“ಇದು ನನ್ನ ಷರಾ” 1: ಯೋಗೇಶ್ ಮಾಸ್ಟರ್ ಕಾಲಂ, ‘ಭಕ್ತರಿಗ್ಯಾಕೆ ಬಾಧೆ ?’

ದಿಲ್ಲಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಕೇದಾರ್ ಕುಮಾರ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ದುರ್ಗಾ ದೇವತೆ ಬಗ್ಗೆ ಅವಮಾನಕರ ಹಾಗೂ ಅಶ್ಲೀಲ ಪದ ಬಳಕೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದ್ದು ಅವನ ವಿರುದ್ಧವಾಗಿ ಬಿಜೆಪಿಯ ಅಂಗಸಂಸ್ಥೆಯಾದ ಎನ್ ಡಿ ಟಿ ಎಫ್ ಲೋಧಿ ಕಾಲನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ಭಾರತೀಯ ಪುರಾಣಗಳಲ್ಲಿ ದುರ್ಗಾ ಅತೀ ಹೆಚ್ಚು ಮಾದಕ ಸಾಧಕಿ ಎಂದು ಹೇಳಿರುವುದಾಗಿ ವರದಿಯಾಗಿದೆ. ಕೇದಾರ್ ಕುಮಾರ್ ಅದ್ಯಾವ ಭಾಷೆಯಲ್ಲಿ ಬರೆದುಕೊಂಡಿದ್ದರೋ, ಯಾವ ನುಡಿಗಟ್ಟುಗಳನ್ನು ಬಳಸಿದ್ದರೋ; ಮೂಲವಂತೂ ಕಾಣೆ.

ಆದರೆ ದುರ್ಗಾ ಅತೀ ಹೆಚ್ಚು ಮಾದಕ ಸಾಧಕಿ ಎಂದು ಹೇಳಿಕೊಂಡಿರುವುದರಲ್ಲಿ ನಮ್ಮ “ಪೌರಾಣಿಕ ಆಧಾರಗಳಲ್ಲೇ” ತಪ್ಪಾದರೂ ಏನು?

ತತಃ ಕ್ರುದ್ಧಾ ಜಗನ್ಮಾತಾ ಚಂಡಿಕಾ ಪಾನಮುತ್ತಮಮ್| ಪಪೌ ಪುನಃ ಪುನಶ್ಚೈವ ಜಹಾಸಾರುಣಲೋಚನಾ ||೩೪|| (ದುರ್ಗಾಸಪ್ತಶತೀ/ಮಹಿಷಾಸುರವಧೆ)

ಅನಂತರ ಕೋಪಗೊಂಡಿದ್ದ ಜಗನ್ಮಾತೆ ಚಂಡಿಕೆಯು ಅತ್ಯುತ್ಕೃಷ್ಟವಾದ ಪಾನವನ್ನು ಪುನಃ ಪುನಃ ಕುಡಿಯುತ್ತ ಕೆಂಗಣ್ಣುಳ್ಳವಳಾಗಿ ಅಟ್ಟಹಾಸ ಮಾಡಿದಳು.

ನನರ್ದ ಚಾಸುರಃ ಸೋಪಿ ಬಲವೀರ್ಯಮದೋದ್ಧತಃ| ವಿಷಾಣಾಭ್ಯಾಂ ಚ ಚಿಕ್ಷೇಪ ಚಂಡಿಕಾಂ ಪ್ರತಿ ಭೂಧರಾನ್ ||೩೫||

ಬಲದಿಂದಲೂ ವೀರ್ಯದಿಂದಲೂ ಮದಿಸಿ ಉದ್ಧತನಾಗಿದ್ದ ಆ ರಾಕ್ಷಸನೂ ಕೂಡ ಗರ್ಜಿಸಿದನು; ಮತ್ತು ಚಂಡಿಕೆಯ ಮೇಲೆ ಪರ್ವತಗಳನ್ನು ತನ್ನ ಕೊಂಬುಗಳಿಂದ ಕಿತ್ತೆಸೆದನು.

