ಗಣಪತಿಗೆ ಗುಡ್ ಬೈ ಹೇಳಿದ್ಮೇಲೆ ಬೆಳ್ಳಿ-ಚಿನ್ನ ನಿಮ್ಮದಾಗಬಹುದು ! ಈ ಹಬ್ಬಕ್ಕೆ ಇದು ಹೊಸತು !

ಇಲ್ಲೊಂದಷ್ಟು ಮಣ್ಣಿನ ಗಣಪನ ಮೂರ್ತಿಗಳಿವೆ. ಇವುಗಳನ್ನು ತೆಗೆದುಕೊಂಡು ನೀವು ಈ ಬಾರಿ ಗಣೇಶ ಹಬ್ಬ ಆಚರಿಸಿದ್ರೆ ಹಬ್ಬ ಮುಗಿಯುವಷ್ಟರಲ್ಲಿ ನಿಮ್ಮ ಮನೆಗೆ ಲಕ್ಷ್ಮಿಯೂ ಬಂದಿರೋ ಚಾನ್ಸ್ ಇದೆ. ಇದೊಂಥರಾ ಒಂದಕ್ಕೆ ಎರಡು-ಮೂರು ಒಟ್ಟೊಟ್ಟಿಗೆ ಬಹುಮಾನ ಪಡೆದಂತೆ.

ಅಂದ್ಹಾಗೆ ಇದು ಅಪ್ಪಟ ಜೇಡಿಮಣ್ಣಿನ ಗಣಪತಿ ಮೂರ್ತಿ. ಇದಕ್ಕೆ ಸ್ವಲ್ಪ ಹಸುವಿನ ಸಗಣೆಯನ್ನೂ ಬೆರೆಸಿ ಮಾಡಲಾಗಿದೆ. ಅದರ ಜೊತೆಗೆ ಗಣಪನ ಹೊಟ್ಟೆಯೊಳಗೆ ತುಳಸಿ, ಹೊಂಗೆ ಮುಂತಾದ ಕೆಲವು ಉಪಯುಕ್ತ ಗಿಡಗಳ ಬೀಜಗಳನ್ನೂ ಸೇರಿಸಲಾಗಿದೆ. ಆದ್ದರಿಂದ ಬೇರೆ ವಿಗ್ರಹಗಳಿಗಿಂತ ಗಣಪತಿ ಹಬ್ಬಕ್ಕೆ ಈ ಪರಿಸರ ಸ್ನೇಹಿ ಗಣಪತಿಯನ್ನು ನೀವು ಪೂಜಿಸಿದ್ರೆ ಅಷ್ಟರ ಮಟ್ಟಿಗೆ ಪ್ರಕೃತಿ ಮಾತೆ ನಿಟ್ಟುಸಿರುಬಿಡ್ತಾಳೆ. ಇದರಲ್ಲಿ ಬಳಸಿರುವ ಅಲ್ಪಸ್ವಲ್ಪ ಬಣ್ಣ ಕೂಡಾ ಹಾನಿಕಾರಕ ರಾಸಾಯನಿಕಗಳಿಲ್ಲದಂಥವು.

ಯಾವ ಬಗೆಯ ಗಣೇಶನನ್ನು ಹಬ್ಬಕ್ಕೆ ಕರೆತಂದರೂ ಹಬ್ಬ ಮುಗಿದ ಮೇಲೆ ವಿಸರ್ಜನೆ ಮಾಡಲೇಬೇಕಲ್ಲಾ? ಎಷ್ಟೇ ಹೇಳಿದ್ರೂ ಜನ ಕೆರೆ-ಬಾವಿಗಳಿಗೆ ಗಣಪತಿ ಮೂರ್ತಿಗಳನ್ನು ವಿಸರ್ಜಿಸೋದು ನಿಲ್ಲಿಸೋದಿಲ್ಲ. ಅದಕ್ಕಾಗಿ ಸ್ವಯಂಸೇವಾ ಸಂಘಟನೆಯೊಂದು ವಿಶೇಷ ಪ್ರಯತ್ನ ಮಾಡಿದೆ. ಒಂದಷ್ಟು ಗಣಪತಿ ಮೂರ್ತಿಗಳೊಳಗೆ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳನ್ನು ಅಡಗಿಸಿಟ್ಟಿದೆ. 3000ಕ್ಕೂ ಅಧಿಕ ಮೂರ್ತಿಗಳ ಮಧ್ಯ ಸುಮಾರು 1800 ಮೂರ್ತಿಗಳೊಳಗೆ ನಾಲ್ಕು ಗ್ರಾಂನ ಬೆಳ್ಳಿ ನಾಣ್ಯವಿದೆ. 5 ಮೂರ್ತಿಗಳೊಳಗೆ ಒಂದೊಂದು ಗ್ರಾಂ ಚಿನ್ನದ ನಾಣ್ಯವೂ ಇದೆ.

