ಪ್ರತಿಯೊಂದು ಮನೆಯವರೂ 20,000ರೂ ಖರ್ಚು ಮಾಡಿದ್ರು, ಕಾರಣ: ಮಳೆ

ರಾಜಧಾನಿ ಬೆಂಗಳೂರು ಅದೆಷ್ಟೇ ಮುಂದುವರೆದ ನಗರ, ಐಟಿ ಹಬ್ ಎಂದುಕೊಂಡರೂ ಒಂದು ಮಳೆ ಇಡೀ ನಗರವನ್ನು ಅಸ್ತವ್ಯಸ್ತ ಮಾಡಿಬಿಡಲು ಸಾಕಾಗುತ್ತದೆ. ಆಗಸ್ಟ್ 15ರ ಮಳೆ ಕೂಡಾ ಅನೇಕ ಪ್ರದೇಶಗಳನ್ನು ಅಕ್ಷರಶಹ ಪ್ರವಾಹದಲ್ಲಿ ಸಿಕ್ಕಿಕೊಂಡಂತೆ ಮಾಡಿಬಿಟ್ಟಿತ್ತು. ಈ ಎಲ್ಲಾ ಅವಾಂತರಗಳಿಗೂ ಮೂಲ ಕಾರಣ ನಮ್ಮದೇ ತಪ್ಪು ಎಂದುಕೊಂಡರೂ ಆಗಿರುವ ಅನಾಹುತಗಳನ್ನು ಅಷ್ಟು ಸುಲಭವಾಗಿ ತಳ್ಳಿ ಹಾಕುವಂತಿಲ್ಲ.

ಬೇರೆಲ್ಲಾ ಪ್ರದೇಶಗಳಿಗಿಂತ ಹೆಚ್ಚು ಅಚ್ಚರಿ ಮೂಡಿಸಿದ್ದು ಕೋರಮಂಗಲ ನಾಲ್ಕನೇ ಹಂತದ ST BED ಲೇಔಟ್ ಗೆ ನೀರು ನುಗ್ಗಿದ ಪರಿ. ಬೆಳಗಾಗೆದ್ದು ಮನೆಯ ಬಾಗಿಲು ತೆರೆದು ನೋಡಿದ ಅಲ್ಲಿನ ಜನರಿಗೆ ಕಣ್ಣೆದುರು ಕಂಡಿದ್ದು ಮೂರುವರೆ ಅಡಿಗಳಿಗೂ ಎತ್ತರಕ್ಕೆ ಏರಿದ್ದ ನೀರು. ಮನೆಯ ಕಾಂಪೌಂಡು ದಾಟಿ ಒಳನುಗ್ಗಿದ್ದ ನೀರು ನೇರವಾಗಿ ಲಿವಿಂಗ್ ರೂಮ್, ಡೈನಿಂಗ್ ಹಾಲಿನಲ್ಲೂ ಒಂದೆರಡು ಅಡಿಗಳಷ್ಟು ನಿಂತುಬಿಟ್ಟಿತ್ತು.

ಅಷ್ಟಕ್ಕೂ ನೀರು ಈ ಪ್ರಮಾಣದಲ್ಲಿ ಹೀಗೆ ಬ್ಲಾಕ್ ಆಗುವುದಕ್ಕೆ ಏನು ಕಾರಣ ಎಂದು ಕಂಡುಹಿಡಿಯಲು ಒಂದೂವರೆ ದಿನಗಳೇ ತೆಗೆದುಕೊಂಡಿತ್ತು. ಎರಡು ರಸ್ತೆಗಳಾಚೆ ಇದ್ದ ಹೋಟೆಲೊಂದರ ಎದುರಿನ ಮೋರಿಗೆ ಯಾರೋ ಎಸೆದು ಹೋಗಿದ್ದ ದೊಡ್ಡ ಥರ್ಮಾಕೋಲ್ ತುಂಡುಗಳು ಮಳೆ ಬಂದಾಗ ರಸ್ತೆಯ ನೀರು ಮೋರಿಯೊಳಗೆ ಹರಿದು ಹೋಗುವುದನ್ನು ತಡೆದಿದ್ದವು. ಇದು ಇಡೀ ಲೇಔಟಿನ ಮೋರಿಯನ್ನು ಬ್ಲಾಕ್ ಮಾಡಿದ್ದರ ಪರಿಣಾಮ ಮೋರಿಯ ನೀರೆಲ್ಲಾ ಮನೆಯೊಳಗೆ ಸೇರಿತ್ತು.

