71 ನೆಯ ಸ್ವಾತಂತ್ರ್ಯೋತ್ಸವ ದಿನಾಚರಣೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ

 ಎಪ್ಪತ್ತೊಂದನೇ ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭ ಸನ್ಮಾನ್ಯ ಮುಖ್ಯಮಂತ್ರಿಯವರ ಭಾಷಣ

ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಕವಾಯತು ಮೈದಾನ, ಬೆಂಗಳೂರು

ನನ್ನ ಆತ್ಮೀಯ ಸೋದರ-ಸೋದರಿಯರೆ,

ಭಾರತದ ಎಪ್ಪತ್ತೊಂದನೇ ಸ್ವಾತಂತ್ರ್ಯೋತ್ಸವದ ಸುಸಂದರ್ಭದಲ್ಲಿ ನಾಡಿನ ಸಮಸ್ತ ಬಂಧು-ಬಾಂಧವರಿಗೆ ನನ್ನ ಹೃದಯಪೂರ್ವಕ ಶುಭಾಶಯಗಳು.

ತ್ಯಾಗ, ಬಲಿದಾನದ ಹೋರಾಟದ ಮೂಲಕ ಗುಲಾಮಗಿರಿಯ ಸಂಕೋಲೆಯಿಂದ ದೇಶವನ್ನು ಬಿಡುಗಡೆಗೊಳಿಸಿದ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೂ ನಾಡಿನ ಜನತೆಯ ಪರವಾಗಿ ಗೌರವದ ನಮನಗಳು.

ಸ್ವಾತಂತ್ರ್ಯ ಹೋರಾಟದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಕ್ವಿಟ್ ಇಂಡಿಯಾ ಚಳುವಳಿಯ 75 ನೇ ವರ್ಷವನ್ನು ಕಳೆದ ವಾರವಷ್ಟೇ ನಾವು ಆಚರಿಸಿದ್ದೇವೆ. ಆ ಚಳುವಳಿಯಲ್ಲಿ ಸಾವು-ನೋವುಗಳಿಗೆ ಈಡಾದ ಲಕ್ಷಾಂತರ ಸಂಖ್ಯೆಯ ನಿಜವಾದ ದೇಶಭಕ್ತರಿಗೆ ಶ್ರದ್ಧಾಂಜಲಿ ಸಲ್ಲಿಸುವುದು ನಮ್ಮ ಕರ್ತವ್ಯವಾಗಿದೆ.

ನಾವಿಂದು ಮನೆಯೊಳಗೆ ಸುರಕ್ಷಿತವಾಗಿ, ನಿಶ್ಚಿಂತೆಯಿಂದ ಇರಲು ಕಾರಣ ದೇಶದ ಸ್ವಾತಂತ್ರ್ಯವನ್ನು ಪ್ರಾಣ ಒತ್ತೆ ಇಟ್ಟು ಗಡಿಯಲ್ಲಿ ಕಾಯುತ್ತಿರುವ ನಮ್ಮ ಹೆಮ್ಮೆಯ ಸೈನಿಕರು. ಹೋರಾಡುತ್ತಿರುವ ಮತ್ತು ಹೋರಾಡುತ್ತಲೇ ವೀರ ಮರಣವನ್ನಪ್ಪಿದ  ನಮ್ಮ ಹೆಮ್ಮೆಯ ಸೈನಿಕರಿಗೆ ಒಮ್ಮೆ ತಲೆಬಾಗಿ ನಮಿಸೋಣ.

ಇದೇ ವೇಳೆ ಆಂತರಿಕ ಭದ್ರತೆಯ ರಕ್ಷಣೆಗಾಗಿ ಶ್ರಮಿಸುತ್ತಿರುವ ಸಮವಸ್ತ್ರ ಪಡೆಯ ಮೇರು ಸಾಧಕರಿಗೂ ನಮ್ಮ ನಮನಗಳನ್ನು ಸಲ್ಲಿಸೋಣ.