ಈ ಸಾಲಿನಲ್ಲಿ ಗಮನಿಸಿ, ಚಂಡಿಕೆಯು ಪಾನವನ್ನು ಪುನಃ ಪುನಃ ಕುಡಿಯುತ್ತಾ ಕೆಂಗಣ್ಣುವಳ್ಳವಳಾಗಿ ಅಟ್ಟಹಾಸ ಮಾಡಿದಳು. ಆದರೆ ಮಹಿಷಾಸುರನು ಕುಡಿಯುವವನಾಗಿರಲಿಲ್ಲ ಎಂದೆನಿಸುತ್ತದೆ. ಹಾಗಾಗಿ ಕೃತಿಕಾರ ಬಲದಿಂದಲೂ ವೀರ್ಯದಿಂದಲೂ ಮದಿಸಿ ಗರ್ಜಿಸಿದನು ಎಂದಷ್ಟೇ ಹೇಳಿದನು.

ಮಹಿಷನನ್ನು ಕೊಲ್ಲುವ ಮುನ್ನ ದುರ್ಗೆ ಹೇಳುವುದಾದರೂ ಏನು?

“ಗರ್ಜ ಗರ್ಜ ಕ್ಷಣಂ ಮೂಢ ಮಧು ಯವತ್ಪಿಬಾಮ್ಯಹಂ| ಮಯಾ ತ್ವಯಿ ಹತೇತ್ರೈವ ಗರ್ಜಿಷ್ಯಂತ್ಯಾಶು ದೇವತಾಃ ||೩೮||

ಎಲವೋ ಮೂಢ, ನಾನು ಮಧುವನ್ನು ಕುಡಿಯುವವರೆಗೂ ಕ್ಷಣಕಾಲ ಗರ್ಜಿಸುತ್ತಿರು. ನನ್ನಿಂದ ನೀನು ಇಲ್ಲಿಯೇ ಕೊಲ್ಲಲ್ಪಟ್ಟ ಕೂಡಲೇ ದೇವತೆಗಳು ಗರ್ಜಿಸುವರು.

ಇದೇ ದುರ್ಗಾ ಸಪ್ತಶತಿಯ ಮಹಿಷಾಸುರ ಸೈನ್ಯ ವಧೆ ಎಂಬ ಮಧ್ಯಮಚರಿತ್ರದಲ್ಲಿ, “ಅಕ್ಷಸ್ರಕ್ಟರಶುಂ ಗದೇಷುಕುಲಿಶಂ ಪದ್ಮಂ ಧನುಃ ಕುಂಡಿಕಾಂ, ದಂಡಂ ಶಕ್ತಿಮಸಿಂ ಚ ಚರ್ಮ ಜಲಜಂ ಘಂಟಾಂ ಸುರಭಾಜನಂ” ಅಂದರೆ ತನ್ನ ಹದಿನೆಂಟು ಕೈಗಳಿಂದ ಜಪಮಾಲೆ, ಪರಶು, ಗದೆ, ಬಾಣ, ಸಿಡಿಲು, ಪದ್ಮ, ಧನಸ್ಸು, ಮಡಕೆ, ದಂಡ, ಶಕ್ತಿ, ಕತ್ತಿ, ಗುರಾಣಿ, ಶಂಖ, ಗಂಟೆ, ಸುರಾಪಾತ್ರೆ, ಶೂಲ, ಪಾಶ, ಸುದರ್ಶನ ಚಕ್ರ – ಇವುಗಳನ್ನು ಧರಿಸಿದ್ದಾಳೆ ಎಂದು ಹೇಳುತ್ತದೆ. ಸುರಾಪಾತ್ರೆಯನ್ನು ಹಿಡಿದಿರುವುದಾದರೂ ಏತಕ್ಕೆ? ಸುರೆ ಎಂದರೇನೇ ಮದ್ಯ.

