ಸಖೀಗೀತ 19 : ಡಾ.ಗೀತಾ ವಸಂತ ಅಂಕಣ ..ಅಲೆಮಾರಿಯ ಕಣ್ಣಲ್ಲಿ ನಿಜದುದಯ…

ಚಂದ್ರಶೇಖರ ನಂಗಲಿಯವರು ನಮ್ಮ ಕಾಲದ ಬಹುಶ್ರುತ ವಿದ್ವಾಂಸರು. ಪರಂಪರೆಯೆಡೆಗಿನ ತಿಳುವಳಿಕೆ ಹಾಗೂ ಆಧುನಿಕ ಮನಸ್ಥಿತಿಯುಳ್ಳ ವಿರಳ ವಿಮರ್ಶಕರಲ್ಲಿ ಅವರೊಬ್ಬರು. ಅಲ್ಲಮನ ಅಧಿಕೃತ ವಾರಸುದಾರರಂತೆ ಅವರು ಬರೆಯುವ, ಮಾತನಾಡುವ ಪರಿ ನಿಜಕ್ಕೂ ವಿಸ್ಮಯ. ಅಲ್ಲಮನನ್ನು ಜಡಧಾರ್ಮಿಕ ದಾಖಲೆಗಳಿಂದ ಮುಕ್ತಗೊಳಿಸಿ ಅವನ ಜಂಗಮತ್ವದ ಅನೂಹ್ಯ ಸೊಬಗನ್ನು ಪರಿಚಯಿಸುತ್ತಿರುವ ಬೆರಳೆಣಿಕೆಯ ಅಭ್ಯಾಸಿಗಳಲ್ಲಿ ನಂಗಲಿಯವರು ಪ್ರಮುಖರು. ಬಯಲನ್ನು ತಾತ್ವಿಕವಾಗಿ ಹಿಡಿದು ಅರ್ಥೈಸುವ ಹಾಗೂ ತಾತ್ವಿಕತೆಯನ್ನು ಬಯಲುಗೊಳಿಸಿ ಅರ್ಥದಾಚೆಗೆ ಜಿಗಿಯುವ ಚೋದ್ಯವನ್ನು ಅಲ್ಲಮನ ಪರಂಪರೆಯ ಈ ಬರಹಗಾರ ಸಾಧ್ಯವಾಗಿಸಿಕೊಂಡಿರುವುದು ವಿಶೇಷ. ಎಂದಿನ ತಮ್ಮ ಗಂಭೀರ ಶೈಲಿಯನ್ನು ಚಣಕಾಲ ಪಕ್ಕಕ್ಕಿಟ್ಟು ಹರಟೆಯೋ, ಸಂಭಾಷಣೆಯೋ ಅನ್ನಿಸುವ ಹಗುರಾದ ಬಂಧದಲ್ಲಿ ಗಹನವಾದುದನ್ನು ಹೇಳಲು ಹೊರಟಿರುವ ‘ಚಿನ್ನಿ-ಮುತ್ತು ಮಾತುಕತೆ’ ಎಂಬ ಈ ಸಂವಾದ ರೂಪೀ ಪದ್ಯಗಳು ಆಧುನಿಕ ಜೀವನ ಮೀಮಾಂಸೆಯಾಗಿ ಕಾಣುತ್ತಿವೆ.
ಕಾವ್ಯ ಮತ್ತು ತತ್ವಶಾಸ್ತ್ರಗಳ ಸಂಬಂಧದ ಬಗ್ಗೆ ನಮ್ಮ ಸಾಹಿತ್ಯ ಜಗತ್ತು ಬಹುಬಗೆಯಲ್ಲಿ ಚರ್ಚಿಸಿದೆ. ಇವೆರಡೂ ಭಿನ್ನವಾದ ಅರಿಯುವ ಕ್ರಮಗಳೆಂಬುದು ಒಂದು ತಿಳುವಳಿಕೆಯಾದರೆ, ಅವುಗಳಿಗೆ ಹೊಕ್ಕುಳಬಳ್ಳಿಯ ಸಂಬಂಧವಿದೆಯೆಂಬುದು ಮತ್ತೊಂದು ತಿಳುವಳಿಕೆ. ಕಾವ್ಯದ ಹೃದಯ ಸಂವಾದಿ ಗುಣವು ತತ್ವಶಾಸ್ತ್ರದ ಗಹನತೆಯನ್ನು ತಿಳಿಯಾಗಿಸಿ ನೀಡುತ್ತದೆಂಬುದು ಪಾರಂಪರಿಕ ತಿಳುವಳಿಕೆ. ಬದುಕಿನ ಹಸಿತನದಲ್ಲಿ ಕಾವ್ಯವು ಮೊಳೆಯುತ್ತದೆ. ನೆಲದೊಳಗಿನ ನಂಟು, ಸಂಬಂಧಗಳ ಬಿಸುಪು ಕಾವ್ಯಕ್ಕೆ ‘ಹೃದಯ ಸಂವಾದಿ’ ಗುಣವನ್ನು ನೀಡಿವೆ. ಅದಕ್ಕೆಂದೇ ಕಾವ್ಯವನ್ನು ‘ಕಾಂತಾ ಸಂಹಿತೆ’ ಎನ್ನಲಾಗಿದೆ. ಇದೇ ಪರಿಕಲ್ಪನೆಯನ್ನಿಟ್ಟುಕೊಂಡು ನಮ್ಮ ವಾಙ್ಮಯದಲ್ಲಿ ಅರುಣಿ-ಶ್ವೇತಕೇತು ಸಂವಾದ, ಮುದ್ದಣ ಮನೋರಮೆಯರ ಸಂವಾದ, ರಾಗಿ-ವ್ರೀಹಿ ಸಂವಾದ, ಹರಿಶ್ಚಂದ್ರ ಹೊಲತಿಯರ ಸಂವಾದಗಳು ಹುಟ್ಟಿಕೊಂಡಿವೆ. ಇಂಥ ಸಂವಾದಗಳು ಹಾಗೂ ಈ ಕಾಲದ ಎಸ್‍ಎಂಎಸ್ ಸಂವಾದಗಳಿಂದ ಪ್ರೇರಿತನಾಗಿ ‘ಚಿನ್ನಿ-ಮುತ್ತು ಸಂವಾದ’ಗಳನ್ನು ಬರೆದಿದ್ದಾಗಿ ನಂಗಲಿಯವರು ಹೇಳಿಕೊಂಡಿದ್ದಾರೆ. ಪದ್ಯ, ಗದ್ಯ, ವಚನ, ಹರಟೆ ಏನುಬೇಕಾದರೂ ಆಗಿ ಕಾಣುವ ಈ ಪ್ರಕಾರದ ಮುಕ್ತತೆಯೇ ಈ ಕಾಲದ ಹೊಸ ಅಭಿವ್ಯಕ್ತಿ ಕ್ರಮವೊಂದನ್ನು ಕಟ್ಟಿಕೊಡುತ್ತಿದೆ. ಹೊಸ ಅಭಿವ್ಯಕ್ತಿಯ ಹಿಂದಿನ ಗ್ರಹಿಕೆಯೂ ಕೂಡ ನವೀನವಾದುದೇ. ಇಂದಿನ ಒಂದು ಬಿಂದುವಿನಲ್ಲಿ ನಿಂತು ಹಿಂದಣ ಅನಂತವನು ಮುಂದಣ ಅನಂತವನೂ ಅರಿಯುವ ಸೃಜನಶೀಲ ಸನ್ನಾಹವಾಗಿ ಈ ಪದ್ಯಗಳು ಬೆಳೆದಿವೆ. ಕೆಲವೊಮ್ಮೆ ಝೆನ್ ಕತೆಗಳಂತೆ, ಅನುಭಾವಿಯ ಉಕ್ತಿಗಳಂತೆ, ಅನುಭವ ಕಥನದಂತೆ ಭಾಸವಾಗುತ್ತಲೇ ಆಧುನಿಕತೆಯ ಅನಿಷ್ಟಗಳ ಕಟು ವಿಮರ್ಶೆಯೂ ಆಗುವುದು ಈ ಬರಹದ ವಿಶೇಷ. ಅರಿವಿನ ಕಾಲಾತೀತ ಬೆರಗಿನಲ್ಲಿ ಮೀಯಬಯಸುವ ಮುಕ್ತ, ಅಲೆಮಾರಿ ಮನಸಿಗೆ ಇಲ್ಲಿ ಕಣ್ಣು ಮೂಡಿದೆ.

