ಬೆಕ್ಕಿನ ಮಲದಿಂದ ತಯಾರಾಗೋ ಕಾಫಿಗೆ ಶುರುವಾಗಿದೆ ಭಾರೀ ಡಿಮ್ಯಾಂಡ್…!

ಮನುಷ್ಯ ಅಭಿವೃದ್ಧಿ ಹೊಂದುತ್ತಾ ಹೋದಂತೆ ತಿನ್ನುವ ಆಹಾರದಲ್ಲೂ ವೈವಿದ್ಯತೆ ಬೆಳಸಿಕೊಳ್ಳುತ್ತಿದ್ದಾನೆ. ಮರದ ತೊಗಟೆ, ಮಣ್ಣು, ಪೆಟ್ರೋಲ್, ಗೆಡ್ಡೆ, ಗೆಣಸು, ಜೀವಂತ ಮೀನು, ಕಪ್ಪೆ ಹೀಗೆ ಮನುಷ್ಯ ತಿನ್ನುವ ಆಹಾರದ ವೈವಿದ್ಯತೆ ನೋಡಿದರೆ ಆಶ್ಚರ್ಯವಾಗುತ್ತದೆ. ವಿಶ್ವದ ಹಲವೆಡೆ ಇಂತಹ ನೂರಾರು ವಿಚಿತ್ರ ಆಹಾರ ಪದ್ದತಿಗಳನ್ನು ನೋಡಬಹುದು. ಇಂತಹ ವಿಚಿತ್ರ ಆಹಾರ ಪದ್ದತಿ ಭಾರತಕ್ಕೂ ಲಗ್ಗೆ ಇಟ್ಟಿದೆ.

ದಕ್ಷಿಣ ಭಾರತದ ಜನರ ಪ್ರಿಯ ಪೇಯವಾಗಿರುವ ಕಾಫಿ ಈಗ ವಿದೇಶದಲ್ಲೂ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ಇತ್ತೀಚೆಗೆ ಭಾರತ ವಿಭಿನ್ನ ಕಾಫಿಯೊಂದನ್ನು ತಯಾರಿಸಿದ್ದು, ವಿಶ್ವದ ಅತೀ ದುಬಾರಿ ಈ ಕಾಫಿಯನ್ನು ಬೆಕ್ಕಿನ ಮಲದಿಂದ ತಯಾರಿಸಲಾಗುತ್ತಿದೆ.
ಹೌದು ಮೊದಲು ಪೂರ್ವ ಏಷ್ಯಾ ದೇಶಗಳಲ್ಲಿ ಜನಪ್ರಿಯವಾಗಿದ್ದ ಈ ಬೆಕ್ಕಿನ ಮಲದ ಕಾಫಿ ಮೊದಲು ತಯಾರಾಗಿದ್ದು, ಜಾವಾ, ಸುಮಾತ್ರಾ ದೇಶಗಳಲ್ಲಿ. ಈಗ ಕೊಡಗಿನಲ್ಲೂ ಈ ಕಾಫಿ ತಯಾರಿಸಲಾಗುತ್ತಿದೆ.

ಈ ಕಾಫಿ ತಯಾರಿಸುವುದು ಹೇಗೆ ?
ಕಾಫಿ ಬೀಜದಿಂದಲೇ ಈ ಕಾಫಿ ತಯಾರಾಗುತ್ತದೆ. ಆದರೆ ಈ ಕಾಫಿ ಬೀಜಗಳಿರುವ ಹಣ್ಣುಗಳನ್ನು ಸಿವೆಟ್ ಎಂಬ ಬೆಕ್ಕಿಗೆ ತಿನ್ನಿಸಲಾಗುತ್ತದೆ. ಅದನ್ನು ತಿಂದ ಬೆಕ್ಕು ಕಾಫಿ ಬೀಜದ ಹೊರತಿರುಳನ್ನು ಜೀರ್ಣಿಸಿಕೊಂಡು ಒಳಗಿನ ಗಟ್ಟಿ ಬೀಜವನ್ನು ಮಲದ ಮೂಲಕ ಹೊರ ಹಾಕುತ್ತದೆ. ಈ ಬೀಜಗಳನ್ನು ಸ್ವಚ್ಛ ಮಾಡಿ ಹುರಿದು ಪುಡಿ ಮಾಡಿದ ಕಾಫಿಗೆ ಸಿವೆಟ್ ಕಾಫಿ ಅಥವಾ ಕ್ಯಾಟ್ ಫೂ ಕಾಫಿ ಎಂದು ಕರೆಯಲಾಗುತ್ತದೆ.

