ಗೌರಿ ಲಂಕೇಶ್ ಎಂಬ ಎಂದೂ ಮುಳುಗದ ನಕ್ಷತ್ರ ನಡೆದು ಬಂದ ಹಾದಿ

ಕನ್ನಡದ ಸಾಕ್ಷಿ ಪ್ರಜ್ಞೆ ಪಿ.ಲಂಕೇಶ್‍ರವರ ಹಿರಿಯ ಪುತ್ರಿ ಗೌರಿ ಲಂಕೇಶ್. ಲಂಕೇಶ್‍ರವರಿಂದ ಪ್ರಜಾತಾಂತ್ರಿಕ ಬದ್ಧತೆ ಮತ್ತು ಜಾತ್ಯತೀತತೆಯನ್ನು ಕಲಿತು, ಅದನ್ನೇ ಬದುಕಿನಲ್ಲಿ ಅಳವಡಿಸಿಕೊಂಡರು. ಅವೇ ಮೌಲ್ಯಗಳಿಗಾಗಿ ಬದುಕಿದರು; ಅವೇ ಮೌಲ್ಯಗಳಿಗಾಗಿ ಕೊಲೆಯಾದರು!
ಶಿಕ್ಷಣ ಮತ್ತು ವೃತ್ತಿ:
ಶಿಕ್ಷಣ ಪದವಿಯವರೆಗೆ ಸಾಗಿದ್ದು ಬೆಂಗಳೂರಿನಲ್ಲಿಯೇ. ನ್ಯಾಷನಲ್ ಕಾಲೇಜಿನ ವಿಚಾರವಂತಿಕೆಯ ವಾತಾವರಣದಲ್ಲಿ ಪದವಿ ಪಡೆದು ಉನ್ನತ ಶಿಕ್ಷಣಕ್ಕಾಗಿ ದೆಹಲಿಯ ಜೆಎನ್‍ಯು ವಿಶ್ವವಿದ್ಯಾಲಯಕ್ಕೆ ಹೋದವರು, ಅಲ್ಲೆ ಸಕ್ರಿಯ ಪತ್ರಿಕೋದ್ಯಮಕ್ಕೆ ಇಳಿದರು.
ಟೈಮ್ಸ್ ಆಫ್ ಇಂಡಿಯಾದಿಂದ ವೃತ್ತಿ ಜೀವನ ಆರಂಭ. ನಂತರ ದ ಸಂಡೆ, ಈ ಟಿ.ವಿ ಮೊದಲಾದವುಗಳಲ್ಲಿ ಕೆಲಸ ಮಾಡುತ್ತಾ, ಉತ್ತಮ ತನಿಖಾ ಪತ್ರಿಕೋದ್ಯಮವನ್ನು ರೂಢಿಸಿಕೊಂಡರು. ಆ ಅವಧಿಯಲ್ಲಿ ಅವರ ಪತ್ರಕರ್ತೆಯ ಕೌಶಲ್ಯ ಸಾಬೀತಾಗುವಂತಹ ಅನೇಕ ವರದಿಗಾರಿಕೆ ಮಾಡಿದರು. ಕಾರ್ಗಿಲ್ ಯುದ್ಧದ ಯಥಾವತ್ ವರದಿಯು ಅವುಗಳಲ್ಲೊಂದು!