ಕಟ್ಟಡದ ಬೇಸ್ಮೆಂಟುಗಳಲ್ಲಿ, ಮನೆಯ ಪೋರ್ಟಿಕೋದಲ್ಲಿ, ರಸ್ತೆಯ ಬದಿಗಳಲ್ಲಿ ನಿಲ್ಲಿಸಿದ್ದ ಕಾರು-ಬೈಕುಗಳೆಲ್ಲಾ ನಿಂತಲ್ಲೇ ಕೆಟ್ಟುಹೋಗಿದ್ದವು. ಎರಡು ದಿನಗಳಲ್ಲಿ ಎಲ್ಲಾ ನೀರನ್ನೂ ಪಂಪುಗಳ ಸಹಾಯದಿಂದ ಹೊರೆತೆಗೆಯಲಾಯಿತು. ಆದರೆ ಅಲ್ಲಿಯವರೆಗೂ ಇಡೀ ಏರಿಯಾದ ಜನ ಗಬ್ಬು ವಾಸನೆಯನ್ನು ಸಹಿಸಲಾರದೆ ನರಳುತ್ತಿದ್ರು. ಸಾಲದ್ದಕ್ಕೆ ಮನೆಯೊಳಗೆ ನುಗ್ಗಿದ್ದ ನೀರು ಅವರ ಮನೆಯ ಪೀಠೋಪಕರಣಗಳನ್ನೂ ಹಾಳುಗೆಡವಿತ್ತು. ಅನೇಕರ ಮನೆಯೆದುರಿನ ಸಂಪಿಗೂ ಈ ಕೊಳಕು ನೀರು ಸೇರಿದ್ದರಿಂದ ಅದನ್ನೂ ಮನೆಯವರೇ ಸ್ವಚ್ಛ ಮಾಡಿಸಬೇಕಾಯ್ತು.

ಎಷ್ಟೋ ಮನೆಗಳ ಯುಪಿಎಸ್ ಒಳಗೆಲ್ಲಾ ನೀರು ತುಂಬಿ ಅವುಗಳನ್ನು ರಿಪೇರಿ ಮಾಡಿಸಲಾಗದೇ ಬಿಸಾಡಬೇಕಾಯ್ತು. ಕೆಟ್ಟು ನಿಂತಿದ್ದ ವಾಹನಗಳನ್ನು ಗ್ಯಾರೇಜ್ ವರಗೆ ಟ್ರಕ್ ಗಳಲ್ಲಿ ತುಂಬಿಕೊಂಡು ಹೋಗಿ ಸರ್ವೀಸ್ ಮಾಡಿಬೇಕಾಯ್ತು. ಅಂದು ಸ್ವಾತಂತ್ರ್ಯ ದಿನ ಆಗಿದ್ದರಿಂದ ಅನೇಕ ಮಕ್ಕಳು ತಂತಮ್ಮ ಶಾಲೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಜ್ಜಾಗಿದ್ರು. ಅವರು ಅದೆಲ್ಲವನ್ನೂ ಬಿಟ್ಟು ಸುಮ್ಮನೇ ಮನೆಯಲ್ಲೇ ಇರಬೇಕಾಯ್ತು. ಎರಡು ದಿನ ರಜೆ ಎಂದು ಕುಟುಂಬದೊಂದಿಗೆ ಹೊರಹೋಗುವ ಪ್ಲಾನ್ ಮಾಡಿದ್ದವ್ರು ಕೂಡಾ ಮೂಗು ಮುಚ್ಚಿಕೊಂಡು ಮನೆಯೊಳಗೇ ಇರುವಂತಾಗಿತ್ತು.

ಪ್ರತಿಯೊಂದು ಮನೆಯವರೂ ಕನಿಷ್ಟ 20ರಿಂದ 25 ಸಾವಿರ ರೂಪಾಯಿಗಳನ್ನು ಬರೀ ತಂತಮ್ಮ ಮನೆ ಸ್ವಚ್ಛತೆ, ಗಾಡಿಗಳ ರಿಪೇರಿ ಇಂಥವುಗಳಿಗೆ ಕೈಯ್ಯಿಂದ ಖರ್ಚು ಮಾಡಬೇಕಾದ ಪರಿಸ್ಥಿತಿ ಅವರೆಲ್ಲರಿಗೆ ಎದುರಾಗಿತ್ತು. ಕಳೆದ ಹತ್ತು ವರ್ಷಗಳಿಂದೀಚೆಗೆ ಈ ಪ್ರದೇಶದಲ್ಲಿ ಇಂಥಾ ಅವಾಂತರ ಆಗಿಯೇ ಇರಲಿಲ್ಲ ಎಂದು ಇಲ್ಲಿನ ಜನ ನೆನಪಿಸಿಕೊಳ್ಳುತ್ತಾರೆ. ಒಂದು ರಾತ್ರಿಯ ಮಳೆ ಇಷ್ಟು ದೊಡ್ಡ ಅವಾಂತರ ಸೃಷ್ಟಿಸುತ್ತದೆ ಎಂದರೆ ಯಾವು ಅದೆಷ್ಟು ಕೆಟ್ಟ ವ್ಯವಸ್ಥೆಯಲ್ಲಿ ಇದ್ದೀವಿ ಎಂದು ಜನ ಬೇಸರ ವ್ಯಕ್ತಪಡಿಸುತ್ತಾರೆ.

Comments are closed.

Social Media Auto Publish Powered By : XYZScripts.com