ಇದೊಂದು ಅಪ್ಪಟ ಜೀವನ ಮೀಮಾಂಸೆ. ಇದನ್ನು ಕಟ್ಟುತ್ತಿರುವವರು ಚಿನ್ನಿ-ಮುತ್ತು ಎಂಬ ಸಾಮಾನ್ಯರು. ಇವರು ನಾವು-ನೀವು ಕೂಡ ಹೌದು. ಅಂದರೆ, ನಮ್ಮೊಳಗಿರುವ ಪ್ರಶ್ನೆಗಳನ್ನು, ಆತಂಕಗಳನ್ನು ಹಾಗೂ ಅದನ್ನು ಉತ್ತರಿಸುವ, ಮೀರುವ ಹಂಬಲಗಳನ್ನು ಒಟ್ಟೊಟ್ಟಿಗೆ ಈ ಸಂವಾದವು ಬೆಸೆಯುತ್ತದೆ. ಸಂವಾದಕ್ಕೆ ತೆರೆದುಕೊಳ್ಳುವ ಮುಕ್ತತೆ ನಮ್ಮಲ್ಲಿದ್ದರೆ ಇದು ನಮ್ಮ ದನಿಯೇ ಆಗಿ ಕೇಳುತ್ತ ಹೋಗುತ್ತದೆ. ಬರಿಯ ಓದಿನಿಂದ, ನಾಲ್ಕು ಗೋಡೆಗಳ ನಡುವಿನ ಸೀಮಿತ ಅನುಭವಲೋಕದಿಂದ ಕಟ್ಟಿದ್ದಲ್ಲ ಎಂಬುದೇ ಈ ಪದ್ಯಗಳ ಶಕ್ತಿ. ಟೋಪಿ, ಬ್ಯೂಟಿಕ್ರೀಮ್, ಪಾಟಿನ ಗಿಡಗಳು, ಕಾಡು ಹಣ್ಣುಗಳು ಇಂಥ ದೈನಂದಿನ ಸಂಗತಿಗಳಿಂದ ಹಿಡಿದು ಡಿ-ಸ್ಕೂಲಿಂಗ್, ಜೈವಿಕ ತಂತ್ರಜ್ಞಾನದ ಅಪಾಯಗಳು, ಪ್ರಕೃತಿಯ ಮೇಲಿನ ಆಕ್ರಮಣ, ಪ್ರಗತಿಯ ವಿಕೃತಿಗಳು ಮುಂತಾದ ವಿಶ್ವವ್ಯಾಪೀ ತಲ್ಲಣಗಳವರೆಗೆ ಈ ಸಂವಾದದ ಹರಹು ಚಾಚಿದೆ. ಬುದ್ಧಿ, ಭಾವ, ಕಾಲ, ದೇವರು, ಜೀವಹಂಸ….. ಇಂಥ ಕಾಲಾತೀತ ರಚನೆಗಳ ಕುರಿತೂ ಈ ಸಂವಾದದಲ್ಲಿ ಜಿಜ್ಞಾಸೆಯಿದೆ. ಈ ಎಲ್ಲ ಸಂಗತಿಗಳು ಮುಪ್ಪುರಿಗೊಂಡು ಬದುಕಿನ ಹೊಸ ದರ್ಶನವೊಂದು ರೂಪುಗೊಳ್ಳುತ್ತ ಹೋಗುತ್ತದೆ. ಈ ದರ್ಶನಕ್ಕೆ ಅವರ ವೈಯಕ್ತಿಕ ಬದುಕಿನ ವಿವರಗಳು ಹಿನ್ನೆಲೆಯಾಗಿ ಬರುತ್ತವೆ. ಆತ್ಮಕಥಾನಕದ ತುಣುಕುಗಳಂತೆ ಅನುಭವಗಳೊಟ್ಟಿಗೇ ಚಲಿಸುವ ಈ ಬರಹವು ಈಗಾಗಲೇ ‘ಆಗಿ’ ಇರುವ ಅರಿವನ್ನು ಅರುಹದೇ ಆಗುತ್ತಿರುವ ಅರಿವಿನ ಚಲನಶೀಲ ಸೌಂದರ್ಯವನ್ನು ಸೆರೆಹಿಡಿಯುವುದರಿಂದ ಭಿನ್ನವಾಗಿದೆ.
ಅನುಭವವು ಅರಿವಾಗಿ ರೂಪಾಂತರಗೊಳ್ಳುವ ಪ್ರಯಾಣವೊಂದು ಇಲ್ಲಿ ದಾಖಲಾಗಿದೆ. ಕಾಡು-ಪರ್ವತಗಳಲ್ಲಿ ಸಂಚರಿಸುವ ನಂಗಲಿಯ ಅವರ ಅಲೆಮಾರಿತನ, ಗಿರಿಜನರ ಜೊತೆಗಿನ ಅವರ ಸಂಪರ್ಕ-ಒಡನಾಟಗಳು, ಚಾರಣಗಳಲ್ಲಿ ದೊರೆತ ಪರಿಸರ ಸಂವೇದನೆ ಇವೆಲ್ಲವೂ ಅವರ ನೋಟವನ್ನು ತೀಕ್ಷ್ಣಗೊಳಿಸಿವೆ. ಕಿವಿಗಳನ್ನು ಸೂಕ್ಷ್ಮಗೊಳಿಸಿವೆ. ತಮಾಷೆ, ಪ್ರೀತಿ, ಬೆರಗು, ತಿಳಿವುಗಳಲ್ಲಿ ಅದ್ದಿದಂತಿರುವ ಈ ಬರವಣಿಗೆ ಹೊಸ ಮಾದರಿಯೊಂದರ ಅನ್ವೇಷಣೆಯಂತೆಯೂ ಭಾಸವಾಗುತ್ತದೆ. ಮನುಷ್ಯನನ್ನು ಅರಿಯುವುದೆಂದರೆ ಪ್ರಕೃತಿಯನ್ನೂ ಅರಿಯಬೇಕಾದ ಕ್ರಿಯೆ ಎಂಬುದು ಇಲ್ಲಿನ ತಿಳುವಳಿಕೆ. ಪರಿಸರಕ್ಕೂ ಮನುಷ್ಯನಿಗೂ ಇರುವ ಅವಿನಾಭಾವ ಸಂಬಂಧದ ಸೂಕ್ಷ್ಮತೆಯು ಇಲ್ಲಿನ ಅನೇಕ ರಚನೆಗಳಲ್ಲಿ ಅಂತರ್ಗತವಾಗಿ ಹರಿದಿದೆ. ಈ ಹಿನ್ನೆಲೆಯಲ್ಲಿ ಪ್ರಕೃತಿಯಲ್ಲಿ ಮನುಷ್ಯನ ಎದೆಬಡಿತವನ್ನೂ, ಮನುಷ್ಯನಲ್ಲಿ ಪ್ರಕೃತಿಯ ನಾಡಿಮಿಡಿತವನ್ನೂ ಕೇಳುವ ಬೆರಗು ಇಲ್ಲಿ ಸೃಷ್ಟಿಯಾಗಿದೆ.

ಮುತ್ತು:
ನಮ್ಮೆಲ್ಲರ ಹೃದಯ ಡಬ್‍ಡಬ್ ಎಂದು ಮಿಡಿಯುತ್ತಿರುವಂತೆ
ಕಾಡುಗಳ, ಪರ್ವತಗಳ ಹೃದಯವೂ ಡಬ್‍ಡಬ್ ಎಂದು ಮಿಡಿಯುತ್ತಿದೆ.
ಇದನ್ನು ಅರಿಯದ ಜನರು
ನದಿಗಳು ಜುಳುಜುಳು ಹರಿಯುತ್ತವೆ ಎಂದು ವರ್ಣಿಸುತ್ತಾರೆ.
ಅದು ನದಿಗಳ ಜುಳುಜುಳು ನಾದವಲ್ಲ!
ಅದೇ ಕಾಡುಗಳ ಹೃದಯ ಬಡಿತ!
ಅದೇ ಪರ್ವತಗಳ ನಾಡಿ ಮಿಡಿತ!

ಚಿನ್ನಿ:
ಮತ್ತೆ ಕಾಡು ಪರ್ವತಗಳನ್ನು ಹುಟ್ಟುಹಬ್ಬದ ಕೇಕುಗಳಂತೆ
ಕತ್ತರಿಸಿ ಹಾಕುತ್ತಿದ್ದಾರಲ್ಲ?………
ಮುಂದೊಂದು ದಿನ……..
ನಮ್ಮೆಲ್ಲರ ಹೃದಯ ಬಡಿತ
ಇನ್ನಿಲ್ಲದಂತೆ ನಿಂತುಹೋಗುತ್ತದೆ.

