ಸಖೀಗೀತ 20 : ಎಂ ಕೆ ಇಂದಿರಾ : ಭಾವ ವಿಕಸದ ಕಥನ, ಫಣಿಯಮ್ಮ ಎಂಬ ಹೊಸ ಪುರಾಣ ..

ಎಂ ಕೆ ಇಂದಿರಾ ಅವರ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ಅವರ ತಮ್ಮ ಕಾದಂಬರಿಗಳ್ಳಿ ಚಿತ್ರಿಸಿದ ಬದುಕನ್ನು ಹಾಗೂ ಅದರ ವಿಕಾಸವನ್ನು ಗ್ರಹಿಸುವುದು ಮಹತ್ವದ ಸಂಗತಿ. ತಮ್ಮ ನಲವತ್ತೈದರ ವಯಸ್ಸಿನ ನಂತರ ಬರವಣಿಗೆಯನ್ನು ಆರಂಭಿಸಿದ ಎಂ ಕೆ ಇಂದಿರಾ ಅದುವರೆಗೂ ತಮ್ಮ ಭಾವಕೋಶದಲ್ಲಿ ಕಾಪಿಟ್ಟುಕೊಡಿದ್ದ ಅನುಭವ ಜಗತ್ತನ್ನು ಅದರೆಲ್ಲ ಸೂಕ್ಷ್ಮ ಆಯಾಮಗಳೊಂದಿಗೆ ಅಭಿವ್ಯಕ್ತಿಸಿದ್ದಾರೆ. ತಾವು ಕೇಳಿ ತಿಳಿದುಕೊಂಡ, ಅನುಭವದಲ್ಲಿ ಕಂಡುಕೊಂಡ, ಅರಿವಿನ ಮೂಲಕ ಕಟ್ಟಿಕೊಂಡ ಬದುಕಿನ ದ್ರವ್ಯವನ್ನು ಯಾವ ಪೂರ್ವಗ್ರಹಗಳಿಲ್ಲದೇ ಸಿದ್ಧಾಂತಗಳ ಭಾರವಿಲ್ಲದೇ, ಸೃಜನಶೀಲ ತುಡಿತದಲ್ಲಿ ಅಭಿವ್ಯಕ್ತಿಸುತ್ತ ಹೋಗುವುದು ಎಂ ಕೆ ಇಂದಿರಾ ಅವರ ವೈಶಿಷ್ಟ್ಯ.


ಎಂ ಕೆ ಇಂದಿರಾ ತುಂಬ ಮಹತ್ವಾಕಾಂಕ್ಷೆಯ ಲೇಖಕಿಯಲ್ಲ. ಅಸ್ತಿತ್ವದ ಕುರಿತ ತೀವ್ರ ಪ್ರಶ್ನೆಗಳಾಗಲೀ, ಅವೇಗವಾಗಲೀ ಅವರ ಬರವಣಿಗೆಯಲ್ಲಿ ಕಂಡುಬರುವುದಿಲ್ಲ. ಅವರ ಬರವಣಿಗೆ ಹೊಸಹೊಳೆಗಳನ್ನು ಸೇರಿಸಿಕೊಂಡು ತನ್ನ ಪಾತ್ರವನ್ನು ವಿಸ್ತರಿಸಿಕೊಳ್ಳುತ್ತ ನಿರುಮ್ಮಳವಾಗಿ ಹರಿಯುವ ತುಂಗೆಯ ಚಲನೆಯಂಥದ್ದು. ಸಮಸ್ತ ಜೀವಲೋಕದ ಚೈತನ್ಯವನ್ನು ವಿಕಾಸಗೊಳಿಸುತ್ತ ನಿಧಾನವಾಗಿ ಪಸರಿಸುವ ಬೆಳಗಿನಂಥದ್ದು. ಒಂದು ಜೀವದ ಭಾವವಿಕಾಸವನ್ನು, ಅದರೊಟ್ಟಿಗೆ ಒಂದು ಸಮುದಾಯದ ಆಂತರಿಕ ವಿಕಾಸವನ್ನು ಅದರ ಸಹಜನಡಿಗೆಯ ಮೂಲಕವೇ ಗಮನಿಸುತ್ತ ಹೋಗುವುದು ಅವರ ಕ್ರಮ. ಕ್ರಾಂತಿಯೆಂಬುದು ಅವರ ಪಾಲಿಗೆ ದಿಢೀರ್‍ಆಗಿ ಸಂಭವಿಸುವ ಕ್ರಿಯೆಯಲ್ಲ. ಅದು ಒಂದು ಜೀವವು ಮಾಗುತ್ತ ನಡೆದಂತೆ ಆಗುವ ಆಂತರಿಕ ವಿಕಾಸ. ಅಲ್ಲೊಂದು ನಿಧಾನ ಗತಿಯಿದೆ. ಇಂಥ ವಿಕಾಸವು ಒಂದು ಪರಿಸರದ ಪ್ರಜ್ಞೆಯಲ್ಲೂ ಸಂಭವಿಸುತ್ತದೆ. ಹೆಸರಿಟ್ಟಾಗ ನಿಧಾನವಾಗಿ ಕುದಿ ಆರಂಭವಾಗಿ ಸುತ್ತೆಲ್ಲಾ ಹರಡುತ್ತ ಹದವಾಗಿ ಅನ್ನ ಬೇಯುವಂತೆ ಪರಿವರ್ತನೆಯು ಸ್ಪಷ್ಟವಾಗಿ ಗೋಚರಿಸಲು ಅದರದೇ ಕಾಲಬೇಕು. ‘ಕಾಲಪಕ್ವವಾಗುವುದು’ ಎಂದರೆ ಇದೇ ಅಲ್ಲವೇ? ಇಂಥ ವಿಕಾಸದ ಲಯವನ್ನ ಗ್ರಹಿಸಿ, ಅರಿತು ಕಟ್ಟಿದ ಕಥನವಿದು..


ಎಂ ಕೆ ಇಂದಿರಾರವರ ಕಾದಂಬರಿಗಳು ಕುಟುಂಬ ಪ್ರೇಮದ ಸೌಂದರ್ಯವನ್ನು ಆಪ್ತವಾಗಿ ಚಿತ್ರಿಸುತ್ತದೆ. ತುಂಗಭದ್ರಾ, ಸದಾನಂದದಂತಹ ಕಾದಂಬರಿಗಳು ಇದಕ್ಕೆ ಉದಾಹರಣೆ. ಅವರ ಫಣಿಯಮ್ಮ ಕಾದಂಬರಿ ಕೂಡ ಕುಟುಂಬಗಳ ಕಥೆಯೇ. ಆದರೆ ಸಾಂಸ್ಥಿಕ ಧರ್ಮದ ಕಟ್ಟುಪಾಡುಗಳು ಹಾಗೂ ಅದನ್ನು ಪಾಲಿಸಬೇಕೆಂಬ ಸಾಮಾಜಿಕ ಒತ್ತಡಗಳು ಕುಟುಂಬ ವ್ಯವಸ್ಥೆಯನ್ನು ಕೆಲವೊಮ್ಮೆ ಅಲ್ಲೋಲ ಕಲ್ಲೋಲಗೊಳಿಸುತ್ತವೆ. ಅರಿವಿಲ್ಲದಂತೆ ಅಲ್ಲಿ ಕ್ರೌರ್ಯದ ಎಳೆಯೊಂದು ನುಸುಳಿ ಬದುಕನ್ನು ಕೆಂಗೆಡಿಸುತ್ತದೆ. ಸದಾನಂದ ಹಾಗೂ ಫಣಿಯಮ್ಮ ಕಾದಂಬರಿಗಳ ಎರಡರಲ್ಲೂ ಚಿತ್ರಿಸಿರುವ ವಿಧವೆಯರ ಬದುಕು ಇದನ್ನು ಸೂಚ್ಯವಾಗಿ ಹೇಳುತ್ತದೆ. ನಮ್ಮ ಸಮಾಜದಲ್ಲಿ ಲೆಕ್ಕವಿಲ್ಲದಷ್ಟು ಬಾಲ ವಿಧವೆಯಿದ್ದಾರೆ. ಅವರೆಲ್ಲರ ಬದುಕು ಅಪೂರ್ಣ. ಆದರೆ ಏನು ಮಾಡಲು ಸಾಧ್ಯ? ಎಂದು ಆ ಕುಟುಂಬಗಳ ಹಿರಿಜೀವಗಳು ಮರುಗುತ್ತವೆ. ಇದನ್ನು ತಮ್ಮ ವಿಧಿಯೆಂದು ಸ್ವೀಕರಿಸಿ ಬದುಕುವ ಮುಗ್ಧತೆ ಅದರದು. ಪ್ರಶ್ನಿಸುವ ಪ್ರತಿಭಟಿಸುವ ಸಾಧ್ಯತೆಗಳಿಗೇ ತೆರೆದುಕೊಂಡಿರದ ಸ್ಥಗಿತ ಸಮಾಜವದು. ಗಂಡು ಹೆಣ್ಣಿನ ಸಂಬಂಧಗಳ ಅರ್ಥ ತಿಳಿಯುವ ಮೊದಲೇ ಗಂಡ ತೀರಿಕೊಂಡ ಎಳೆಯ ಹುಡುಗಿಯರನ್ನ ತಲೆ ಬೋಳಿಸಿ, ಕೆಂಪುಸೀರೆಯುಡಿಸಿ, ಒಪ್ಪತ್ತೂಟ ಹಾಗೂ ಮಡಿಕೆಲಸಗಳಲ್ಲಿ ತೊಡಗಿಸುವುದು ಅಂದಿನ ಬ್ರಾಹ್ಮಣ ಸಮುದಾಯಗಳಲ್ಲಿ ಸಾಮಾನ್ಯವಾಗಿತ್ತು. ನಿಯಂತ್ರಿತ ಬದುಕಿನಲ್ಲಿ ಸಹಜ ವಿಕಸನದ ಸಾಧ್ಯತೆಯನ್ನೇ ಕಳೆದುಕೊಂಡ ಹೆಣ್ಣು ಜೀವಿಗಳ ಸಂಕಟದ ಬದುಕು ಕುಟುಂಬದ ಭದ್ರಕೋಟೆಯಲ್ಲೇ ಮೌನವಾಗಿ ಕಳೆದುಹೋಗುತ್ತಿತ್ತು. ಎಂ ಕೆ ಇಂದಿರಾ ತಮ್ಮ ಸದಾನಂದ ಕಾದಂಬರಿಯಲ್ಲಿ ಚಿತ್ರಿಸಿದ ಕಮಲಾ ಹಾಗೂ ಫಣಿಯಮ್ಮ ಕಾದಂಬರಿಯ ಬಾಲ ವಿಧವೆ ಫಣಿಯಮ್ಮ ಇಬ್ಬರೂ ಪರಿಸ್ಥಿತಿಯ ಕೈಗೊಂಬೆಗಳು ಆದರೆ ಇವರಿಬ್ಬರ ಕಾಲ- ಸಂದರ್ಭಗಳು ಬೇರೆ, ಮನೋಭಾವಗಳೂ ಬೇರೆಯೇ. ಸದಾನಂದ ಕಾದಂಬರಿಯ ನಂತರ ಫಣಿಯಮ್ಮ ಕಾದಂಬರಿಯನ್ನು ಬರೆದಿದ್ದರೂ ಫಣಿಯಮ್ಮನ ಕತೆ ನಡೆದ ಕಾಲ ಹಿಂದಿನದು.
ಸ್ತ್ರೀಯರು ಕಟ್ಟಿದ ಕಥನಗಳಲ್ಲಿ ಸ್ತ್ರೀತ್ವದ ಮಾದರಿಯನ್ನು ಗ್ರಹಿಸುವ ನೋಟವೊಂದು ಸ್ತ್ರೀವಾದಿ ವಿಮರ್ಶೆಯ ಮೂಲಕ ಬೆಳೆದುಬಂದಿದೆ.ಎಂ ಕೆ ಇಂದಿರಾರವರ ಫಣಿಯಮ್ಮ ಭಿನ್ನ ಸ್ತ್ರೀ ಮಾದರಿಯೊಂದನ್ನು ಸ್ಥಾಪಿಸುವ ಮೂಲಕ ಅನನ್ಯವೆನಿಸುತ್ತದೆ. ವ್ಯಕ್ತಿಸ್ವಾತಂತ್ರ್ಯವನ್ನು ಪ್ರತಿಪಾದಿಸುವ ಮೂಲಕ ಸಮಾನತೆ ಹಾಗೂ ಸಮಾನ ಅವಕಾಶಗಳಿಗಾಗಿ ಹೋರಾಡುವ ‘ರಾಜಕೀಯ ಪ್ರಜ್ಞೆ’ ಎಪ್ಪತ್ತರ ದಶಕದಾಚೆಗೆ ಕನ್ನಡ ಮಹಿಳಾ ಸಾಹಿತ್ಯವನ್ನು ಪ್ರಭಾವಿಸಿದೆ. ಅದಕ್ಕೂ ಮೊದಲು ತಿರುಮಲಾಂಬಾ, ಆರ್ ಕಲ್ಯಾಣಮ್ಮ, ಶಾಮಲಾ ಬೆಳಗಾಂವ್ಕರ್, ಕೊಡಗಿನ ಗೌರಮ್ಮ ಮೊದಲಾದವರು ಉದಾರ ಮಾನವತಾವಾದದ ಪ್ರೇರಣೆಯಿಂದ ಸ್ತ್ರೀಶಿಕ್ಷಣ, ವಿಧವಾವಿವಾಹ ಮುಂತಾದ ಪ್ರಶ್ನೆಗಳನ್ನು ಮುಂದುವರೆಸಿಕೊಂಡು ಸುಧಾರಣಾವಾದಿ ಆಶಯಗಳನ್ನು ಕಟ್ಟಿದರು. ಇವುಗಳ ಮಧ್ಯೆ ಭಿನ್ನವಾಗಿ ನಿಲ್ಲುವ ಫಣಿಯಮ್ಮ ಸ್ತ್ರೀತ್ವದ ಆಂತರಿಕ ಚೈತನ್ಯವನ್ನು ಸ್ಥಾಪಿಸುವಂತಹ ಕಾದಂಬರಿ. ಇಲ್ಲಿ ಲೇಖಕಿಗೆ ‘ಪೊಲಿಟಿಕಲ್ ಕರೆಕ್ಟ್‍ನೆಸ್’ಗಿಂತ ತನ್ನ ಅಂತಃಸತ್ವದ ಮೂಲಕವೇ ಪರಿಸರದ ಮಿತಿಗಳನ್ನು ಮೀರುವ ಹೆಣ್ತನದ ಚೈತನ್ಯದ ದರ್ಶನ ಮುಖ್ಯವಾಗುತ್ತದೆ. ನಿಧಾನ ಶೃತಿಯಲ್ಲಿ ಹಂತ ಹಂತವಾಗಿ ವಿಕಸಿತವಾಗುವ ಜೀವವು ಕೊನೆಯಲ್ಲಿ ತನ್ನ ಕಾಣ್ಕೆಯೊಂದನ್ನು ಅಚ್ಚೊತ್ತುವಂತೆ ಮಾಡುತ್ತದೆ. ಪುಟ್ಟದೇಹದ ಫಣಿಯಮ್ಮನ ಮನೋವಿಕಾಸದ ವಿಸ್ತಾರ ಅಂತಹದು. ಅಣುವಿನೊಳಗಿನ ವಿರಾಟ್ ಚೇತನದಂತೆ ಫಣಿಯಮ್ಮನ ವ್ಯಕ್ತಿತ್ವವು ತಮ್ಮ ಅಸೀಮ ಸಾಧ್ಯತೆಗಳಿಂದಾಗಿ ಬೆರಡು ಮೂಡಿಸುತ್ತದೆ.


ಬಾಲ್ಯದಲ್ಲಿಯೇ ಗಂಡನನ್ನು ಕಳೆದುಕೊಂಡು ಕತ್ತಲಕೋಣೆ ಸೇರುವ ಫಣಿಯಮ್ಮ ಮೈನೆರೆದ ಕೂಡಲೇ ಕೇಶಮುಂಡನಕ್ಕೊಳಗಾಗುತ್ತಾಳೆ. ತನ್ನ ದೇಹ ಹಾಗೂ ಮನಸ್ಸಿನ ಮೇಲೆ ನಡೆಯುವ ಈ ಕ್ರೌರ್ಯದ ಅರ್ಥತಿಳಿಯುವ ಮೊದಲೇ ಆಕೆ ಮಡಿಹೆಂಗಸರ ಸಾಲಿಗೆ ಸೇರಿಹೋಗುತ್ತಾಳೆ. “ಬೆಳಗಿನ ಜಾವದಿಂದ ಮಕ್ಕಳಿಗೆ ಎರೆಯುವದು, ಹೊರ ಕೆಲಸ ಮುಗಿದ ಮೇಲೆ ದೇವರಪೂಜೆ, ತುಳಸಿಪೂಜೆ, ಅಚಮನ, ಜಪ, ಪಾರಾಯಣ…. ಎರಡು ಉದ್ದರಣೆ ತೀರ್ಥ ತೆಗೆದುಕೊಂಡಳೆಂದರೆ ಮುಗಿಯಿತು. ಇಡೀ ದಿನ ಸಂಜೆಯವರೆಗೂ ಮಡಿಕೆಲಸವೇ ಇರುತ್ತಿತ್ತು. ಹೆಚ್ಚು ಹೆರಿ, ಕೆರಿ, ಸೋಸು, ಬೀಸು…… ಆ ತಾರುಣ್ಯದ ಪುಟ್ಟ ಶರೀರದಲ್ಲಿ ಯಾವ ದೈವಶಕ್ತಿ ಇರುತ್ತಿತ್ತೋ… ಒಂದಿಷ್ಟು ಆಯಾಸಮಾಡಿ ಕೊಳ್ಳದೆ, ಆತುರಪಡದೆ, ಚೆಲ್ಲದೆ, ಒಕ್ಕದೆ, ಶುಭ್ರವಾಗಿ ಎಲ್ಲ ಕೆಲಸ ಮಾಡಿ ಮುಗಿಸುವಳು” ಕೆಲಸವೆಂಬುದು ಅವಳಿಗೊಂದು ಲೀಲೆ! ಯಾವ ಸ್ವಾರ್ಥವಿಲ್ಲದೇ, ಮೋಹವಿಲ್ಲದೇ ಸಂಸಾರವನ್ನು ಪೊರೆಯುವ ತಾತ್ಪರತೆ ಅವಳ ಸಹಜ ಸ್ವಭಾವ. ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಹುರಿಗಾಳು ಅವಲಕ್ಕಿ, ಅರಳುಹಿಟ್ಟುಗಳ ಮಧ್ಯೆ ಅವಳದು ಧ್ಯಾನದಂತಹ ಬದುಕು. ಅರೆಗಳಿಗೆ ಬಿಡುವು ಒದಗಿದರೆ ಜ¥ಮಣಿ ಜರುಗಿಸುವ ಬೆರಳುಗಳು. ಇದು ಕಾದಂಬರಿ ಕಟ್ಟಿಕೊಡುವ ಫಣಿಯಮ್ಮನ ಚಿತ್ರ. ತಾನಿದ್ದ ಪುಟ್ಟ ಜಗತ್ತನ್ನೇ ತನ್ನ ಅಂತರ್ಯದ ಬೆಳಕಿನಿಂದ ಬೆಳಗುವ ಫಣಿಯಮ್ಮ ತಪಸ್ವಿನಿಯ ಹಾಗೆ ಬದುಕಿದಳೆಂಬುದು ಕಾದಂಬರಿಯ ಧ್ವನಿ. ಭಾರತೀಯ ಪರಂಪರೆಯಲ್ಲಿ ಸ್ತ್ರೀತ್ವಕ್ಕಿರುವ ಭಿನ್ನ ಆಯಾಮವೊಂದನ್ನು ಫಣಿಯಯಮ್ಮ ಪ್ರತಿನಿಧಿಸುತ್ತಾಳೆ. ಬದುಕಿನಲ್ಲಿ ಬೆಂದು ಪಾಕಗೊಳ್ಳುವ ಪಕ್ವ ವ್ಯಕ್ತಿತ್ವ ಸಾಧಿಸುವ ಎತ್ತರಗಳ ಕಥನವಿದು. ಫಣಿಯಮ್ಮ ತನಗೊದಗಿದ ಬದುಕನ್ನು ಪ್ರತಿಭಟಿಸದೇ ತನ್ನ ಎಲ್ಲೆಗಳನ್ನು ಮೀರುತ್ತಾಳೆ. ಅದನ್ನು ದಾಟಿ ಮುನ್ನಡೆಯುತ್ತಾಳೆ ಇದು ಭಾರತೀಯ ಸ್ತ್ರೀ ಪರಂಪರೆ ಕಾಣಿಸಿದ ಅಧ್ಯಾತ್ಮಿಕ ಆಯಾಮ.


