ಕಂದಾಯ ಗ್ರಾಮ ಮಸೂದೆಗೆ ಅಂಕಿತ ಹಾಕಲು ರಾಷ್ಟ್ರಪತಿಗಳಿಗೆ ಒತ್ತಾಯ

ಲಂಬಾಣಿ ತಾಂಡ, ಹಟ್ಟಿ, ಹಾಡಿ, ಪಾಳ್ಯ ವಾಸಿಗಳಿಗೆ ಭೂಮಿ ಹಕ್ಕು ಕಲ್ಪಿಸುವ ರಾಜ್ಯದ ಮಸೂದೆಗೆ ಅನುಮೋದನೆ ನೀಡಲು ರಾಷ್ಟ್ರಪತಿಗಳನ್ನು ಒತ್ತಾಯಿಸಿ ಹಮ್ ಗೋರ್ ಕಟಮಾಳೊ ಕರ್ನಾಟಕ ವತಿಯಿಂದ ರಾಜ್ಯವ್ಯಾಪಿ ಸಹಿ ಸಂಗ್ರಹ ಚಳವಳಿ ನಡೆದಿದೆ.
ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಚಿಂತಕಿ, ಮಾಜಿ ಸಚಿವೆ ಬಿಟಿ ಲಲಿತಾ ನಾಯ್ಕ್ ಚಳವಳಿಗೆ ಚಾಲನೆ ನೀಡಿದ್ದು, ಕಂದಾಯ ಗ್ರಾಮಗಳಾದರೆ ಈ ಜನರಿಗೆ ರಸ್ತೆ, ಸರ್ಕಾರಿ ಕಛೇರಿ, ವಿದ್ಯುತ್, ಕುಡಿಯುವ ನೀರು, ಆಸ್ಪತ್ರೆ, ಶಾಲೆ, ಅಂಗನವಾಡಿ ಹೀಗೆ ಸೌಲಭ್ಯ ಸಿಗಲಿದೆ. ಹಾಗಾಗಿ ಕೂಡಲೇ ರಾಷ್ಟ್ರಪತಿಗಳು ಮಸೂದೆಗೆ ಅಂಕಿತ ಹಾಕಬೇಕು ಎಂದು ಚಳವಳಿಗಾರರು ಒತ್ತಾಯಿಸಿದರು.