ಕಾಡು, ಪರ್ವತಗಳ ಹೃದಯವನ್ನು ಅರಿಯಲು ಧ್ಯಾನಸ್ಥ ಮನಸ್ಥಿತಿ ಅಗತ್ಯ. ನಂಗಲಿಯವರ ಈ ಸಂಭಾಷಣೆಗಳುದ್ದಕ್ಕೂ ಅಂಥ ಧ್ಯಾನವಿದೆ. ಶಬ್ದದ ಮರೆಯ ನಿಶ್ಯಬ್ದದಂತೆ ಅದು ಕೇಳುತ್ತದೆ. ಆ ಧ್ಯಾನದ ತಿಳಿವನ್ನು ಪ್ರಶ್ನೆಗಳನ್ನು ಹಾಕುವ ಮೂಲಕ ಪಡೆಯಬೇಕೆಂಬ ಇನ್ನೊಂದು ಜೀವ ಇಲ್ಲಿ ಸಂಭಾಷಣೆಗೆ ಪ್ರೇರಣೆ ನೀಡುತ್ತದೆ. ಇನ್ನೊಂದು ಜೀವದ ಉದ್ದೀಪನವು ತನ್ನೊಳಗಿನ ದೀಪವನ್ನು ಜಗತ್ತಿಗೆದುರಾಗಿ ಹಿಡಿಯುತ್ತದೆ. ಇದೇ ನಂಗಲಿಯವರ ಪದ್ಯಗಳಲ್ಲಿ ಮೂಡಿದ ‘ನಿಜದುದಯ’.
ಪ್ರಕೃತಿಯ ಕುರಿತ ಅಪಾರ ಕಾಳಜಿ ಹಾಗೂ ಪ್ರೀತಿ ಈ ಸಂಕಲನದ ಸ್ಥಾಯಿ. ಪ್ರಕೃತಿಯಿಂದ ದೂರಾಗಿ ಅತಂತ್ರವಾದ ಮನುಷ್ಯನ ಅವಿವೇಕವನ್ನು ಇಲ್ಲಿನ ಪದ್ಯಗಳು ವ್ಯಂಗ್ಯ, ವಿಡಂಬನೆ, ಆರ್ತತೆ, ಆರ್ದೃತೆಗಳೊಂದಿಗೆ ಚಿತ್ರಿಸುತ್ತವೆ. ತನ್ನ ವಿನಾಶವನ್ನೇ ಬೆನ್ನಿಗೆ ಕಟ್ಟಿಕೊಂಡು ‘ಮುಂದುವರೆಯುವ’ ಭ್ರಮೆಗೆ ಬಿದ್ದ ಮನುಷ್ಯನ ಮೇಲೆ ಬೆಳಕು ಚೆಲ್ಲುತ್ತವೆ. ಭೌತಿಕ ಪ್ರಗತಿಯ ಬೆನ್ನಹಿಂದೆ ಬಿದ್ದ ಜಗತ್ತು ಹೇಗೆ ಆಂತರಿಕವಾಗಿ ನರಕಗಳನ್ನು ಸೃಷ್ಟಿಸಿದೆಯೆಂಬುದನ್ನು ಇಲ್ಲಿ ಕಾಣಿಸಲಾಗಿದೆ. ಪ್ರಕೃತಿಯ ಜೀವದಾಯಕತ್ವವನ್ನು ಆಕ್ರಮಣಕಾರೀ ಪುರುಷ ತತ್ವವು ಹೇಗೆ ಕತ್ತರಿಸುತ್ತದೆಯೆಂಬುದನ್ನು ‘ಪ್ರಕೃತಿ-ಪುರುಷ’ ಕವಿತೆಯು ಮಾರ್ಮಿಕವಾಗಿ ಚಿತ್ರಿಸಿದೆ.

ಅಧಿಕಾರವು ಗಂಡು ಗುಣ, ಸಲಹುವುದು ಹೆಣ್ಣು ಗುಣ ಎಂಬ ಅರಿವು ಪ್ರಕೃತಿ-ಪುರುಷ ತತ್ವವನ್ನು ಭಿನ್ನವಾಗಿ ಗ್ರಹಿಸುತ್ತದೆ. ಪ್ರಕೃತಿ ವಸ್ತುನಿಷ್ಠವಾದದ್ದು. ಎಲ್ಲಿ ವ್ಯಕ್ತಿನಿಷ್ಠೆಯು ಮೂಡುತ್ತದೆಯೋ ಅಲ್ಲಿಂದಲೇ ಸ್ವಾರ್ಥ, ಅಹಂಕಾರ, ಅಧಿಕಾರದಾಹ, ಒಡೆತನ ಮುಂತಾದ ಪ್ರಜ್ಞೆಗಳು ಹುಟ್ಟುತ್ತವೆ. ಪ್ರಕೃತಿಯನ್ನು ನಿಯಂತ್ರಿಸಬೇಕೆಂಬ ಪುರುಷಪ್ರಜ್ಞೆ ಪ್ರಕೃತಿಯನ್ನು ಉಪಭೋಗದ ವಸ್ತುವಾಗಿ ಮಾತ್ರ ಕಾಣುತ್ತದೆ. ಇದರಿಂದ ಸ್ತ್ರೀತ್ವದ ಜೀವಪರತೆಯ ಬದಲು ಗಂಡುದರ್ಪದ ಅಧಿಕಾರ ವಿಜ್ರಂಭಿಸುತ್ತದೆ.

