ಗುರ್ಮಿತ್‌ ಅತ್ಯಾಚಾರ ಪ್ರಕರಣ : 28 ಬಲಿ , ಪರಿಸ್ಥಿತಿ ಉದ್ವಿಗ್ನ

ಚಂಡೀಗಢ : ಗುರ್ಮಿತ್‌ ರಾಂ ರಹೀಮ್ ಅಪರಾಧಿ ಎಂದು ತೀರ್ಪು ಬಂದಿರುವ ಹಿನ್ನೆಲೆಯಲ್ಲಿ ಹರಿಯಾಣ, ಪಂಜಾಬ್‌, ಉತ್ತರಪ್ರದೇಶ, ದೆಹಲಿ ಹೊತ್ತಿ ಉರಿದಿದೆ. ಪಂಚಕುಲಾದಲ್ಲಿ ಉಂಟಾದ ಹಿಂಸಾಚಾರದಲ್ಲಿ 28 ಮಂದಿ ಮೃತಪಟ್ಟಿರುವುದಾಗಿ ಮೂಲಗಳು ತಿಳಿಸಿವೆ. 300ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.  ಹರಿಯಾಣ ಹಾಗೂ ಪಂಜಾಬ್‌ನ ರೈಲು ನಿಲ್ದಾಣ, ಪೆಟ್ರೋಲ್‌ ಬಂಕ್‌ಗಳಿಗೆ ಗುರ್ಮಿತ್‌ ಬೆಂಬಲಿಗರು ಬೆಂಕಿ ಹಚ್ಚಿದ್ದು, ಪಂಜಾಬ್‌ನ ಭಟಿಂದಾದಲ್ಲೂ ಇಂತಹುದ್ದೇ ಪರಿಸ್ಥಿತಿ ನಿರ್ಮಾಣವಾಗಿದೆ. ಭಟಿಂದಾ, ಪಟಿಯಾಲ, ಮಾನ್ಸಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕರ್ಫ್ಯೂ ಹೇರಲಾಗಿದೆ.

ಇನ್ನು ದೆಹಲಿಯ ಆನಂದ್‌ ವಿಹಾರದಲ್ಲಿ ಬಸ್‌ಗೆ ಬೆಂಕಿ ಹಚ್ಚಲಾಗಿದ್ದು, ಬಸ್‌ ಸಂಪೂರ್ಣ ಸುಟ್ಟು ಕರಕಲಾಗಿದೆ. ಜೊತೆಗೆ ದೆಹಲಿಯಲ್ಲಿ ರೈಲಿನ ಎರಡು ಬೋಗಿಗಳಿಗೂ ಬೆಂಕಿ ಹಚ್ಚಲಾಗಿದೆ. ಉತ್ತರ ಪ್ರದೇಶದಲ್ಲಿ ಎರಡು ಬಸ್‌ಗಳು ಬೆಂಕಿಗಾಹುತಿಯಾಗಿವೆ.

ಮತ್ತೊಂದೆಡೆ ಮಾಧ್ಯಮಗಳ ವಾಹನಗಳ ಮೇಲೂ ಉದ್ರಿಕ್ತರು ಕಲ್ಲು ತೂರಾಟ ನಡೆಸಿದ್ದು, ಮಾದ್ಯಮ ಪ್ರತಿನಿಧಿಗಳು ಪೊಲೀಸರಿಗೆ ಸಾಥ್ ನೀಡಿದ್ದಾರೆ. ಖಾಸಗಿ ವಾಹಿನಗಳ ಕ್ಯಾಮರಾ ಮನ್‌, ವರದಿಗಾರರ ಮೇಲೂ ಕಲ್ಲು ತೂರಾಟ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ.

 

ಪರಿಸ್ಥಿತಿ ವಿಕೋಪಕ್ಕೆ ತಲುಪಿದ್ದು, ಪ್ರತಿಭಟನಾಕಾರರನ್ನು ಹತ್ತಿಕ್ಕಲು ಪೊಲೀಸರು ಹಾಗೂ ಭದ್ರತಾ ಪಡೆ ಸಿಬ್ಬಂದಿ ಅಶ್ರುವಾಯು, ವಾಟರ್ ಜೆಟ್‌, ಲಾಠಿ ಚಾರ್ಜ್‌, ಟಿಯರ್‌ ಗ್ಯಾಸ್‌ ಪ್ರಯೋಗಿಸಿದ್ದಾರೆ. ಆದರೆ ಇದ್ಯಾವುದಕ್ಕೂ ಬಗ್ಗದ ಪ್ರತಿಭಟನಾಕಾರರು ಹಿಂಸಾಚಾರವನ್ನು ಮುಂದುವರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತಾ ಪಡೆಯನ್ನು ನಾಲ್ಕು ರಾಜ್ಯಗಳಲ್ಲಿ ನಿಯೋಜಿಸಲಾಗಿದೆ.

ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಪ್ರವಾಸದಲ್ಲಿದ್ದ ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಅರ್ಧಕ್ಕೆ ಪ್ರವಾಸ ಮೊಟಕುಗೊಳಿಸಿ ವಾಪಸ್ಸಾಗಿದ್ದಾರೆ. ಹರಿಯಾಣ ಹಾಗೂ ಪಂಜಾಬ್‌ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದು, ಹಿಂಸಾಚಾರ ಹತ್ತಿಕ್ಕಲು ಹೆಚ್ಚಿನ ಸೇನೆಯನ್ನು ಕಳಿಸುವುದಾಗಿ ಭರವಸೆ ನೀಡಿದ್ದಾರೆ. ಜೊತೆಗೆ ಶಾಂತಿ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.

 

 

 

Comments are closed.

Social Media Auto Publish Powered By : XYZScripts.com