ಯೋಗಿ ಆದಿತ್ಯನಾಥ್‌ ಆಡಳಿತದ ಸರ್ಕಾರದಲ್ಲಿ ಕರಗುತ್ತಿವೆ ದೇಶದ ಕನಸುಗಳು……

    ಸುಭಾಷ್‌ಚಂದ್ರ, ಸಾಗರ

ಉತ್ತರ ಪ್ರದೇಶ. ಇತ್ತೀಚಿಗೆ ನೂರಾರು ಮಕ್ಕಳ ಸಾವಿಗೆ ಸಾಕ್ಷಿಯಾದ ರಾಜ್ಯ. ಜೀವದ ಬೆಲೆಯನ್ನೇ ಅರಿಯದೆ ವೈದ್ಯರು ಹಾಗೂ ಸರ್ಕಾರದ ಅತೀ ಬೇಜವಾಬ್ದಾರಿಯತ ವರ್ತನೆ ದೇಶದ ಕನಸುಗಳನ್ನು ಬಲಿಪಡೆದುಕೊಂಡಿದೆ.
ವೈದ್ಯೋ ನಾರಾಯಣೋ ಹರಿಃ ಎಂಬ ಮಾತೊಂದಿದೆ. ಆದರೆ ವೈದ್ಯರನ್ನು ದೇವರೆಂದು ಪೂಜಿಸುವ ಕಾಲ ಕಳೆದು ಸಾಕಷ್ಟು ವರ್ಷಗಳಾಗಿವೆ. ದುಡ್ಡು ಕೊಟ್ಟರೆ ಯಾವ ಕೆಲಸವನ್ನಾದರೂ ಮಾಡಲು ಸರಿ ಎಂಬ ಮನಸ್ಥಿತಿ ಬಂದಾಗಿದೆ. ಲಕ್ಷಾಂತರ ಖರ್ಚು ಮಾಡಿ ವೈದ್ಯಕೀಯ ಸೀಟು ಪಡೆದು ಡಾಕ್ಟರರಾಗುವುದೇ ದುಡ್ಡು ಮಾಡಲು ಎಂಬಂತ ಪರಿಸ್ಥಿತಿ ಉದ್ಭವವಾಗಿರುವುದು ಸತ್ಯ.
ಕಳೆದ ಒಂದು ವರ್ಷದಲ್ಲಿ ಉತ್ತರ ಪ್ರದೇಶದ ಬಿಆರ್ಡಿ ಆಸ್ಪತ್ರೆಯಲ್ಲಿ ಮಕ್ಕಳ ಸಾವಿನ ಸಂಖ್ಯೆ ಸಾವಿರದ ಗಡಿ ದಾಟಿದೆ. ಜನವರಿಯಿಂದ ಇದುವರೆಗೂ ಗೋರಕ್ಪುರದ ಬಿಆರ್ಡಿ ಆಸ್ಪತ್ರೆಯಲ್ಲಿ 1380 ಮಕ್ಕಳು ಸಾವಿನ ಮನೆ ಸೇರಿವೆ. ಜನವರಿಯಲ್ಲಿ 152 ಮಕ್ಕಳು ಮೃತಪಟ್ಟರೆ ಫೆಬ್ರವರಿಯಲ್ಲಿ 122 ಮಕ್ಕಳು, ಮಾರ್ಚ್ನಲ್ಲಿ 159 ಮಕ್ಕಳು , ಏಪ್ರಿಲ್ನಲ್ಲಿ 123 ಮಕ್ಕಳು ಸಾವಿಗೀಡಾದರೆ ಮೇನಲ್ಲಿ 139 ಮಕ್ಕಳು ಮೃತಪಟ್ಟಿವೆ. ಜೂನ್ ತಿಂಗಳಲ್ಲಿ 138 ಹಾಗೂ ಜುಲೈನಲ್ಲಿ 128 ಮಕ್ಕಳು ಹಾಗೂ ಆಗಸ್ಟ್ನಲ್ಲಿ ಅತಿಹೆಚ್ಚು ಅಂದರೆ 1415 ಮಕ್ಕಳು ಮೃತಪಟ್ಟಿವೆ.