ಇನ್ನು ದೇವಿಯೇ ಕೇಂದ್ರವಾಗಿರುವ ತಂತ್ರ ಸಾಧನೆಗಳಲ್ಲಿ ಮದ್ಯ, ಮಾಂಸ, ಸಂಭೋಗ; ಇವೆಲ್ಲಾ ಅವಿಭಾಜ್ಯ ಅಂಗಗಳು ಎಂಬುದು ತಂತ್ರಗಳ ಬಗ್ಗೆ ಅಲ್ಪ ಸ್ವಲ್ಪ ತಿಳಿದಿರುವವರಿಗೂ ಚೆನ್ನಾಗಿಯೇ ಗೊತ್ತು. ಇನ್ನು ಕುಡಿದು ಉನ್ಮತ್ತವಾಗಿರುವ ದೇವಿಯ ಕಣ್ಣುಗಳನ್ನೇ ಸ್ತೋತ್ರಗಳಲ್ಲಿ ವರ್ಣಿಸಿರುವ ಅನೇಕ ದಾಖಲೆಗಳು ನಮ್ಮ ಶಾಕ್ತ ಸಾಹಿತ್ಯಗಳಲ್ಲಿವೆ. ಆದರೂ ಮಾದಕ ಸಾಧಕಿ ಎಂದು ಒಬ್ಬರು ಬರೆದ ಕೂಡಲೇ ತಾವು ಮತೋನ್ಮತ್ತರಾಗಿ ದೂರುಗಳನ್ನು ದಾಖಲಿಸುವುದನ್ನು ನೋಡಿದರೆ ಅವರಿಗೆ ಅಧ್ಯಯನವಿರಲಿ, ಸಾಮಾಜ್ಯ ಜ್ಞಾನವೂ ಇಲ್ಲ ಎಂದು ತಿಳಿಯುತ್ತದೆ.

ಅದೇನೇ ಇರಲಿ, ದೇವರ ಕುರಿತಾಗಿ ಯಾವುದೇ ವಿಮರ್ಶೆಯ ಅಥವಾ ಟೀಕೆಯನ್ನು ಬರೆದ ಕೂಡಲೇ ಉನ್ಮತ್ತರಾಗುವ ಭಕ್ತರಿಗೆ ಹಲವು ಸಂಗತಿಗಳು ಅರ್ಥವಾಗಬೇಕು.

೧. ದೇವರು ತಾನು ಸರ್ವಶಕ್ತನಾಗಿದ್ದು, ಸ್ವಯಂ ನಿರ್ಧಾರಗಳನ್ನು ತೆಗೆದುಕೊಳ್ಳುವಷ್ಟು ಶಕ್ತನೂ ಆಗಿರುತ್ತಾನಲ್ಲವೇ? ಯಾರಾದರೂ ತನ್ನ ಸ್ತುತಿಸಿದರೆ ವರಗಳನ್ನು ಅನುಗ್ರಹಿಸಿದಂತೆ ತನ್ನ ನಿಂದಿಸಿದ್ದಾರೆ ಅಥವಾ ಅವಹೇಳನ ಮಾಡಿದ್ದಾರೆ ಎಂದರೆ ಅವನಿಗೆ ಶಾಪ ಕೊಡಲೋ ಅಥವಾ ಇನ್ನೆಂಥದ್ದೋ ಅವನ ಇಚ್ಛೆಯಂತೆ ಅವನೋ ಅಥವಾ ಅವಳೋ ನಡೆದುಕೊಳ್ಳುತ್ತಾಳೆ. ಭಕ್ತರಿಗ್ಯಾಕೆ ಬಾಧೆ?

೨. ದೇವರು ಎಂಬ ಮಹಾನ್ ಸರ್ವಶಕ್ತನಿಗೆ ಸಾಮಾನ್ಯ ಭಕ್ತರ ಎಫ್ ಐ ಆರ್ ಕೇಸು, ಧಾರ್ಮಿಕ ನಿಂದನೆಯ ಕೇಸುಗಳ ಸಮಾಧಾನ ಬೇಕೆ? ಅವನಿಗೆ ತನ್ನದೇ ದನಿಯನ್ನು ತಾನೇ ಎತ್ತಲು ಸಾಧ್ಯವಿಲ್ಲವೇ? ಅವನಿಗೇಕೆ ಬೇಕು ವಕ್ತಾರರು?

