ಸಿದ್ದರಾಮಯ್ಯರವರಿಗೆ ಆರ್ಥಿಕತೆಯ ಬಗ್ಗೆ ಹೆಚ್ಚಿನ ಅರಿವಿದೆ : ಮನಮೋಹನ್ ಸಿಂಗ್‌

ಬೆಂಗಳೂರು : ಸಿಎಂ  ಸಿದ್ದರಾಮಯ್ಯ ಅವರಿಗೆ ಆರ್ಥಿಕತೆಯ ಬಗ್ಗೆ ಹೆಚ್ಚಿನ ಅರಿವಿದ್ದು, ಇದುವರೆಗೂ ಮಂಡಿಸಿದ ಬಜೆಟ್‌ಗಳೆಲ್ಲವೂ ಯಶಸ್ವಿಯಾಗಿರುವುದಾಗಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ. ಬೆಂಗಳೂರಿನ ಅಂಬೇಡ್ಕರ್‌ ಭವನದಲ್ಲಿ ನಡೆದ ಸ್ಕೂಲ್ ಆಫ್‌ ಎಕನಾಮಿಕ್‌ ನ ಶೈಕ್ಷಣಿಕ  ಕಾರ್ಯ ಚಟುವಟಿಕೆಗಳ ಉದ್ಘಾಟನೆ ಮಾಡಿ ಮಾತನಾಡಿದ ಮನಮೋಹನ್ ಸಿಂಗ್‌,

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಅನ್ನಭಾಗ್ಯದಂತಹ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, 1.16 ಕೋಟಿ ಜನರ ಅನ್ನದಾಹ ನೀಗಿಸಿದ್ದಾರೆ. ಇನ್ನು ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ರೈತರ 72ಸಾವಿರ ಕೋಟಿ ಸಾಲ ಮನ್ನಾ ಮಾಡಿತ್ತು. ಅದೇ ರೀತಿ ಕರ್ನಾಟಕ ಸರ್ಕಾರವೂ ರೈತರ ಸಾಲ ಮನ್ನಾ ಮಾಡಿಯೂ ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡಿರುವುದು ಸಂತಸದ ವಿಷಯ ಎಂದಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕದ ಶೈಕ್ಷಣಿಕ ವ್ಯವಸ್ಥೆ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಕೇವಲ ಕರ್ನಾಟಕವೊಂದರಲ್ಲೇ 13,600 ಮಂದಿ ವಿದೇಶಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶೈಕ್ಷಣಿಕ ಕ್ಷೇತ್ರಕ್ಕೆ ಸಿದ್ದರಾಮಯ್ಯ ಅವರು ತೋರಿಸುತ್ತಿರುವ ಕಾಳಜಿ, ವಿದ್ಯಾಭ್ಯಾಸದ ಮಟ್ಟ ಎಲ್ಲವೂ ಉತ್ತಮವಾಗಿದ್ದು, ಸ್ಕೂಲ್‌ ಆಫ್ ಎಕನಾಮಿಕ್‌ನ ವಿದ್ಯಾರ್ಥಿಗಳು ಮುಂದೆ ಉತ್ತಮ ಆರ್ಥಿಕ ತಜ್ಞರಾಗಿ ರೂಪುಗೊಳ್ಳಲಿ ಎಂದಿದ್ದಾರೆ.

ಆರ್ಥಿಕ ಹಾಗೂ ಸಮಾಜಿಕ ಬದಲಾವಣೆಯಾಗಬೇಕಾದರೆ ನಮ್ಮಲ್ಲಿ ಹೊಸ ಆಲೋಚನೆ ಮೂಡುವಂತಾಗಬೇಕು. ನಮ್ಮ ಪರಿಸರವನ್ನು ರಕ್ಷಣೆ ಮಾಡುವಂತಾಗಬೇಕು. ದೇಶದಲ್ಲಿ ವಿದ್ಯಾರ್ಥಿಗಳ ಕಲಿಯುವಿಕೆಗೆ ಕರ್ನಾಟಕ ಸೂಕ್ತ ಸ್ಥಳವಾಗಿದ್ದು, ಐಐಎಸ್‌ಸಿ, ಐಐಎಂಬಿ, ಎನ್‌ಎಲ್‌ಎಸ್‌ಐಯು, ಇಸ್ರೋನಂತಹ ಸಂಸ್ಥೆಗಳಿವೆ. ಬೆಂಗಳೂರು ಅಭಿವೃದ್ದಿಯತ್ತ ಧಾಪುಗಾಲಿಡುತ್ತಿದ್ದು, ಐಟಿ ಬಿಟಿ ಸಂಸ್ಥೆಗಳ ಪ್ರಾಬಲ್ಯ ಹೆಚ್ಚುತ್ತಿದೆ. ಇದರಿಂದಾಗಿ ಕರ್ನಾಟಕದ ಏಳಿಗೆ ಸಾಧ್ಯವಾಗುತ್ತಿದೆ ಎಂದಿದ್ದಾರೆ.

 

 

Social Media Auto Publish Powered By : XYZScripts.com