ಹಾಗಾಗಿ ಈ ಮೂರ್ತಿಗಳನ್ನು ಯಾರೂ ಹೊರಗೆಲ್ಲೋ ವಿಸರ್ಜನೆ ಮಾಡೋದಿಲ್ಲ. ತಂತಮ್ಮ ಮನೆಯ ಬಕೆಟ್ಟಿನಲ್ಲೋ, ಡ್ರಮ್ಮಿನಲ್ಲೋ ಗಣಪನಿಗೆ ಗುಡ್ ಬೈ ಹೇಳ್ತಾರೆ. ಮಣ್ಣಿನ ಮೂರ್ತಿ ನೀರಿನಲ್ಲಿ ಕರಗಿದ ಮೇಲೆ ಅದರೊಳಗಿನ ಬೆಳ್ಳಿ ಅಥವಾ ಚಿನ್ನದ ನಾಣ್ಯ ಮನೆಯವರದ್ದಾಗುತ್ತದೆ. ಈ ನಾಣ್ಯಗಳ ಆಸೆಗಾಗಿಯಾದರೂ ಜನ ಪರಿಸರ ಸ್ನೇಹಿ ಮಾರ್ಗಗಳನ್ನು ಪಾಲಿಸಲಿ ಎನ್ನುವುದು ಇದರ ಹಿಂದಿನ ಉದ್ದೇಶ.  ನಾಣ್ಯ ಪಡೆದ ನಂತರ ಆ ನೀರನ್ನು ಮನೆಯ ಅಂಗಳ ಅಥವಾ ಹಿತ್ತಲಲ್ಲಿ ಸುರಿದರೆ ಅದರೊಳಗಿನ ಬೀಜಗಳು ಇದೇ ಮಣ್ಣು ಮತ್ತು ಸಗಣಿಯ ಸಹಾಯದಿಂದ ಹಸಿರಾಗಿ ಕಂಗೊಳಿಸುತ್ತವೆ.

ಹೀಗೆ ಪ್ರಕೃತಿಗೆ ಪೂರಕವಾಗಿ ಹಬ್ಬ ಆಚರಿಸುವಂತೆ ಜನರನ್ನು ಪ್ರೋತ್ಸಾಹಿಸೋಕೆ ವಿಭಿನ್ನವಾದ ಮಾರ್ಗವನ್ನು ಶಿವಕುಮಾರ ಹೊಸಮನಿ ನೇತೃತ್ವದ ಸಂಘಟನೆ ವಿನೂತನ ಮಾರ್ಗ ಕಂಡುಕೊಂಡಿದೆ. ಈ ಹಬ್ಬದಲ್ಲಿ ಎಷ್ಟು ಜನ ಗಣಪನನ್ನು ಕಳಿಸಿದ ಮೇಲೆ ಚಿನ್ನ ಅಥವಾ ಬೆಳ್ಳಿಯನ್ನು ಪಡೆಯುತ್ತಾರೆ ಎನ್ನುವುದನ್ನು ಕಾದು ನೋಡಬೇಕು.

One thought on “ಗಣಪತಿಗೆ ಗುಡ್ ಬೈ ಹೇಳಿದ್ಮೇಲೆ ಬೆಳ್ಳಿ-ಚಿನ್ನ ನಿಮ್ಮದಾಗಬಹುದು ! ಈ ಹಬ್ಬಕ್ಕೆ ಇದು ಹೊಸತು !

  • October 16, 2017 at 4:59 PM
    Permalink

    Only wanna input that you have a very nice internet site , I enjoy the layout it really stands out.

Comments are closed.

Social Media Auto Publish Powered By : XYZScripts.com