ಸಖೀಗೀತ 18 : ‘ಹೊಸಿಲಾಚೆ ಹೊಸಹೆಜ್ಜೆ ಇರಿಸಿದ ಗುರು ಕಲ್ಬುರ್ಗಿಯವರನ್ನು ನೆನೆಯುತ್ತಾ….

ಕಲ್ಬುರ್ಗಿಯವರನ್ನು ಬೇಟೆಯಾಡಿ ಎರಡು ವರ್ಷಗಳು ಹಾಗೆಯೇ ಉರುಳಿಹೋದವು. ಆಗಂತುಕರ ಆ ಎರಡು ಗುಂಡುಗಳು ಒಮ್ಮೆ ನರಳಲೂ ಆಸ್ಪದ ಕೊಡದಂತೆ ಕಲ್ಬುರ್ಗಿಯವರ ದನಿಯಡಗಿಸಿದವು. ಸತ್ಯ ಹೇಳುವುದಕ್ಕಾಗಿ ಸದಾ ವಿವಾದಗಳನ್ನು, ಅಪಾಯಗಳನ್ನು ಎದುರಿಸಲು ಸಿದ್ಧರಿದ್ದ ಕಲ್ಬುರ್ಗಿಯವರು ತಮ್ಮ ಅಪಾರ ಸಂಶೋಧನಾ ಬರಹಗಳನ್ನು, ತಮ್ಮ ಚಿಂತನೆಗಳನ್ನು ಈ ನೆಲದಲ್ಲಿ ಬಿತ್ತಿಹೋಗಿದ್ದಾರೆ. ಅವು ಸಾಯುವುದಿಲ್ಲ ಎಂಬುದು ಹಂತಕರಿಗೆ ಗೊತ್ತಿಲ್ಲ! ಅವರ ಸಾವಿನ ನಂತರ ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ನಾಡಿನಾದ್ಯಂತ ಚರ್ಚೆಗಳಾದವು. ಆದರೆ…. ಸರಕಾರ, ಜನರು ಕಲ್ಬುರ್ಗಿಯವರನ್ನು ಮರೆತರಾ….ಅವರು ನಮ್ಮನ್ನಗಲಿ ಎರಡು ವರ್ಷಗಳೇ ಸರಿದುಹೋಗಿವೆ. ಇನ್ನೂ ಹಂತಕರು ನಿಗೂಢವಾಗೇ ಉಳಿದಿದ್ದಾರೆ. ಈ ಸಂದರ್ಭದಲ್ಲಿ ಅವರ ನೆನಪುಗಳು ನನ್ನನ್ನು ಆರ್ದೃಗೊಳಿಸುತ್ತಿವೆ.

ತಮಂಧ ಘನ ಜ್ಯೋತಿ ಕಿರಿದೆನ್ನಬಹುದೇ ?

‘ರವಿಶಶಿಯ ನೀನಿತ್ತ ಬೆಳಕಿನಲಿ ಗುರುತಿಸುವೆ ಗುರುವೆ’ ಕವಿ ಬೇಂದ್ರೆಯವರ ಈ ಸಾಲು ನನ್ನ ಅಂತರಂಗದ ಗುರು ಎಂ.ಎಂ.ಕಲ್ಬುರ್ಗಿಯವರಿಗೆ ಅರ್ಥಪೂರ್ಣವಾಗಿ ಅನ್ವಯಿಸುತ್ತದೆ. ಸತ್ಯವನ್ನು ‘ಗುರು’ತಿಸುವವನು/ಳು ಗುರು. ಹಾಗೆ  ಗುರುತಿಸಿದ್ದನ್ನು ಅರಿವಿನ ಬೀಜವಾಗಿಸಿ ಶಿಷ್ಯರೊಳಗೆ ಬಿತ್ತುವ ಹಿರಿಮೆ ಗುರುವಿನದು.

ಅಂಥ ಅರಿವಿನ ಕೊಂಡಿಯಾಗಿ, ಶ್ರೇಷ್ಠ ಗುರುವಿನ ಶಿಷ್ಯೆಯಾಗಿ ನಾನೂ ಬೆಳೆದೆ ಎಂಬ ಹೆಮ್ಮೆ ನನ್ನದು. ವ್ಯಕ್ತಿಪೂಜೆಯನ್ನು ಒಪ್ಪದ ನನ್ನಂಥವಳಿಗೂ ಕಲ್ಬುರ್ಗಿ ಸರ್ ರೋಲ್‍ಮಾಡೆಲ್ ಆಗಿದ್ದರು. ಸತ್ಯವನ್ನು ಪೂರ್ವಗ್ರಹಗಳಿಂದ ಮುಕ್ತಗೊಳಿಸಿ ಶುದ್ಧವಾಗಿ ಕಾಣುವ ಕಣ್ಣುಕೊಟ್ಟ ಗುರು ಅವರು. ವ್ಯಕ್ತಿ, ಸಮಾಜ,  ಸಂಸ್ಕೃತಿ  ಸಂಕೀರ್ಣ ಹೆಣಿಗೆಯನ್ನು ಹೊಕ್ಕು, ಭೇದಿಸಿ, ಸಿಕ್ಕುಗಳ ಬಿಡಿಸುತ್ತ ಅರಿಯುವುದನ್ನು ಹೇಳಿಕೊಟ್ಟರು. ಅರಿವಿನ ವಿಸ್ತಾರಕ್ಕೆ ಸದಾ ತೆರೆದುಕೊಳ್ಳುವುದನ್ನು, ಒಳಗೊಂದು ಎಚ್ಚರವನ್ನೂ, ತೀಕ್ಷ್ಣ ವಿಮರ್ಶಾ ಪ್ರಜ್ಞೆಯನ್ನು ಕಾಪಿಟ್ಟುಕೊಳ್ಳುವುದನ್ನು ಕಲಿಸಿದ ನಿಜಗುರು ಅವರು. ಚೂಪುಗಣ್ಣಿನ, ಎದೆಬಗೆದು ಮೂಲೆಮೂಲೆಗಳ ಮೇಲೆ ಬೆಳಕುಚೆಲ್ಲುವಂಥ ಎಕ್ಸರೆ ನೋಟದ, ಸದಾ ಒಂದು ಕಾತರವನ್ನು ಹುರಿಗೊಳಿಸಿಕೊಂಡಂತಹ ಅಂಗಭಂಗಿಯ, ಕೆಲಸಮಾಡಲು ದಿನದ ಇಪ್ಪತ್ನಾಲ್ಕು ಗಂಟೆ ಏನೇನೂ ಸಾಲದೆಂಬಂತೆ ತಳಮಳಿಸುವ ಕಲ್ಬುರ್ಗಿಯವರೆಂದರೆ ನನಗಂತೂ ತೀರದ ಬೆರಗು! ಯಾವುದೋ ಸಂಗತಿ ಬೆರಳ ಸಂದಿಯಲ್ಲಿ ನುಣುಚಿಕೊಂಡು ಹೋಗುತ್ತದೆ, ಅದನ್ನು ಹಿಡಿಯಬೇಕೆಂಬಂಥ ಉತ್ಸಾಹ ಅವರಲ್ಲಿ ಸದಾ ಪುಟಿಯುತ್ತಿತ್ತು. ಅವರ ಕ್ಲಾಸುಗಳು ಕೂಡ ಅಂಥ ಸೆಣಸಾಟದ, ತೀವ್ರ ಹುಡುಕಾಟದ ಮುಂದುವರಿಕೆಯೇ ಆಗಿರುತ್ತಿದ್ದವು.

