಿ ತಿನ್ನಲು ಕೊಟ್ಟು ನಮ್ಮಜ್ಜಿ ಹೇಳುತ್ತಿದ್ದರು, “ಈಗೆಲ್ಲಾ ಜನ ವಿದ್ಯೆ ಬುದ್ಧಿ ಕಲಿತಿದ್ದಾರಲ್ಲಾ, ಇನ್ನು ಮುಂದೆ ಈ ಜಾತಿ ಗೀತಿ ಏನೂ ಇರೋದಿಲ್ಲ. ಎಲ್ರೂ ವಿದ್ಯಾವಂತರಾಗ್ತಾರೆ. ಬುದ್ಧಿವಂತವಂತರಾಗ್ತಾರೆ. ತಿಳುವಳಿಕೆ ಇರತ್ತೆ. ಹಳೇ ಕಾಲದಲ್ಲಿ ಸರಿಯಾದ ತಿಳುವಳಿಕೆ ಇರಲಿಲ್ಲ. ಅವರೇನೋ ಹಾಗೆ ಮಾಡ್ಕೊಂಡ್ಬಿಟ್ರು. ನೀವು ಅವನ್ನೆಲ್ಲಾ ಜ್ಞಾಪ್ಕ ಇಟ್ಕೊಂಡು ಮುಂದುವರಿಸ್ಬಾದ್ರಪ್ಪಾ.”

ಈ ಮಾತು ಕೇಳಿ ಸುಮಾರು ನಲವತ್ತು ವರ್ಷಗಳಾಗಿವೆ. ಈಗಲೂ ನಮ್ಮಜ್ಜಿ ಆಡಿದ ಮಾತಿನ ದನಿ ನನ್ನ ಕಿವಿಯ ಮೇಲೆ ಮಾಸಿಲ್ಲ.
ನನ್ನೊಂದಿಗೆ ಈ ಮಾತುಗಳನ್ನು ಕೇಳಿದ ಆ ರಾಜಕುಮಾರ, ಪುಟ್ಟಸ್ವಾಮಿ, ವಿಕ್ರಮ್; ಇವರೆಲ್ಲಾ ಈಗ ಎಲ್ಲಿದ್ದಾರೋ? ಏನು ಮಾಡ್ತಿದ್ದಾರೋ!
ಚಾಮರಾಜಪೇಟೆಯಲ್ಲಿ ಹಿಂದೂ ಮುಸ್ಲೀಂ ಗಲಾಟೆಗಳನ್ನು ನೋಡುತ್ತಿದ್ದಾಗ ಅಂದುಕೊಳ್ಳುತ್ತಿದ್ದೆ. ಇವರದೂ ಒಂದು ದಿನ ನಿಂತು ಹೋಗತ್ತೆ. ಏಕೆಂದರೆ ಬರುಬರುತ್ತಾ ಈ ಪ್ರಪಂಚದಲ್ಲಿ ಸುಖ ಪಡಲು, ತಿಳಿದುಕೊಳ್ಳಲು, ಸಂತೋಷವಾಗಿ ವೈಭವಗಳನ್ನು ಅನುಭವಿಸಲು ಹೊಸ ಹೊಸ ಆವಿಷ್ಕಾರಗಳಾಗುತ್ತಿವೆ. ಎಲ್ಲರಿಗೂ ಸುಖ, ಸಂತೋಷಗಳು ಬೇಕು. ವೈಭವದಲ್ಲಿ ಧಿಂ ಅಂತ ಮಜ ಮಾಡಬೇಕು. ಆ ಕಡೆಗೆ ಮುಖ ಮಾಡಿದಾಗ ಯಾರಿಗೋ ತೊಂದರೆ ಕೊಟ್ಟು ತಾವೂ ತೊಂದರೆ ಅನುಭವಿಸಿಕೊಂಡು ಕಷ್ಟ ನಷ್ಟಗಳಿಗೆ ಯಾಕೆ ಗುರಿಯಾಗುತ್ತಾರೆ?