ಫಣಿಯಮ್ಮನಿಗೊದಗಿದ ವೈಧವ್ಯ ಅವಳ ಆಯ್ಕೆಯಲ್ಲ ಅದು ಅವೇ ಮೇಲೆ ಹೇರಲ್ಪಟ್ಟದ್ದು. ಆದರೆ ಫಣಿಯಮ್ಮನ ಚೈತನ್ಯದ ವಿಕಾಸದಲ್ಲಿ ವೈಧವ್ಯವು ಒಂದು ಮಿತಿಯಾಗುವುದಿಲ್ಲ. ಆಕೆಗೆ ಸಂಸಾರದ ಬಂಧನವಿಲ್ಲದಿರುವುದರಿಂದಲೇ ಸರ್ವರಿಗೂ ಬೇಕಾದ ವ್ಯಕ್ತಿಯಾಗಲು ಸಾಧ್ಯವಾಯಿತು. ಆಕೆಗೆ ಜೈವಿಕ ತಾಯ್ತನವು ಅಸಾಧ್ಯವಾದದ್ದರಿಂದಲೇ ಅವಳ ವ್ಯಕ್ತಿತ್ವವೇ ತಾಯ್ತನದ ಮನಸ್ಥಿತಿಯಿಂದ ಅರಳಿತು. ಫಣಿಯಮ್ಮನ ವ್ಯಕ್ತಿತ್ವವೇ ವಾತ್ಸಲ್ಯದ ವಿಸ್ತರಣೆಯಂತೆ ಇಡೀ ಕಾದಂಬರಿಯುದ್ದಕ್ಕೂ ಕಂಡುಬರುತ್ತದೆ. ಈ ವಿಸ್ತರಣೆಯ ಚುಡಿ-ಹುದಿ, ಜಾತಿಭಾವನೆಗಳನ್ನೆಲ್ಲ ದಾಟಲೂ ಮೀಟುಗೋಲಾಗುತ್ತದೆ. ಅಸ್ಪøಶ್ಯಳಾದ ಹಸಲರ ಭೈರನ ಮಗಳು ಸಿಂಕಿ ಹೆರಿಗೆ ಬೇನೆಯಲ್ಲಿ ಜೀವನ್ಮರಣಗಳ ಮಧ್ಯೆ ಒದ್ದಾಡುತ್ತಿರುವಾಗ ತನ್ನ ಮಡಿಯನ್ನು ಮೀರಿ ಅವಳ ನೆರವಿಗೆ ಧಾವಿಸುತ್ತಾಳೆ. ಸಮಾಜದ ಶ್ರೇಣೀಕರಣ ವ್ಯವಸ್ಥೆಯಾಗಲೀ, ಕುಟುಂಬಸ್ಥರಿಂದ ತನಗೊದಗಬಹುದಾದ ವಿರೋಧವಾಗಲೀ ಆ ಕ್ಷಣಕ್ಕೆ ಆಕೆಯನ್ನು ಕಾಡುವುದೇ ಇಲ್ಲ. ಜಪಮಣಿಯನ್ನು ತಿರುಗಿಸುವ ಕೈಗಳು ಸಲಿಸಾಗಿ ಸಿಂಕಿಯ ಗರ್ಭಕೋಶವನ್ನು ಪ್ರವೇಶಿಸುತ್ತದೆ. ಅಲ್ಲಿಗೆ ಬ್ರಾಹ್ಮಣ್ಯದ ಅವರಣ್ನ ಕಳಚಿ ಹೆಣ್ತನ ಬಯಲಾಗುತ್ತದೆ. ಕಾದಂಬರಿಯ ಕೊನೆಯಲ್ಲಿ ಬರುವ ದಾಕ್ಷಾಯಣಿಯ ಪ್ರಸಂಗದಲ್ಲೂ ಇಂಥದೇ ವ್ಯಕ್ತಿತ್ವದ ಹೊರಚಾಚುವಿಕೆಯನ್ನು ಗಮನಸಬಹುದು. ಹದಿನಾರರ ಹರೆಯಕ್ಕೇ ವಿಧವೆಯಾಗುವ ದಾಕ್ಷಾಯಣಿ ಕೋಶಮುಂಡಸಿಕ್ಕೊಳಗಾಗಲು, ಮಡಿ ಹಿಡಿದು ಒಪ್ಪತ್ತೂಟ ಮಾಡಲು ನಿರಾಕರಿಸುತ್ತಾಳೆ. ಇಂಥ ಸಂದರ್ಭದಲಿ ಫಣಿಯಮ್ಮ ದಾಕ್ಷಾಯಣಿಯನ್ನು ಬೆಂಬಲಿಸುವ ಮೂಲಕ ಸಂಪ್ರದಾಯಸ್ಥರನ್ನು ದಂಗಾಬಡಿಸುತ್ತಾಳೆ. ಸಂಪ್ರದಾಯದ ಕುರುಡು ಆಚರಣೆಗಿಂತ ಮಾನವೀಯತೆ ಮುಖ್ಯ. ಯಾವ ಆಚರಣೆಯೂ ಒತ್ತಾಯದ ಹೇರಿಕೆಯಾಗಬಾರದೆಂದು ಫಣಿಯಮ್ಮನಿಗೆ ಸಹಜವಾಗಿ ಅನಿಸುತ್ತದೆ. ಇದು ಹೊರಗಿನಿಂದ ಹೇರಿಕೊಂಡ ಬದಲಾವಣೆಯಲ್ಲ ಅವಳ ವ್ಯಕ್ತಿತ್ವದ ಸಹಜ ಹಿಗ್ಗುವಿಕೆಯ ಫಲವಿದು. ಇಂಥ ಹಿಗ್ಗುವಿಕೆಯೇ ಸಾಂಪ್ರದಾಯಿಕ ಆವರಣಗಳನ್ನುಛಿದ್ರಗೊಳಿಸುತ್ತದೆ. ಫಣಿಯಮ್ಮನ ವ್ಯಕ್ತಿತ್ವ ಬಯಲಾಗುತ್ತ ನಡೆಯುವಲ್ಲಿ ಅಧ್ಯಾತ್ಮಿಕ ಆಯಾಮವು ಕಾಣಿಸುತ್ತದೆ. ಅವಳ ಸುತ್ತಲಿನ ವ್ಯಕ್ತಿಗಳೂ ಸಹ ಅವಳ ಈ ಪ್ರಜ್ಞೆಯನ್ನು ಗುರುತಿಸುವುದು ಅವಳ ವ್ಯಕ್ತಿತ್ವದ ಗೆಲುವು.


