ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸಿದ ಕಮಲ್‌ – ಕೇಜ್ರಿವಾಲ್‌

ಚೆನ್ನೈ : ರಾಜಕೀಯ ಪ್ರವೇಶಕ್ಕೆ ಸಿದ್ಧರಾಗಿರುವ ಖ್ಯಾತ ನಟ ಕಮಲ್ ಹಾಸನ್‌ರನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಭೇಟಿಯಾಗಿದ್ದು, ಕುತೂಹಲ ಕೆರಳಿಸಿದೆ. ಇಂದು ಮದ್ಯಾಹ್ನ ಕೇಜ್ರಿವಾಲ್‌, ಕಮಲ್ ಹಾಸನ್ ಅವರ ಮನೆಗೆ ತೆರಳಿದ್ದು, ಮದ್ಯಾಹ್ನ ಇಬ್ಬರೂ ಒಟ್ಟಿಗೆ ಊಟ ಮಾಡಿದ್ದಾರೆ. ಜೊತೆಗೆ ಭ್ರಷ್ಟಾಚಾರ ಸೇರಿದಂತೆ ಅನೇಕ ವಿಷಯಗಳ ಕುರಿತು ಚರ್ಚಿಸಿದ್ದಾರೆ.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಕೇಜ್ರಿವಾಲ್‌, ಕಮಲ್ ಹಾಸನ್‌ ಒಬ್ಬ ಧೈರ್ಯಶಾಲಿ ವ್ಯಕ್ತಿ. ದೇಶದಲ್ಲಿನ ಕೋಮುವಾದ, ಭ್ರಷ್ಟಾಚಾರ ಹೆಚ್ಚುತ್ತಿದ್ದು, ಇದರ ಬಗ್ಗೆ ಒಮ್ಮನಸ್ಸಿನ ಜನ ಒಟ್ಟಾಗಬೇಕು ಎಂದಿದ್ದಾರೆ.

ಇನ್ನು ಇಬ್ಬರ ಭೇಟಿ ಬಳಿಕ ಕಮಲ್ ಹಾಸನ್‌ ಮಾತನಾಡಿ, ಕೇಜ್ರಿವಾಲ್‌ ಅವರನ್ನು ಭೇಟಿಯಾಗಿದ್ದು ಸಂತೋಷವಾಗಿದೆ. ಅವರು ನನ್ನನ್ನು ಭೇಟಿಯಾಗಲು ಬಯಸಿದ್ದರು. ಇಬ್ಬರ ಉದ್ದೇಶವೂ ಒಂದೇ ಭ್ರಷ್ಟಾಚಾರ ದೇಶದಿಂದ ಕಿತ್ತೊಗೆಯಬೇಕು. ರಾಜಕೀಯ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಸಿದ್ದೇವೆ. ಇದು ನನಗೆ ರಾಜಕೀಯ ಕಲಿಕೆಯ ತಿರುವು ಎಂದಿದ್ದಾರೆ.