                         ವಿದ್ಯಾರ್ಥಿಗಳಾದ ನಾವೂ ಆ ಪ್ರಕ್ರಿಯೆಯ ಭಾಗವಾಗಿರುವಂತೆ ಭಾಸವಾಗುತ್ತ ಕ್ಲಾಸುಗಳು ಸಿದ್ಧಪಾಠದ ನಿರೂಪಣೆಯಾಗದೇ ಜೀವಂತ ಅನುಭವವಾಗುತ್ತಿದ್ದವು. ಧೋ ಎಂದು ಸುರಿದ ಮಳೆ ನೆಲದಲ್ಲಿ ಇಂಗುವಂತೆ ಅವರ ಕ್ಲಾಸುಗಳಲ್ಲಿ ಓತಪ್ರೋತವಾಗಿ ಹರಿಯುತ್ತಿದ್ದ ಬುದ್ಧಿ-ಭಾವಗಳ ಧಾರೆ ನನ್ನೊಳಗೆ ಇಳಿಯುತ್ತ ದೃಢವಾಗಿ ಬೇರೂರಿಬಿಟ್ಟಿತು. ಚಿಗುರುವ, ಬೆಳೆಯುವ ದಾಹ ಆವರಿಸಿಕೊಳ್ಳುತ್ತ ಹೋಯಿತು. ಕಂಬಳಿ ಹುಳುವಿನಂತಿದ್ದ ನನ್ನಂಥ ವಿದ್ಯಾರ್ಥಿಗೆ ತಮ್ಮ ಅಗಾಧ ಜ್ಞಾನವನ್ನು ಉಣಿಸಿದ ಆ ಗುರು ಬೆಳೆಯುವ ಹಸಿವನ್ನು ತೀವ್ರಗೊಳಿಸಿದರು. ಮಲೆನಾಡ ಮೌನವನ್ನೇ ಹೊದ್ದಂತೆ, ನನ್ನೊಳಗೇ ನಾನೇ ಸಂಚರಿಸುತ್ತ ದಾರಿ ಹುಡುಕುತ್ತಿದ್ದ ನನ್ನೊಳಗೆ ತಾಮುಂದೆ ತಾಮುಂದೆ ಎಂಬಂತೆ ಬೆಳಕಿನ ಸೆಲೆಗಳು ಚಿಮ್ಮತೊಡಗಿದವು. ಸ್ಪಷ್ಟವಾದ ದಾರಿಯೊಂದು ರೂಪುಗೊಳ್ಳತೊಡಗಿದ್ದು ಆಗಲೇ. ಆರಂಭದಲ್ಲಿ ಕಲ್ಬುರ್ಗಿಯವರು ಬಹಳ ಟಫ್, ಬಹಳ ಸ್ಟ್ರಿಕ್ಟ್ ಎಂಬಂಥ ಅಭಿಪ್ರಾಯಗಳನ್ನೇ ಕೇಳಿದ್ದ ನನಗೆ ಅವರ ಕುರಿತು ಭಯಮಿಶ್ರಿತ ಗೌರವ. ಪ್ರಥಮ ಎಂ.ಎ.ಯಲ್ಲಿ ಅವರು ಪಂಪಭಾರತವನ್ನು ಪಾಠಮಾಡುತ್ತಿದ್ದರು. ಮಿಂಚಿನಂತೆ ಕ್ಲಾಸಿನೊಳಗೆ ಪ್ರವೇಶಿಸಿದವರೇ ಪೋಡಿಯಂ ಮೇಲೆ ಕೈಯೂರಿ ತಮಗೇ ವಿಶಿಷ್ಟವಾದ ಭಂಗಿಯಲ್ಲಿ ನಿಂತು “ವ್ಯಾಸ ಮುನೀಂದ್ರರುಂದ್ರ ವಚನಾಮೃತವಾರ್ಧಿಯನೀಸುವೆನ್’ ಎಂದು ಒಂದು ನಿಲುಗಡೆ ನೀಡುತ್ತಿದ್ದರು. ವಿಸ್ತಾರವಾದ ಕಡಲನ್ನೇ ಈಜಬಲ್ಲೆ ಎಂಬ ಈಜುಗಾರನ ಆತ್ಮವಿಶ್ವಾಸದಲ್ಲಿ ಹುರಿಗೊಂಡಂತೆ ನಿಲ್ಲುತ್ತಿದ್ದ ಅವರು ಮರುಕ್ಷಣ ‘ಕವಿ ವ್ಯಾಸನೆಂಬ ಗರ್ವಮೆನಗಿಲ್ಲ’ ಎಂದು ಮೃದುವಾಗುತ್ತ ಪುಟ್ಟಪೋರನಂತಾಗುತ್ತಿದ್ದರು. ಅವರ ಕಂಚಿನ ಕಂಠ, ಭಾವಾಭಿನಯ, ನಾಟಕೀಯತೆ, ವಿವರಿಸುವ ಗತ್ತು, ತೀವ್ರತೆಗಳು ಇಡೀ ಕ್ಲಾಸಿನಲ್ಲಿ ವಿವರಿಸಲಾಗದ ಒಂದು ಕಾವನ್ನು, ಕಂಪನವನ್ನು ಸೃಷ್ಟಿಸಿಬಿಡುತ್ತಿದ್ದವು. ಪಂಪಭಾರತದ ಮೂಲಕ ಧರ್ಮ, ಪ್ರಭುತ್ವ, ಸಂಸ್ಕೃತಿ ರಾಜಕಾರಣಗಳ ಒಳಸುಳಿಗಳನ್ನು ತೆರೆದು ತೋರುತ್ತ ಕಾಲದೇಶಗಳ ಅಂತರವನ್ನು ಅಳಿಸಿ ಸಮಕಾಲೀನಗೊಳಿಸುತ್ತಿದ್ದರು. ವ್ಯಕ್ತಿತ್ವದ ಕ್ಷುದ್ರತೆ, ಉದಾತ್ತತೆಗಳ ದರ್ಶನ ಮಾಡಿಸುತ್ತ ಮನುಕುಲದ ಕತೆಯನ್ನೇ ಬಿತ್ತರಿಸುವ ದಾರ್ಶನಿಕರಂತೆ ತೋರುತ್ತಿದ್ದರು. ಗೊಂದಲವಿಲ್ಲದ ಖಚಿತ ನಿಲುವಿನಲ್ಲಿ ಪ್ರಕಟವಾಗುತ್ತಿದ್ದ ಅವರ ವಾಗ್‍ವೈಖರಿಗೆ ಬೆರಗು ಆವರಿಸುತ್ತಿತ್ತು. ಅವರು ಎಚ್ಚರ ಹಾಗೂ ಧ್ಯಾನಗಳ ಅಪರೂಪದ ಮಿಶ್ರಣದಂತಿದ್ದರು. ಎಚ್ಚರದೊಳಗೆ ಧ್ಯಾನವೂ, ಧ್ಯಾನದಲ್ಲಿ ಎಚ್ಚರವೂ ಇರುವಂತೆ ಸದಾ ನಮ್ಮನ್ನು ಚಕಿತಗೊಳಿಸುತ್ತಿದ್ದರು. ಕಾವ್ಯದ ಗುಂಗುಹೊಕ್ಕವರಂತೆ ಪಾಠಮಾಡಬಲ್ಲ ಅವರ ಅಪರೂಪದ ಭಾವತೀವ್ರತೆ ಅದಕ್ಕೊಂದು ಉದಾಹರಣೆ. ಕಾವ್ಯವನ್ನು ವಾಚಿಸುವ ರೀತಿಯಲ್ಲೇ ಒಂದು ‘ಆವೇಶ’ವನ್ನು ಸೃಷ್ಟಿಸುತ್ತಿದ್ದ ಅವರು ಅದು ನಮ್ಮೊಳಗೂ ಹರಿಯುವಂತೆ ಮಾಡುವ ಚಾತುರ್ಯ ಹೊಂದಿದ್ದರು. ಅಂಥ ಸೃಜನಾತ್ಮಕ ಆವೇಗ ನಮ್ಮನ್ನು ಪ್ರೇರೇಪಿಸುತ್ತಿದ್ದ ರೀತಿ ಇನ್ನೂ ಅನುಭೂತಿಯಾಗಿ ಮನದಲ್ಲಿದೆ.“ಇದು ಮಂತ್ರ ಅರ್ಥಕೊಗ್ಗದ ಶಬ್ದಗಳ ಪವಣಿಸುವ ತಂತ್ರತಾನೆತಾನೆ ಸಮರ್ಥ ಛಂದ; ದೃಗ್ಬಂಧ ದಿಗ್ಬಂಧಪ್ರಾಣದ ಕೆಚ್ಚು ಕೆತ್ತಿ ರಚಿಸಿದೆ, ಉಸಿರ ಹದೆಗೆ ಹೂಡಿದಗರಿಯ ಗುರಿಯ ನಿರಿಯಿಟ್ಟು ಬರುತಿದೆ ತೂರಿ ಲೀಲೆಯಲನಾಯಾಸ” ಬೇಂದ್ರೆಯವರ ಈ ಸಾಲುಗಳನ್ನು ಕಲ್ಬುರ್ಗಿಯವರ ಧ್ವನಿಯಲ್ಲಿ ಕೇಳಿ ಥ್ರಿಲ್ ಆದ ಗಳಿಗೆ ಇನ್ನೂ ಮುಷ್ಟಿಯಲ್ಲೇ ಇರುವಂತಿದೆ! ‘ಪ್ರಾಣದ ಕೆಚ್ಚು ಕೆತ್ತಿ’ ಎಂದು ತೀವ್ರವಾಗಿ ಉಚ್ಚರಿಸುವಾಗಲಂತೂ ತಮ್ಮ ಅಭಿವ್ಯಕ್ತಿಯಲ್ಲಿ ಪ್ರಾಣವನ್ನೇ ಪ್ರತಿಷ್ಠಾಪಿಸಿದಂತೆ ಉತ್ಕಟವಾಗಿರುತ್ತಿದ್ದ ಕಲ್ಬುರ್ಗಿ ಸರ್ ಅವರ ನಿಲುವೇ ಪ್ರಕಟಗೊಂಡಂತೆ ಇರುತ್ತಿತ್ತು.


ಮಧುರಚೆನ್ನರನ್ನು ಉಲ್ಲೇಖಿಸುತ್ತಾ-ದೇವರಾಯನ ಹೆಸರನೇಕೆ ಕೇಳಿದೆನುನಾನೇಕೆ ನಂಜನುಂಗಿದೆನೇ ತಾಯೀ …..ಎಂದು ಆದ್ರ್ರಗೊಳ್ಳುವ ಅವರ ಧ್ವನಿ ಭಕ್ತನ ತಪನೆಯಲ್ಲಿ ಅದ್ದಿಹೋದಂಥ ಭಾವವನ್ನು ನಮ್ಮೊಳಗೂ ಮೂಡಿಸುತ್ತಿತ್ತು. “ಶಿಲೆಯೊಳಗಣ ಪಾವಕದಂತೆ… ಶಬ್ದದೊಳಗಗಿನ ನಿಃಶಬ್ದದಂತೆ…” ಅಮೂರ್ತ ಬಯಲಿನಂತಿರುವ ಅಲ್ಲಮನ ಹೆಜ್ಜೆಮೂಡದ ಹಾದಿಯನ್ನು ಬಲು ಬೆರಗಿನಿಂದ ಬಣ್ಣಿಸುತ್ತಿದ್ದ ಅವರು ದೃಢವಾಗಿ ಮೆಚ್ಚಿ ಅನುಸರಿಸುತ್ತಿದ್ದುದು ಮಾತ್ರ ಬಸವಣ್ಣನನ್ನು. ತಮ್ಮನ್ನು ಸಮಾಜಕ್ಕೆ ಅರ್ಪಿಸಿಕೊಳ್ಳುವ ‘ಶರಣತ್ವ’ ಅವರಿಗೆ ಮುಖ್ಯವಾಗಿ ಕಾಣುತ್ತಿತ್ತು. ಸಮಾಜವನ್ನು ರೂಪಿಸಲು ಬೇಕಾಗುವ ಸ್ಪಷ್ಟವಾದ ‘ಮಾರ್ಗ’ ನಿರ್ಮಾಣದ ಕಡೆಗೆ ಅವರ ಒಲವಿತ್ತು. ಬಸವಣ್ಣನ ವ್ಯಕ್ತಿತ್ವದ ಸಮಗ್ರತೆಯನ್ನು ಅಭಿಮಾನದಿಂದ ಕಟ್ಟಿಕೊಡುತ್ತಿದ್ದ ಅವರು ಪರಂಪರೆಗೆ ಪ್ರತಿರೋಧವೊಡ್ಡುವ ಅವನ ಕೆಚ್ಚನ್ನು ಕಟ್ಟಿಕೊಡುವಂತೆಯೇ ಅವನೊಳಗಿರುವ ಅನುಭಾವಿಯನ್ನೂ ಕಾಣಿಸಲು ಮರೆಯುತ್ತಿರಲಿಲ್ಲ.