ನಾನಿದ್ದ ಆ ಸುಂದರ ಕೊಳವೇ ಹಿಗ್ಗುತ್ತಿಗ್ಗುತ್ತಾ ಇಡೀ ಪ್ರಪಂಚವಾಗುತ್ತದೋ ಅಥವಾ ನನ್ನಂತಹುದ್ದೇ ಇತರ ಕೊಳಗಳೆಲ್ಲಾ ಹಿಗ್ಗು ಹಿಗ್ಗುತ್ತಾ ವಿಸ್ತರಿಸಿಕೊಂಡು ಇತರ ಕೊಳಗಳ ಸಮೀಪಗಳಿಗೆ ಬಂದು ಎಲ್ಲೆಗಳನ್ನು ಅಳಿಸಿಕೊಂಡು, ಸೀಮೆಗಳನ್ನು ದಾಟಿಕೊಂಡು ಒಂದಾಗುತ್ತಾ ಒಂದು ಸುಂದರ ಸಮುದ್ರವೇ ಆಗಿಬಿಡುತ್ತದೋ ಎಂದು ಕಾಯುತ್ತಾ ಕುಳಿತಿದ್ದವನಿಗೆ ಒಂದು ಸಾಮಾಜಿಕ ಮತ್ತು ಸಾಂಸ್ಕೃತಿಕ ಆಘಾತವಾಯಿತು. ಆ ಕೊಳವು ಹಿಗ್ಗಿ ಸಮುದ್ರವಾಗುವುದಿರಲಿ, ಕುಗ್ಗುತ್ತಾ ಇಲ್ಲವಾಗಿಬಿಟ್ಟಿತ್ತು. ಕೊಳಗಳು ಗಟ್ಟಿ ಕಟ್ಟೆಗಳನ್ನು ಹೊಂದುತ್ತಾ ಕೊರಕಲ ಕೂಪವಾಗಿಬಿಟ್ಟದ್ದು ಈ ಕನಸ ಕಾಣುತ್ತಿದ್ದ ಕಪ್ಪೆಗೆ ಎಂಥಾ ಆಘಾತ.

ಓ ನೀವೂ?
ಸಿದ್ಧಾರೂಢರ ಆಶ್ರಮಕ್ಕೆ ಅಜ್ಜಿಯೊಂದಿಗೆ ಹೋದಾಗ ನನ್ನ ಶಾಲೆಗೆ ಕರೆದುಕೊಂಡು ಹೋಗಿ ಬಿಡುತ್ತಿದ್ದ ಕೌಶಲ್ಯಾಬಾಯಿ ನನ್ನ ಅಜ್ಜಿಯೊಂದಿಗೆ ನನ್ನ ನೋಡಿದರು. “ಓ ಯೋಗೀಶಾ, ನೀನೂ” ಅವರಿಗೆ ತುಂಬಾ ಸಂತೋಷವಾಯಿತು. ಅವರಂತೆ ನಾನೂ ಮಠಕ್ಕೆ ಬಂದು ಸಿದ್ಧಾರೂಢರ ಆರಾಧನೆಯಿಂದ ಅಥವ ಸತ್ಸಂಗದಿಂದ ಅವರಂತೆಯೇ ಸಂತೋಷ ಪಡುತ್ತಿದ್ದೇನೆ ಎಂದು. ಪರಸ್ಪರ ಭೇಟಿಗಳಾದವರು ಒಂದೇ ಸಿನಿಮಾ ನೋಡಿದ್ದೇವೆಂದರೆ, ಯಾವುದೋ ಒಂದು ಜಾಗಕ್ಕೆ ವಿಹಾರಕ್ಕೆ ಹೋಗಿದ್ದೇವೆಂದರೆ, ಇನ್ನಾವುದೋ ನೆಚ್ಚಿನ ತಿಂಡಿಯನ್ನು ತಿಂದಿದ್ದೇವೆಂದರೆ ಅದನ್ನು ತಿಳಿದುಕೊಂಡು “ಓ ನೀವೂ” ಎಂದು ತಮ್ಮ ಸುಖಾನುಭವಗಳನ್ನು ನೆನಪಿಸಿಕೊಳ್ಳುತ್ತಾ ತಮ್ಮ ಸ್ಮೃತಿಯಿಂದ ಪ್ರಸ್ತುತಿಯನ್ನು ಸಂತೋಷಗೊಳಿಸಿಕೊಳ್ಳುತ್ತಿದ್ದರು. ಓ ನೀವೂ ಚಿಟ್ಟಿಬಾಬುವಿನ ವೀಣೆಯನ್ನು ಇಷ್ಟ ಪಡುತ್ತೀರಾ? ಓ ನೀವೂ ಕೊಡೈಕೆನಾಲ್ಗೆ ಹೋಗಿದ್ದಿರಾ? ಅಂತ ಚಿಟ್ಟಿಬಾಬುವಿನ ವೀಣಾವಾದನದ ಸ್ವಾರಸ್ಯಗಳನ್ನು, ರಸಸ್ವಾದಗಳನ್ನು, ಕೊಡೈಕೆನಾಲ್ನ ದೃಶ್ಯ ವೈಭವಗಳನ್ನು, ಅಲ್ಲಿನ ರೋಚಕ ರಮಣೀಯ ಅನುಭವಗಳನ್ನು ಇಬ್ಬರೂ ಪರಸ್ಪರ ಸ್ಮರಿಸಿಕೊಂಡು ಗತಿಸಿದ ಆನಂದವನ್ನು ಮತ್ತೆ ಚಿಗುರಿಸಿಕೊಳ್ಳುವಂತಹ ಸುಖದ ಬಗ್ಗೆ ನನಗೆ ಗೊತ್ತಿದೆ. ನಾನು ಸಂದರ್ಶಿಸುವ ಸ್ಥಳವನ್ನು ಅವರೂ ಸಂದರ್ಶಿಸಿದರು ಎಂದರೆ, ನಾನು ಇಷ್ಟಪಡುವ ವಸ್ತುವನ್ನು ಅವರೂ ಇಷ್ಟಪಟ್ಟರೆಂದರೆ ಆ ಸ್ಥಳದ, ಆ ವಸ್ತುವಿನ ಗೌರವ ಹೆಚ್ಚಿತೆಂದು ಹೆಮ್ಮೆ ಪಡುತ್ತಿದ್ದ ಅಭಿಮಾನವನ್ನು ನಾನು ಉಸಿರಾಡಿ ಎದೆ ತುಂಬಿಕೊಂಡಿದ್ದೇನೆ. ಅದು ತೀರಾ ಸಹಜವಾಗಿರುವುದನ್ನೂ ನಾನು ಗಮನಿಸಿದ್ದೇನೆ.

ಯಾ ದೇವಿ ಸರ್ವ ಭೂತೇಶು ಎಂದ ಔದಾರ್ಯ
ರಾಜರಾಜೇಶ್ವರಿ ದೇವಸ್ಥಾನದಲ್ಲಿದ್ದ ಅರ್ಚಕರಾದ ರಾಮಚಂದ್ರ ಶಾಸ್ತ್ರಿ ಪ್ರತಿ ನವರಾತ್ರಿಗೆ ದೇವಿಯ ವಿಗ್ರಹಕ್ಕೆ ನಾನಾ ಬಗೆಯಾಗಿ ಅಲಂಕರಿಸುವುದರಲ್ಲಿ ನಿಷ್ಣಾತರು, ಪ್ರಖ್ಯಾತರು. ನವರಾತ್ರಿಯ ಅಲಂಕಾರಕ್ಕೆ ದೇವಿಯ ದರ್ಶನಕ್ಕೆಂದು ಅದ್ಯಾರೋ ಪ್ಯಾಂಟು ಮತ್ತು ಟೀ ಷರ್ಟು ಹಾಕಿಕೊಂಡಿರುವ ಹೆಣ್ಣು ಮಗಳು ಬಂದಿದ್ದಳು. ಅವಳೂ ದೇವರಿಗೆ ನಮಸ್ಕರಿಸಿ ತೀರ್ಥ ಪ್ರಸಾದಗಳನ್ನು ತೆಗೆದುಕೊಂಡು ಕುಂಕುಮವನ್ನು ಹಣೆಗಿಟ್ಟುಕೊಂಡು ಹೋಗುವಾಗ ಆಕೆಯನ್ನೇ ವಕ್ರವಾಗಿ ನೋಡುತ್ತಿದ್ದ ಹಿರಿಯರೊಬ್ಬರು ಅರ್ಚಕರ ಬಳಿ ಗೊಣಗಿಕೊಂಡರು. “ಏನು ಅವಳ ಅವತಾರ. ಅವಳು ದೇವಸ್ಥಾನಕ್ಕೆ ಬಂದಿರೋ ಹುಟ್ಟು ನೋಡಿ.”