ಲಂಬಾಣಿ ಮತ್ತಿತರ ಶೋಷಿತ ದಲಿತ-ಬುಡಕಟ್ಟುಗಳ ತಾಂಡ, ಹಟ್ಟಿ, ಹಾಡಿ, ಪಲ್ಲಿ, ಗಲ್ಲಿ, ವಾಡಿ, ಪಾಳ್ಯ ವಾಸಿಗರಿಗೆ ಭೂ ಒಡೆತನ ನೀಡಲು ರಾಜ್ಯ ಸರ್ಕಾರ ಮಹಕ್ವಾಕಾಂಕ್ಷಿ ವಿಧೇಯಕ ಅಂಗೀಕರಿಸಿದೆ. ‘ಕರ್ನಾಟಕ ಭೂ ಸುಧಾರಣೆಗಳ ವಿಧೇಯಕ-2016’ ಅನ್ನು ರಾಷ್ಟ್ರಪತಿಗಳು ಅನುಮೋದಿಸಬೇಕು. ಸ್ವಾತಂತ್ರ್ಯ ಸಿಕ್ಕು ಏಳು ದಶಕ ಕಳೆದರು ಲಂಬಾಣಿ ಮತ್ತಿತರ ಸಮುದಾಯದ ಜನವಸತಿ ಪ್ರದೇಶಗಳು ಕಂದಾಯ ಗ್ರಾಮಗಳಾಗಿಲ್ಲ. ಹಾಗಾಗಿ ಯಾರದೊ ಖಾಸಗಿ ಮಾಲಿಕತ್ವದ ಜಮೀನಿನಲ್ಲಿ, ಅರಣ್ಯ ಭೂಮಿಯಲ್ಲಿ, ಬಗರ್ ಹುಕುಂ ಜಮೀನಿನಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿಯವರೆಗೆ ತಮ್ಮ ಮನೆಯ ಹಕ್ಕು ಪತ್ರ ಯಾರ ಹೆಸರಲ್ಲಿದೆ ಎಂಬ ಮಾಹಿತಿಯೆ ಈ ಸಮುದಾಯಗಳಿಗೆ ಇಲ್ಲವಾಗಿದೆ ಎಂದು ಚಿಂತಕಿ ಬಿಟಿ ಲಲಿತಾ ನಾಯ್ಕ್ ಹೇಳಿದರು.
ಕಂದಾಯ ಗ್ರಾಮಗಳಾಗಿಲ್ಲದ ಕಾರಣಕ್ಕಾಗಿ ನಾಗರಿಕ ಸೌಲಭ್ಯಗಳಾದ ರಸ್ತೆ, ಸಾರಿಗೆ, ಸರ್ಕಾರಿ ಕಛೇರಿ, ವಿದ್ಯುತ್, ಕುಡಿಯುವ ನೀರು, ಆಸ್ಪತ್ರೆ, ಶಾಲೆ, ಅಂಗನವಾಡಿ, ಪಂಚಾಯತಿ, ಇತ್ಯಾದಿ ಮೂಲಸೌಕರ್ಯಗಳಿಂದ ಲಂಬಾಣಿಗರು ವಂಚಿತರಾಗಿದ್ದಾರೆ. ಜನವಸತಿಗೆ ಶಾಶ್ವತ ನೆಲೆ ಇಲ್ಲದ ಕಾರಣ ವಲಸೆ, ಅಲೆಮಾರಿಗಳಂತೆ ಈ ಸಮುದಾಯ ತಿರುಗಾಡುತ್ತಿದೆ. ಮಕ್ಕಳ ಮಾರಾಟ, ಮಹಿಳೆಯರ ಮಾರಾಟ ಪ್ರಕರಣಗಳು ಸಮುದಾಯದಲ್ಲಿ ಭೀಕರ ಬಡತನ ಅವರಿಸಿರುವುದನ್ನು ಎತ್ತಿ ತೋರಿಸುತ್ತಿದೆ. ಇತ್ತ ಮನೆಯ ಹಕ್ಕುಗಳು ಇಲ್ಲದೆ, ಅತ್ತ ಉಳುಮೆಗೆ ಭೂಮಿಯೂ ಇಲ್ಲದ ಲಂಬಾಣಿಗರು ಪರಕೀಯರಂತಾಗಿರೊದು ದೇಶಕ್ಕಾಗುವ ಅವಮಾನ ಅಷ್ಟೇ ಎಂದು ರಾಷ್ಟ್ರೀಯ ಕಾನೂನು ಶಾಲೆಯ ಪ್ರಾಧ್ಯಾಪಕ ಪ್ರದೀಪ್ ರಮಾವತ್ ತಿಳಿಸಿದರು.
ಬಹುದಿನದ ಹೋರಾಟಕ್ಕೆ ಮಣಿದು ರಾಜ್ಯ ಸರ್ಕಾರ ಸದನದಲ್ಲಿ ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿಸುವ ಮಸೂದೆ ಮಂಡಿಸಿತ್ತು. ರಾಜ್ಯಪಾಲರು ಈ ಮಸೂದೆಯನ್ನು ಅನುಮೋದಿಸೊ ಬದಲಾಗಿ ರಾಷ್ಟ್ರಪತಿಯವರಿಗೆ ಯಾಕೆ ರವಾನಿಸಿದರು ಎಂದು ತಿಳಿಯದಾಗಿದ್ದೇವೆ. ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿಸುವಲ್ಲಿನ ವಿಳಂಬತನ ಸಮುದಾಯಗಳನ್ನು ಮತ್ತಷ್ಟು ಕುಗ್ಗಿಸುತ್ತಿದೆ ಎಂದು ಬಹುಜನ ವಿದ್ಯಾರ್ಥಿ ಸಂಘಟನೆಯ ಸುನಿಲ್ ಬೇಸರ ವ್ಯಕ್ತಪಡಿಸಿದರು.
ಕಂದಾಯ ಗ್ರಾಮಗಳಾಗಿಲ್ಲದೆ, ನಾಗರಿಕ ಹಕ್ಕುಗಳಿಂದ ವಂಚಿತರಾಗಿರುವ ಲಂಬಾಣಿಗರನ್ನು ಮುಖ್ಯವಾಹಿನಿ ಉದ್ದೇಶಿತ ‘ ಕರ್ನಾಟಕ ಭೂ ಸುಧಾರಣೆ ವಿಧೇಯಕ-2016’ ಅನುಮೋದನೆ ಮಾಡಲು ಒತ್ತಾಯಿಸಿ ಒಂದು ವಾರ ಕಾಲ ಎಲ್ಲ ತಾಲ್ಲೂಕು ಮತ್ತು ಜಿಲ್ಲಾಧಿಕಾರಿ ಕಚೇರಿ ಎದುರು ಸಹಿ ಸಂಗ್ರಹ ಚಳುವಳಿ ನಡೆಸಲಾಗುವುದು. ಅಕ್ಟೋಬರ 10 ರಂದು ಆಯಾ ತಾಲ್ಲೂಕಿನ ತಹಸೀಲ್ದಾರ ಮತ್ತು ಜಿಲ್ಲೆಯ ಜಿಲ್ಲಾಧಿಕಾರಿಗಳ ಮುಖಾಂತರ ತ್ವರಿತ ಅಂಗೀಕಾರಕ್ಕಾಗಿ ರಾಷ್ಟ್ರಪತಿಯವರಿಗೇ ಸಹಿ ಸಂಗ್ರಹಿಸಿದ ಪತ್ರಗಳನ್ನು ಕಳುಹಿಸಲಾಗುತ್ತದೆ. ಎಂದು ಹಮ್ ಗೋರ್ ಕರ್ನಾಟಕದ ಮುಖಂಡ ವಿಜಯ್ ಜಾಧವ್ ತಿಳಿಸಿದರು.

Comments are closed.

Social Media Auto Publish Powered By : XYZScripts.com