                 ಪಾತಾಳದಿಂದಿತ್ತ ನಿಮ್ಮ ಶ್ರೀಚರಣಆಕಾಶದಿಂದತ್ತತ್ತ ನಿಮ್ಮ ಶ್ರೀಮುಕುಟಅಗಮ್ಯ ಅಗೋಚರ ಲಿಂಗವೇಎನ್ನ ಕರಸ್ಥಳಕೆ ಬಂದು ಚುಳುಕಾದಿರಯ್ಯಾ
ಎಂದು ಅಂಗೈ ಮುಂದೊಡ್ಡಿ ನಾಟಕೀಯವಾಗಿ ನಿರೂಪಿಸುತ್ತಿದ್ದ ಅವರ ಶೈಲಿ ಅನನ್ಯ. ಮೂರ್ತದಿಂದ ಅಮೂರ್ತಕ್ಕೆ ಸಂಚರಿಸುತ್ತ, ನೆಲದಿಂದ ಮುಗಿಲಿಗೆ ಜೀಕುತ್ತ ಭವ್ಯಾನುಭೂತಿಯನ್ನು ಮೂಡಿಸುವ ಆ ಉಕ್ತಿಗಳು ನನ್ನೊಳಗಿನ ಕವಿಯನ್ನು ಪರೋಕ್ಷವಾಗಿ ಪ್ರಚೋದಿಸುತ್ತಿದ್ದವು. ಕನ್ನಡದ ವಿಚಾರ ಪರಂಪರೆ ಹಾಗೂ ಅನುಭಾವ ಪರಂಪರೆಗಳನ್ನು ಜೊತೆಜೊತೆಯಾಗಿ ನಡೆಸಿಕೊಂಡು ಬರುತ್ತಿದ್ದ ಕಲ್ಬುರ್ಗಿಯವರು ನನ್ನೊಳಗೆ ಅಧ್ಯಯನದ ಮಾರ್ಗಗಳನ್ನು ತೆರೆಯುತ್ತಿದ್ದರು ಎಂದು ಈಗ ಯೋಚಿಸುವಾಗ ಅನಿಸುತ್ತದೆ.


ನಾನು ಮೊದಲೇ ಪ್ರಸ್ತಾಪಿಸಿದಂತೆ ಕಲ್ಬುರ್ಗಿಯವರು ಗುರುತಿಸುವ ಗುರು. ಶಿಷ್ಯರೊಳಗಿನ ಅಂತಃಸತ್ವವನ್ನು ಥಟ್ಟನೆ ಗುರುತಿಸಿ ಯಾರಿಂದ ಯಾವ ರೀತಿಯ ಕೆಲಸಮಾಡಿಸಬೇಕೆಂದು ನಿರ್ಧರಿಸಿಬಿಡುತ್ತಿದ್ದರು. ಅವರು ಪ್ರಜ್ಞಾಪೂರ್ವಕವಾಗಿ ಮಾಡುತ್ತಿದ್ದ ಈ ಕೆಲಸ ವಿದ್ಯಾರ್ಥಿಗಳ ಪ್ರಜ್ಞೆಯ ವಿಕಾಸಕ್ಕೆ ಕಾರಣವಾಗುತ್ತಿತ್ತು. ಆ ಮೂಲಕ ಕನ್ನಡಪ್ರಜ್ಞೆಯನ್ನು ಕಟ್ಟುವ ಕೆಲಸವನ್ನು ಅವರು ಸದ್ದಿಲ್ಲದೆ ಮಾಡುತ್ತಿದ್ದರು. ಮಾತಾಡಿ ಮರೆಯುವುದಕ್ಕಿಂತ ಬರೆಯುವುದು ಮುಖ್ಯವೆಂದು ಹೇಳುತ್ತಾ ಒಮ್ಮೆ ಅವರು ಕ್ಲಾಸಿನಲ್ಲಿ, ಏನಾದರೂ ಬರೆದಿದ್ದನ್ನು ತಂದು ತೋರಿಸಿರೆಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ತಮ್ಮ ವಿದ್ಯಾರ್ಥಿಗಳು ಹುಸಿಹೋಗದೇ ಗಟ್ಟಿಕಾಳುಗಳಾಗಬೇಕೆಂಬ ಕಾಳಜಿ ಅವರಲ್ಲಿ ತುಂಬಿತ್ತು. ಅದೊಂದು ದಿನ ನನ್ನ ಕವಿತೆಗಳ ಕಟ್ಟನ್ನು ಎದೆಗವಿಚಿಕೊಂಡು ಮೊದಲಸಲ ಅವರ ಕೋಣೆಯೊಳಗೆ ಕಾಲಿಟ್ಟೆ. ಸಿಂಹದ ಗವಿಯಲ್ಲಿ ಕಾಲಿರಿಸುವಂತೆ ಎಲ್ಲರೂ ಅಲ್ಲಿ ಹೋಗಲು ನಡುಗುತ್ತಿದ್ದುದರಿಂದ ನನ್ನಲ್ಲೂ ಅವ್ಯಕ್ತ ತಳಮಳವಿತ್ತು. ತಾಡೋಲೆಗಳು, ಬರಹಗಳ ಹೊರೆಯಲ್ಲಿ ಹುದುಗಿದಂತಿದ್ದ ಅವರು ಏನು? ಎಂಬಂತೆ ಪ್ರಶ್ನಾರ್ಥಕವಾಗಿ ತಲೆಯೆತ್ತಿದರು. ಸರ್ ನನ್ನ ಕವಿತೆಗಳು ಎಂದೇನೋ ತೊದಲಿದೆ. ಆಗ ಅವರ ಚಹರೆಯೇ ಬದಲಾಗಿ ಹೋಯಿತು. ಕೂಡು ಕೂಡು ಎಂದು ಕಣ್ಣಗಲಿಸಿ ನನ್ನ ಬರಹವನ್ನು ತೆಗೆದುಕೊಂಡರು. ಗಂಭೀರ ಸಂಶೋಧನೆಗಳಲ್ಲಿ ತೊಡಗಿರುತ್ತಿದ್ದ ಅವರು ನನ್ನಂಥ ಚಿಕ್ಕವಳ ಕವಿತೆಗಳನ್ನು ಓದಲಿಕ್ಕಿಲ್ಲವೇನೋ ಎಂದು ನನಗೆ ಅನಿಸಿತ್ತು. ಆದರೆ, ಎರಡೇ ದಿನಕ್ಕೆ ಬಂದ ಅವರ ಕರೆ ಅದನ್ನು ಸುಳ್ಳುಮಾಡಿತು. ಕಾಲಿಗೆ ಚಕ್ರಕಟ್ಟಿಕೊಂಡಂತೆ ಸಂಚರಿಸುತ್ತಿದ್ದ ಅವರು ರೈಲಿನಲ್ಲಿ ಪಯಣಿಸುತ್ತಿರುವಾಗಲೇ ನನ್ನ ಕವಿತೆಗಳನ್ನು ತುಂಬ ಸೂಕ್ಷ್ಮವಾಗಿ ಓದಿಕೊಂಡಿದ್ದರು. ಸಾಲುಗಳನ್ನು ಅಂಡರ್‍ಲೈನ್ ಮಾಡಿದ, ಶಬ್ದಗಳಿಗೆ ದುಂಡು ಸುತ್ತಿದ್ದ ಹಸ್ತಪ್ರತಿ ನನ್ನನ್ನು ಮೂಕಳನ್ನಾಗಿಸಿತ್ತು. ‘ಈ ಶಬ್ದದ ಬದಲು ಆ ಶಬ್ದ ಇಟ್ಟರೆ ಹೇಗೆ?’ ಅಂತೆಲ್ಲ ಉಮೇದಿನಿಂದ ಚರ್ಚಿಸಿದರು. ‘ಹುಚ್ಚು ಹುಡುಗೀ, ಇನ್ನಿದು ನಿನ್ನ ಆಸ್ತಿಯಲ್ಲ. ಕನ್ನಡದ ಆಸ್ತಿ’ ಎಂದು ಘೋಷಿಸಿಯೇಬಿಟ್ಟರು. ನನಗೋ ತಬ್ಬಿಬ್ಬು! ತಮ್ಮ ಶಿಷ್ಯೆ ಹನುಮಾಕ್ಷಿ ಗೋಗಿಯವರ ‘ಮಹಿಳಾ ಸಾಹಿತ್ಯಿಕಾ’ ಪ್ರಕಾಶನಕ್ಕೆ ಅದನ್ನು ಪ್ರಕಟಣೆಗೂ ಒಪ್ಪಿಸಿಬಿಟ್ಟರು. ನನ್ನೊಳಗಿನ ಕವಯಿತ್ರಿ ಹೀಗೆ ‘ಹೊಸಿಲಾಚೆ ಹೊಸಹೆಜ್ಜೆ’ಯಿಟ್ಟಳು.


