ಒಲವನು ಚೆಲುವನು ಬದುಕಿರಲು ಸಾವೆಂಬುದು ಉಂಟೆ? : ಅಗಲಿದ ಗೌರಿ ಲಂಕೇಶ್‌ಗೆ ‘ಗೀತ ನಮನ’

ರಂಗ ತರಂಗ ಟ್ರಸ್ಟ್ ಹಾಗೂ ರಾಜಮಾರ್ಗ ಕಲಾ ಸಂಸ್ಕೃತಿ ವತಿಯಿಂದ ‘ಹಳೆ ಬೇರು – ಹೊಸ ಚಿಗುರು ‘ ಸಂಗೀತ ಸಂಜೆ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಭವನದಲ್ಲಿ ಏರ್ಪಡಿಸಲಾಗಿತ್ತು. ನೆನಪಿನಂಗಳದಲ್ಲಿ ಮಾಸುತ್ತಿರುವ ಹಳೆಯ ಗೀತ ಸಂಯೋಜನೆಗಳು, ಭಾವದಂಗಳದಲ್ಲಿ ಮೂಡುತ್ತಿರುವ ನವ್ಯ ಸಂಗೀತಗಳು – ಇವೆರಡರ ಸಮಾಗಮ ಎಂಬ ಅರ್ಥದಲ್ಲಿ ‘ ಹಳೆ ಬೇರು – ಹೊಸ ಚಿಗುರು ‘ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಂಗೀತ ನಿರ್ದೇಶಕ, ಕಲಾವಿದ ವಿ . ಮನೋಹರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.  ಸುಮಾ ಗಿರಿಯಾಚಾರ್, ಮುಕ್ತ ಹೆಗಡೆ, ಎಸ್ ಮಹೇಶ್, ರವಿ ನಟರಾಜ ಮೂರ್ತಿ, ರಚನ ವಿ ರಾವ್, ಎಸ್ ಫಣೀಂದ್ರ ಸಿ. ವಿ. ವಿನಯ್ ಕುಮಾರ್, ಚಿನ್ಮಯ್ ಎಂ ಅವರನ್ನೊಳಗೊಂಡ ಮೇಳ ಹಳೆಯ ಸುಮಧುರ ಹಾಡುಗಳನ್ನು ಹಾಡಿದರು.

‘ ಜೋ ಜೋ ಕಂದ ಜೋ ‘ , ‘ ಸ್ನೇಹದ ಕಡಲಲಿ ಬದುಕ ನಾವೆಯ ನಡೆಸೋ ನಾವಿಕ ‘, ‘ ಒಲವನು ಚೆಲುವನು ಬದುಕಿರಲು ಸಾವೆಂಬುದು ಉಂಟೆ ‘ ಮುಂತಾದ ಗೀತೆಗಳನ್ನು ಪ್ರಸ್ತುತ ಪಡಿಸಲಾಯಿತು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ಗುಂಡಿಗೆ ಬಲಿಯಾದ ಹಿರಿಯ ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಅವರಿಗೆ ‘ ಗೀತ ನಮನ ‘ ಸಲ್ಲಿಸಲಾಯಿತು. ಕಾರ್ಯಕ್ರಮದ ನಿರ್ದೇಶನವನ್ನು ವಹಿಸಿಕೊಂಡಿದ್ದ ಸಾಹಿತಿ ಯೋಗೇಶ್ ಮಾಸ್ಟರ್ ನಿರೂಪಣೆ ಮಾಡಿದರು. ತಾವು ರಚಿಸಿ, ಸಂಯೋಜಿಸಿದ ಕೆಲ ಹಾಡುಗಳನ್ನು ಯೋಗೇಶ್ ಮಾಸ್ಟರ್ ಮಕ್ಕಳ ವೃಂದದೊಂದಿಗೆ ಸೇರಿ ಹಾಡಿದರು. ಹಳೆಯ ಅಪರೂಪದ ಸಂಯೋಜನೆಗಳನ್ನು ಪ್ರಸ್ತುತ ಪಡಿಸಿದ ಮಕ್ಕಳ ಸುಮಧುರ ಗಾಯನ, ರವಿವಾರ ಸಂಜೆ ಸಂಗೀತಾಸಕ್ತರಿಗೆ ಮುದವನ್ನು ನೀಡಿತು.

Comments are closed.

Social Media Auto Publish Powered By : XYZScripts.com