ಪ್ರಕೃತಿಯೆಂಬ ಭೂಮ್ತಾಯಿಗೆ ಹೆಸರಾವುದೂ ಇಲ್ಲ!
ಒಂದೊಂದು ದೇಶಕ್ಕೆ ಒಂದೊಂದು ಹೆಸರಿಟ್ಟು
ಆಳುವ ಪುರುಷ ಸತ್ವದ ದಂಡು ದಾಳಿಗೆ
ನುಚ್ಚು ನೂರಾಯ್ತು ನೆಲದ ಹೋಳಿಗೆ

ಹೆಣ್ಣು ಮತ್ತು ಭೂಮಿತಾಯಿ ಸಂಪನ್ಮೂಲವಾಗಿ, ಖಾಸಗಿ ಆಸ್ತಿಯಾಗಿ ಸಿಕ್ಕಿದವರಿಗೆಲ್ಲ ಸೀರುಂಡೆಯಾಗಿಲ್ಲವೇ?
ಹೆಣ್ಣನ್ನು ಗಂಡ, ಭೂಮಿಯನ್ನು ಮನುಷ್ಯರು ಸಂರಕ್ಷಿಸುವುದೊಂದು ಭ್ರಮೆ
ಯಾರನ್ನು ಯಾರೂ ಸಂರಕ್ಷಿಸುವುದಿಲ್ಲ
ಪ್ರಕೃತಿ ತನ್ನನ್ನು ತಾನು ಸಂರಕ್ಷಿಸಿಕೊಳ್ಳಬಲ್ಲದು

ಪರಿಸರದೊಟ್ಟಿಗೆ ಸ್ತ್ರೀತ್ವವನ್ನು ಸಮೀಕರಿಸುವ ಇಕೊಫೆಮಿನಿಸಂ ಎಳೆಗಳನ್ನು ಇಲ್ಲಿಂದ ಜೋಡಿಸಿಕೊಳ್ಳಬಹುದು. ಆದರೆ, ನಂಗಲಿಯವರ ಬರಹವು ಯಾವ ವಾದಗಳಿಗೆ ಸೀಮಿತಗೊಳ್ಳದೇ ಕಾಲಿಗೆ ಚಕ್ರಕಟ್ಟಿಕೊಂಡಂತೆ ತಿರುಗಾಟದಲ್ಲಿಯೇ ಚಲನಶೀಳಗೊಳ್ಳುತ್ತಿರುತ್ತದೆ.

ತಿರುಗುವುದು ಯಾರು? ಎಂಬ ಪದ್ಯದಲ್ಲಿ ಕವಿ ತಮ್ಮ ಅಲೆಮಾರಿತನವನ್ನು ಬ್ರಹ್ಮಾಂಡದ ಅನಂತತೆಯಲ್ಲಿ ಜರುಗುವ ಎಷ್ಟೋ ಚಲನೆಗಳ ಕೂಡ ಸಮೀಕರಿಸಿಕೊಳ್ಳುತ್ತಾರೆ. ಇರುವೆಯಿಂದ ಆನೆಯವರೆಗೆ ಸಮಸ್ತ ಜೀವಜಂತುಗಳ ಸತತ ಅಲೆದಾಟ, ಕಾಡಿನ ಮಕ್ಕಳ ಸುತ್ತಾಟ, ಕಣ್ಣಿಗೆ ಕಾಣದಂತೆ ತಿರುಗುವ ಭೂಮಿ, ಜಗತ್ತನ್ನೇ ಸುತ್ತುವ ಜಂಗಮ ಮನಸ್ಸು….. ನಿಸರ್ಗದ ಸುತ್ತಾಟದಲ್ಲೇ ಋಷಿಗಳಂತೆ ಬದುಕಿದ, ಬದುಕಿನ ಅರಿವನ್ನು ಮುಟ್ಟಿದ ಎಷ್ಟೆಲ್ಲ ಮನುಷ್ಯರು…. ಹೀಗೆ ತಿರುಗಾಟದ ಹಿಂದಿನ ಆಧ್ಯಾತ್ಮವನ್ನು ಈ ಸಂವಾದ ಕಟ್ಟುತ್ತ ಹೋಗುತ್ತದೆ. ಇಂದಿನ ಪ್ರಗತಿಯ ಅಬ್ಬರದಲ್ಲಿ ಇಂಥ ಗತಿಶೀಲ ಬದುಕಿನ ಧ್ಯಾನ ಮಾಯವಾಗಿದೆ, ಲಾಭದ ಉದ್ದೇಶವೇ ಜಾಣ್ಮೆ, ಸಾಧನೆಯೆನಿಸಿಕೊಂಡಿದೆಯೆಂಬ ಹಳಹಳಿಕೆಯೊಂದು ಕಾಡುತ್ತದೆ.

ಮುತ್ತು:
ಈ ಲೋಕದ ಜನರು ಕಾಡು ತಿರುಗುವವರನ್ನು
ಲೋಫರ್‍ಗಳೆಂದು ಕರೆಯುತ್ತಾರೆ
ಕಾಡು ಕಡಿದು ಸಾಗಿಸುವವರನ್ನು
ಸಾಹಸಿಗಳೆಂದೂ ಉದ್ಯಮಶೀಲರೆಂದೂ ಕೊಂಡಾಡುತ್ತಾರೆ

ಲೋಕಸತ್ಯದ ಮಾನದಂಡಗಙಳು ಸ್ವಾರ್ಥದಿಂದ ಕೂಡಿರುತ್ತವೆ. ಲೋಕವು ಕಟ್ಟಿಕೊಳ್ಳುವ ಜ್ಞಾನವು ಅಧಿಕಾರದಿಂದ ಪ್ರೇರಿತವಾಗಿರುತ್ತದೆ. ಹಾಗೆಯೇ ಇವುಗಳ ಫಲಿತವಾದ ಹಣವು ಸತ್ಯವನ್ನೂ ಹೇಗೆ ಬೇಕಾದರೂ ತಿರುಚುತ್ತದೆ. ಈ ವ್ಯಂಗ್ಯವನ್ನು ತಣ್ಣಗಿನ ತಮಾಷೆಯ ಧ್ವನಿಯಲ್ಲಿ ಕಟ್ಟಿಕೊಡುತ್ತಾ ಕವಿ ಚುರುಕು ಮುಟ್ಟಿಸುತ್ತಾರೆ.

