ಫ್ಯಾಷನ್ ಲೋಕದ ಲೇಟೆಸ್ಟ್ ಟ್ರೆಂಡ್ LED ಬ್ಲೌಸ್ : ಕತ್ತಲಲ್ಲೂ ಮಿರಮಿರ ಮಿಂಚಲಿದ್ದಾರೆ ನೀರೆಯರು..!

ಹೆಣ್ಮಕ್ಕಳು ತಮ್ಮ ಸೀರೆಗಳಿಗಿಂತ ಹೆಚ್ಚಿನ ಹಣವನ್ನು ಮ್ಯಾಚಿಂಗ್ ಬ್ಲೌಸ್ ಗಳಿಗೆ ಖರ್ಚು ಮಾಡೋ ಕಾಲ ಇದು. ಎಷ್ಟರ ಮಟ್ಟಿಗೆ ಈ ಡಿಸೈನರ್ ಬ್ಲೌಸ್ ಗಳ ಬಗ್ಗೆ ಕ್ರೇಜ್ ಇದೆ ಅಂದ್ರೆ ಮದುವೆಯ ಬಜ್ಜೆಟ್ಟಿನಲ್ಲೂ ಬ್ಲೌಸ್ ಗಳಿಗಾಗಿ ವಿಶೇಷವಾದ ಹಣ ಎತ್ತಿಡುತ್ತಾರೆ ನಮ್ಮ ಹೆಣ್ಣುಮಕ್ಕಳು. ಆದ್ರೆ ಈ ಬ್ಲೌಸ್ ಗಳ ದುನಿಯಾ ಈಗ ಅಕ್ಷರಶಃ ಝಗಮಗಿಸುತ್ತಿದೆ.

ಈ ಬ್ಲೌಸ್ ಚಿತ್ರ ನೋಡಿ ನೀವು ಮತ್ತೊಂದ್ಸಲ ನೋಡಿದ್ರಿ ತಾನೇ? ಯಾಕಂದ್ರೆ ಈ ಬ್ಲೌಸ್ ಆಕರ್ಷಕ ಬೆಳಕಿನಿಂದ ಕಂಗೊಳಿಸುತ್ತಿದೆ. ಬಣ್ಣಬಣ್ಣದ ಚಿತ್ತಾರದ ಕಸೂತಿಯ ಜೊತೆಗೆ ಅದ್ಯಾರೋ ಕಲಾವಿದ LED ಬಲ್ಬುಗಳನ್ನೂ ಜೋಡಿಸಿದ್ದಾನೆ. ಇದು ಫ್ಯಾಷನ್ ಲೋಕದ ಲೇಟೆಸ್ಟ್ ಟ್ರೆಂಡ್ LED ಬ್ಲೌಸ್.

Related image

ಟ್ರೆಂಡ್ ಹೆಸರಲ್ಲಿ ಅದೇನು ಹೊಸತಿದ್ದರೂ ಅದನ್ನು ಟ್ರೈ ಮಾಡೋದ್ರಲ್ಲಿ ನಮ್ಮ ಹೆಣ್ಣುಮಕ್ಕಳು ಮುಂದೆ ಇರ್ತಾರೆ. ಅಂಥಾದ್ರಲ್ಲಿ ಇದನ್ನು ಬಿಡ್ತಾರಾ? ಗ್ರ್ಯಾಂಡ್ ಎಂಬ್ರಾಡರಿ ಮಾಡಿರುವ ಬ್ಲೌಸ್ ಗಳಲ್ಲಿ ಕಸೂತಿಯ ನಡುವೆ LED ಬಲ್ಬುಗಳನ್ನು ಜೋಡಿಸಿರ್ತಾರೆ. ನಾಜೂಕಾಗಿ ಅವುಗಳ ವೈರುಗಳನ್ನು ರವಿಕೆಯ ಲೈನಿಂಗ್ ನೊಳಗಿನಿಂದಲೇ ತೂರಿಸಿ ಬಟನ್ ಜೊತೆಯಲ್ಲಿ ಈ ಬಲ್ಬುಗಳಿಗೊಂದು ಪುಟಾಣಿ ಸ್ವಿಚ್ಚನ್ನೂ ಜೋಡಿಸಿದ್ದಾರೆ.

ಇಷ್ಟವಿದ್ದವರು ಕತ್ತಲಲ್ಲಿ LED ಬಲ್ಬುಗಳನ್ನು ಬೆಳಗಿಸಿ ಶೈನ್ ಆಗ್ಬಹುದು. ಸುತ್ತಮುತ್ತ ಇರುವವರೆಲ್ಲಾ ಈ ವಿಶೇಷ ಬ್ಲೌಸ್ ಧರಿಸಿದವರನ್ನೇ ಎವೆಯಿಕ್ಕದೆ ನೋಡೋದು ಗ್ಯಾರಂಟಿ. ಅಂದ್ಹಾಗೆ ಒಂದು LED ಬ್ಲೌಸ್ ಡಿಸೈನ್ ಮಾಡಿದ್ದಕ್ಕೆ ಕನಿಷ್ಟ 15 ಸಾವಿರ ರೂಪಾಯಿ ಚಾರ್ಜ್ ಮಾಡ್ತಿದ್ದಾರೆ ಡಿಸೈನರ್ಸ್.

Related image

ಹಾಗಂತ ಬಟ್ಟೆಗೆ ಬಲ್ಬ್ ಅಳವಡಿಸೋದು ಹೊಸತೇನಲ್ಲ. ಮಿಧುನ್ ಚಕ್ರವರ್ತಿ, ರಿಷಿ ಕಪೂರ್, ಮೈಕಲ್ ಜಾಕ್ಸನ್, ರವಿಚಂದ್ರನ್ ಮುಂತಾದ ಅನೇಕ ನಾಯಕನಟರು, ಸಂಗೀತಗಾರರು ಸ್ಟೇಜ್ ಮೇಲೆ, ತೆರೆ ಮೇಲೆ ಬಲ್ಬುಗಳನ್ನು ಜೋಡಿಸಿದ ಬಟ್ಟೆ ಧರಿಸಿ ವೀಕ್ಷಕರನ್ನು ರಂಜಿಸಿದ್ದಾರೆ. ಆದ್ರೆ ಹೀಗೆ ಪ್ರತಿಯೊಬ್ಬರೂ ಸರಳವಾಗಿ ಬಳಸಬಹುದಾದ LED ಬಳಕೆ ಮಾತ್ರ ನಿಜಕ್ಕೂ ಹೊಸತೇ.

ಮೊದಲೇ ಎಲ್ಲೆಲ್ಲೂ ಪವರ್ ಕಟ್ ಸಮಸ್ಯೆ. ಹೀಗೆ ಊರ ಹೆಣ್ಣುಮಕ್ಕಳೆಲ್ಲಾ LED ರವಿಕೆ ತೊಡಲು ಶುರುಮಾಡಿದ್ರೆ ಕತ್ತಲಲ್ಲೂ ಬೆಳಕು ಮೂಡುತ್ತೆ ಬಿಡಿ ಎಂದು ಕಿಡಿಗೇಡಿಗಳು ಕಮೆಂಟ್ ಮಾಡುತ್ತಿದ್ದಾರೆ. ಆದ್ರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಹೆಣ್ಣುಮಕ್ಕಳು ಮಾತ್ರ ಬಟ್ಟೆಯಲ್ಲೇ ಬೆಳಕು ಮೂಡಿಸೋ ಬಟ್ಟೆ ತೊಟ್ಟು ಖುಷಿಯಿಂದ ಬೀಗುತ್ತಿದ್ದಾರೆ.

Comments are closed.