ದೈಹಿಕ ದಾಂಧೆಗಳ ಅರಿವೇ ಇಲ್ಲದಂತೆ ಬೆಳೆದ ಫಣಿಯ್ಮ ಪುಟ್ಟಾಜೋಯಿಸ ಹಾಗೂ ಸುಬ್ಬಿಯರ ಕಳ್ಳಪ್ರಣಯವನ್ನು ನೋಡಿ ಹೇಸುತ್ತಾಳೆ. ಹೆರಿಗೆ ಮಾಡಿಸುವ ಸಂದರ್ಭದಲ್ಲಿ ಸಹ ಸ್ಪಷ್ಟಿಕ್ರಿಯೆಯ ಹಿಂದಿನ ಸಂಕಟ ಹಾಗೂ ಹೊಲಸು ಅವಳನ್ನು ಸಂಸಾರದಿಂದ ಮುಖಗೊಳಿಸುತ್ತದೆ. ಗಂಡು-ಹೆಣ್ಣಿನ ಸಂಬಂಧದ ಹಿಂದೆ ಕೆಲಸ ಮಾಡುವ ಪಾವಿತ್ರ್ಯ-ಪಾವಿವ್ಯತ್ವದ ಕಲ್ಪನೆಗಳನ್ನು ಅವಳ ಮನಸ್ಸು ತಣ್ಣನೆ ಪ್ರತಿರೋಧಿಸುತ್ತದೆ. ಗಂಡಸರು ಸಾವಿರ ಹೆಂಗಸರನ್ನು ಕೂಡಿದರೂ ಸ್ನಾನಮಾಡಿ ಜನಿವಾರ ಬದಲಾಯಿಸಿದರೆ ಶುದ್ಧ. ಹೆಣ್ಣು ಅಪ್ಪಿ ತಪ್ಪಿ ಪರಪುರುಷನನ್ನು ನೋಡಿದರೆ ಕುಲಟೆ! ಪುರಾಣದ ರೇಣುಕೆ, ಅಹಲ್ಯೆಯರ ಕಥನಗಳೂ ಇದನ್ನೇ ಹೇಳುತ್ತವೆ.. ಕದ್ದು ಮುಚ್ಚಿ ಜನಿವಾರ ಬದಲಾಯಿಸುವ ಬಂಧುವೊಬ್ಬನನ್ನು ಕಂಡಾಗ ಫಣಿಯಮ್ಮನಲ್ಲಿ ಜಿಜ್ಞಾಸೆ ಆರಂಭವಾಗುತ್ತದೆ. ಸಂಸಾರದ ಎಲ್ಲ ಜಂಜಡಗಳನ್ನು ದಾಟಿ ಕಾಶಿಗೆ ಹೋಗಿ ಬದುಕಲೇ? ಎಂತಲೂ ಫಣಿಯಮ್ಮ ಯೋಚಿಸುತ್ತಾಳೆ. ಆದರೆ, ರೈಲು ಚಾರ್ಜಿಗೆ ಯಾರಲ್ಲಿ ಕೈಯೊಡ್ಡಲಿ? ತನ್ನದಾಗಿ ಜಗತ್ತಿನಲ್ಲಿ ಒಂದು ಕಾಸು ಸಹ ಇಲ್ಲ! ಎಂಬ ವಾಸ್ತವ ಅವಳನ್ನು ಕಾಡುತ್ತದೆ. ದಣಿಯರಿಯದೆ ದುಡಿದ ಜೀವ ಆರ್ಥಿಕವಾಗಿ ‘ಶೂನ್ಯ’ ವಾಗಿಯೇ ಉಳಿಯುತ್ತಾಳೆ. ಈ ಎಲ್ಲ ಲೌಕಿಕ ಸಂಗತಿಗಳು ಅವಳನ್ನು ಕೆರಳಿಸುವುದಿಲ್ಲ ಬದಲಿಗೆ ಅರಳಿಸುತ್ತ ಹೋಗುತ್ತವೆ. ಸೇವೆ,ಔದಾರ್ಯ, ವಾತ್ಸಲ್ಯಗಳಲ್ಲಿ ಸಾಫಲ್ಯ ಕಾಣುವ ಫಣಿಯಮ್ಮನಲ್ಲಿ ತಾನು