ದೆಹಲಿ : ಐದು ವರ್ಷದ ಕಂದಮ್ಮನ ಮೇಲೆ ಅತ್ಯಾಚಾರವೆಸಗಿದ ಕಾಮುಕ

ದೆಹಲಿ : ಐದು ವರ್ಷದ ಬಾಲಕಿಯ ಮೇಲೆ ಶಾಲಾ ಸಿಬ್ಬಂದಿ ವಿಕಾಸ್ ಎಂಬಾತ ಅತ್ಯಾಚಾರ ಮಾಡಿರುವ ಘಟನೆ ದೆಹಲಿಯ ಶಾಹ್ದಾರಾದ ಶಾಲೆಯಲ್ಲಿ ನಡೆದಿದೆ. ಸದ್ಯ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

 

ದೆಹಲಿಯ ಶಾಹ್ದಾರಾದ ಟಾಗೋರ್‌ ಪಬ್ಲಿಕ್ ಶಾಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಆರೋಪಿ ವಿಕಾಸ್‌ ಕೆಲಸ ಮಾಡುತ್ತಿದ್ದ. ಮಧ್ಯಾಹ್ನ ಊಟದ ವೇಳೆ ಶಿಕ್ಷಕರಿಗೆ ಊಟದ ಬಾಕ್ಸ್‌ಗಳನ್ನು ನೀಡಿದ್ದ ವಿಕಾಸ್‌ ಬಳಿಕ ಮಗುವನ್ನು ಯಾರೂ ಇಲ್ಲದ ತರಗತಿಯೊಳಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದ. ಆದರೆ ತಾನು ಅತ್ಯಾಚಾರ ಮಾಡಿಲ್ಲ. ಶಾಲಾ ಆವರಣದೊಳಗೆ ಸಿಸಿಟಿವಿ ಇದ್ದು, ಅದನ್ನು ಗಮನಿಸಿ ಎಂದಿದ್ದಾನೆ. ಜೊತೆಗೆ ನಾನು ಪ್ರತಿನಿತ್ಯ ಕುಡಿದುಕೊಂಡೇ ಕೆಲಸಕ್ಕೆ ಬರುತ್ತೇನೆ ಅದರಲ್ಲೇನು ವಿಶೇಷವಿದೆ ಎಂದು ಪೊಲೀಸರಿಗೇ ಪ್ರಶ್ನಿಸಿದ್ದಾನೆ.

ಮಗು ಮನೆಗೆ ತೆರಳಿದ ಬಳಿಕ ಮಗು ಹೊಟ್ಟೆನೋವು ಎಂದು ತಾಯಿಯ ಬಳಿ ಹೇಳಿದೆ . ಬಳಿಕ ಮಗುವಿಗೆ ರಕ್ತಸ್ರಾವವಾಗುತ್ತಿರುವುದನ್ನು ತಾಯಿ ಗಮನಿಸಿದ್ದು, ಕೂಡಲೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ. ಮಗುವನ್ನು ಪರೀಕ್ಷಿಸಿದ ವೈದ್ಯರು ಅತ್ಯಾಚಾರ ನಡೆದಿರುವ ವಿಷಯ ತಿಳಿಸಿದ್ದಾರೆ.

ಘಟನೆ ಕುರಿತು ತನಿಖೆ ನಡೆಸುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಆದೇಶಿಸಿದ್ದು, ಘಟನೆಯನ್ನು ಖಂಡಿಸಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ತಮ್ಮ ಕೆಲಸ ಮಾಡುತ್ತಿದ್ದಾರೆ. ಮ್ಯಾಜಿಸ್ಟ್ರಿಯಲ್ ತನಿಖೆಗಾಗಿ ಆದೇಶಿಸಲಾಗಿದೆ. ದೆಹಲಿಯಲ್ಲಿ ಮಕ್ಕಳ ಸುರಕ್ಷತೆ ಕುರಿತಂತೆ ಗಮನ ಹರಿಸಲು ಶಿಕ್ಷಣ ಇಲಾಖೆಗೆ ಸೂಚಿಸುವುದಾಗಿ ಕೇಜ್ರಿವಾಲ್‌ ಟ್ವೀಟ್‌ ಮಾಡಿದ್ದಾರೆ

 

Social Media Auto Publish Powered By : XYZScripts.com