೩. ದೇವರೇ ವಿಚಾರವಾದಿಗಳ (ದುರ್)ವಿಚಾರಗಳ ದಾಳಿಯನ್ನು ತಾಳದೇ ತನ್ನ ಭಕ್ತರನ್ನು ಅವರ ತರಾಟೆಗೆ ತೆಗೆದುಕೊಂಡಿದ್ದಾನೆಂದು ಭಕ್ತರೇ ಭಾವಿಸಿದ್ದೇ ಆದರೆ, ಅಣುರೇಣು ತೃಣಕಾಷ್ಠಗಳ ಚಲನೆಯನ್ನೂ ತನ್ನಿಚ್ಛೆಯಂತೆ ನಡೆಸುವ ದೇವರೇ ಈ ವಿಚಾರವಾದಿಗಳಿಗೂ ತಮ್ಮ ವಿಚಾರವನ್ನು ಹೊರದಬ್ಬಲು ಪ್ರೇರೇಪಿಸಿರುತ್ತಾನಲ್ಲವೇ? ಇವರಲ್ಲೂ ಇಂಥಾ ಪ್ರೇರಣೆಯಿಟ್ಟು, ಅವರಲ್ಲೂ ಅಂಥಾ ಪ್ರಚೋದನೆ ಕೊಟ್ಟು ಒಬ್ಬರಿಗೊಬ್ಬರು ಬಡಿದಾಡಿಕೊಂಡಿರಲಿ ಎಂಬುದು ಅವನ ಲೀಲಾ ವಿನೋದವೇ ಆಗಿದ್ದರೆ, ಜಗಳ ಮತ್ತು ಬಡಿದಾಟಗಳಿಂದ ಸಂತೋಷ ಪಡುವಂತಹ ಸ್ಯಾಡಿಸ್ಟೇ ಆ ದೇವರು?

೪. ಭಕ್ತರ ಶ್ರದ್ಧಾ ನಂಬಿಕೆ ಕೆಡುವುದು ಎಂತಾದರೆ, ಅವರ ಶ್ರದ್ಧಾ ನಂಬಿಕೆಗಳು ಯಾರೋ ಒಬ್ಬರ ವ್ಯಂಗ್ಯ ಅಥವಾ ಟೀಕೆಗಳಿಗೆ ಭಕ್ತರ ಶ್ರದ್ಧೆಯ ಬುನಾದಿಯು ಅಷ್ಟೊಂದು ದುರ್ಬಲವೇ?