ನಾವು ಕಲ್ಬುರ್ಗಿಯವರ ವಿದ್ಯಾರ್ಥಿಗಳೆಂದು ಹೆಮ್ಮೆಪಡುತ್ತಿದ್ದ ಅದೇ ಕಾಲದಲ್ಲಿ ಅವರಿಗೆ ಪಂಪ ಪ್ರಶಸ್ತಿ ಪ್ರಕಟವಾಯಿತು. ನಾವು ನಾಲ್ಕೈದು ಮಂದಿ ಸ್ನೇಹಿತರು ಸುದ್ದಿ ತಿಳಿದವರೇ ಸಂಭ್ರಮದಲ್ಲಿ ಕಾಲುನಿಲ್ಲದೇ ಅವರ ಮನೆಗೆ ದಾಳಿಯಿಟ್ಟೆವು. ‘ಹೋಯ್, ಎಲ್ಲಾ ಬಂದೀರೇನೂ… ಬಾರವ್ವಾ ಬಾ ‘ ಎಂದು ತಲೆಮೊಟಕಿ ತಮ್ಮ ಪ್ರೀತಿ ತೋರಿದರು. ಪತ್ನಿಯನ್ನು ಕರೆದು ನಮ್ಮನ್ನೆಲ್ಲ ಪರಿಚಯಿಸಿದರು. ಕ್ಷಣಕ್ಷಣಕ್ಕೂ ರಿಂಗಣಿಸುತ್ತಿದ್ದ ದೂರವಾಣಿ ಕರೆಗಳಿಗೆ ಉತ್ತರಿಸುತ್ತಲೇ ನಮ್ಮೊಂದಿಗೂ ಹರಟುತ್ತ ತಮ್ಮ ಸಂತಸ ಹಂಚಿಕೊಂಡರು. ಆಮೇಲೆ ಅವರು ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ನಾವು ಬನವಾಸಿಗೂ ಹೋದೆವು. ಆ ಬ್ರಹತ್ ಸಮಾರಂಭದಲ್ಲಿ ಅವರನ್ನು ಹೇಗೆ ಮಾತನಾಡಿಸುವುದೆಂದು ಹಿಂಜರಿಯುತ್ತಾ, ಕತ್ತು ಉದ್ದಮಾಡಿ ಇಣುಕುತ್ತಾ ನಿಂತಿದ್ದೆವು. “ಇಲ್ಲೂ ಬಂದೀರೇನೂ” ಎಂದು ಛೇಡಿಸುವಂತೆ ನಗುತ್ತಾ “ಏ ಭೇಷಾತು, ಭೇಷಾತು” ಎಂದು ಬೆನ್ನು ತಟ್ಟಿದರು. ಅಂದು ಪಂಪ ಪ್ರಶಸ್ತಿಯ ಮೊತ್ತವನ್ನು ಪಂಪನ ಹೆಸರಿನಲ್ಲಿ ಪ್ರತಿಷ್ಠಾನವನ್ನು ನಿರ್ಮಿಸಲೆಂದು ಸರಕಾರಕ್ಕೆ ಹಿಂದಿರುಗಿಸುತ್ತಾ ಅವರು ‘ಅಂಬಲಿ ಕಂಬಳಿ ಆಸ್ತಿ, ಮಿಕ್ಕಿದ್ದೆಲ್ಲಾ ಜಾಸ್ತಿ’ ಎಂದು ಉದ್ಘೋಷಿಸಿದರು. ವ್ಯಕ್ತಿಗಿಂತ ಸಮಾಜ ದೊಡ್ಡದು, ಪರಂಪರೆ ದೊಡ್ಡದು ಎಂದು ನಂಬಿದ್ದ ಅವರು ಪರಂಪರೆಯನ್ನು ಬೆಳೆಸಲೆಂದೇ ತಮ್ಮ ಪಾಲನ್ನು ಒಪ್ಪಿಸಿ ನಿಸೂರಾದರು. ನನ್ನೊಳಗೆ ಬೆಳೆಯುತ್ತಿದ್ದ ಸಾಮಾಜಿಕ ಪ್ರಜ್ಞೆಗೆ ತಾವೇ ನಿದರ್ಶನವಾಗಿ ನಿಂತರು. ಮುಂದೆಲ್ಲ ಅವರ ಪ್ರೀತಿ ನನ್ನನ್ನು ಪೊರೆಯುತ್ತಲೇ ಹೋಯಿತು. ಜೀವಕ್ಕೆ ಹತ್ತಿರವಾದ ಗುರು ಧಿಡೀರೆಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಹೊರಟುನಿಂತಾಗ ಉಮ್ಮಳ ಉಕ್ಕಿ ಬಂತು. ನಾವು ವಿದ್ಯಾರ್ಥಿಗಳು ಹೇಗೆ ಪ್ರತಿಕ್ರಿಯಿಸುವುದೆಂದು ತಿಳಿಯದೇ ದಿಗ್ಮೂಢರಾಗಿ ನಿಂತಿದ್ದೆವು. ಅಂದು ಅವರಿಗೆ ಬೀಳ್ಕೊಡುಗೆಯ ಔತಣಕೂಟವಿತ್ತು. ಅಲ್ಲಿ ಅವರೇಕೋ ಕಣ್ಣೀರಾದರು. ವಿಭಾಗದಲ್ಲಿ ಹಾಯ್ದುಬಂದ ನೋವಿನ ಕೊಂಡಗಳು ನೆನಪಾಗಿರಬೇಕು ಅವರಿಗೆ. ನನ್ನ ಮನಸ್ಸು ಒದ್ದೆಯಾಗಿತ್ತು. ಆದರೂ ನಮ್ಮ ಗುರುಗಳು ಕನ್ನಡದ ಕುಲಪತಿಯಾದರೆಂಬ ಸಂತಸದ ಲಹರಿಗಳೂ ಉಂಟಾದವು. ಕುಲಪತಿಗಳಾಗಿ ಗಮನಾರ್ಹ ಹೆಜ್ಜೆಗಳನ್ನಿಟ್ಟ ಕಲ್ಬುರ್ಗಿಯವರು ತಾವು ಹೋದಲ್ಲೆಲ್ಲ ‘ಮಾರ್ಗ’ ನಿರ್ಮಾಣ ಮಾಡಿದರು. ಪಂಪನ ಕುರಿತು ಅವರು ಹೇಳುತ್ತಿದ್ದ ‘ಆನೆ ನಡೆದದ್ದೇ ಮಾರ್ಗ’ ಎಂಬ ಮಾತು ಅವರಿಗೂ ಅನ್ವಯವಾಗುತ್ತಿತ್ತು.