ಲಂಕೇಶ್ ಪತ್ರಿಕೆಯೊಂದಿಗೆ ಯಾನ : 2000ದಲ್ಲಿ ಪಿ.ಲಂಕೇಶ್‍ರವರು ತೀರಿಕೊಂಡ ನಂತರ, ಇಂಗ್ಲೀಷ್ ಪತ್ರಿಕೋದ್ಯಮದಲ್ಲಿ ಇದ್ದ ಉಜ್ವಲ ಭವಿಷ್ಯವನ್ನು ಕೊಡವಿಕೊಂಡು, ಲಂಕೇಶ್ ಹೊಣೆಗೆ ಹೆಗಲು ನೀಡಿದರು. ಸಹೋದರ ಇಂದ್ರಜಿತ್ ಜೊತೆ ಜಂಟಿ ಜವಾಬ್ದಾರಿಯಲ್ಲಿ ನಡೆಯುತ್ತಿದ್ದ ಆ ಪ್ರಯಾಣದಲ್ಲಿ ನಡೆದ ಸಂಘರ್ಷಗಳು ಹಲವಾರು. ಜೊತೆಗೆ ಕನ್ನಡ ಭಾಷೆಯಲ್ಲಿ ಬರವಣಿಗೆಯೂ ಕಷ್ಟವಾಗುತ್ತಿತ್ತು. ಆದರೆ, ಒಬ್ಬ ನಿಜವಾದ ತುಡಿತವುಳ್ಳ ಪತ್ರಕರ್ತೆಯೆಂಬುದನ್ನು ಸಾಬೀತುಪಡಿಸುವಂತೆ ಕನ್ನಡ ಭಾಷೆ ಮತ್ತು ಭಾವ ಎರಡರ ಮೇಲೂ ಬಹುಬೇಗ ಹಿಡಿತ ಸಂಪಾದಿಸಿದರು.
ಕೋಮು ಸೌಹಾರ್ದದ ಸ್ಥಾಪನೆಯ ಪ್ರಯತ್ನಗಳು:
2002ರ ಗುಜರಾತ್ ಗಲಭೆಯಿಂದ ಆಳವಾಗಿ ಆಘಾತ ಅನುಭವಿಸಿದ್ದ ಗೌರಿ ಲಂಕೇಶ್, ಗುಜರಾತ್ ಪ್ರಯೋಗದ ಪ್ರಯೋಗಶಾಲೆಯೆಂದು ಸಂಘಪರಿವಾರದಿಂದ ಘೋಷಿಸಲ್ಪಟ್ಟ ಚಿಕ್ಕಮಗಳೂರಿನ ಬಾಬಾಬುಡನ್‍ಗಿರಿಯ ವಿಚಾರದಲ್ಲಿ ಅಪಾರ ಕಾಳಜಿ ಹೊಂದಿದ್ದರು. ಬಾಬಾಬುಡನ್‍ಗಿರಿ ಸೌಹಾರ್ದ ವೇದಿಕೆಯ ಸಕ್ರಿಯ ಭಾಗವಾದರು. 2003ರಲ್ಲಿ ಇದೇ ಹೋರಾಟದಲ್ಲಿ ಜೈಲು ವಾಸವನ್ನೂ ಅನುಭವಿಸಿದರು. ಇಂತಹ ಕೋಮುವಾದೀಕರಣದ ಪ್ರಯತ್ನಗಳನ್ನು ತಡೆದು ಕರ್ನಾಟಕದ ಸೌಹಾರ್ದ ಪರಂಪರೆಯನ್ನು ರಕ್ಷಿಸುವ ಆಶಯ ಹೊತ್ತು 2004ರಲ್ಲಿ ರಚಿತವಾದ ‘ಕರ್ನಾಟಕ ಕೋಮು ಸೌಹಾರ್ದ ವೇದಿಕೆ’ಯ ಸ್ಥಾಪಕ ಸದಸ್ಯರಲ್ಲೊಬ್ಬರು. ಅಲ್ಲಿಂದ ಕರ್ನಾಟಕದ ಕೋಮು ಸೌಹಾರ್ದ ಚಳವಳಿಯ ಮುಂಚೂಣಿ ನಾಯಕಿಯಾಗಿ ನಿರಂತರವಾಗಿ ಅದಕ್ಕಾಗಿ ಪತ್ರಿಕೆ ಮತ್ತು ವ್ಯಕ್ತಿಗತ ನೆಲೆಗಳಲ್ಲಿ ದುಡಿದರು.