ಜಂಗಮತ್ವದಲ್ಲಿ ತನ್ನ ಮುಕ್ತ ಸ್ವರೂಪವನ್ನು ಕಾಣಬೇಕೆಂಬುದು ಕವಿಯ ಇಚ್ಛೆ. ತನ್ನ ತಾನರಿತಾಗ ಲೋಕವನ್ನು ಕಾಣುವ ಮಾನದಂಡಗಳು ಮಾಯವಾಗುತ್ತವೆ. ತಾನು ಹಿಗ್ಗಿ ವಿಶ್ವದ ಅನಂತ ಪ್ರವಾಹದಲ್ಲಿ ಕರಗಿದಾಗ ಅರಿವು ಅನಂತವಾಗುತ್ತದೆ. ಈ ಅರಿವನ್ನು ಪಂಪ, ಅಲ್ಲಮ, ಕುಮಾರವ್ಯಾಸ, ಕುವೆಂಪು, ಕಾರಂತ, ತೇಜಸ್ವಿ, ಶೇಕ್ಸ್‍ಪಿಯರ್ ಮುಂತಾದವರ ಉಕ್ತಿಗಳ ಮೂಲಕವೂ ಕಟ್ಟುವುದು ಚಿನ್ನಿ-ಮುತ್ತು ಸಂಭಾಷಣೆಗಳ ವಿಶೇಷ. ಜಗತ್ತಿನ ತತ್ವಜ್ಞಾನಿಗಳೂ ಇಲ್ಲಿ ಇಣುಕಿಹೋಗುತ್ತಾರೆ. ಕಾವ್ಯ-ತತ್ವಗಳ ಬೆಸುಗೆ ಮಾಡಿ ನಾವು ಬೇರೆಯಲ್ಲವೆಂದು ಹೇಳುತ್ತಾರೆ. ಇಲ್ಲಿನ ಚಿನ್ನಿ-ಮುತ್ತು ಕೂಡ ಬೇರೆಯಲ್ಲ. ಅವರೂ ಒಬ್ಬರೊಳಗೊಬ್ಬರಾಗಿದ್ದಾರೆ! ಅರಿವಿನ ಅನ್ವೇಷಣೆಯ ಎರಡು ಸ್ವರೂಪಗಳಷ್ಟೇ ಅವು! ಇಂಥ ಅವಿಭಜಿತ ಪ್ರಜ್ಞೆಗೆ ತಾರತಮ್ಯವು ಬೇಕಾಗಿಯೇ ಇಲ್ಲ. ತಾರತಮ್ಯವು ಮನುಷ್ಯ ನಿರ್ಮಿತ ಪ್ರಪಂಚದ ಮಾನಸಿಕ ರಚನೆಯಾಗಿದೆ. ಗುಣದ ಆಧಾರದಿಂದ ಮನುಷ್ಯರನ್ನು ವಿಭಜಿಸುವ ಉತ್ತಮ, ಮಧ್ಯಮ, ಅಧಮ ಎಂಬುದಿರಲಿ, ಜಾತಿಪಿರಮಿಡ್‍ಗಳ ಮೂಲಕ ರಚಿಸಲಾದ ಶ್ರೇಷ್ಠ-ಕನಿಷ್ಠವೆಂಬ ಕಲ್ಪನೆಗಳಿರಲಿ, ಪ್ರಗತಿಯ ಪಿರಮಿಡ್ಡು ರಚಿಸುವ ಮುಂದುವರೆದ, ಹಿಂದುಳಿದ ಎಂಬ ವರ್ಗೀಕರಣವಿರಲಿ, ಇವು ನಿಜವಲ್ಲ. ಇವು ಮಾನಸಿಕ ರಚನೆಗಳಷ್ಟೇ. ಈ ಮಿಥ್ಯೆಗಳನ್ನು ಮೀರಿ, ಮಾನದಂಡಗಳಾಚೆ ಇರುವ ಬಯಲನ್ನು ಧ್ಯಾನಿಸಿದವರು ಅನುಭಾವಿಗಳು. ಅವರಲ್ಲೂ ಅಲ್ಲಮ ಇಂಥ ಎಲ್ಲ ಕುರುಹುಗಳನ್ನು ವಿಸರ್ಜಿಸಬೇಕೆನ್ನುತ್ತಾನೆ. ಇದು ಬೌದ್ಧ ಚಿಂತನೆಗಳ ಧ್ವನಿಯೂ ಹೌದು.

ಅನಂತವನ್ನು ಕಣ್ಣುಗಳಲ್ಲಿ ಮಾತ್ರ
ಕಾಣುವವರು ಅಧಮರು!
ಅನಂತವನ್ನು ಕಿವಿಗಳಲ್ಲಿ ಮಾತ್ರ
ಕೇಳುವವರು ಮಧ್ಯಮರು!
ಅನಂತವನ್ನು ಇಂಗಿತದಲ್ಲಿ
ಅರಿಯುವವರು ಮಹಾತ್ಮರು!

ತಿಮಿಂಗಿಲವು ಬಾವಿಯಲ್ಲಿ
ಅನಂತವು ಕುರುಹಿನಲ್ಲಿ
ಪ್ರಕಟವಾಗುವುದಿಲ್ಲ.