ದೇಶರಕ್ಷಣೆಯಲ್ಲಿ ತೊಡಗಿರುವ ಸೈನಿಕರ ಬಗೆಗಿನ ನಮ್ಮ ಕಾಳಜಿ ಕೇವಲ ಬಾಯಿ ಮಾತಿನದ್ದಲ್ಲ. ಈ ಹಿನ್ನೆಲೆಯಲ್ಲಿ ಯುದ್ಧದಲ್ಲಿ ಅಥವಾ ಯುದ್ಧದಂತಹ ಕಾರ್ಯಾಚರಣೆಯಲ್ಲಿ ಮಡಿದ ಅಥವಾ ಶಾಶ್ವತ ಅಂಗವೈಕಲ್ಯ ಹೊಂದಿದ ಕರ್ನಾಟಕ ಮೂಲದ ಯೋಧರ ಕುಟುಂಬದ   ಓರ್ವ ಅವಲಂಬಿತರಿಗೆ ಸರ್ಕಾರಿ ಉದ್ಯೋಗ ನೀಡಲು ಸರ್ಕಾರ ನಿರ್ಧರಿಸಿದೆ.

ಕೋಮುವಾದ ಹಾಗೂ ಜಾತಿವಾದವೂ ಸೇರಿದಂತೆ ಬಹುರೂಪಿ ಫ್ಯಾಸಿಸಂ ನಾಲ್ಕು ದಿಕ್ಕುಗಳಿಂದಲೂ ಆವರಿಸುತ್ತಿರುವ ದಿನಗಳಲ್ಲಿ ನಾವಿದ್ದೇವೆ. ಇದು ಜಾತಿ ಹಾಗೂ ಧರ್ಮಗಳ ಭೇದವಿಲ್ಲದೆ ಬೆಳೆಯುತ್ತಿರುವುದೂ ಕೂಡಾ ಆತಂಕಕಾರಿ ಸಂಗತಿಯಾಗಿದೆ.

ಧರ್ಮ ವೈಯಕ್ತಿಕವಾದುದು. ಅದನ್ನು ವ್ಯಕ್ತಿ, ಸಮುದಾಯ ಮತ್ತು ಕೋಮುಗಳ ನಡುವೆ ದ್ವೇಷ ಸೃಷ್ಟಿಸಿ ಆ ಮೂಲಕ ರಾಜಕೀಯ ಲಾಭ ಪಡೆಯುವ ಸಾಧನಗಳಾಗಿ ಬಳಸಿಕೊಳ್ಳುವುದು ಧರ್ಮದ್ರೋಹದ ಕೆಲಸ. ಇಂತಹ ಕೃತ್ಯಗಳಲ್ಲಿ ತೊಡಗಿರುವ ದೇಶ ವಿರೋಧಿಗಳ ಹುನ್ನಾರಗಳನ್ನು ವಿಫಲಗೊಳಿಸುತ್ತೇವೆ ಎಂದು ಪ್ರತಿಯೊಬ್ಬ ಪ್ರಜೆಯೂ ಈ ದಿನ ಪಣತೊಡಬೇಕಾಗಿದೆ.

ನಮ್ಮದು ಸರ್ವರನ್ನೂ ಒಳಗೊಂಡಿರುವ, ಸರ್ವರನ್ನೂ ಬೆಸೆಯುವ ಮತ್ತು ಸರ್ವರಿಗೂ ಸಮಪಾಲು-ಸಮಬಾಳು ನೀಡುವ, ನಾಡಿನ ಪ್ರತಿಯೊಬ್ಬ ಪ್ರಜೆಯ ಜೀವನಮಟ್ಟ ಸುಧಾರಣೆಯನ್ನು ಗುರಿಯಾಗಿಟ್ಟು ಕೊಂಡ ಸರ್ವೋದಯ ತತ್ವದ ಅಭಿವೃದ್ದಿ ಮಾದರಿ. ಇದನ್ನು ನಾನು ‘ಕರ್ನಾಟಕ ಅಭಿವೃದ್ದಿ ಮಾದರಿ’ ಎಂದು  ಹೆಮ್ಮೆಯಿಂದ ಕರೆಯುತ್ತೇನೆ.