* ಜನರಿಗೆ ಸೆಕ್ಯುಲರ್ ಆಶಯಗಳನ್ನು ತಲುಪಿಸುವುದು, ಸರ್ಕಾರದೊಂದಿಗೆ ಸಂಘರ್ಷ ನಡೆಸುವುದು ಮತ್ತು ಅಭದ್ರತೆಯಲ್ಲಿರುವ ಅಲ್ಪಸಂಖ್ಯಾತ ಸಮುದಾಯಕ್ಕೆ ಒತ್ತಾಸೆಯಾಗುವುದನ್ನು ಬಹಳ ಕಾಳಜಿಯಿಂದ ಮಾಡಿದರು.
2006-ಸುರತ್ಕಲ್ ಗಲಭೆ
2006-ಹಾಜಬ್ಬ ಹಸನಬ್ಬ ಅವರನ್ನು ಬೆತ್ತಲೆ ಮಾಡಿ ಹಲ್ಲೆ ನಡೆಸಿದ ಪ್ರಕರಣ
2008-ಚರ್ಚ್ ದಾಳಿ
2011 & 2012- ಹೆಣ್ಣುಮಕ್ಕಳ ಮೇಲೆ ಅನೈತಿಕ ಗೂಂಡಾಗಿರಿ, ಮುಧೋಳ ಗಲಭೆ, ಮೈಸೂರು ಗಲಭೆ
ಇವೇ ಮೊದಲಾದ ಪ್ರತೀ ಘಟನೆಯಲ್ಲೂ ಪ್ರತಿರೋಧದ ದನಿ ಎತ್ತಲು ಎಲ್ಲೂ ಹಿಂಜರಿಯಲಿಲ್ಲ.

* ಭಾರತದಲ್ಲಿ ಭಜರಂಗದಳ ಪಾಕಿಸ್ತಾನ ಬಾವುಟ ಹಾರಿಸಿದ ಪ್ರಕರಣ, ಮಾಲೆಗಾಂವ್ ಸ್ಫೋಟದಂತಹ ಪ್ರಕರಣಗಳಲ್ಲಿ ಸಂಘಪರಿವಾರದ ಭಯೋತ್ಪಾದನೆಯನ್ನು ಬಹಿರಂಗಪಡಿಸಿ, ಖಂಡತುಂಡವಾಗಿ ಖಂಡಿಸಿದ್ದರು.
* 2008ರಲ್ಲಿ ಸಾಲುಸಾಲಾಗಿ ಅಮಾಯಕ ಮುಸ್ಲಿಂ ಯುವಕರ ಬಂಧನಗಳಾದಾಗ ಅವರ ಪರವಾಗಿ ನೇರವಾಗಿ ಬರೆದ ಕೆಲವೇ ಪತ್ರಕರ್ತರಲ್ಲಿ ಗೌರಿ ಲಂಕೇಶ್ ಒಬ್ಬರು.
* 2014ರ ನಂತರ ಜನರಿಗೆ ತಪ್ಪು ಮಾಹಿತಿ ನೀಡಿ ಮರುಳು ಮಾಡುವ ಆರ್‍ಎಸ್‍ಎಸ್‍ ಮತ್ತು ಸಂಘಿಗಳ ಪ್ರಯತ್ನಗಳನ್ನು ಬಯಲುಗೊಳಿಸಲೆಂದೇ ವಿಶೇಷ ಅಂಕಣಗಳನ್ನು ಆರಂಭಿಸಿದರು. ಸಂಪಾದಕೀಯ ಅಂಕಣ ‘ಕಂಡ ಹಾಗೆ’ಯಲ್ಲಿ ನಿರಂತರವಾಗಿ ಬರೆದರು.
ಜಾತಿವಾದದ ವಿರುದ್ಧದ ದನಿ:
ಪ್ರಜಾತಾಂತ್ರಿಕ ಮೌಲ್ಯಗಳ ಮೇಲಿದ್ದ ಆಳವಾದ ನಂಬಿಕೆ ಮತ್ತು ಚಳವಳಿಗಳ ಒಡನಾಟದಿಂದಾಗಿ ಗೌರಿ ಲಂಕೇಶ್ ಅವರಲ್ಲಿ ಜಾತಿವಾದದ ವಿರುದ್ಧ ಸಂವೇದನಾಶೀಲತೆ ಸಹಜವಾಗಿ ಬೆಳೆದಿತ್ತು. ಜಾತಿ ದೌರ್ಜನ್ಯದ ಘಟನೆಗಳಾದಾಗ ತಕ್ಷಣದ ಸ್ಪಂದನೆ, ರೋಹಿತ್ ವೇಮುಲ ಪ್ರಕರಣದ ಸಂದರ್ಭದಲ್ಲಿ ನೇರ ದಿಟ್ಟ ನಿಲುವುಗಳು, ಅಂಬೇಡ್ಕರ್ ಕುರಿತ ಓದು, ಜಾತಿವಿರೋಧದ ಕುರಿತ ಪುಸ್ತಕಗಳ ಪ್ರಕಟಣೆ, ಖೈರ್ಲಾಂಜಿ ಘಟನೆಯ ಕುರಿತ ಪುಸ್ತಕದ ಕನ್ನಡಾನುವಾದ ಪ್ರಕಟ, ಯುವ ದಲಿತ ಬರಹಗಾರರಿಗೆ ಪತ್ರಿಕೆಯಲ್ಲಿ ಅವಕಾಶ, ಉಡುಪಿ ಚಲೋದಂತಹ ಹೋರಾಟಗಳಿಗೆ ಸದಾ ಬೆಂಬಲ……….ಇವೆಲ್ಲ ಪತ್ರಿಕೋದ್ಯಮದ ಜೊತೆಯಲ್ಲೇ ಸಾಗಿಬಂದವು.
ನಾಗರಿಕ ಹಕ್ಕುಗಳ ಹೋರಾಟ:
ನಾಗರಿಕ ಹಕ್ಕುಗಳಿಗಾಗಿ ದನಿ ಎತ್ತುವುದನ್ನು ಗೌರಿ ಲಂಕೇಶ್ ಎಂದೂ ನಿಲ್ಲಿಸಲೇ ಇಲ್ಲ. ವೀರಪ್ಪನ್ ಹೆಸರಿನಲ್ಲಿ ಎಸ್‍ಟಿಎಫ್ ಆದಿವಾಸಿ ಹೆಣ್ಣುಮಕ್ಕಳ ಮೇಲೆ ನಡೆಸಿದ ದೌರ್ಜನ್ಯವನ್ನು ವಿರೋಧಿಸಿದರು. ಮರಣದಂಡನೆ ಶಿಕ್ಷೆಯನ್ನು ಖಂಡಿಸಿದರು. ಪೊಳ್ಳು ರಾಷ್ಟ್ರೀಯವಾದವನ್ನು ಪ್ರಚಾರ ಮಾಡುತ್ತಾ ಅಮಾಯಕರನ್ನು ಅಪರಾಧಿಗಳನ್ನಾಗಿಸಿದಾಗ ವಿರೋಧಿಸಿದರು. ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ಬರೆಯುತ್ತಾ, ಧಾಬೋಲ್ಕರ್, ಪನ್ಸಾರೆ, ಕಲ್ಬುರ್ಗಿ ಹತ್ಯೆ ವಿರೋಧಿ ಚಳವಳಿಯಲ್ಲಿ ಪಾಲ್ಗೊಂಡರು.