ಇದೇ ಶನಿವಾರ ಬಂದ ಮಾಹಿತಿಯ ಪ್ರಕಾರ ಸೆಪ್ಟಂಬರ್ನಲ್ಲಿ 120 ಮಕ್ಕಳು ಮೃತಪಟ್ಟಿರುವುದಾಗಿ ವರದಿಯಾಗಿದೆ. ಇದಕ್ಕಿಂತ ಆಘಾತಕಾರಿ ವಿಷಯ ಎಂದರೆ ಇದರಲ್ಲಿ ಆಶ್ಚರ್ಯ ಪಡುವಂತದ್ದೇನೂ ಇಲ್ಲ. ಪ್ರತಿವರ್ಷ ಮಳೆಗಾಲದಲ್ಲಿ ಮಕ್ಕಳ ಸಾವಿನ ಸಂಖ್ಯೆ ಹೆಚ್ಚುವುದು ಸಾಮಾನ್ಯ ಎಂದು ವೈದ್ಯಾಧಿಕಾರಿಗಳು ಹೇಳಿಕೆ ನೀಡಿರುವುದು.
ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಮಕ್ಕಳಿಗೆ ಆಮ್ಲಜನಕ ಒದಗಿಸಲಾಗದ ಪರಿಸ್ಥಿತಿಗೆ ನಮ್ಮ ಯೋಗಿ ಆದಿತ್ಯ ನಾಥ್ ಅವರ ಸರ್ಕಾರ ಬಂದಿದೆ ಎಂದರೆ ನಿಜಕ್ಕೂ ನಾಚಿಕೆಯ ಸಂಗತಿಯೇ ಸರಿ. ಅಲ್ಲದ ವೈದ್ಯರೂ ಬೇಜವಾಬ್ದಾರಿ ತನದಿಂದ ವರ್ತಿಸುತ್ತಿದ್ದು, ಈ ಆಸ್ಪತ್ರೆಯ ಪರಿಸ್ಥಿತಿ ನೋಡಿದರೆ ವೈದ್ಯರು, ಮಕ್ಕಳನ್ನು ಭೂಮಿಯಿಂದ ಯಮಲೋಕಕ್ಕೆ ಪಾರ್ಸಲ್ ಮಾಡುವ ಕಾಂಟ್ರ್ಯಾಕ್ಟ್ ತೆಗೆದುಕೊಂಡಂತೆ ಕಾಣುತ್ತಿದೆ.
ಉತ್ತರ ಪ್ರದೇಶದ ಚುನಾವಣೆ ನಡೆದು ಯೋಗಿ ಆದಿತ್ಯನಾಥ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಜನರಿಗೆ ನಿರೀಕ್ಷೆ, ಭರವಸೆ ಮೂಡಿತ್ತು. ಯೋಗಿ ಆಡಳಿತದಲ್ಲಿ ಉತ್ತರ ಪ್ರದೇಶ ರಾಜ್ಯ ಸುಭೀಕ್ಷವಾಗಿರುತ್ತದೆ. ಜನರಿಗೆ ಎಲ್ಲಾ ರೀತಿಯ ಸೌಲಭ್ಯಗಳೂ ದೊರೆಯುತ್ತವೆ. ಜನರ ನರಳಾಟ ತಪ್ಪುತ್ತದೆ. ಹೀಗೆ… ಯೋಗಿ ಪರ ಸಾಕಷ್ಟು ನಿರೀಕ್ಷೆಯ ಮಾತುಗಳು ಕೇಳಿಬರುತ್ತಿತ್ತು.

