ಮೈಸೂರು ದಸರಾ : ಚಿನ್ನದ ಸಿಂಹಾಸನ ಜೋಡಣೆ ಹಿನ್ನೆಲೆ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಜಗತ್ಪ್ರಸಿದ್ಧ ಐತಿಹಾಸಿಕ ಅರಮನೆಯಲ್ಲಿ ರಾಜಮನೆತನದ ಖಾಸಗಿ ದರ್ಬಾರ್ ನ ಸಿದ್ದತಾ ಕಾರ್ಯದ ಪ್ರಯುಕ್ತ ಇಂದು ಮಧ್ಯಾಹ್ನದವರೆಗೆ ಅರಮನೆಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

ಇಂದು ಅರಮನೆಯ ದರ್ಬಾರು ಸಭಾಂಗಣದಲ್ಲಿ ಚಿನ್ನದ ಸಿಂಹಾಸನವನ್ನು ಜೋಡಣೆ ಮಾಡಲಿರುವ ಹಿನ್ನೆಲೆಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಅರಮನೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಇಂದು ಬೆಳಿಗ್ಗೆ 7.45 ರಿಂದ 8.45 ರ ಒಳಗಿನ ಶುಭ ಮಹೂರ್ತದಲ್ಲಿ ರಾಜಮನೆತನದ ವತಿಯಿಂದ ನವಗ್ರಹ ಹೋಮ ನೆರವೇರಲಿದೆ. ಬಳಿಕ 9.45 ರಿಂದ 10.15ರೊಳಗೆ ಸಲ್ಲುವ ಶುಭ ಮಹೂರ್ತದಲ್ಲಿ ಚಿನ್ನದ ಸಿಂಹಾಸನವನ್ನು ಜೋಡಿಸುವ ಕಾರ್ಯಕ್ಕೆ ಚಾಲನೆ ಸಿಗಲಿದೆ. ಮೈಸೂರಿನ ಯದುವಂಶದ ರಾಜಮಾತೆಯಾಗಿರುವ ಪ್ರಮೋದಾದೇವಿ ಒಡೆಯರ್ ಮಾರ್ಗದರ್ಶನದಲ್ಲಿ ಚಿನ್ನದ ಸಿಂಹಾಸನವನ್ನು ಜೋಡಿಸಲಾಗುತ್ತದೆ.

ಇದೇ ರೀತಿ ಸೆಪ್ಟೆಂಬರ್ 21 ರಿಂದ ಯದುವಂಶದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನವರಾತ್ರಿಯ ಖಾಸಗಿ ದರ್ಬಾರು ಆರಂಭಿಸಲಿರುವ ಹಿನ್ನೆಲೆಯಲ್ಲಿ ಅಂದೂ ಕೂಡ ಮಧ್ಯಾಹ್ನದವರೆಗೆ ಅರಮನೆಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಸೆಪ್ಟೆಂಬರ್ 29 ರಂದು ಆಯುಧ ಪೂಜೆ ಹಾಗೂ ಸೆಪ್ಟೆಂಬರ್ 30ರಂದು ವಿಜಯದಶಮಿಯ ಜಂಬೂಸವಾರಿ ಮೆರವವಣಿಗೆಯ ಪ್ರಯುಕ್ತ ಆ ಎರಡೂ ದಿನಗಳ ಕಾಲ ಅರಮನೆಯ ಒಳಾವರಣಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಬರುವ ಅಕ್ಟೋಬರ್ 14ರಂದು ಚಿನ್ನದ ಸಿಂಹಾಸನವನ್ನು ಕಳಚಿ ಮತ್ತೆ ಸ್ವಸ್ಥಾನಕ್ಕೆ ಸೇರಿಸಲಿರುವ ಹಿನ್ನೆಲೆಯಲ್ಲಿ ಅಂದು ಕೂಡ ಮಧ್ಯಾಹ್ನದವರೆಗೆ ಅರಮನೆಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

 

Comments are closed.

Social Media Auto Publish Powered By : XYZScripts.com