ದಮನಕ್ಕೊಳಗಾದೆ ಎಂಬ ಭಾವವಿಲ್ಲ! ಸುಖದುಃಖದ ಸೀಮಾ ರೇಖೆಯಿಂದ ಹೊರಗಾಗುವ ಫಣಿಯಮ್ಮ ಬದುಕಿನೊಳಗಿದ್ದು ಬದುಕಿಗಂಟದೇ ಉಳಿಯುತ್ತಾಳೆ. ಸಮತಲದಲ್ಲಿ ಹರಿಯುವ ನದಿಯಂತೆ ಸದ್ದಿಲ್ಲದೆ ಚಲಿಸುವ ಅವಳ ಪ್ರಜ್ಞೆ ಸ್ಮಿತಪ್ರಜ್ಞತೆಯ ಎತ್ತರವನ್ನು ತಲುಪುತ್ತದೆ. ಯಾರ ದಮನಕ್ಕೂ ನಿಲುಕದ ಫಣಿಯಮ್ಮನ ಆಂತರಿಕ ಚೈತನ್ಯ ತನ್ನಷ್ಟಕ್ಕೇ ಸ್ವಯಂಪೂರ್ಣ. ತನ್ನ ನೂರಹನ್ನೆರಡು ವರ್ಷದ ತುಂಬು ಬಾಳಿನ ಕೊನೆಯಲ್ಲಿ ಪುಟ್ಟ ಬಿಳಿ ಹಂಸದಂತೆ ಚಟ್ಟದ ಮೇಲೆ ಮಲಗಿದ ಫಣಿಯಮ್ಮ “ಕುಂಭ ಬೆಂದಿತ್ತು – ಹಂಸೆ ಹಾರಿತ್ತು ಗುಹೇಶ್ವರಾ” ಎಂಬ ಅಲ್ಲಮ ಪ್ರಭುವಿನ ಉಕ್ತಿಯನ್ನು ನೆನಪಿಸುತ್ತಾಳೆ.


ಕಾದಂಬರಿಯ ಕೊನೆಯ ಭಾಗದಲ್ಲಿ ಫಣಿಯಮ್ಮ ಕಾಲ್ಪನಿಕ ಪಾತ್ರವಲ್ಲ ಬದಲಿಗೆ ವಾಸ್ತವದ ಮರುನಿರೂಪಣೆ ಎಂಬ ಮಾತು ಬರುತ್ತದೆ. ಅವಳು ಬದುಕಿದ ಪರಿಸರ, ಮಲೆನಾಡಿನ ಆ ಊರುಗಳು, ದಾರಿಗಳು, ಹರಿವ ಹೊಳೆ ಎಲ್ಲವೂ ಸ್ಫೋಟವಾಗಿ ಬಿಚ್ಚಿಕೊಳ್ಳುತ್ತವೆ. ಫಣಿಯಮ್ಮನಂತಹ ಸ್ತ್ರೀಯನ್ನು ರಾಮಾಯಣ, ಮಹಾಭಾರತ, ಭಾಗವತ ಎಲ್ಲೂ ಕಾಣಲೂ ಸಾಧ್ಯವಿಲ್ಲ ಎಂದು ಫಣಿಯಮ್ಮನ ಬಂಧುವೊಬ್ಬರು ಉದ್ಭರಿಸುತ್ತಾರೆ. ಫಣಿಯಮ್ಮ ಚರಿತ್ರೆ ಭಾಗವೂ ಹೌದು. ಅವಳ ಕಥನ ಸ್ವತಂತ್ರ ಪುರಾಣವೂ ಹೌದು. ವಾಸ್ತವ ಹಾಗೂ ಕಲ್ಪನೆಯ ಸೃಜನಶೀಲ ಮರುನಿರೂಪಣೆಯಲ್ಲಿ ಅದು ನಮ್ಮೊಳಗೆ ಬೆಳೆಯುತ್ತದೆ.

Comments are closed.

Social Media Auto Publish Powered By : XYZScripts.com