ಆದರೆ ಈ ಒಂದು ಘೋರ ದುರಂತ ಯೋಗಿ ಆದಿತ್ಯನಾಥ್ ಮೇಲಿದ್ದ ಎಲ್ಲಾ ನಿರೀಕ್ಷೆಯನ್ನು ನುಚ್ಚು ನೂರು ಮಾಡಿದೆ. ಅಧಿಕಾರದ ಮದದಲ್ಲಿ ಮಕ್ಕಳೇನು ಸರ್ಕಾರದ ಜವಾಬ್ದಾರಿಯೇ? ಎಂಬ ಪ್ರಶ್ನೆ ಕೇಳಿದ್ದೂ ಆಗಿದೆ. ರಾಜ್ಯದ ಜನತೆಯ ಕಷ್ಟ ಸುಖಗಳಲ್ಲಿ ಭಾಗಿಯಾಗದವರು, ತೊಂದರೆಯಲ್ಲಿ ಸಿಕ್ಕಿಹಾಕಿಕೊಂಡ ತನ್ನದೇ ಜನರಿಗೆ ನ್ಯಾಯ ಒದಗಿಸಲಾರದವರು ಜನನಾಯಕನಾಗಿರಲು ಅಯೋಗ್ಯ ಎಂಬ ಮಾತೂ ಕೇಳಿಬಂದಿದೆ. ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ತನ್ನ ಪ್ರಜೆಗಳಿಗೆ ಬೇಕಾದ ಸವಲತ್ತುಗಳನ್ನು ಮಾಡಿಕೊಡುವುದರ ಮೂಲಕ ಯಶಸ್ವಿ ನಾಯಕನೆಂದು ನೆಚ್ಚಿಕೊಳ್ಳುವ ಬದಲು ಖಳನಾಯಕನಂತೆ ಕಾಣುತ್ತಿರುವುದಂತೂ ಸತ್ಯ.
ಸರ್ಕಾರಿ ಆಸ್ಪತ್ರೆ ಸರ್ಕಾರದ ಜವಾಬ್ದಾರಿ. ಆದರೆ ನೂರಾರು ಮಂದಿ ಆಸ್ಪತ್ರೆಗೆ ಬರುತ್ತಾರೆ ಎಂದ ಮೇಲೆ ಚಿಕಿತ್ಸೆಗೆ ಬೇಕಾದ ಸೌಕರ್ಯಗಳೂ ಇರಬೇಕಾಗುತ್ತದೆ. ಆದರೆ ಬಿಆರ್ಡಿ ಆಸ್ಪತ್ರೆಯಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಸಾವಿರಾರು ಮಕ್ಕಳು ಆಕ್ಸಿಜನ್ಗಾಗಿ ಪರದಾಡುತ್ತಿದ್ದರೂ ಆಕ್ಸಿಜನ್ ಪೂರೈಕೆಯನ್ನೂ ಮಾಡುತ್ತಿಲ್ಲ. ಇಂತಹ ಆಡಳಿತ ನಡೆಸಲು ಯೋಗಿಯೇ ಬೇಕಿತ್ತೇ ಎಂದು ಜನ ಕೇಳುವಂತಾಗಿದೆ.
ಕೆಳ ಸ್ತರದಲ್ಲಿರುವ ಮಂದಿ ಖಾಸಗಿ ಆಸ್ಪತ್ರೆಯಲ್ಲಿ ಬಿಲ್ ಕಟ್ಟಲು ಸಾಧ್ಯವಾಗದ ಕಾರಣ ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳನ್ನು ಸೇರಿಸುತ್ತಾರೆ. ಅಲ್ಲದೆ ಹೆತ್ತು, ಹೊತ್ತ ಮಕ್ಕಳ ಬಗ್ಗೆ ಸಾವಿರಾರು ಕನಸು ಕಟ್ಟಿಕೊಂಡು ಮಕ್ಕಳು ಬೆಳೆದು ದೊಡ್ಡವರಾಗಲಿ ಎಂದು ಕಾಯುತ್ತಿರುತ್ತಾರೆ. ಆದರೆ ಇಲ್ಲಿ ಆಸ್ಪತ್ರೆಗೆ ಬಂದ ಮಕ್ಕಳು ಗುಣಮುಖರಾಗಿ ಹೋಗುವುದಕ್ಕಿಂತ ಶವವಾಗಿ ಹೋಗುತ್ತಿದ್ದಾರೆ.


ಇಷ್ಟಾದರೂ ಯೋಗಿ ಆದಿತ್ಯನಾಥ್ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲಿ ಮಕ್ಕಳ ಸಾವಿನ ಕುರಿತು ಗಮನ ಹರಿಸದಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಇಷ್ಟು ಸಾವಾದ ಮೇಲಾದರೂ ಯೋಗಿ ಸರ್ಕಾರ ಎಚ್ಚೆತ್ತುಕೊಳ್ಳಲಿ, ಇನ್ನಷ್ಟು ಮಕ್ಕಳ ಪ್ರಾಣಕ್ಕೆ ಆಪತ್ತು ಬರದಿರಲಿ… ಬೇಜವಾಬ್ದಾರಿಯುತ ವೈದ್ಯರಿಗೆ ತಕ್ಕ ಶಿಕ್ಷೆಯಾಗಲಿ…ದೇಶದ ಭವಿಷ್ಯ ಸುಭೀಕ್ಷವಾಗಿರಲಿ..

 

Comments are closed.

Social Media Auto Publish Powered By : XYZScripts.com