ಅಲ್ಲಮನ ಬೆಡಗಿನ ಭಾಷೆಯ ಭವ್ಯತೆಯು ಚಿನ್ನಿ-ಮುತ್ತು ಸಂಭಾಷಣೆಗಳಲ್ಲೂ ಸಾಧ್ಯವಾಗುವುದು ನಂಗಲಿಯವರ ಸೃಜನಶೀಲತೆಗೆ ಸಾಕ್ಷಿ. ತಾನೇ ರಚಿಸಿಕೊಂಡ ಮಾನದಂಡಗಳ ಚೌಕಟ್ಟಿನಲ್ಲಿ ಅರಿವು ಕಟ್ಟಿಕೊಳ್ಳಬಾರದೆಂಬುದು ಅವರ ಚಿಂತನೆಗಳ ಸ್ಥಾಯಿ.

ಅರಿವಿನ ಅನುಸಂಧಾನವನ್ನು ಅದರಷ್ಟಕ್ಕೇ ಕೈಬಿಡದೇ ಅದನ್ನು ವಾಸ್ತವದ ಬದುಕಿನ ಸಾಧ್ಯತೆಯಾಗಿ ಕಾಣಬಹುದಾ? ಎಂಬ ಪ್ರಶ್ನೆಯನ್ನು ನಂಗಲಿಯವರು ಹಾಕಿಕೊಳ್ಳುತ್ತಾರೆ. ಆಧುನಿಕ ಶಿಕ್ಷಣದ ಮೂಲಕ ನಮಗೆ ದಕ್ಕುತ್ತಿರುವ ಅರಿವಾದರೂ ಎಂಥದು? ಅದರಲ್ಲಿ ವ್ಯಕ್ತಿತ್ವದ ದರ್ಶನವಾಗುತ್ತಿದೆಯಾ? ನಿಜದುದಯ ಸಾಧ್ಯವಾ? ಎಂಬಂತಹ ಪ್ರಶ್ನೆಗಳು ಹಾಗೂ ಉತ್ತರಗಳು ‘ಡಿ-ಸ್ಕೂಲಿಂಗ್’ ಪದ್ಯದಲ್ಲಿ ಮಾರ್ಮಿಕವಾಗಿವೆ. ಶಿಕ್ಷಣದ ಹೆಸರಿನಲ್ಲಿ ತಮಗೆ ಬೇಕಾದ ಆಕಾರದಲ್ಲಿ ವ್ಯಕ್ತಿತ್ವವನ್ನು ರೂಪಿಸುವ, ಉದ್ಯೋಗ ಮಾರುಕಟ್ಟೆಗೆ ತಕ್ಕಂತೆ ಕೌಶಲ ಹಾಗೂ ಆಲೋಚನೆಗಳನ್ನು ರೂಪಿಸುವ ‘ಕಾರ್ಪೆಂಟರಿ’ ನಡೆಯುತ್ತಿದೆ. ಇಂಥ ಸ್ಕೂಲಿಂಗ್ ಬದಲು ‘ಡಿ ಸ್ಕೂಲಿಂಗ್’ ಆದಾಗ ಮಾತ್ರ ಸ್ವದರ್ಶನವಾಗುತ್ತದೆ. ಶಾಲೆ ಕಾಲೇಜು, ಯುನಿವರ್ಸಿಟಿಗಳ ವ್ಯಾಸಂಗವನ್ನು ನಿಜದುದಯ ಎನ್ನಲಾರೆ ಎಂಬುದು ಮುತ್ತು ಉವಾಚ! ನಿಸರ್ಗ ಶಾಲೆಯೇ ವ್ಯಕ್ತಿತ್ವ ದರ್ಶನದ ಅತ್ಯುತ್ತಮ ಮಾದರಿಯೆನ್ನುವ ಅವರು ಕುವೆಂಪು ಅವರ ‘ಓ ನನ್ನ ಚೇತನ, ಆಗು ನೀ ಅನಿಕೇತನ’ ಎಂಬ ಹಾಡಿನ ಆತ್ಮ ಕೂಡ ಡಿ-ಸ್ಕೂಲಿಂಗ್ ಎಂದು ಮನದಟ್ಟು ಮಾಡುತ್ತಾರೆ. ಸಾಧನೆಯ ಹೆಸರಿನಲ್ಲಿ ನಡೆಯುವ ಸ್ಪರ್ಧೆ, ಅದರಿಂದ ಲಭಿಸುವ ಕೀರ್ತಿ-ಪ್ರಾಪ್ತಿಗಳ ಭೌತಿಕ ಜಗತ್ತಿನಲ್ಲಿ ತೇನ್‍ಸಿಂಗ್ ಹಿಮಾಲಯ ಏರಿದಾಗ ಹೇಳುವ ಮಾತುಗಳು ಡಿ-ಸ್ಕೂಲಿಂಗ್‍ನ ಮಾದರಿಯಾಗಿ ಕಾಣುತ್ತದೆ.

“ಮಗುವೊಂದು ತೆವಳಿಕೊಂಡು ಹೋಗಿ
ತಾಯ ತೊಡೆಯನ್ನೇರಿ ಕುಳಿತುಕೊಳ್ಳುವಂತೆ
ನಾನು ಆಶಿಖರ ಮಾತೆಯ ಬಳಿಯಿದ್ದೆ.”

“ತೇನ್‍ಸಿಂಗ್‍ನ ಅತ್ಯುನ್ನತಿ ಅವನ ಪಾದಗಳಲ್ಲಿಲ್ಲ
ಅವನ ಈ ಮನಸ್ಸಿನಲ್ಲಿದೆ.
ಇದೇ ನಿಜದುದಯ!”