ಈ ಕಾಫಿ ಇಷ್ಟೊಂದು ದುಬಾರಿ ಏಕೆ ?
ನಮಗೆಷ್ಟು ಬೇಕೋ ಅಷ್ಟು ಕಾಫಿ ಬೀಜಗಳು ನಮಗೆ ಸಿಗುವುದಿಲ್ಲ. ಜೊತೆಗೆ ಕಾಫಿಹಣ್ಣು ಚೆನ್ನಾಗಿ ಹಣ್ಣಾದ ಬಳಿಕ ಸಿವೆಟ್ ಬೆಕ್ಕು ಈ ಹಣ್ಣನ್ನು ತಿನ್ನಬೇಕು. ಜೊತೆಗೆ ಈ ಬೆಕ್ಕಿನ ಕರುಳಿನಲ್ಲಿ ಹಣ್ಣು ಜೀರ್ಣಗೊಂಡು ಒಳಗಿನ ಗಟ್ಟಿ ಬೀಜ ಮಾತ್ರ ಮಲದ ಮೂಲಕ ಹೊರಬರಬೇಕು. ಬಳಿಕ ಇದನ್ನು ಸ್ವಚ್ಚ ಮಾಡಿ ಬೀಜಗಳನ್ನು ಪ್ರತ್ಯೇಕಿಸಬೇಕು. ಆದ್ದರಿಂದ ಕಡಿಮೆ ಪ್ರಮಾಣದಲ್ಲಿ ಕಾಫಿ ಬೀಜಗಳು ದೊರಕುತ್ತವೆ. ಜೊತೆಗೆ ಬೆಕ್ಕುಗಳು ವಿಸರ್ಜಿಸಿದ ಮಲದಿಂದ ಸಂಗ್ರಹಿಸಿದ ಎಲ್ಲಾ ಬೀಜಗಳೂ ಗುಣಮಟ್ಟದ್ದವಾಗಿರುವುದಿಲ್ಲ. ಆದ್ದರಿಂದ ಉತ್ತರ ಗುಣಮಟ್ಟದ ಬೀಜಗಳನ್ನು ಪ್ರತ್ಯೇಕಿಸಿ ಕಾಫಿ ಪುಡಿ ಮಾಡಬೇಕಾಗುತ್ತದೆ. ಆದ್ದರಿಂದ ಈ ಕಾಫಿ ಬೆಲೆ ಹೆಚ್ಚಾಗಿದೆ.

ಅಲ್ಲದೆ ಬೆಕ್ಕಿನ ಕರುಳಿನಲ್ಲಿನ ಆಮ್ಲೀಯತೆ ಹೊರಗಿನ ತಿರುಳನ್ನು ಕರಗಿಸುವ ಶಕ್ತಿ ಹೊಂದಿರುತ್ತದೆ. ಆದರೆ ಒಳಗಿನ ಗಟ್ಟಿ ಬೀಜವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಬೀಜಗಳು ವಿಶೇಷ ಸ್ವಾದ ಮತ್ತು ಪೋಷಕಾಂಶಗಳನ್ನು ಪಡೆಯುವುದರಿಂದ ಈ ಕಾಫಿ ವಿಷೇಷವಾಗಿದೆ.

ಕಾಫಿಯ ಬೆಲೆ ಎಷ್ಟು ?
ವಿದೇಶದಲ್ಲಿ ಈ ಕಾಫಿಪುಡಿ ಕೆಜಿಗೆ 20ರಿಂದ 25 ಸಾವಿರ ಬೆಲೆ ಬಾಳುತ್ತದೆ. ಕರ್ನಾಟಕದ ಕೊಡಗಿನಲ್ಲಿ ಬೆಳೆಯುವ ಈ ಬೀಜಗಳಿಗ ಕೆಜಿಗೆ 8,000 ನಿಗಧಿಪಡಿಸಿದ್ದಾರೆ.

Comments are closed.