world photographers day : ಪ್ರಪಂಚದ ಉತ್ತಮ ಛಾಯಾಚಿತ್ರಕಾರರಿಗೆ ಚಿತ್ರ ನಮನ

ಇಂದು ವಿಶ್ವ ಛಾಯಾಗ್ರಾಹಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಛಾಯಾಗ್ರಾಹಕರು ಸಂಭ್ರಮಿಸಿದ್ದಾರೆ. ಜೊತೆಗೆ ಛಾಯಾಗ್ರಹಣ ಕ್ಷೇತ್ರದಲ್ಲಿ ಸಾಧನೆಗೈದ ಛಾಯಾಗ್ರಾಹಕರನ್ನು ಗುರುತಿಸಿ ಸನ್ಮಾನಿಸುವ ಮೂಲಕ ಪ್ರೋತ್ಸಾಹಿಸಲಾಗುತ್ತದೆ.

ಒಂದು ಫೋಟೋ ಸಾವಿರ ಪದಕ್ಕೆ ಸಮ

ನಮ್ಮ ನಡುವೆ ನೂರಾರು ಮಂದಿ ಫೋಟೋಗ್ರಾಫರ್‌ಗಳಿದ್ದರೂ ಅವರನ್ನೆಲ್ಲಾ ಫೋಟೋಗ್ರಾಫರ್ ಎಂದು ಒಪ್ಪಿಕೊಳ್ಳಲಾಗದು. ಏಕೆಂದರೆ ಫೋಟೋ ತೆಗೆದ ತಕ್ಷಣಕ್ಕೆ ಅವರ‍್ಯಾರು ಫೋಟೋಗ್ರಾಫರ್ ಆಗುವುದಿಲ್ಲ. ಉತ್ತಮ ಫೋಟೋಗ್ರಾಫರ್ ಆಗಬೇಕಾದರೆ ಫೋಟೋ ತೆಗೆಯುವುದರಲ್ಲಿಯೂ ಕೌಶಲ್ಯತೆ, ನೈಪುಣ್ಯತೆ ಬೇಕಾಗುತ್ತದೆ. ಹಾಗಾಗಿ ಸಾವಿರಾರು ಜನ ಫೋಟೋಗ್ರಾಫರ್ ನಮ್ಮೊಡನೆ ಇದ್ದರೂ ಕೆಲವೇ ಕೆಲವರು ಮಾತ್ರ ಖ್ಯಾತಿ ಪಡೆಯುತ್ತಾರೆ.

ಛಾಯಾಗ್ರಹಣ ಕ್ಷೇತ್ರದ ಪಿತಾಮಹ : ಇವತ್ತು ಛಾಯಾಗ್ರಹಣ ಕ್ಷೇತ್ರ ಎಲ್ಲಾ ವಿಧದ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಯಾಗಿದೆ. ಆದರೆ ಇಷ್ಟೊಂದು ಅಭಿವೃದ್ಧಿ ಒಮ್ಮೆಲೇ ಆಗಿಲ್ಲ ಬದಲಿಗೆ ಹಂತಹಂತವಾಗಿ ಅಭಿವೃದ್ಧಿಯಾಗಿರುವುದನ್ನು ನಾವು ಒಪ್ಪಲೇ ಬೇಕಾಗುತ್ತದೆ. ಛಾಯಾಗ್ರಹಣ ಕ್ಷೇತ್ರದ ಅಭಿವೃದ್ಧಿಯಾಗಲು ಹಲವರು ತಮ್ಮದೇ ಆದ ತಂತ್ರಜ್ಞಾನವನ್ನು ಬಳಸಿ ಹೊಸ ಪ್ರಯೋಗಗಳನ್ನು ಕೂಡ ಮಾಡಿದ್ದಾರೆ. ಅಂತಹವರ ಸಾಲಿಗೆ ಫ್ರಾನ್ಸ್ ದೇಶದ ಎಲ್.ಜೆ.ಎಂ.ಡಾಗೈರ್ ಸೇರುತ್ತಾರೆ. ಅವರನ್ನು ಛಾಯಾಗ್ರಹಣದ ಪಿತಾಮಹ ಎಂದು ಕೂಡ ಕರೆಯಲಾಗುತ್ತದೆ. ವಿಶ್ವ ಛಾಯಾಗ್ರಾಹಕರ ದಿನದಂದು ಪ್ರತಿಯೊಬ್ಬರು ಡಾಗೈರ್‌ನ್ನು ನೆನಪಿಸಿಕೊಳ್ಳಲೇ ಬೇಕು. ಏಕೆಂದರೆ ಅವರು ಛಾಯಾಗ್ರಹಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ.

ಫ್ರಾನ್ಸ್‌ನ ಕುಗ್ರಾಮವಾದ ಕಾರ್‌ಮೆಲ್ಲೀಸ್ ಎಂಬಲ್ಲಿ 18ನೇ ನವೆಂಬರ್ 1787ರಲ್ಲಿ ಡಾಗೈರ್ ಜನಿಸಿದರು. ವಿದ್ಯಾಭ್ಯಾಸದ ಬಳಿಕ ಹೊಟ್ಟೆಪಾಡಿಗಾಗಿ ಬೇರ ಬೇರೆ ವೃತ್ತಿಗಳನ್ನು ಮಾಡಿದರಾದರೂ ಕೊನೆಗೆ 1829ರಲ್ಲಿ ಛಾಯಾಗ್ರಹಣದ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದರು. ಅಲ್ಲಿ ಶ್ರಮವಹಿಸಿ ದುಡಿದ ಅವರು ಛಾಯಾಗ್ರಹಣಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳನ್ನು ಆಸಕ್ತಿಯಿಂದ ತಿಳಿದುಕೊಂಡರು. ಅಷ್ಟೇ ಅಲ್ಲ ಕೇವಲ ನಾಲ್ಕು ವರ್ಷದ ಅವಧಿಯಲ್ಲಿ ಅಂದರೆ 1833ರ ವೇಳೆಗೆ ಇಡೀ ಕಂಪನಿಯ ಚುಕ್ಕಾಣಿಯನ್ನು ತಮ್ಮ ಕೈಗೆ ಪಡೆದುಕೊಂಡರು. ಆ ನಂತರ ಹೆಚ್ಚಿನ ಶ್ರಮವಹಿಸಿ ದುಡಿದ ಅವರು ಕೆಲವೇ ವರ್ಷಗಳಲ್ಲಿ ಎಲ್ಲೆಡೆ ಡಾಗೈರ್ ಕಂಪನಿ ಎಂದೇ ಕರೆಸಿಕೊಳ್ಳುವಷ್ಟರ ಮಟ್ಟಿಗೆ ಬೆಳೆದು ನಿಂತರು.

 

ಛಾಯಾಗ್ರಹಣದಲ್ಲಿ ಪ್ರಯೋಗ : ಛಾಯಾಗ್ರಹಣ ಕ್ಷೇತ್ರದಲ್ಲಿ ಏನಾದರೊಂದು ಸಾಧನೆ ಮಾಡಬೇಕೆಂಬ ತುಡಿತದಲ್ಲಿದ್ದ ಅವರು ಬೆಳ್ಳಿ ಲೇಪನದ ಫಲಕಗಳನ್ನು ಬಳಸಿ ಅವುಗಳ ಮೇಲೆ ಅಯೋಡೈಡ್‌ನ್ನು ಲೇಪಿಸಿ ನಂತರ ಅದನ್ನು ಅಯೋಡಿನ್ ಹಬೆಯೊಂದಿಗೆ ವರ್ತಿಸುವಂತೆ ಮಾಡಿ ಚಿತ್ರಗ್ರಹಣದ ಕಾಲವನ್ನು ಎಂಟು ಗಂಟೆಯಿಂದ ಮೂವತ್ತು ನಿಮಿಷಕ್ಕೆ ಸೀಮಿತಗೊಳಿಸಿ ಒಮ್ಮೆಲೆ ಪಾಸಿಟಿವ್ (ಧನ) ಪ್ರಿಂಟನ್ನು ಪಡೆಯುವ ತಂತ್ರವನ್ನು ಕಂಡು ಹಿಡಿದರು. 1837ರ ಸುಮಾರಿಗೆ ಲವಣಜಲದಲ್ಲಿ ಈ ಚಿತ್ರವನ್ನು ಮುಳುಗಿಸಿ ಅದರ ಶಾಶ್ವತ ಚಿತ್ರವನ್ನು ಪಡೆದು ಸಫಲರಾದರು. ಈ ವಿಧಾನದಿಂದ ಒಮ್ಮೆಲೆ ಒಂದೇ ಪಾಸಿಟಿವ್ ಚಿತ್ರವನ್ನು ಪಡೆಯಲು ಸಾಧ್ಯವೇ ವಿನಃ ಅದಕ್ಕಿಂತ ಹೆಚ್ಚಿನ ಚಿತ್ರಗಳನ್ನು ಪಡೆಯಲು ಸಾಧ್ಯವಿಲ್ಲ ಎಂಬುವುದನ್ನು ಮನದಟ್ಟು ಮಾಡಿಕೊಂಡರು.