ಮಕ್ಕಳು, ಮನೆವಾರ್ತೆಗಳಲ್ಲಿ ಕಳೆದುಹೋದಂತಿದ್ದ ನನಗೆ ಸದಾ ಒಂದು ಎಚ್ಚರದಂತೆ ಅವರಿದ್ದರು. ಅವರು ಬಿತ್ತಿದ ಕನಸು ಕೊನರುತ್ತಿತ್ತು. ಐದಾರುವರ್ಷಗಳ ನಂತರ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಸೇರಿಕೊಂಡಾಗ ಮತ್ತೆ ಗುರುವಿನ ಮಮತೆ ಸೆಲೆಯೊಡೆಯಿತು. ಅವರಿದ್ದ ಕಲ್ಯಾಣ ನಗರದ ಪಕ್ಕದ ರಸ್ತೆಯಲ್ಲೇ ನನ್ನ ಮನೆ! “ನೀನು ಕಳದೇ ಹೋದಿ ಅನ್ಕೊಂಡಿದ್ದೆ. ಈಗ ಭಾಳ ಚಲೋ ಆತು” ಎಂದು ಸಂಭ್ರಮಿಸಿದರು. ಮನೆಗೆ ಹೋದಾಗಲೆಲ್ಲ ‘ಏ ಗೀತಾ ಬಂದಾಳ್ನೋಡೂ ’ ಎಂದು ಮಡದಿ ಉಮಾದೇವಿಯವರನ್ನು ಕರೆಯುವಾಗ ಅವರ ದನಿಯಲ್ಲಿ ಮನೆಮಗಳು ಎಂಬಂಥ ಆಪ್ತತೆ ಇಣುಕುತ್ತಿತ್ತು. ಗಂಡ, ಮಕ್ಕಳ ಕ್ಷೇಮವನ್ನು ವಿಚಾರಿಸಿಕೊಳ್ಳುತ್ತಾ, ‘ಪಗಾರಾ ಸಾಕಾಗ್ತದಿಲ್ಲೋ’ ಎಂದು ತಂದೆಯ ಕಾಳಜಿಯಲ್ಲಿ ವಿಚಾರಿಸಿಕೊಳ್ಳುತ್ತಿದ್ದರು. ಅಷ್ಟರಲ್ಲಾಗಲೇ ಖುರ್ಚಿಗಳನ್ನು ಹತ್ತಿಳಿದು ದಾಂಧಲೆ ನಡೆಸಿರುತ್ತಿದ್ದ ನನ್ನ ಮಗನನ್ನು ‘ಅವ್ವಾಗ್ ಓದ್ಲಾಕ್ ಬರೀಲಾಕ ಬಿಡಾಂಗಿಲ್ಲೇನ್ ನೀ” ಎಂದು ಅಜ್ಜನ ಪ್ರೀತಿಯಲ್ಲಿ ಗದರುತ್ತಿದ್ದರು. ಈ ಮಧ್ಯೆ ಪ್ರಕಟವಾಗಿದ್ದ ನನ್ನ ‘ಬೆಳಕಿನ ಬೀಜ’ ಕೃತಿಯಲ್ಲಿ ಅನುಭಾವದ ನಡಿಗೆಯನ್ನು ಗಮನಿಸಿದ್ದ ಅವರು ನನ್ನೊಳಗೆ ಬೇಂದ್ರೆ ಕಾವ್ಯದ ಗುಂಗನ್ನು ತೂರಿಬಿಬಿಟ್ಟರು. ಆಗ ಬೇಂದ್ರೆ ಟ್ರಸ್ಟಿನ ಅಧ್ಯಕ್ಷರಾಗಿದ್ದ ಅವರು ಬೇಂದ್ರೆ ಕಾವ್ಯವನ್ನು ‘ಅವಧೂತ ಪ್ರಜ್ಞೆಯ’ ಮೂಲಕ ಅರಿಯುವ ಹೊಸ ಮಾರ್ಗವನ್ನು ತೆರೆದು ನಡೆಯಲು ಹಚ್ಚಿದರು.


ಬೇಂದ್ರೆಯವರಿಗಂಟಿದ ‘ವೈದಿಕ ಕವಿ’ ಎಂಬ ಗುರುತನ್ನು ಕೊಡವಿ ಅವರನ್ನು ರೂಪಿಸಿದ ‘ಅವೈದಿಕ ಧಾರೆಗಳನ್ನು’ ಗುರುತಿಸುವಂತೆ ಮಾಡಿದರು. ನೋಟದ ಕ್ರಮವನ್ನೇ ಬದಲಿಸುವಂಥ ಮಾರ್ಗಶೋಧಕ್ಕೆ ನನ್ನನ್ನು ಪ್ರೇರೇಪಿಸಿದರು. ಆ ದಾರಿಯ ಪಯಣ ಮುಂದೆ ನನ್ನ ಬದುಕಿನ ಫಿಲಾಸಫಿಯನ್ನೇ ಬದಲಿಸಿತು. ಅನುಭಾವದ ಅಗಾಧತೆ, ಸಾಧನಾ ಮಾರ್ಗಗಳ ರಹಸ್ಯಮಯತೆ, ತರ್ಕದಾಚೆ ಚಾಚಿದ ಚಿತ್ತದ ಅನೂಹ್ಯ ಸಾಧ್ಯತೆಗಳು ತೆರೆಯುತ್ತ ಹೋದಂತೆ ಜ್ಞಾನದ ಹೊಸ ಮೀಮಾಂಸೆಯನ್ನು ಕಟ್ಟಬಲ್ಲ ಎಳೆಗಳು ಬೆಸೆದುಕೊಳ್ಳುತ್ತ ನಡೆದವು. ಬೇಂದ್ರೆ ನೆಪದಲ್ಲಿ ಆರಂಭವಾದ ಈ ಅಧ್ಯಯನದ ಸಾಧ್ಯತೆ ನನ್ನನ್ನು ಬೆರಗುಗೊಳಿಸಿದೆ. ಆದರೆ, ಮಾರ್ಗದಲ್ಲಿ ಅನುಮಾನಗಳೆದುರಾದಾಗ, ದಾರಿ ತಪ್ಪಿದಂತೆನಿಸಿದಾಗ ಗೈಡ್, ಫಿಲಾಸಫರ್ ಎಲ್ಲವೂ ಆಗಿದ್ದ ಗುರು ಎದುರಿಗಿಲ್ಲ ಈಗ ಎಂಬ ತಬ್ಬಲಿತನ ತಲ್ಲಣವನ್ನುಂಟುಮಾಡಿದೆ.