“ದೇವಿಗೆ ದಿನದಿನಕ್ಕೂ ಒಂದೊಂದು ಅವತಾರದ ಅಲಂಕಾರ ಮಾಡ್ತೀವಿ. ಅದೇ ದೇವಿ ಈ ಕಾಲದ ವೇಷದಲ್ಲಿ ಬಂದಾಗಲೂ ಅಲಂಕಾರದ ಹಿಂದಿನ ದೇವಿಗೆ ನಮಸ್ಕಾರ ಮಾಡೋಷ್ಟು ಭಕ್ತರ ಎಚ್ಚರಿಕೆ ನಮಗಿರಬೇಕಲ್ಲಾ ರಾಯರೇ” ಎಂದರು ರಾಮಚಂದ್ರಶಾಸ್ತ್ರಿ.
ಯಾ ದೇವಿ ಸರ್ವ ಭೂತೇಶು ಚೇತನೇತ್ಯಭಿಧೀಯತೇ
ಯಾ ದೇವಿ ಸರ್ವ ಭೂತೇಶು ಮಾತೃ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋನಮಃ
ಎಲ್ಲಾ ಜೀವಿಗಳಲ್ಲಿ ಚೈತನ್ಯ, ತಾಯಿ, ಶ್ರದ್ಧೆ, ನಿದ್ರೆ, ಭ್ರಮೆ, ದಯೆ, ಕರುಣೆ ಇತ್ಯಾದಿ ಇಲ್ಲಾ ಗುಣಗಳಿಂದ ಯಾವ ದೇವಿಯು ನೆಲಸಿರುತ್ತಾಳೋ, ಅವಳಿಗೆ ನಾನು ಪುನಃ ಪುನಃ ನಮಸ್ಕರಿಸುತ್ತೇನೆ ಎಂದು ದುರ್ಗಾ ಸಪ್ತಶತಿಯ ಅಪರಾಜಿತ ಸ್ತೋತ್ರವನ್ನು ಧ್ವನಿಸಿದ್ದರು ಆ ರಾಮಚಂದ್ರ ಶಾಸ್ತ್ರಿ. ಮಧ್ಯಾಹ್ನದ ಹೊತ್ತು ದೇವಸ್ಥಾನವನ್ನು ಮುಚ್ಚುವ ಹೊತ್ತಿಗೆ ಹೊರಗೆ ಬಂದು ನೋಡುತ್ತಿದ್ದರು. ಟಿ ಆರ್ ಮಿಲ್ ಬಳಿ ಕಾಣುತ್ತಿದ್ದ ಕೂಲಿ ಕಾರ್ಮಿಕರನ್ನೋ ಅವರ ಮನೆಯವರನ್ನೋ ಕಂಡರೆ ಅವರನ್ನು ಕರೆದು ಎಲ್ಲಾ ಹಣ್ಣು, ಕಾಯಿ ಮತ್ತು ಪ್ರಸಾದವನ್ನು ಹಂಚಿ ಸಂಗ್ರಹವನ್ನು ಬರಿದು ಮಾಡಿಕೊಳ್ಳುತ್ತಿದ್ದರು. ಹಣ್ಣು ಕಾಯಿ ಮನೆಗೆ ಎತ್ತಿಕೊಂಡು ಹೋಗಲ್ವಾ ಶಾಸ್ತ್ರಿಗಳೇ ಎಂದು ಯಾರಾದರೂ ಕೇಳಿದರೆ “ದೇವರು ನನಗೆ ತೋರಿಸೋ ಔದಾರ್ಯವನ್ನು ನಾನು ಇನ್ನೊಬ್ಬರಿಗೆ ತೋರಿಸಬೇಕಲ್ವಾ? ನನಗೆ ದಿನ ಬೆಳಗಾದರೆ ಯಾರಾದರೂ ಕೊಡ್ತಾರೆ. ಹಂಚಿಕೊಂಡರೇನೇ ತೆಗೆದುಕೊಂಡಿರೋದಕ್ಕೂ ಒಂದು ಬೆಲೆ.” ಶಾಸ್ತ್ರಿಯವರ ಔದಾರ್ಯ ಅವರ ಎಲ್ಲಾ ಕಾರ್ಯಗಳಲ್ಲಿ ಕ್ರಿಯಾತ್ಮಕವಾಗಿಯೇ ಇದ್ದುದ್ದನ್ನು ನಾನು ನೋಡುತ್ತಲೇ ಇದ್ದೆ.

