ಮತ್ತೆ ಬಂದಿದೆ ಕಸೂತಿ ಕಲೆ: ಫ್ಯಾಷನ್ ಲೋಕದಲ್ಲಿ ಎಂಬ್ರಾಯ್ಡರಿ ರಂಗು !

ಫ್ಯಾಷನ್ ಲೋಕದಲ್ಲಿ ಸದಾ ಒಂದಿಲ್ಲೊಂದು ಬದಲಾವಣೆ ಆಗ್ತಾನೇ ಇರುತ್ತೆ. ಅದ್ರಲ್ಲೂ ಟ್ರೆಂಡ್ ಗಳು ಅದೆಷ್ಟು ವೇಗವಾಗಿ ಚೇಂಜ್ ಆಗುತ್ತವೆಂದರೆ ಪ್ರತಿಯೊಂದು ವಿಧದಲ್ಲೂ ನೂರೆಂಟು ಡಿಸೈನ್ ಗಳು ಹುಟ್ಟುತ್ತಿರುತ್ತವೆ. ಸದ್ಯಕ್ಕೆ ಫ್ಯಾಷನ್ ಲೋಕದ ಲೇಟೆಸ್ಟ್ ಟ್ರೆಂಡ್ ಅಂದ್ರೆ ಕಸೂತಿ ಅಥವಾ ಥ್ರೆಡ್ ವರ್ಕ್.

ಒಂದಷ್ಟು ವರ್ಷಗಳಿಗೆ ಮುಂಚೆ ಪ್ರತೀ ಮನೆಯಲ್ಲೂ ಒಬ್ಬರಲ್ಲಾ ಒಬ್ಬರು ಎಂಬ್ರಾಯ್ಡರಿಯಲ್ಲಿ ಆಸಕ್ತಿ ಇರುವವರು, ಅದನ್ನು ಕಲಿತವರು ಇದ್ದೇ ಇರುತ್ತಿದ್ದರು. ಸೀರೆಯ ಅಂಚು-ಸೆರಗು, ಸಲ್ವಾರ್ ನ ಕುತ್ತಿಗೆಯ ಭಾಗ, ದುಪ್ಪಟ್ಟಾದ ಕೊನೆ, ಟಾಪ್ ಗಳ ಮೇಲೆ, ಬ್ಲೌಸ್ ಗೆ ಹೀಗೆ ಎಲ್ಲಾ ಬಗೆಯ ದಿರಿಸುಗಳ ಮೇಲೂ ಕಸೂತಿಯ ಕರಾಮತ್ತು ಇದ್ದೇ ಇರುತ್ತಿತ್ತು. ನಂತರದ ದಿನಗಳಲ್ಲಿ ನಿಧಾನಕ್ಕೆ ಈ ಎಂಬ್ರಾಯ್ಡರಿ ಕೇವಲ ಸೀರೆ, ಮದುವೆ ದಿರಿಸುಗಳಿಗೆ ಮಾತ್ರ ಸೀಮಿತ ಎನ್ನುವಂತಾಯ್ತು.

ಆದ್ರೆ ಈ ಫ್ಯಾಷನ್ ಈಗ ಮತ್ತೆ ಚಲಾವಣೆಯಲ್ಲಿದೆ. ಕಾಟನ್ ಶರ್ಟುಗಳ ಮೇಲೆ, ಸ್ಕರ್ಟ್, ಜೀನ್ಸ್, ಕುರ್ತಿ ಹೀಗೆ ಎಲ್ಲದರ ಮೇಲೂ ದಾರದ ಚಿತ್ತಾರಗಳು ಗಮನ ಸೆಳೆಯುತ್ತಿವೆ. ಸಾದಾ ಪ್ಲೇನ್ ಟಾಪ್ ಮೇಲೆ ಒಂದು ಚಿಕ್ಕ ಗುಲಾಬಿ, ವುಲ್ಲನ್ ಪುಲ್ ಓವರ್ ಮೇಲೆ ಹೊಳೆಯುವ ಪೈನಾಪಲ್ ಹೀಗೆ ಕ್ರಿಯೇಟಿವಿಟಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಎಂಬ್ರಾಯ್ಡರಿ ತನ್ನ ಸಾಮ್ರಾಜ್ಯ ಸ್ಥಾಪಿಸುತ್ತಿದೆ.

ರೆಡಿಮೇಡ್ ಉಡುಪುಗಳಲ್ಲಿ ಎಂಬ್ರಾಡರಿ ಹವಾ ಜೋರಾಗಿದೆ. ಹೊಳೆಯುವ ಟಿಕಲಿ, ಮಣಿಗಳಿಗಿಂತ ಹೆಚ್ಚಾಗಿ ದಾರದಲ್ಲಿ ಮಾಡಿದ ಕಸೂತಿಗೆ ಹೆಚ್ಚಿನ ಡಿಮ್ಯಾಂಡ್ ಇದೆ. ತಮ್ಮದೇ ಸಿಂಪಲ್ ಡ್ರೆಸ್ ಗೆ ಚಿಕ್ಕದೊಂದು ಎಂಬ್ರಾಡರಿ ಡಿಸೈನ್ ಮಾಡಿ ಒಸ ಲುಕ್ ಕೊಡುತ್ತಿರುವವರ ಸಂಖ್ಯೆಯೂ ಕಡಿಮೆಯೇನಿಲ್ಲ. ಮನೆಗಳಲ್ಲಿ ಹೆಣ್ಣುಮಕ್ಕಳು ಮಾಡ್ತಿದ್ದ ಸಾದಾ ಸೀದಾ ಕಸೂತಿ ಈಗ ದೊಡ್ಡ ಮಟ್ಟದಲ್ಲಿ ಫ್ಯಾಷನ್ ಲೋಕದಲ್ಲಿ ಟ್ರೆಂಡ್ ಆಗಿದೆ.

ಮನೀಷ್ ಮಲ್ಹೋತ್ರಾ, ಸಭ್ಯಸಾಚಿ ಮುಖರ್ಜಿಯಂಥಾ ಘಟಾನುಘಟಿ ಫ್ಯಾಷನ್ ಡಿಸೈನರ್ ಗಳು ಎಂಬ್ರಾಯ್ಡರಿ ಮಾಡಲೆಂದೇ ಕಸೂತಿ ಕಲಾವಿದರನ್ನು ಕೆಲಸಕ್ಕೆ ತೆಗೆದುಕೊಂಡಿದ್ದಾರೆ. ಅಂತಾರಾಷ್ಟ್ರೀಯ ಫ್ಯಾಷನ್ ಶೋಗಳಲ್ಲೂ ಈಗ ಕಸೂತಿಯದ್ದೇ ಸದ್ದು. ಫ್ಯಾಷನ್ ಲೋಕದಲ್ಲಿ ಹಿಂದಿನದ್ದೇ ಮತ್ತೆ ಮತ್ತೆ ಹೊಸ ರೂಪದಲ್ಲಿ ಹೆಸರು ಮಾಡುತ್ತದೆ. ಈಗ ಕಸೂತಿ ದೊಡ್ಡ ಮಟ್ಟಿಗೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸ್ತಿದೆ.

Comments are closed.