ಈ ಎಲ್ಲಾ ಪ್ರಯತ್ನಗಳ ಭಾಗವಾಗಿ, 2004ರಿಂದ ಶಾಂತಿಗಾಗಿ ನಾಗರಿಕರು ವೇದಿಕೆಯಡಿಯಲ್ಲಿ, ನಕ್ಸಲ್ ಚಳವಳಿ ಕರ್ನಾಟಕದಲ್ಲಿ ರಕ್ತಸಿಕ್ತ ಅಧ್ಯಾಯ ಬರೆಯಬಾರದು ಎಂದು ಪ್ರಯತ್ನ ಆರಂಭಿಸಿದರು. ಸರ್ಕಾರ ಮತ್ತು ಮಾವೋವಾದಿ ನಾಯಕರೊಂದಿಗೆ ಸಂಧಾನದ ಮಾತುಕತೆ ನಡೆಸುತ್ತಿದ್ದಾಗಲೇ ಮಾವೋವಾದಿ ನಾಯಕ ಸಾಕೇತ್ ರಾಜನ್‍ರ ಎನ್‍ಕೌಂಟರ್ ಸಂಭವಿಸಿತು. ಅದನ್ನು ದೃಢವಾಗಿ ವಿರೋಧಿಸುತ್ತಾ, ಅದೇ ಸಮಯದಲ್ಲಿ ನಕ್ಸಲ್ ಚಳವಳಿಗಾರರನ್ನು ಮುಖ್ಯವಾಹಿನಿಗೆ ಕರೆತರುವ ಪ್ರಯತ್ನವನ್ನು ಮುಂದುವರೆಸಿದ್ದರು.
ಗೌರಿ ಲಂಕೇಶ್ ಅವರ ಈ ದಿಟ್ಟ ನಿಲುವುಗಳಿಂದಾಗಿ ಪತ್ರಿಕೆಯೊಳಗೂ ಬಿಕ್ಕಟ್ಟು ತೀವ್ರವಾದಾಗ ಅದನ್ನು ಬಿಟ್ಟು ಹೊರಬಂದು ಒಂದೇ ತಿಂಗಳಿನಲ್ಲಿ ‘ಗೌರಿ ಲಂಕೇಶ್ ಪತ್ರಿಕೆ’ ತಂದರು.
2016ರಲ್ಲಿ ಈ ಎಲ್ಲ ಪ್ರಯತ್ನಗಳಿಂದಾಗಿ, ನೂರ್ ಶ್ರೀಧರ್ ಮತ್ತು ಸಿರಿಮನೆ ನಾಗರಾಜ್ ಹಾಗೂ ಆ ನಂತರ ಅನೇಕ ಯುವಕ ಯುವತಿಯರು ಮುಖ್ಯವಾಹಿನಿಗೆ ಮರಳಿದರು.
ಮಮತೆಯ ಸ್ತ್ರೀವಾದಿ:
ಗೌರಿ ಲಂಕೇಶ್ ಅವರಿಗಿದ್ದ ಆಕ್ಟಿವಿಸ್ಟ್ ಗುಣಗಳಲ್ಲಿ ಮತ್ತೊಂದು ಮುಖ್ಯವಾದ ಆಯಾಮ ಅವರ ಸ್ತ್ರೀವಾದಿ ಅಸ್ಮಿತೆಗೆ ಸಂಬಂಧಿಸಿದ್ದು. ಎಂದಿಗೂ ಮಹಿಳೆ ಎಂಬ ಕಾರಣಕ್ಕಾಗಿ ಯಾವ ರೀತಿಯ ಸವಾಲುಗಳನ್ನೂ ಬಿಟ್ಟುಕೊಟ್ಟು ಹಿಂದೆ ಸರಿದವರೇ ಅಲ್ಲ. ಮದುವೆ ತನ್ನ ಅಸ್ಮಿತೆಗೆ ಅಡ್ಡಿಯೆನಿಸಿದಾಗ ಅತ್ಯಂತ ಪ್ರಬುದ್ಧವಾದ ರೀತಿಯಲ್ಲಿ ಅದರಿಂದ ಹೊರಬಂದರು. ಪತ್ರಿಕೆಯಲ್ಲಿ ‘ಪಾಂಚಾಲಿ’, ‘ಸಾವಂತ್ರಿ’ ಹೆಸರುಗಳಲ್ಲಿ ಗಟ್ಟಿಯಾದ ಮಹಿಳಾಪರ ಬರಹಗಳನ್ನು ಬರೆದರು.
ಮಹಿಳಾ ಕಾರ್ಯಕರ್ತೆಯರ ಕಷ್ಟಗಳಿಗೆ ಅತ್ಯಂತ ಸಹಜವಾಗಿ ತುಡಿಯುತ್ತಿದ್ದರು. ನೆರವಾಗುತ್ತಿದ್ದರು.
ಹೋರಾಟಗಾರ್ತಿಯಾಗಿ ಲಂಕೇಶರಿಗಿಂತ ವಿಸ್ತಾರದ ಹರಹನ್ನು ಪಡೆದವರು ಗೌರಿ ಲಂಕೇಶ್. ಸಿದ್ಧಾಂತ, ಚಿಂತನೆ ಬರಹಗಳನ್ನು ಮೀರಿದ ಮಾನವೀಯ ತುಡಿತ, ಅವರನ್ನು ಅನೇಕ ಯುವ ಬರಹಗಾರರು ಮತ್ತು ಹೋರಾಟಗಾರರಿಗೆ ‘ಅಮ್ಮ’ನನ್ನಾಗಿಸಿತ್ತು.
ಕೊನೆಯವರೆಗೂ ಪತ್ರಿಕೆಗೆ ಯಾವುದೇ ಜಾಹೀರಾತು ಪಡೆಯದೆ, ಕೇವಲ ಓದುಗರಿಗಾಗಿ ಓದುಗರಿಂದ ಬರುತ್ತಿದ್ದ ವಾರದ ಅಚ್ಚರಿ ಗೌರಿ ಲಂಕೇಶ್ ಪತ್ರಿಕೆ.