ಕಲ್ಬುರ್ಗಿ ಸರ್ ಸಾವಿನ ಸುದ್ದಿ ಬರಸಿಡಿಲಿನಂತೆ ಬಂದೆರೆಗಿದ ದಿನ ನಾನು ಮೈಸೂರಿನಲ್ಲಿ ರಿಫ್ರೆಶರ್ ಕೋರ್ಸಿನಲ್ಲಿದ್ದೆ. ‘ಇದು ಎಂಥಾ ಜೀವದ ಬ್ಯಾಟಿ ಹಾಡೇ ಹಗಲ’ ಬೇಂದ್ರೆಯವರ ಸಾಲು ಪ್ರಜ್ಞೆಯೊಳಗೆ ಸರಿದು ಹೋಯ್ತು. ಸತ್ಯವನ್ನು ಹೇಳುವ ಮತ್ತು ಅದನ್ನೇ ಧರಿಸಿ ಬಾಳುವ ತಾಕತ್ತು, ಸತ್ಯಕ್ಕಾಗಿ ಸಂಘರ್ಷಗಳನ್ನು ಎದುರುಹಾಕಿಕೊಳ್ಳುವ ತಾಕತ್ತು ಅವರನ್ನು ಬಂದೂಕಿನ ಮೊನೆಮುಂದೆ ತಂದು ನಿಲ್ಲಿಸಿತೇ? ಎಂಬ ದಿಗ್ಭ್ರಮೆ. ಅವರೊಡನೆ ಆಡದೇ ಉಳಿದ ಮಾತುಗಳು, ಕೇಳಬೇಕಾಗಿದ್ದ ಪ್ರಶ್ನೆಗಳು ಎದೆಗುದ್ದತೊಡಗಿದವು. “ಸರ್, ನೀವು ಸಲಹಿದ ಸಸಿ ನಾನು. ಬೆಳಕಿನ ಕಡೆ ನೋಡುವುದೇ ನನ್ನ ಪ್ರಕೃತಿ. ಆದರೆ ಬೆನ್ನ ಹಿಂದೆ ಅವಿತ ಕತ್ತಲೆಯನ್ನು ಗೆಲ್ಲುವುದು ಹೇಗೆ ಸರ್? ವ್ಯಕ್ತಿ, ಸಮಾಜಗಳ ನಡುವಿನ ಸಂಘರ್ಷ, ಸಾಮರಸ್ಯಗಳ ಸಂಕಥನವನ್ನು ಕಟ್ಟುತ್ತಿದ್ದಿರಿ ನೀವು. ಹೀಗೆ ಅರ್ಧಕ್ಕೆ ಎದ್ದುಹೋಗಿಬಿಡುವಂತಾಯಿತೆ? ನಮ್ಮ ನಡುವಿನ ಬೆಳಕಿನಂತಿರುವ ಬಸವಣ್ಣ, ಗಾಂಧಿ ಇವರೆಲ್ಲ ಸತ್ಯದೊಡನೆ ನಡೆಸಿದ ಪ್ರಯೋಗಗಳಿಂದಾಗಿಯೇ ಕೊನೆಯಾದರೆ? ನಮ್ಮನ್ನೇ ನಾವು ಪ್ರತಿರೋಧಿಸುವ ಗುಣ ಮಾತ್ರ ನಮ್ಮನ್ನು ಜಂಗಮಗೊಳಿಸುತ್ತದೆ. ಬಗ್ಗಡವಾಗದಂತೆ ಪಾರದರ್ಶಕಗೊಳಿಸುತ್ತದೆ. ಆದರೆ ಇಂದು ಪ್ರಗತಿಪರತೆ, ಮೂಲಭೂತವಾದ ಇತ್ಯಾದಿ ಹೆಸರಲ್ಲಿ ಸ್ವಜಾತಿ ಗುಂಪುಗಳನ್ನು ಕಟ್ಟಿಕೊಂಡು ಉನ್ಮಾದದಿಂದ ಕೇಕೆ ಹಾಕುತ್ತಿರುವ  ಮನುಷ್ಯಕುಲ ಕತ್ತಲೆಗೆ ಜಾರುತ್ತಿದೆಯೆಂದೆನಿಸುವುದಿಲ್ಲವೇ? ಬೆಳಕಿನ ಮಾರ್ಗವನ್ನು ಮತ್ತೆ ತೆರೆಯುವುದೆಂತು?
ನೀವು ಹದಿನೈದು ವರ್ಷಗಳ ಹಿಂದೆ ನನ್ನ ಪ್ರಥಮ ಕವನ ಸಂಕಲನಕ್ಕೆ ಬರೆದ ಮುನ್ನುಡಿಯನ್ನು ಮುಂದಿಟ್ಟುಕೊಂಡೆ. “ತಣ್ಣನೆಯ ವ್ಯಕ್ತಿತ್ವ, ಬೆಚ್ಚನೆಯ ಬರಹದ ಗೀತಾ ನನ್ನ ಅಪರೂಪದ ವಿದ್ಯಾರ್ಥಿಗಳಲ್ಲಿ ಒಬ್ಬರು. ಗೆಳತಿಯರ ಗದ್ದಲದ ನಡುವೆಯೂ ಮೌನವನ್ನು ಕಾಪಾಡಿಕೊಳ್ಳುವ ವಿಶಿಷ್ಟ ಜೀವನ ಶೈಲಿಯ ಈ ‘ಮೂಕಿ’ ಕವನದಲ್ಲಿಯೂ ಮಾತಾಡಬಲ್ಲಳೆಂದು ತಿಳಿಯುತ್ತಲೇ ನಾನು ಸಸಿಯ ಸಲುಹುವ ಎಚ್ಚರ ವಹಿಸಿದೆ. ಸಾಲದುದಕ್ಕೆ ವೇದಿಕೆಯಮೇಲೆ ಅಳೆದು ತೂಗಿ ಆಡುವ ಇವರ ಮಾತುಗಾರಿಕೆಯಿಂದಾಗಿ ಇನ್ನೂ ಎಚ್ಚರವಹಿಸಿದೆ.


ಸಂಬಳಕ್ಕಾಗಿ ದುಡಿಯುವ ಪ್ರಾಧ್ಯಾಪಕರು, ಸರ್ಟಿಫಿಕೇಟಿಗಾಗಿ ಬರುವ ವಿದ್ಯಾರ್ಥಿಗಳು ತುಂಬಿಕೊಂಡಿರುವ ಇಂದಿನ ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಬರೆಯುವ, ಚೆನ್ನಾಗಿ ಬರೆಯುವ ವಿದ್ಯಾರ್ಥಿಗಳನ್ನು ಕಂಡರೆ ನನಗೆ ಪಂಚಪ್ರಾಣ; ಅವರಿಂದ ದೊಡ್ಡ ನಿರೀಕ್ಷೆ. ಈ ನಿರೀಕ್ಷೆಗೆ ಉತ್ತರ ರೂಪದಲ್ಲಿ ಹೊರಬರುತ್ತಿದೆ “ಹೊಸಿಲಾಚೆ ಹೊಸಹೆಜ್ಜೆ”.
