ಅಪಹರಣಕ್ಕೀಡಾಗಿದ್ದ ಐಟಿ ಅಧಿಕಾರಿ ಪುತ್ರ ಶವವಾಗಿ ಪತ್ತೆ

ಬೆಂಗಳೂರು : ಇತ್ತೀಚೆಗಷ್ಟೇ ಅಪಹರಣಕ್ಕೊಳಗಾಗಿದ್ದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರ ಮಗ ಶವವಾಗಿ ಪತ್ತೆಯಾಗಿದ್ದಾನೆ. ಕೆಂಗೇರಿ ಬಳಿಯ ದೊಡ್ಡ ಆಲದ ಮರದ ಬಳಿಯಿರುವ ರಾಮೋಹಳ್ಳಿ ಕೆರೆಯಲ್ಲಿ ಪೊಲೀಸರಿಗೆ ಶರತ್‌ನ ಮೃತದೇಹ ದೊರೆತಿದೆ.

ಕೆರೆಯಲ್ಲಿ ಮೃತದೇಹ ತೇಲುತ್ತಿರುವುದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೆ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಹೊರತೆಗೆದಿದ್ದಾರೆ. ಈಗಾಗಲೆ ಪ್ರಕರಣ ಸಂಬಂಧ ಆರು ಮಂದಿಯನ್ನು ಬಂಧಿಸಿದ್ದು, ವಿಚಾರಣೆ ನಡೆಯುತ್ತಿದೆ.
ಕಳೆದ 10 ದಿನಗಳ ಹಿಂದೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯ ಮಗ ಬೈಕ್‌ನಲ್ಲಿ ಹೊರ ಹೋಗಿ ಬರುತ್ತೇನೆಂದು ಹೇಳಿ ಹೋಗಿದ್ದು, ಬಳಿಕ ನಾಪತ್ತೆಯಾಗಿದ್ದ. ನಂತರ ಅಪಹರಣಕಾರರು ವಿಡಿಯೊ ಮಾಡಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದರು. ಆ ವಿಡಿಯೊದಲ್ಲಿ ಶರತ್‌ ತನ್ನನ್ನು ಯಾರೋ ಅಪಹರಿಸಿದ್ದಾರೆ. 50 ಲಕ್ಷ ನೀಡಿ ಬಿಡಿಸಿಕೊಂಡು ಹೋಗುವಂತೆ ಹಾಗೂ ಪೊಲೀಸರಿಗೆ ಮಾಹಿತಿ ನೀಡದಂತೆ ಹೇಳಿದ್ದ.
ಇದಾದ ಬಳಿಕ ಐಟಿ ಅಧಿಕಾರಿ ನಿರಂಜನ್‌ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿಗಳನ್ನು ಪತ್ತೆ ಹಚ್ಚಲು ಆರು ತಂಡಗಳನ್ನು ರಚಿಸಲಾಗಿತ್ತು. ಆದರೆ ಶರತ್‌ನನ್ನು ಪೊಲೀಸರು ಹುಡುಕುವ ಮೊದಲೇ ಆತನ ಶವ ಪತ್ತೆಯಾಗಿದೆ.

Comments are closed.

Social Media Auto Publish Powered By : XYZScripts.com