ತೇನ್‍ಸಿಂಗ್‍ಗೆ ಇದು ನಿಸರ್ಗದೊಡನೆ ಸೆಣಸುವ ಆಟವಲ್ಲ. ಗೆದ್ದ ಹಮ್ಮಿನ ಪ್ರದರ್ಶನವಲ್ಲ. ಬಾಲ್ಯದಿಂದಲೂ ಬಂಗಾರ ಬಣ್ಣದಿಂದ ಹೊಳೆಯುತ್ತಿದ್ದ ಪರ್ವತದ ಬಳಿ ಹೋಗಬೇಕೆಂಬ ಮುಗ್ಧ ಕುತೂಹಲ. ಎವರೆಸ್ಟ್ ಅವನ ಸಹಜ ಬದುಕಿನ ಭಾಗ. ಸಹಜವೇ ನಿಜ. ಅಂಥ ನಿಜವನ್ನು ಕಾಣಲು ಡಿ-ಸ್ಕೂಲಿಂಗ್ ಬೇಕು. ಪೂರ್ವಗ್ರಹೀತಗಳನ್ನು ಕಳಚಿಕೊಂಡು ಬಯಲಾದಾಗಲೇ ನಿಜದುದಯವಾಗುವುದು ಸಾಧ್ಯವೆಂಬ ದರ್ಶನವನ್ನು ಈ ಸಂವಾದ ಮೂಡಿಸುತ್ತದೆ.

‘ಚಿನ್ನಿ-ಮುತ್ತು ಮಾತುಕತೆ’ಗಿರುವ ಇನ್ನೊಂದು ಆಯಾಮವೆಂದರೆ ಆತ್ಮಕಥಾನಕದ ಒಳನೋಟ. ಲೇಖಕರ ಬಾಲ್ಯ, ಓಡಾಟ, ಉದ್ಯೋಗ, ಗೆಳೆಯರ ಒಡನಾಟ, ಕಾಡಿನ ತಿರುಗಾಟದ ಅನುಭವಗಳು, ಕಾಡಿನಲ್ಲಿ ಎದುರಾದ ರಿಸ್ಕುಗಳು, ಸಾವನ್ನು ಮೂಸಿಬಂದ ಅನುಭವ, ನಕ್ಸಲೈಟುಗಳೆಂದು ಬಂಧನಕ್ಕೊಳಗಾದಾಗ ಅನುಭವಿಸಿದ ಆತಂಕ, ‘ಅಗನಾಗ್’- ನೇಚರ್ ಅವೇರ್ನೆಸ್ ಆರ್ಗನೈಸೇಶನ್ ಚಟುವಟಿಕೆಗಳು, ಪ್ರಾಧ್ಯಾಪಕ ವೃತ್ತಿಯ ಅಂಗವಾಗಿ ಬದುಕಿದ ಊರುಗಳಾದ ಕೊಡಗು, ಕೋಲಾರಗಳ ಬೆಟ್ಟ-ಗುಡ್ಡಗಳು….. ಇವೆಲ್ಲ ಮಧ್ಯಮಧ್ಯ ಇಣುಕುತ್ತ ಹೋಗುತ್ತವೆ. ಈ ವಿಶಾಲ ಜೀವನದ ಭಿತ್ತಿಯಲ್ಲಿ ಪ್ರಕೃತಿ ತಮ್ಮ ದೃಷ್ಟಿಯನ್ನು ವಿಸ್ತರಿಸಿತು, ಒಳಗನ್ನು ಬಯಲಾಗಿಸಿತೆಂಬ ಸಾರ್ಥಕ ಭಾವವೊಂದು ಹೊರಳಿಹೋಗುತ್ತದೆ. ಹಗಲಿನ ಸೂರ್ಯನ ಬೆಳಕಿನಲ್ಲಿ ಕಾಣದ ನಕ್ಷತ್ರಪುಂಜಗಳು ಇರುಳಿನ ಕತ್ತಲೆಯಲ್ಲಿ ಕಾಣುವಂತೆ, ಹೊರಗಿನ ಚೌಕಟ್ಟುಗಳು ಕಳಚಿದಾಗ ಒಳಗಿನ ದರ್ಶನವಾಗುವಂತೆ…….

ಮನುಷ್ಯರಲ್ಲಿರುವುದು ಎರಡೇ ಜಾತಿ
ಒಂದು ಮಿದುಳು ಜಾತಿ
ಎರಡು ಹೃದಯ ಜಾತಿ
ನಿನ್ನದು ಹೃದಯ ಜಾತಿಯಾದರೆ
ನೀನು ದೇವರ ಜೊತೆಯಲ್ಲಿರುವೆ
ಯಾರು ಮಿದುಳು ಜಾತಿಯವರಾಗಿರುತ್ತಾರೋ
ಅವರು ಸೈತಾನನ ಸಂತಾನವಾಗುತ್ತಾರೆ
ಇದಕ್ಕಾಗಿ ಚಿಂತಿಸಬೇಡ!

ಝೆನ್ ಉಕ್ತಿಯಂತೆ, ಸೂಫಿಯ ಉವಾಚದಂತೆ, ಸಂತನ ಪಿಸುನುಡಿಯಂತೆ ಧ್ವನಿಸುತ್ತಲೇ….. ಚಿನ್ನಿ-ಮುತ್ತು ಎಂಬ ಬದುಕನ್ನು ಪ್ರೀತಿಸುವ ಸರಳ ಹೃದಯದ ಮನುಜರು ಮಾಡುವ ಬದುಕಿನ ವ್ಯಾಖ್ಯಾನದಂತೆ ಈ ಪದ್ಯಗಳು ಅನುರಣಿಸುತ್ತವೆ.
*****

 

Comments are closed.

Social Media Auto Publish Powered By : XYZScripts.com