೫. ನಮ್ಮ ಹಿಂದೂ ದೇವರುಗಳ ಬಗ್ಗೆ ಬರೆಯುವ ವಿಚಾರವಾದಿಗಳೇ ಮುಸಲ್ಮಾನರ ದೇವರ ಬಗ್ಗೆ ಬರೆಯಿರಿ ನೋಡೋಣ ಎಂದು ಹೇಳುವಂತಹ ಭಕ್ತರ ತಿಳುವಳಿಕೆಗೊಂದು ಮಾಹಿತಿ ಏನೆಂದರೆ, ಮೂಗು ಮೂತಿ ಬಟ್ಟೆ ಆಯುಧ ವಡವೆ ಆಭೂಷಣ ಸಂಸಾರ ಸಂಗಾತಿ ಹೆಂಡತಿ ಮಕ್ಕಳು; ಇವೆಲ್ಲಾ ಏನೂ ಇಲ್ಲದಂತಹ, ಪುಲ್ಲಿಂಗವೋ ಸ್ತ್ರೀ ಲಿಂಗವೋ ಅಲ್ಲದಂತಹ ನಿರಾಕಾರ ಪರಿಕಲ್ಪನೆ ಇಸ್ಲಾಂನ ದೇವರು. ಅದರ ಬಗ್ಗೆ ಯಾವುದೇ ಪೌರಾಣಿಕ ಕತೆಗಳಾಗಲಿ, ಸಂಗತಿಗಳಾಗಲಿ ಇಲ್ಲದಿರುವಾಗ ಏನನ್ನು ವಿಶ್ಲೇಷಿಸುವುದು? ಏನನ್ನು ವಿಮರ್ಶಿಸುವುದು? ಹಿಂದೂ, ಗ್ರೀಸ್, ರೋಮನ್ನಿನ ದೇವರುಗಳ ವಿಚಾರಗಳಲ್ಲಿ ವೈಪರಿತ್ಯದ ಮತ್ತು ಪರಸ್ಪರ ವಿರೋಧಾಭಾಸಗಳ ಅನೇಕಾನೇಕ ಪೌರಾಣಿಕ ಕತೆಗಳಿಂದಾಗಿ ಮತ್ತು ಅವರಿಗೆ ಮಾನುಷ ಸಹಜದ ನಡವಳಿಕೆಗಳನ್ನು, ವಿಷಯಗಳನ್ನು, ಗುಣಸ್ವಭಾವಗಳನ್ನು ಆರೋಪಿಸಿರುವುದರಿಂದ ಮನುಷ್ಯರ ಗುಣಾವಗುಣಗಳನ್ನು ವಿಮರ್ಶಿಸುವಂತೆಯೇ ಅವರದ್ದನ್ನೂ ಆಯಾ ಕಾಲಘಟ್ಟದ ವಿವೇಚನಾ ಪ್ರಜ್ಞೆಯ ಮೂಲಕ ವಿಶ್ಲೇಷಿಸಲಾಗುತ್ತದೆ. ಇನ್ನೂ ಮುಂದುವರಿದು ಹೇಳಬೇಕೆಂದರೆ, ಪೌರಾಣಿಕತೆಯನ್ನು ಯಥಾವತ್ತಾಗಿ ಸ್ವೀಕರಿಸುವ ಮನಸ್ಥಿತಿಯನ್ನು ವಿಮರ್ಶಿಸಲು, ಅವುಗಳನ್ನು ವಿಶ್ಲೇಷಿಸಲಾಗುತ್ತದೆ. ಆದರೆ, ಪುರಾಣವನ್ನು ರೂಪಕವೆಂದು ಬಗೆದು, ಅವುಗಳ ಒಳಾರ್ಥಗಳನ್ನು ಗ್ರಹಿಸಿ ಭಕ್ತರಾಗಲಿ, ಧರ್ಮಾಭಿಮಾನಿಗಳಾಗಲಿ ನಡೆದುಕೊಂಡಿದ್ದೇ ಆದರೆ, ಈ ದೇವರುಗಳ ವಿಚಾರದಲ್ಲಿ ಯಾವ ವಿಚಾರವಾದಿಗಳಿಗೂ ಖಂಡಿಸುವ ಅಥವಾ ತಮ್ಮದೇನೋ ವಿಚಾರವನ್ನು ಮಂಡಿಸುವ ಅಗತ್ಯವೇ ಇರುತ್ತಿರಲಿಲ್ಲ.

೬. ದೇವರುಗಳ ಹೆಸರುಗಳನ್ನು ಮುಂದಿಟ್ಟುಕೊಂಡು ಜನರಲ್ಲಿರುವ ಭಯ ಅಥವಾ ಆಸೆಗಳ ಮನಸ್ಥಿತಿಯನ್ನು ತಮ್ಮ ಬಂಡವಾಳವನ್ನಾಗಿಸಿಕೊಂಡಿರುವ ಶೋಷಕರನ್ನು ಎದುರಿಸುವಾಗ, ಈ ದೇವರುಗಳ ಪರಿಕಲ್ಪನೆಯ ಹುಟ್ಟು, ಕಾರಣ, ಪರಿಣಾಮ ಎಲ್ಲಾ ವಿಷಯಗಳನ್ನೂ ಜಾಲಾಡುವ ಸಂದರ್ಭವೊದಗುತ್ತದೆ. ಆಗ ಶೋಷಕರಿಗೆ ತಮ್ಮ ಮುಗ್ಧ ಅಥವಾ ಮೂರ್ಖ ಭಕ್ತರನ್ನು ವಿಚಾರವಂತರ ವಿರುದ್ಧವಾಗಿ ಪ್ರಚೋದಿಸುವುದು ಅನಿವಾರ್ಯವಾಗುತ್ತದೆ. ಮೌಢ್ಯಾಚರಣೆಗಳ ಮೂಲವೇ ಮುಗ್ಧ ಭಕ್ತರ ಆಸೆ ಮತ್ತು ಭಯಗಳಿಂದ ಕೂಡಿರುವ ಮೃದುವಾದ ಮನಸ್ಥಿತಿ.