ಡಾಗೈರ್‌ರವರು ಬರೆದ ಕಿರುಪುಸ್ತಕ “ಡಾಗೈರ್‌ ವಿಧಾನ”ವೆಂದು ವಿಶ್ವದ ಹನ್ನೆರಡು ಭಾಷೆಯಲ್ಲಿ ಪ್ರಕಟವಾಗಿರುವುದು ಅವರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ. ಅಲ್ಲದೆ ಈ ವಿಧಾನ ವಿಶ್ವದ ಎಲ್ಲಾ ಸ್ಟುಡಿಯೋಗಳಲ್ಲಿ ಆರಂಭವಾಗಲು ಕೂಡ ಕಾರಣವಾಯಿತು. ಹೀಗೆ ಛಾಯಾಗ್ರಹಣ ಕ್ಷೇತ್ರದಲ್ಲಿ ಅದ್ಭುತ ಸಾಧನೆಗೈದ ಡಾಗೈರ್ 10ನೇ ಜುಲೈ 1851ರಲ್ಲಿ ತಮ್ಮ 66ನೇ ವಯಸ್ಸಿಗೆ ನಿಧನರಾದರು. ಅಂತಹ ಸಾಧಕನ ನೆನಪಿಗಾಗಿ ಪ್ರತಿವರ್ಷ ಆಗಸ್ಟ್ 19ನ್ನು “ವಿಶ್ವ ಛಾಯಾಗ್ರಾಹಕರ ದಿನಾಚರಣೆ”ಯಾಗಿ ಆಚರಿಸಲಾಗುತ್ತದೆ. ಇಂದು ಛಾಯಾಗ್ರಹಣ ಕ್ಷೇತ್ರ ವ್ಯಾಪ್ತಿಗೂ ಮೀರಿ ಬೆಳೆದಿದೆ. ಅತ್ಯಾಧುನಿಕ ತಂತ್ರಜ್ಞಾನಗಳನ್ನೊಳಗೊಂಡ ವಿವಿಧ ನಮೂನೆಯ ಕ್ಯಾಮರಾಗಳು ಬರುವ ಮೂಲಕ ಛಾಯಾಗ್ರಹಣ ಕ್ಷೇತ್ರದಲ್ಲಿ ಕ್ರಾಂತಿಗಳಾಗಿವೆ. ಆದರೂ ಇಷ್ಟೆಲ್ಲಾ ಅಭಿವೃದ್ಧಿಯ ಹಿಂದೆ ಡಾಗೈರ್‌ರಂತಹ ಸಾಧಕರ ಶ್ರಮವಿರುವುದನ್ನು ನಾವು ಮರೆಯುವಂತಿಲ್ಲ. ಹಾಗಾಗಿ ಛಾಯಾಗ್ರಹಣ ಕ್ಷೇತ್ರಕ್ಕೆ ಭದ್ರವಾದ ಬುನಾದಿ ಹಾಕಿಕೊಟ್ಟಂತಹ ಡಾಗೈರ್‌ನ್ನು ವಿಶ್ವ ಛಾಯಾಗ್ರಾಹಕರ ದಿನಾಚರಣೆ ಸಂದರ್ಭ ನೆನಪಿಸಿಕೊಳ್ಳಲೇ ಬೇಕಾಗುತ್ತದೆ.

Comments are closed.