“ಅಮರ್, ಅಕ್ಬರ್, ಅಂತೋಣಿ ಎಂದ ಅನಿವಾರ್ಯ”
“ಅಮರ್, ಅಕ್ಬರ್, ಅಂತೋಣಿ” ಸಿನಿಮಾ ಬಂತು. ಹಿಂದೂ, ಮುಸ್ಲೀಂ, ಕ್ರೈಸ್ತರೆಲ್ಲಾ ಸ್ನೇಹಿತರು ಎಂದು ಘೋಷಿಸುವ ಚಿತ್ರವಾಗಿ ಮಾರ್ಪಾಡಾಗಲು ಚಲನಚಿತ್ರರಂಗಕ್ಕೆ ಒಂದಷ್ಟು ಸಮಯ ಹಿಡಿದಿತ್ತು.

ನಮ್ಮ ಹಳೆಯ ಕನ್ನಡ ಸಿನಿಮಾಗಳಲ್ಲೂ ಕೂಡ ಕೇಡಿ, ಗೂಂಡಾ, ವಿಲನ್ ಎಂದರೆ, ಅವನು ಡ್ಯಾನಿ, ಜಾನಿ, ಟೋನಿಯೋ ಆಗಿರುತ್ತಿದ್ದ. ಇಂಗ್ಲೀಷರು ಅಥವಾ ವಿದೇಶಿ ಕ್ರೈಸ್ತರು ಸಮುದ್ರದ ಮೇಲೆ ಕಳ್ಳ ಸಾಗಣಿಕೆ ಮಾಡುತ್ತಿದ್ದರು ಎಂದೋ, ಅವರು ನಮ್ಮದ್ದನೆಲ್ಲಾ ದೋಚಿಕೊಂಡು ಹೋದರು ಎಂದೋ, ಅವರು ವಸಾಹತುಗಳನ್ನು ಸ್ಥಾಪಿಸಿ ನಮ್ಮ ಗೋಳುಹುಯ್ದುಕೊಂಡರೆಂದೋ, ಯಾವ ಸುಪ್ತ ಜ್ಞಪ್ತಿಗಳು ಗುಪ್ತವಾಗಿರುತ್ತಿದ್ದವೋ, ಒಟ್ಟಾರೆ ವಿಲನ್ ಗಳು ಕ್ರೈಸ್ತ ಹೆಸರನ್ನು ಹೊತ್ತಿರುತ್ತಿದ್ದರು. ಹೀಗೆಂದವರು ನಮ್ಮ ಮಾವ. “ಈಗ ನೋಡು, ಅಮರ್, ಅಕ್ಬರ್, ಅಂತೋಣಿ ಬಂದಿದೆ. ಈಗ ಹಾಗೆಲ್ಲಾ ಹಳೆಯ ರಾಗ ಪಾಡ್ಕೊಂಡು ಕೂತಿರಕ್ಕಾಗಲ್ಲ. ಎಲ್ಲಾ ಜಾತಿ ಮತದವರೂ ಒಟ್ಟಾಗಿ ಕೆಲಸ ಮಾಡ್ಬೇಕಾಗಿರೋ ಇಂಡಸ್ಟ್ರೀ ಸಿನಿಮಾ. ಎಲ್ಲರೂ ಇರ್ತಾರೆ. ಯಾರೋ ಒಬ್ಬನ್ನ ಗ್ರೇಟ್ ಅನ್ನೋದು, ಇನ್ನೊಬ್ಬನ್ನ ಕೇಡಿ ಅನ್ನೋದಕ್ಕೆಲ್ಲಾ ಆಗಲ್ಲ. ಎಲ್ಲಾರೂ ಒಬ್ಬರ ಜೊತೆ ಕೆಲಸ ಮಾಡೋ ಅನಿವಾರ್ಯ. ನಾವೆಲ್ಲಾ ಸ್ನೇಹಿತರು ಅಂತ ಹೇಳ್ಕೊಂಡು ಕೆಲಸ ಮಾಡ್ಲಿಲ್ಲಾಂದ್ರೆ ಕೆಲಸವೂ ಆಗಲ್ಲ, ಜೊತೆಗೆ ಎಲ್ರೂ ಓದಿಕೊಂಡಿದ್ದಾರೆ, ಕೆಲಸ ಕಲ್ತಿದ್ದಾರೆ. ಇವನಿಗೂ ಕೆಲಸ ಗೊತ್ತು, ಅವನಿಗೂ ಕೆಲಸ ಗೊತ್ತು. ಇವನ್ಯಾಕೆ ಅವನಿಗಿಂತ ಮೇಲಾಗ್ತಾನೆ?”