೭. ಯಾವುದೇ ದೇವರ ಬಗ್ಗೆ ಬರೆದರೂ, ಟೀಕಿಸಿದರೂ ತಲೆಕೆಡಿಸಿಕೊಳ್ಳುವವರು ಧರ್ಮಾಂಧರೇ ಹೊರತು ಭಕ್ತರಲ್ಲ. ಭಕ್ತರಿಗೆ ಟೀಕೆಗಳನ್ನು ಗಮನಿಸುವಷ್ಟು ಅಥವಾ ಗಮನಿಸಿದರೂ ಉತ್ತರಿಸುವಷ್ಟು ತಮ್ಮ ಭಕ್ತಿಯ ಆರಾಧನೆಯಲ್ಲಿ ಪುರುಸೊತ್ತು ಇರುವುದಿಲ್ಲ ಮತ್ತು ತಮ್ಮ ಭಕ್ತಿಯ ಗುಣವನ್ನು ದ್ವೇಷವನ್ನಾಗಿಸಿಕೊಳ್ಳುವಷ್ಟು ಕಾಠಿಣ್ಯದ ಹೃದಯವನ್ನು ಹೊಂದಿರುವುದಿಲ್ಲ.

ಕೊನೆಯದಾಗಿ ಒಂದು ಷರಾ:

ಪಂಡರಾಪುರದ ವಿಠಲನ ದೇವಸ್ಥಾನದ ಬಳಿಯಲ್ಲಿ ಹೂ ಮಾರುವ ಅಜ್ಜಿಯ ಭಕ್ತಿಗೆ, ಶ್ರದ್ಧೆಗೆ ಮತ್ತು ಭಗವಂತನ ಮೇಲಿನ ಭರವಸೆಗೆ ನಾನು ಮೂಕ ಭಕ್ತನಾದೆ.

ಸಂಕಮ್ಮನ ಮೊಮ್ಮಗಳು ಸೌಮ್ಯಾಗೆ ಹನ್ನೆರಡು ವರ್ಷ. ಅವಳ ಓರಗೆಯವರ ಮೆದುಳಿನ ಬೆಳವಣಿಗೆಯನ್ನು ಅವಳ ಮೆದುಳು ಪಡೆದಿಲ್ಲ. ಸಾಮಾನ್ಯವಾಗಿರುವಂತೆಯೂ ಕಾಣುವುದಿಲ್ಲ. ಹಾಗಾಗಿ ಅವಳೊಂದು ವಿಶೇಷ ಮಗುವಿನಂತೆ ತೋರುತ್ತಾಳೆ. ತನ್ನ ಓಡಾಟದ ಮೇಲೆ, ತನ್ನದೇ ನೋಟದ ಮೇಲೆ ತನ್ನ ಸ್ವಾಧೀನವನ್ನೇ ಸಾಧಿಸಲಾಗದೇ ಆಟ ಪಾಠಗಳಿಂದ ವಂಚಿತಳಾಗಿದ್ದಾಳೆ. ಸಂಕಮ್ಮ ಪ್ರತಿನಿತ್ಯ ದೇವಸ್ಥಾನಕ್ಕೆ ಹೋಗುವ ಪಾಂಡುರಂಗನ ಭಕ್ತರಿಗೆ ಹೂ ಕಟ್ಟಿ ಮಾರುತ್ತಾಳೆ. ಸಮಾಜದ ಈಗಿನ ಮತ್ತು ಮುಂದಿನ ಮುಖ್ಯ ಕೇಂದ್ರವಾದ ಆ ಮಗುವಿನ ಬಗ್ಗೆ ಸಹಜವಾಗಿ ವಿಚಾರಿಸಿದೆ. ಅವಳ ಆ ಪರಿಸ್ಥಿತಿಯ ಬಗ್ಗೆ ಅಜ್ಜಿಯಲ್ಲಿ ವಿಚಾರಿಸಿಕೊಂಡೆ.