ಪ್ರಜಾತಂತ್ರದ ಕುರಿತ ಬದ್ಧತೆಗಾಗಿ ದಾಳಿಗೊಳಗಾದವರು:
ಸಂಘಪರಿವಾರದ ವಿರುದ್ಧದ ಅವರ ರಾಜಿ ರಹಿತವಾದ ನಿಲುವುಗಳಿಂದಾಗಿ ಕೋಮುವಾದಿಗಳಿಂದ ಅನೇಕ ರೀತಿಯಲ್ಲಿ ದಾಳಿಗೊಳಗಾದರು. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅತಿಥಿಯಾಗಿ ಆಹ್ವಾನಿತರಾಗಿದ್ದ ಅವರ ಮೇಲೆ ಕೋಮುವಾದಿ ಎಬಿವಿಪಿ ಮತ್ತು ಭಜರಂಗದಳದ ಸದಸ್ಯರು ಹಲ್ಲೆ ನಡೆಸಲು ಪ್ರಯತ್ನಿಸಿದರು. ಹಾಗೆಯೇ ಶಾಂತಿಗಾಗಿ ನಾಗರಿಕ ವೇದಿಕೆಯ ತಂಡವನ್ನೂ ಸಹಾ ಇದೇ ಸಂಘಟನೆಗಳು ದಾಳಿ ಮಾಡಿದ್ದವು. ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ಲಂಕೇಶ್ ಸಂಸ್ಕರಣೆ ಕಾರ್ಯಕ್ರಮದಲ್ಲಿ ಪತ್ರಿಕೆಯ ಅಂಕಣಕಾರ ಮತ್ತು ಸಾಹಿತಿಗಳಾದ ಯೋಗೀಶ್ ಮಾಸ್ತರರ ಮೇಲೆ ಹಲ್ಲೆ ನಡೆಯಿತು. ಇದಲ್ಲದೆ ಸಾಮಾಜಿಕ ಜಾಲತಾಣಗಳ ಮೂಲಕ ಪತ್ರಗಳ ಮೂಲಕ ಅವರಿಗೆ ಬೆದರಿಸುತ್ತಿದ್ದವರಿಗೇನು ಕಡಿಮೆಯಿರಲಿಲ್ಲ. ಆದರೆ, ಕೆಚ್ಚೆದೆಯ ಹೋರಾಟಗಾರ್ತಿ ಗೌರಿ ಇದ್ಯಾವುದನ್ನೂ ಲೆಕ್ಕಿಸಲಿಲ್ಲ. ಪೊಲೀಸ್ ಭದ್ರತೆ ತೆಗೆದುಕೊಳ್ಳಲು ಹಿತೈಶಿಗಳು ಸಲಹೆ ನೀಡಿದರೆ, ನಾಡಿನ ಪ್ರಜಾತಂತ್ರ ಪ್ರೇಮಿಗಳೇ ನನಗೆ ರಕ್ಷಣೆ, ಇನ್ಯಾರೂ ನನ್ನನ್ನು ರಕ್ಷಿಸಲಾರರು ಎನ್ನುತ್ತಿದ್ದರು. ಈಗ, ನಾಡಿನ ಜನಪರ ಮನಸ್ಸುಗಳು ಅವರನ್ನು ಕಳೆದುಕೊಂಡು ತಬ್ಬಲಿಯಾಗಿವೆ. ಸಂಘಪರಿವಾರದ ಉಗ್ರಗಾಮಿಗಳು ಈ ನಾಡಿನ ಎಲ್ಲ ಸೌಹಾರ್ದ ಪ್ರೇಮಿಗಳ ಪಾಲಿನ ಬೆಳ್ಳಿಚುಕ್ಕಿಯೊಂದನ್ನು ಅತ್ಯಂತ ಕ್ರೂರವಾಗಿ ಕಸಿದುಕೊಂಡಿದ್ದಾರೆ!
ಗೌರಿ ಲಂಕೇಶ್ ಇಲ್ಲದೆ ಖಾಲಿಯಾಗಿರುವ ಈ ಶೂನ್ಯವು ಶಾಶ್ವತ ಶೂನ್ಯವಾಗಲು ನಾವು ಬಿಡಲಾರೆವು. ಜೀವಪ್ರೀತಿ ಮತ್ತು ಜೀವವಿರೋಧದ ಈ ಯುದ್ಧದಲ್ಲಿ, ಪ್ರೀತಿ, ಕರುಣೆ ಮತ್ತು ಶಾಂತಿ ಕೊನೆಗಾದರೂ ಗೆಲ್ಲಲೇಬೇಕು.
ಗೌರಿ, ನಾವು ಮುನ್ನಡೆಯುತ್ತೇವೆ, ನೀವಿಟ್ಟ ಹೆಜ್ಜೆಜಾಡಿನಲ್ಲಿ…..ನಾವು ಬೆಳೆಯುತ್ತೇವೆ, ನಮ್ಮೊಂದಿಗೆ ನೀವು ಬೆಳೆಯುತ್ತೀರಿ. ನಾವು ಗೆಲ್ಲುತ್ತೇವೆ, ನಮ್ಮೊಳಗೆ ನೀವು ಗೆಲ್ಲುತ್ತೀರಿ!
#IAmGauri

3 thoughts on “ಗೌರಿ ಲಂಕೇಶ್ ಎಂಬ ಎಂದೂ ಮುಳುಗದ ನಕ್ಷತ್ರ ನಡೆದು ಬಂದ ಹಾದಿ

  • October 25, 2017 at 10:09 AM
    Permalink

    Wow! Thank you! I continuously needed to write on my website something like that. Can I include a part of your post to my site?

  • October 25, 2017 at 10:10 AM
    Permalink

    I think this is among the most important information for me. And i’m glad reading your article. But wanna remark on some general things, The web site style is perfect, the articles is really excellent : D. Good job, cheers

Comments are closed.

Social Media Auto Publish Powered By : XYZScripts.com