ಔದಾರ್ಯವೋ, ಅನಿವಾರ್ಯವೋ ಒಟ್ಟಾರೆ ಎಲ್ಲರೂ ಹಳೆಯದಾದ, ಹಳಸಲಾದ ಕೂಪಗಳನ್ನು ಬಿಟ್ಟು ತಮ್ಮ ತಾವರೆಯ ಕೊಳವನ್ನು ಹಿಗ್ಗಿಸಿ ಹಿಗ್ಗಿಸಿಕೊಂಡು ಸಮುದ್ರ ಮಾಡಿಕೊಳ್ಳುವುದನ್ನು ಕಾಯುತ್ತಾ ಕುಳಿತಿದ್ದೆ. ಎಲ್ಲಾ ವರ್ಗ, ವರ್ಣ ಮತ್ತು ಧರ್ಮದವರ ರೂಢಿಯಲ್ಲಿರುವ ಸಂತೋಷದ ಸಂಪನ್ಮೂಲಗಳನ್ನು ಪರಸ್ಪರ ಹಂಚಿಕೊಂಡು ವೈವಿಧ್ಯಮಯವಾದ ಸುಖಗಳನ್ನು ಅನುಭವಿಸಲು ಕಾಯುತ್ತಿದ್ದೆ. ಈ ಹಿಂದೆ ನಮ್ಮದೇ ಆದ ಯಾವುದೋ ಒಂದು ಹಿನ್ನೆಲೆಯ, ರೂಢಿಯ ಒಂದು ನಿರ್ಧಿಷ್ಟ ಸುಖ ಸಂತೋಷ. ಆದರೆ, ಈಗ ಎಲ್ಲೆಗಳನ್ನು ಅಳಿಸಿಕೊಳ್ಳುತ್ತಿರುವುದರಿಂದ ಸುಖ ಸಂತೋಷದ ಸಂಪನ್ಮೂಲಗಳಲ್ಲಿ ವೈವಿದ್ಯತೆ. ಇದಷ್ಟೇ ಬೇಕಾಗಿದ್ದದ್ದು. ಶಾಲೆಯ ಹುಡುಗನಾಗಿ ನಾನು ’ಮಜವೋ ಮಜ’ ಎಂದು ಸುಖಿಸಲು ಕಾಯುತ್ತಿದ್ದದ್ದು ಇಷ್ಟಕ್ಕೇ!
ನನಗಿರುವ ಖೇದಾಶ್ಚರ್ಯವೆಂದರೆ ಈಗ ಯಾರಿಗೂ ಸುಖವಾಗಲಿ ಸಂತೋಷವಾಗಲಿ ಬೇಡವಾಗಿರುವುದು. ಅವನ್ಯಾರೋ ತೆಗಳುವುದಕ್ಕೆ ತಾನು ವ್ಯಗ್ರನಾಗಬೇಕು. ಅವನ್ಯಾರನ್ನೋ ಥಳಿಸಲು ಕ್ಷುಧ್ರನಾಗಬೇಕು. ಕೋಪಗೊಳ್ಳುವುದನ್ನು, ವ್ಯಗ್ರವಾಗುವುದನ್ನು, ಸ್ಥಿಮಿತ ಕಳಕೊಂಡು ಹುಚ್ಚಾಗುವುದನ್ನು, ಬೇಸರದಲ್ಲಿರುವುದನ್ನು, ತನ್ನ, ತನ್ನ ಮನೆಯವರ, ತಮ್ಮವರ ಎಲ್ಲರ ಶಾಂತಿ, ನೆಮ್ಮದಿಯನ್ನು ಕಳೆದುಕೊಳ್ಳಲು ತಾವಾಗಿ ಬಯಸುವುದನ್ನು ಕಂಡರೆ ಅವರಿಗೆ ಸುಖ ಮತ್ತು ಸಂತೋಷದ ಪರಿಯನ್ನೇ ಅರಿತಿಲ್ಲ ಎಂದುಕೊಳ್ಳುತ್ತೇನೆ. ಯಾರೋ ಸುಖವಾಗಿರುವುದು, ಸಂತೋಷವಾಗಿರುವುದು ಅಂತ ಔದಾರ್ಯವೇನೂ ಬೇಡ. ಕಡೇ ಪಕ್ಷ ತಾನು ಸುಖ ಮತ್ತು ಸಂತೋಷವಾಗಿರುವ ಅನಿವಾರ್ಯತೆಯನ್ನಾದರೂ ಕಂಡುಕೊಳ್ಳದಷ್ಟು ಸ್ವಪೀಡಕರೇ?