ಸೌಮ್ಯಾಳ ತಂದೆ ಸಂಕಮ್ಮನ ಮಗ. ಆತನೂ ಮತ್ತು ತನ್ನ ಗರ್ಭಿಣಿ ಹೆಂಡತಿ (ಸೌಮ್ಯ ಹೊಟ್ಟೆಯಲ್ಲಿರುವಾಗ) ಯಾವುದೋ ಕಾರ್ಯಕ್ಕೆ ಪ್ರಯಾಣಿಸುತ್ತಿದ್ದಾಗ ಕಾರು ಅಪಘಾತವಾಗಿ ಸ್ಥಳದಲ್ಲೇ ಮರಣಿಸಿದ. ಅವನ ಗರ್ಭಿಣಿ ಹೆಂಡತಿ ಬಿದ್ದ ಪೆಟ್ಟುಗಳನ್ನು ತಾಳದೇ ನರಳುತ್ತಿದ್ದಾಗಲೇ ಏಳನೇ ತಿಂಗಳಲ್ಲಿ ಸೌಮ್ಯಾಳನ್ನು ಬಲತ್ಕಾರವಾಗಿ ಭೂಮಿಗೆಳೆಯಲಾಯಿತು. ನಂತರ ಒಂದೇ ತಿಂಗಳಲ್ಲಿ ತಾಯಿ ಸತ್ತಳು. ಘಾಸಿಗೊಂಡ ಮೆದುಳಿನ ಮಗುವಾಗಿ ಸೌಮ್ಯ ಅಜ್ಜಿ ಮತ್ತು ಅಜ್ಜನ ಮಡಿಲಿಗೆ ಸೇರಿದಳು. ಮಗ ಮತ್ತು ಸೊಸೆಯ ಅನಿರೀಕ್ಷಿತ ಅಗಲಿಕೆ ಮತ್ತು ಮೊಮ್ಮಗುವಿನ ಅಸಹಾಯಕತೆಯ ನೋವನ್ನು ಅಜ್ಜನು ಭರಿಸಿದ್ದು ಬರೀ ಒಂದೇ ವರ್ಷ. ಕೊನೆಗುಳಿದವರು ಸಂಕಮ್ಮ ಮತ್ತು ಸೌಮ್ಯ. ಮಗ, ಸೊಸೆ ಮತ್ತು ಗಂಡನು ಹೊರಟು ಹೋದರೂ ವ್ಯತ್ಯಾಸದ ಸ್ಥಿತಿಯಲ್ಲಿರುವ ಮೊಮ್ಮಗಳ ಜವಾಬ್ದಾರಿಯನ್ನು ಸಂಕಮ್ಮನಿಗೆ ಭರಿಸಲು ಸಾಧ್ಯವಾಗಿರುವುದು ಪಾಂಡುರಂಗ ವಿಠಲನ ಮೇಲಿನ ಭಕ್ತಿಯಿಂದ. ತಾನು ಆತನಿಗೆ ಪ್ರೀತಿಯಾಗುವ ನೈತಿಕತೆಯಿಂದ ಬದುಕುತ್ತಿದ್ದೇನೆ ಎಂಬ ವಿಶ್ವಾಸದಿಂದ.

“ಮಾಸ್ತರಾ, ಒಂದು ಸಲವೂ ಒಂದೇ ಒಂದು ಪೈಸೆ ಮೋಸ ಮಾಡದೇ, ಖೊಟ್ಟಿ ಬೆಲೆ ಹೇಳದೇ ಹೂ ಮಾರಿಕೊಂಡು ಬಂದಿದ್ದೇನೆ. ಆ ನನ್ನಪ್ಪ ಪಾಂಡುರಂಗ ವಿಠಲ ನನ್ನ ನೋಡ್ತಿದ್ದಾನೆ. ಅವನಿಗೆ ಒಂದೇ ಕೇಳೋದು ನಾನು. ಈ ಮಗೂಗೆ ಒಂದು ದಿಕ್ಕು ದಾರಿ ತೋರ್‍ಸು, ಇವಳನ್ನ ಎಲ್ಲಾ ಮಕ್ಕಳಂತೆ ಸರಿ ಮಾಡು ಅಂತ. ಅವನು ಯಾವತ್ತೂ ನಮ್ಮ ಸೌಮ್ಯಾನ ಕೈ ಬಿಡಾಂಗಿಲ್ಲ ನೋಡಿ. ಅವನು ಭಕ್ತಪರಾಧೀನ ಅನ್ನೋ ಹೆಸರಿಗೆ ಮಸಿ ಹಚ್ಕೋಳ್ಳೋದಿಲ್ಲ ನೋಡ್ರಿ. ಒಂದಲ್ಲಾ ಒಂದು ದಿನ ಈ ಮಗೂಗೆ ದಿಕ್ಕು ಕಾಣಿಸೋನು ಅವನೇ. ಯಾವಾಗ ಯಾವ ರೂಪದಲ್ಲಿ ಬರ್‍ತಾನೋ ಬರ್ಲೀಂತ ಕಾಯ್ತಿದ್ದೀನಿ.”

