ನಿಂತಿದ್ದ ಕ್ಯಾಂಟರ್ಗೆ ಕಾರ್ ಡಿಕ್ಕಿ, ಅಪಘಾತದಲ್ಲಿ ಸಿರಿಯಲ್ ನಟಿ, ನಟ ದುರ್ಮರಣ

ನೆಲಮಂಗಲ: ನಿಂತಿದ್ದ ಕ್ಯಾಂಟರ್‌ಗೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಕಿರುತೆರೆ ನಟಿ ಹಾಗೂ ನಟ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ೪೮ ರ ಸೋಲೂರು ಬಳಿ ನಡೆದಿದೆ. ಸಿರಿಯಲ್ ನಟಿ ರಚನಾ (೨೩), ನಟ ಜೀವನ್ ಮೃತಪಟ್ಟಿರುವ ದುರ್ದೈವಿಗಳು. ಅಂದಹಾಗೆ ತಡರಾತ್ರಿ ೨ ಗಂಟೆ ಸುಮಾರಿಗೆ ನಡೆದ ಅಪಘಾತವಾಗಿದ್ದು.

  

ಸಹ ನಟ ಸ್ನೇಹಿತರ ಜೊತೆಗೆ ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನಕ್ಕೆ ಸಫಾರಿ ಕಾರಿನಲ್ಲಿ ರಚನಾ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ.  ಇನ್ನೂ ಸಫಾರಿ ಕಾರಿನಲ್ಲಿದ್ದ ಬಿಎಸ್ ರಂಜೀತ್, ಉತ್ತಮ್ , ಹೊನ್ನೇಶ್ , ಕಾರ್ತಿಕ್  ಮತ್ತು ಎರಿಕ್  ಸಹ ನಟರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ನೆಲಮಂಗಲ ಹರ್ಷಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅಂದಹಾಗೆ ಮೃತ ನಟಿ ರಚನಾ ತ್ರಿವೇಣಿ ಸಂಗಮ, ಮಧುಬಾಲಾ, ಮಹಾನದಿ ಸಿರಿಯಲ್ ಗಳಲ್ಲಿ ನಟಿಸಿದ್ದು  ಮಹಾನದಿ ಸಿರಿಯಲ್ ನಲ್ಲಿ  ಮುಖ್ಯಪಾತ್ರದಲ್ಲಿ ನಟನೆಯನ್ನ ಮಾಡಿದ್ದರು.

ನಟ ಕಾರ್ತಿಕ್ ಹುಟ್ಟು ಹಬ್ಬದ ನಿಮಿತ್ತ ಕುಕ್ಕೆ ಸುಬ್ರಮಣ್ಯ ದೇವರ ದರ್ಶನಕ್ಕೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಇನ್ನೂ ಮೃತ ದೇಹಗಳನ್ನ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಕುದುರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.

Social Media Auto Publish Powered By : XYZScripts.com