ಕ್ರಿಕೆಟ್ : ವಾರ್ನರ್ ಅಬ್ಬರದ ಶತಕ : ಕೊಹ್ಲಿ ಪಡೆಯ ಜಯದ ಓಟಕ್ಕೆ ಬ್ರೇಕ್ ಹಾಕಿದ ಆಸ್ಟ್ರೇಲಿಯಾ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ  ನಾಲ್ಕನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತದ ವಿರುದ್ಧ 21 ರನ್ ಗೆಲುವು ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 50 ಓವರುಗಳಲ್ಲಿ 334 ರನ್ ಬೃಹತ್ ಮೊತ್ತ ಸೇರಿಸಿತು. ಭರ್ಜರಿ ಶತಕ ಗಳಿಸಿದ ಆರಂಭಿಕ ಬ್ಯಾಟ್ಸಮನ್ ಡೇವಿಡ್ ವಾರ್ನರ್ 124 ರನ್ ಬಾರಿಸಿದರು. ವಾರ್ನರ್ 12 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿದರು.

ಮತ್ತೋರ್ವ ಆರಂಭಿಕ ಆಟಗಾರ ಆ್ಯರನ್ ಫಿಂಚ್ 94 ರನ್ ಗಳಿಸಿ ಶತಕ ವಂಚಿತರಾದರು. ಕೊನೆಯ ಓವರುಗಳಲ್ಲಿ ಮಿಂಚಿನ ಬ್ಯಾಟಿಂಗ್ ನಡೆಸಿದ ಪೀಟರ್ ಹ್ಯಾಂಡ್ಸಕಾಬ್ 30 ಎಸೆತಗಳಲ್ಲಿ 43 ಬಾರಿಸಿದರು. ಭಾರತದ ಪರ ಉಮೇಶ್ ಯಾದವ್ 4 ವಿಕೆಟ್ ಕಬಳಿಸಿದರು.

Image result for bengaluru aus ind 4th odi

ಗುರಿಯನ್ನು ಬೆನ್ನತ್ತಿದ ಭಾರತಕ್ಕೆ ರೋಹಿತ್ ಶರ್ಮಾ (65) ಹಾಗೂ ಅಜಿಂಕ್ಯ ರಹಾನೆ (53) ಮೊದಲ ವಿಕೆಟ್ ಜೊತೆಯಾಟದಲ್ಲಿ 106 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರು. ತಂಡದ ಮೊತ್ತ 135 ಆಗಿದ್ದಾಗ ರೋಹಿತ್ ಶರ್ಮಾ ರನೌಟ್ ಆಗಿ ಹೊರನಡೆದರು. ನಾಯಕ ಕೊಹ್ಲಿ 21 ರನ್ ಗಳಿಸಿ ಕುಲ್ಟರ್ ನೈಲ್ ಗೆ ವಿಕೆಟ್ ಒಪ್ಪಿಸಿದರು.

ಹಾರ್ದಿಕ್ ಪಾಂಡ್ಯ ಹಾಗೂ ಕೇದಾರ ಜಾಧವ್ 4ನೇ ವಿಕೆಟ್ ಗೆ 78 ರನ್ ಕಲೆಹಾಕಿದರು. ಆದರೆ ಕೇದಾರ್ ಜಾಧವ್ 67 ರನ್ ಹೋರಾಟ ವ್ಯರ್ಥವಾಯಿತು. ಕೊನೆಯಲ್ಲಿ ಮನೀಶ್ ಪಾಂಡೆ 33 ರನ್ ಬಾರಿಸಿದರಾದರೂ ಗೆಲುವು ತಂದುಕೊಂಡಲು ಸಾಧ್ಯವಾಗಲಿಲ್ಲ. ಎಮ್ ಎಸ್ ಧೋನಿ 13 ರನ್ ಗಳಿಸಿ ಕೇನ್ ರಿಚರ್ಡಸನ್ ಎಸೆತದಲ್ಲಿ ಬೋಲ್ಡ್ ಆಗಿ ಹೊರನಡೆದರು.

Image result for bengaluru aus ind 4th odi

ಭಾರತ 50 ಓವರುಗಳಲ್ಲಿ 8 ವಿಕೆಟ್ ಕಳೆದುಕೊಂಡು 313 ರನ್ ಗಳಿಸಲಷ್ಟೇ ಶಕ್ತವಾಗಿ 21 ರನ್ ಸೋಲೊಪ್ಪಿಕೊಂಡಿತು. ಸತತ 9 ಏಕದಿನ ಪಂದ್ಯಗಳನ್ನು ಗೆದ್ದು ಬೀಗುತ್ತಿದ್ದ ಕೊಹ್ಲಿ ಪಡೆಯ ಗೆಲುವಿನ ಓಟಕ್ಕೆ ಕಾಂಗರೂಗಳು ಬ್ರೇಕ್ ಹಾಕಿದ್ದಾರೆ.

ಆಸ್ಟ್ರೇಲಿಯಾ ಈ ಗೆಲುವಿನೊಂದಿಗೆ 5 ಪಂದ್ಯಗಳ ಏಕದಿನ ಸರಣಿ 3-1 ಆಗಿದೆ. ಮೂರು ಪಂದ್ಯಗಳಲ್ಲಿ ಸೋಲನುಭವಿಸಿದ್ದ ಆಸ್ಟ್ರೇಲಿಯಾ ಈ ಜಯದೊಂದಿಗೆ ತನ್ನ ಆತ್ಮವಿಶ್ವಾಸವನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದೆ. 5ನೇ ಪಂದ್ಯ ಅಕ್ಟೋಬರ್ 1 ರಂದು ನಾಗ್ಪುರದಲ್ಲಿ ನಡೆಯಲಿದೆ.

Comments are closed.

Social Media Auto Publish Powered By : XYZScripts.com