ಸರ್, ಓದಿ ಹೃದಯ ಭಾರವಾಯ್ತು. “ಗೀತಾ ಭಾಳ್ ಛಲೋ ಅದಾಳ, ಅವಳ ಪುಸ್ತಕ ಹೊಸದೇನೋ ಹೇಳ್ತದ” ಅಂತೆಲ್ಲಾ ಮುಕ್ತವಾಗಿ ನೀವು ಪ್ರಶಂಸಿಸುವಾಗ ಒಳಗಿನಿಂದ ಅಲ್ಲಾಡಿಸಿದಂತಾಗುತ್ತಿತ್ತು. ನೀವು ಹೇಳುವ ಮಟ್ಟಕ್ಕೆ ನಿಜವಾಗಿಯೂ ಬೆಳೆಯಬೇಕೆಂಬ ಹುರುಪು ಮೈಮನಗಳನ್ನು ತುಂಬಿಕೊಳ್ಳುತ್ತಿತ್ತು. ಜಾತಿ-ಧರ್ಮ-ಲಿಂಗಗಳ ಗುರುತು ಮೀರಿ ವಿದ್ಯಾರ್ಥಿಗಳನ್ನು ಬೆಳೆಸುವ, ಸಲುಹುವ ನಿಮ್ಮ ಆಂತರ್ಯದ ಹಂಬಲ, ಸರಳತೆ, ಉದಾರತೆಗಳು ಇಂದು ವಿಶ್ವವಿದ್ಯಾಲಯಗಳಲ್ಲಿ ಮರೀಚಿಕೆ ಮಾತ್ರ. ಸರ್, ಇಂದು ವಿಶ್ವವಿದ್ಯಾಲಯಗಳಲ್ಲಿ ಸಂಬಳಕ್ಕೆ ಬರುವ ಪ್ರಾಧ್ಯಾಪಕರು ಮಾತ್ರವಿಲ್ಲ. ಗುಂಪುಗಾರಿಕೆಯ ಮೂಲಕ ಶಕ್ತಿಕೇಂದ್ರವಾಗಿ ವಿಜ್ರಂಭಿಸುವ ಹಪಹಪಿಗೆ ಬಿದ್ದ ಅಧ್ಯಾಪಕರು, ಪ್ರಾಮಾಣಿಕರನ್ನು ತುಳಿಯುವ, ಅಡ್ಡಮಾರ್ಗಗಳ ಕುರಿತು ಸಂಶೋಧನೆ ಮಾಡುತ್ತಾ ಜಾತಿದ್ವೇಷವನ್ನು ವಿದ್ಯಾರ್ಥಿಗಳಲ್ಲಿ ಬಿತ್ತುತ್ತಾ ರಣೋತ್ಸಾಹದಲ್ಲಿ ಕೇಕೆ ಹಾಕುವ ಅಧ್ಯಾಪಕರುಗಳ ಸಮೂಹ ಇಂದು ಬೌದ್ಧಿಕ ಜಗತ್ತನ್ನು ಆಳುತ್ತಿದೆ. ತಮ್ಮ ತಮ್ಮ ಜಾತಿಯ ವಿದ್ಯಾರ್ಥಿಗಳನ್ನು ಪಟ್ಟಿಮಾಡಿಕೊಂಡು ‘ಸತ್ಸಂಗ’ ನಡೆಸುವವವರು ‘ಸಸಿಯ ತುಳಿಯುವ’ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ. ಉನ್ನತ ಶಿಕ್ಷಣಕ್ಕೆ ಅಗತ್ಯವಾಗಿ ಬೇಕಾದ ಅಕಾಡೆಮಿಕ್ ಎಕ್ಸಲೆನ್ಸಿ, ಪ್ರಾಮಾಣಿಕತೆ, ಸತ್ಯದ ಹಂಬಲಗಳು ನಿತ್ಯವೂ ಗುಂಡೇಟಿಗೊಳಗಾಗಿ ಸಾಯುತ್ತಿವೆ. ನೊಂದ ಮನಸ್ಸುಗಳು ಉದ್ಘರಿಸುತ್ತವೆ “ಇದು ಎಂಥಾ ಜೀವದ ಬ್ಯಾಟಿ ಹಾಡೇ ಹಗಲಾ!”
ಸರ್, ಇಂಥ ಭಯ, ಶಂಕೆಗಳ ಕತ್ತಲಲ್ಲೂ ನಿಮ್ಮ ನೆನಪೇ ನಮ್ಮಂಥವರಿಗೆ ದಾರಿದೀಪ. “ತಮಂಧ ಘನ ಜ್ಯೋತಿ ಕಿರಿದೆನ್ನಬಹುದೇ?”ಎಂಬ ನುಡಿಯೇ ತ್ರಾಣ. ಇಡಿಯ ವ್ಯಕ್ತಿತ್ವವನ್ನೇ ಶ್ರುತಿಗೊಳಿಸಿ, ನಿಮ್ಮಂತೆ ಪ್ರಾಣದ ಕೆಚ್ಚು ಕೆತ್ತಿ ರಚಿಸಿದಂತೆ ಪಾಠ ಮಾಡಬೇಕೆಂಬ ಹಂಬಲ, ಮುಂದಿನ ಜನಾಂಗವನ್ನು ಸ್ವಚ್ಛವಾಗಿ ಬೆಳೆಸಬೇಕೆಂಬ ಹಂಬಲ ನಮ್ಮಲ್ಲಿ ಇನ್ನೂ ಜೀವಂತವಾಗಿದೆಯೆಂಬುದೇ ಒಂದು ಭರವಸೆಯ ಸೆಲೆ. ‘ಅಲ್ಪವಿರಾಮದ ಸಮೀಪ ನಿಂತಿರುವ ಗೀತಾ ಪೂರ್ಣವಿರಾಮದ ಸಮೀಪ ನಿಲ್ಲುವುದನ್ನು ನೋಡುವ ಸಂತೋಷ ನನ್ನದಾಗಲಿ” ಎಂದು ನನ್ನ ಮೊದಲ ಕೃತಿಗೆ ಮುನ್ನುಡಿ ಬರೆಯುತ್ತಾ ಹರಸಿದ್ದೀರಿ. ಇದ್ದಷ್ಟೂ ಶಕ್ತಿ ಸಂಚಯಿಸಿ ಹಾಗೆ ನಡೆಯುವ ಪ್ರಯತ್ನವಂತೂ ಜಾರಿಯಲ್ಲಿದೆ. ತುಳಿದಷ್ಟೂ ತಲೆಯೆತ್ತಿನಿಲ್ಲುವ, ಚಿವುಟಿದಷ್ಟೂ ಚಿಗುರುವ ಕೆಚ್ಚು ಆರದಂತೆ ಕಾಪಿಡಲು ನಿಮ್ಮ ಅಭಯ ಹಸ್ತ ಸದಾ ನಮ್ಮ ಬೆನ್ನಹಿಂದೆ ಇರುತ್ತದೆ. ಪ್ರಾಯಶಃ  ನಿಮ್ಮೊಂದಿಗೆ ಸಂವಾದಿಸಲು ಇರುವ ಮಾರ್ಗ ಅದೊಂದೇ.

Comments are closed.

Social Media Auto Publish Powered By : XYZScripts.com