ರವಿ ಬೆಳಗೆರೆ ಸಾರಥ್ಯದ ‘ಹಾಯ್ ಬೆಂಗಳೂರ್’ ಮುಚ್ಚುತ್ತಿದೆಯಾ? ಹೌದೆನ್ನುತ್ತಿವೆ ಮೂಲಗಳು

ಖ್ಯಾತ ಪತ್ರಕರ್ತ ರವಿ ಬೆಳಗೆರೆ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಪತ್ರಿಕೆ ‘ಹಾಯ್ ಬೆಂಗಳೂರ್’ ಮುಚ್ಚುತ್ತಿದೆಯಾ? ಹೌದೆನ್ನುತ್ತಿವೆ ಪತ್ರಿಕೋದ್ಯಮದ ಪಡಸಾಲೆಗಳು. ದಶಕಗಟ್ಟಲೆ ಅನೇಕ ಲೇಖಕರಿಗೆ ಜನ್ಮ ಮತ್ತು ಅವಕಾಶ ಕೊಟ್ಟ ಈ ಪತ್ರಿಕೆ ಮುಚ್ಚುವುದಕ್ಕೆ ಏನು ಕಾರಣ?

ಹಾಯ್ ಬೆಂಗಳೂರ್ ಅಂದರೆ ಅಲ್ಲಿ ಅಪರಾಧ ಲೋಕದ ಸುದ್ದಿಗಳಿಗೆ ಪ್ರಥಮ ಆದ್ಯತೆ. ಅದೆಷ್ಟೋ ಸಲ ಬೆಳಕೇ ಕಾಣಲಸಾಧ್ಯವಾಗಿದ್ದ ಕರಾಳ ಕತೆಗಳನ್ನೆಲ್ಲಾ ಹಾಯ್ ಬೆಂಗಳೂರ್ ಎಂಬ ಕಪ್ಪು ಸುಂದರಿ ಅನಾವರಣಗೊಳಿಸಿದ್ದಾಳೆ. ಅನಂತ ಚಿನಿವಾರ್, ಜೋಗಿ, ನಾಗತಿಹಳ್ಳಿ ಚಂದ್ರಶೇಖರ್, ಉದಯ ಮರಕಿಣಿ ಸೇರಿದಂತೆ ಅನೇಕ ಪ್ರತಿಭೆಗಳು ಹಾಯ್ ಬೆಂಗಳೂರ್ ನಲ್ಲಿನ ತಮ್ಮ ಅಂಕಣಗಳಿಂದಲೇ ಒಂದು ದೊಡ್ಡ ಅಭಿಮಾನಿ ಬಳಗವನ್ನು ಗಳಿಸಿದ್ದೂ ಇದೆ.

ರವಿ ಬೆಳಗೆರೆ ತಾವೇ ಖುದ್ದು ಬರೆಯುವುದಲ್ಲದೇ ಉಳಿದ ಪ್ರತಿಭೆಗಳಿಂದಲೂ ಹಾಯ್ ಬೆಂಗಳೂರ್ ಗೆ ಬರೆಸುತ್ತಿದ್ದರು. ಇದರ ಜೊತೆಜೊತೆಗೆ ಓ ಮನಸೇ ಎನ್ನುವ ಪಾಕ್ಷಿಕ ಕೂಡಾ ಬರುತ್ತಿದ್ದು ಎರಡೂ ಪತ್ರಿಕೆಗಳ ಸರ್ಕ್ಯುಲೇಶನ್ ಉತ್ತಮವಾಗಿಯೇ ಇದೆ.

ಆದರೆ ಇತ್ತೀಚೆಗೆ ಸಂಪಾದಕ ರವಿ ಬೆಳಗೆರೆ ಆರೋಗ್ಯ ಪದೇ ಪದೇ ಕೈಕೊಡುತ್ತಿದೆ. ಅವರ ಮಕ್ಕಳ್ಯಾರಿಗೂ ಪತ್ರಿಕೆಗಳನ್ನು ಮುಂದುವರೆಸುವ ಆಸಕ್ತಿಯಿಲ್ಲ ಎನ್ನಲಾಗಿದೆ. ಹಾಗಾಗಿ ಸೂಕ್ತ ನಾಯಕತ್ವದ ಕೊರತೆ ಹಾಯ್ ಬೆಂಗಳೂರ್ ನ್ನು ಮುಂದಿನ ದಿನಗಳಲ್ಲಿ ಕಾಡುವ ಸಾಧ್ಯತೆ ಇದೆ. ಹಾಗಾಗಿ ಪತ್ರಿಕೆ ಉತ್ತಮವಾದ ಸ್ಥಿತಿಯಲ್ಲಿದ್ದಾಗಲೇ ಅದನ್ನು ಮುಚ್ಚಿಬಿಡುವುದು ಉತ್ತಮ ಎನ್ನುವ ಚರ್ಚೆಗಳು ಬೆಳಗೆರೆ ಆಪ್ತವಲಯದಲ್ಲಿ ನಡೆದಿವೆ ಎನ್ನಲಾಗಿದೆ.

ಹಾಯ್ ಬೆಂಗಳೂರ್ ತನ್ನದೇ ಆದ ಓದುಗ ಬಳಗ, ಅಭಿಮಾನಿ ವೃಂದವನ್ನು ಗಳಿಸಿದ ಪತ್ರಿಕೆ. ಈಗ ಪತ್ರಿಕೆ ಮುಚ್ಚುತ್ತಿದೆ ಎನ್ನುವ ಸುದ್ದಿ ಅನೇಕರಿಗೆ ಶಾಕ್ ನೀಡಿರುವುದಂತೂ ಸತ್ಯ. ರವಿ ಬೆಳಗೆರೆ ಒಡೆತನದ ಪ್ರಾರ್ಥನಾ ಶಾಲೆಯನ್ನು ಅವರ ಮಗ ಆದಿತ್ಯೋದಯ ಕರ್ಣ ನೋಡಿಕೊಳ್ಳುತ್ತಿದ್ದು ಹೆಣ್ಣುಮಕ್ಕಳಾದ ಚೇತನಾ ಮತ್ತು ಭಾವನಾ ಮದುವೆಯಾಗಿ ತಂತಮ್ಮ ಸಂಸಾರದಲ್ಲಿ ನೆಮ್ಮದಿಯಿಂದಿದ್ದಾರೆ.

ವಿ.ಸೂ: ಇದು ಪತ್ರಿಕಾ ವಲಯದಲ್ಲಿ ಓಡಾಡುತ್ತಿರುವ ಸುದ್ದಿಯಷ್ಟೇ. ಇದನ್ನು ರವಿ ಬೆಳಗೆರೆಯಾಗಲೀ ಅಥವಾ ಹಾಯ್ ಬೆಂಗಳೂರ್ ವ್ಯವಸ್ಥಾಪಕ ವಲಯವಾಗಲೀ ಖಚಿತಪಡಿಸಿರುವುದಿಲ್ಲ.

Comments are closed.