ಈ ಸಂಕಮ್ಮನ ಮುಂದೆ ದೇವರು ಅನ್ನೋದು ಭಯದಿಂದ ಹುಟ್ಟಿದ ಪರಿಕಲ್ಪನೆ ಕಣಮ್ಮಾ, ದೇವರು ದೆವ್ವ ಈ ಜಗತ್ತಿನಲ್ಲಿ ಏನೂ ಇಲ್ಲಮ್ಮಾ, ಇದು ನಿನ್ನ ಮೂಢ ನಂಬಿಕೆ, ಭ್ರಮೆ ಅಂತ ನಾನು ಯಾವ ನಾಲಿಗೆಯಲ್ಲಿ ಹೇಳಿ ಅವಳಿಗೊಂದು ಪರ್ಯಾಯ ಭರವಸೆಯನ್ನು ಕೊಡಲಿ? ಪಾಂಡುರಂಗ ವಿಠಲ ಅಂತ ಹಾದು ಹೋದ ತುಕಾರಾಮ, ನಾಮದೇವ, ಸಕ್ಕೂಬಾಯಿ, ಚೋಕಾಮೇಲಾ, ಜ್ಞಾನೇಶ್ವರರೆಲ್ಲಾ ಸಂಕಮ್ಮನ ಹಿಂದೆ ನನಗೆ ಕಾಣುವರು. ಅವರೆಲ್ಲಾ ಹಿಡಿದ ಅಥವಾ ಹಿಡಿಯ ಬಯಸಿದ ಪಾಂಡುರಂಗನ ಕಾಲುಗಳನ್ನು ಗಟ್ಟಿಯಾಗಿ ಹಿಡಿದು ನನ್ನ ತಲೆಯನ್ನು ಅವನ ಪಾದಗಳ ಮೇಲೆ ಇಟ್ಟು ಸೌಮ್ಯಾಳ ಪರವಾಗಿ ವಂದಿಸಿದೆ.

ಈ ಯೋಗೇಶ್ ಮಾಸ್ಟರ್ ಗೆ ಯಾವ ಪಾಂಡುರಂಗನೂ ಬರುವುದಿಲ್ಲ ಎಂದು ನನಗೆ ಗೊತ್ತು. ಆದರೆ ಸಂಕಮ್ಮಳಂತಹ ಭಕ್ತಳಿಗೆ ಪಾಂಡುರಂಗ ಎಂಬ ಭರವಸೆಯ ಬೆಳಕು ಯಾವ ರೀತಿಯಲ್ಲಿ ದಿಕ್ಕುದೆಸೆ ತೋರುವುದೋ ಯಾರಿಗೆ ಗೊತ್ತು?

ಜೊತೆಯಲ್ಲಿರುವ ಮಾನುಷ ಹಸ್ತಗಳಾಚೆಗಿನ ಬಾಧೆಗಳಿಗೆ ಭಗವಂತನೆಂಬ ಕಾಣದ ಕೈಗಳು ಹಿಡಿಯುತ್ತವೆ ಎಂಬ ಸಂಕಮ್ಮನ ಭರವಸೆಗೆ ನಾನು ಮಣಿಯುವೆ. ಅವಳ ಪಾಲಿನ ಪಾಂಡುರಂಗ ಯಾರೇ ಆದರೂ ಅವರ ಕಾಲ್ಗಳ ಮುಗಿಯುವೆ.