ಜಯೇಶನನ್ನು ಥಳಿಸಿ ಕೊಂದ ಸಂಜಯನ ಗುಂಪು ತಾವು ಪಟ್ಟ ಸಂತೋಷವೇನು? ಗಳಿಸಿದ ಸುಖವೇನು? ಆ ಘಟನೆಯ ತರುವಾಯ ಅವರು ನಗಲಾದೀತೇ? ತಪ್ಪಿಸಿಕೊಳ್ಳುವ, ಬಂಧಿತರಾಗುವ, ಒತ್ತಡದಲ್ಲಿ ಸಿಲುಕುವ, ಇನ್ನು ಪೋಲಿಸ್, ಕಾನೂನು ಇತ್ಯಾದಿಗಳ ಕಟ್ಟಳೆಗಳಲ್ಲಿ ಒದ್ದಾಡುವ ಅವರಿಗೆ ಯಾವ ನೆಮ್ಮದಿ? ಜಯೇಶನಿಗೆ ಸಾವನ್ನು ಕೊಟ್ಟು, ಅವರ ಮನೆಯವರನ್ನು ದುಃಖಕ್ಕೆ ದೂಡಿ, ಅವರಲ್ಲಿ ಅಶಾಂತಿ, ಕ್ಷೋಭೆ, ದುಃಖ ಮೊದಲಾದವನ್ನು ಸೃಷ್ಟಿಸಿದ ಸಾರ್ಥಕ್ಯವೇನು? ಯಾರಿಗೂ ನೆಮ್ಮದಿಯಿಲ್ಲ. ಯಾರಿಗೂ ಸುಖವಿಲ್ಲ.
ಬದುಕು, ಬದುಕಲು ಬಿಡು ಎಂಬ ಜಿನ ವಾಕ್ಯ ನನಗೆ “ಸುಖಿಸು, ಸುಖಿಸಲು ಬಿಡು” ಎಂದೇ ಧ್ವನಿಸಿದಂತೆ ಕಾಣುತ್ತದೆ.

ಕೊನೆಯದಾಗಿ ಒಂದು ಷರಾ.
ವಡೋದರಾದ ದೇವಸ್ಥಾನದಲ್ಲಿ “ನೀವು ನೋಡುತ್ತಿರುವುದನ್ನೇ ನಾನೂ ನೋಡುತ್ತಿದ್ದೇನೆ” ಎಂದ ಜಯೇಶ್ ಸಂಜಯ್ಗೆ. ಹೌದು, ನಾವು ನೋಡುತ್ತಿರುವುದನ್ನೇ ಇತರರೂ ನೋಡುತ್ತಿದ್ದಾರೆ. ಯಾರೋ ಒಬ್ಬ ಮೀಸೆ ತಿರುವಿದಾಗ ಅದು ಚೆಂದ ಕಾಣಿಸುತ್ತದೋ ಅಥವಾ ಫನ್ನಿಯಾಗಿ ಕಾಣಿಸುತ್ತದೆಯೋ; ಮೆಚ್ಚುಗೆಯ ನಗೆ ಬರಬಹುದು ಅಥವಾ ಹಾಸ್ಯಾಸ್ಪದವೋ ಅನ್ನಿಸಿದರೆ ನಗು ಬರಬಹುದು. ಆದರೆ ಕೋಪ ಯಾತಕ್ಕೆ ಬರಬೇಕು? ಗರ್ಭಾ ನೃತ್ಯವೆಂದರೆ ಅದು ದೇವಿಯ ಆರಾಧನೆಯ ನೃತ್ಯ. ಅದನ್ನು ನೋಡಿ ಕಣ್ತುಂಬಿಕೊಳ್ಳುವಾಗ ಅವನೂ ನೋಡಿದರೆ ಸಂತೋಷ ಹಂಚಿಕೊಂಡಂತಾಗುತ್ತದಲ್ಲವೇ?
ಅಲ್ಲೊಂದು ನೋವಾಗಿದೆ, ಸಾವಾಗಿದೆ. ನಾನೂ ನೋಡುತ್ತಿದ್ದೇನೆ. ಅವರೂ ನೋಡುತ್ತಿದ್ದಾರೆ. ನನಗೆ ಸಂಕಟವಾಗುತ್ತಿದೆ. ನನ್ನ ಸಂಕಟ ಅವರಿಗೆ ಸಂತಸವಾಗುತ್ತಿದೆ ಎಂದರೆ! ಅಲ್ಲೊಂದು ನಲಿವಿದೆ, ಖುಷಿ ಇದೆ. ನಾನೂ ನೋಡುತ್ತಿದ್ದೇನೆ. ಅವರೂ ನೋಡುತ್ತಿದ್ದಾರೆ. ನನಗೆ ಸಂತೋಷವಾಗುತ್ತಿದೆ. ನನ್ನ ಸಂತೋಷ ಅವರಿಗೆ ಸಂಕಟವಾಗುತ್ತಿದೆ ಎಂದರೆ! ಅಯ್ಯಯ್ಯೋ ಇಲ್ಲೇನಾಗುತ್ತಿದೆ?
ಭಗವತ್ಪ್ರೇಮ, ಆತ್ಮ, ಪರಮಾತ್ಮ, ಮಾನವತೆ, ಪ್ರೀತಿ, ಕರುಣೆ ಇವೆಲ್ಲಾ ಭಾರಿ ಭಾರಿ ದೊಡ್ಡದಾದವು. ಸುಖ. ಬರೀ ಸುಖ. ನಾನು ಸುಖವಾಗಿರಬೇಕು, ಸಂತೋಷವಾಗಿರಬೇಕೆಂದರೆ ನನ್ನ ಮುಂದೆ ಸುಖವಾಗಿರುವವರನ್ನು ಹೊಂದಬೇಕು. ಸಂತೋಷದ ವಾತಾವರಣವನ್ನು ಹೊಂದಬೇಕು ಎಂದು ಸುಖ ಪ್ರಧಾನ ಜೀವನಕ್ಕೆ ಮುಂದಾದರೂ ಎಲ್ಲರೂ ಸುಖವಾಗಿರುವರೇ? ನನ್ನ ಮುಂದೆ ಹಸಿವಿನಿಂದ ಬಳಲಿ ಅಳುತ್ತಿರುವ ಜೀವದ ಮುಂದೆ ನಾನು ಉಣ್ಣುತ್ತಾ ಸಂತೋಷವಾಗಿರಲಂತೂ ಆಗದು. ಅವನಿಗೆ ನನ್ನದ್ದನ್ನು ಹಂಚಿಕೊಂಡಾಗ ಅವನು ನಕ್ಕರೆ ನನ್ನಲ್ಲೂ ನಗುವರಳೀತು. ಗೋಳಾಟದ ನಡುವಲ್ಲಿ ನನಗೆ ನಗು ಬರದು. ನಾನು ನಗುತ್ತಿರಬೇಕೆಂದರೆ ಅವರೂ ನಗುನಗುತ್ತಿರಬೇಕು. ಬಾಳು ಬಾಳಗೊಡು ಎಂದ ಜಿನ ವಾಕ್ಯವು ಧ್ವನಿಸುತ್ತಿದೆ ನಿನ್ನ ಸಂತೋಷ ಇತರರ ಸಂತೋಷವಾಗಿರಬಿಡುವುದರಲ್ಲಿದೆ ಎಂದು.

Comments are closed.

Social Media Auto Publish Powered By : XYZScripts.com