ಅಭಿವೃದ್ಧಿ ಮಾದರಿಗೆ ಸಾಮಾಜಿಕ ನ್ಯಾಯದ ಕನಸುಗಾರ ಬಸವಣ್ಣ,  ಗ್ರಾಮ ಸ್ವರಾಜ್ಯದ ಹರಿಕಾರ ಮಹಾತ್ಮ ಗಾಂಧಿ ಮತ್ತು ಸಾಮಾಜಿಕ ಪ್ರಜಾಪ್ರಭುತ್ವದ ಹೋರಾಟಗಾರ ಡಾ ಬಿ. ಆರ್. ಅಂಬೇಡ್ಕರ್ ಮತ್ತಿತರ ಸಾಮಾಜಿಕ ಮತ್ತು ರಾಜಕೀಯ ಚಿಂತಕರ ಆಶಯಗಳು ಪ್ರೇರಣೆ ನೀಡಿವೆ.

ಕಾಯಕ ಜೀವಿಗಳ ಚಳುವಳಿಯ ನೇತಾರ ಬಸವಣ್ಣನವರು ನಮ್ಮೆಲ್ಲರ ಮನಸ್ಸಲ್ಲಿ ಸದಾ ನೆಲೆಸಿ ಮಾರ್ಗದರ್ಶನ ನೀಡುತ್ತಿದ್ದರು. ಇದೀಗ ಅವರ ಭಾವಚಿತ್ರಗಳನ್ನು ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಹಾಕಬೇಕೆಂದು ನಮ್ಮ ಸರ್ಕಾರ ಆದೇಶ ಹೊರಡಿಸಿದೆ. ಇದು ಜ್ಞಾನ, ಅನ್ನ ಮತ್ತು ಸೇವೆಯ ತ್ರಿ-ವಿಧ ದಾಸೋಹದ ಮೂಲಕ ಸಮ ಸಮಾಜ ನಿರ್ಮಾಣದ ಕನಸು ಕಂಡ ಬಸವಣ್ಣ ನಮ್ಮ ಹಾದಿಯ  ತೋರುಗಂಬ ಎಂಬುದಕ್ಕೆ ಸಾಕ್ಷಿ.

ನಮ್ಮದು ಬಹು ಭಾಷೆ, ಬಹುಧರ್ಮ, ಬಹು ಸಂಸ್ಕøತಿ, ಬಹು ಮಾದರಿಯ ಬಹುತ್ವದ ವ್ಯವಸ್ಥೆ.. ರಾಜ್ಯಗಳಲ್ಲಿ ರಾಜ್ಯಭಾಷೆ  ಸಾರ್ವಭೌಮ ಭಾಷೆಯೇ ಹೊರತು ಬೇರಾವುದೇ ಮತ್ತೊಂದು ಭಾಷೆ ಆ ನೆಲದ ಬದುಕಿನ ಮೇಲೆ ಆಧಿಪತ್ಯವನ್ನು ಮೆರೆಯುವುದು ಭಾಷಾವಾರು ಪ್ರಾಂತ್ಯ ರಚನೆಯ ನೀತಿಗೆ ವಿರುದ್ಧವಾದುದು. ಸಂವಿಧಾನವೂ ಇದನ್ನು ಒಪ್ಪುವುದಿಲ್ಲ.

ಸ್ಥಳೀಯ ಭಾಷೆಯ ಸ್ವಾಯತ್ತತೆಯನ್ನು ಉಳಿಸಿಕೊಂಡೇ ಅನ್ಯಭಾಷೆಗಳನ್ನು ಕಲಿಯುವುದಕ್ಕೆ ಅವಕಾಶ ನೀಡುವ ಒಕ್ಕೂಟ ವ್ಯವಸ್ಥೆಯೊಳಗಿನ ನೀತಿ ಸಂಹಿತೆಗೆ ನಮ್ಮ ಸರ್ಕಾರ ಬದ್ಧವಾಗಿದೆ.

ಹಸಿವು ಮುಕ್ತ ಕರ್ನಾಟಕ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನವೇ ಮಾಡಿದ ಸಂಕಲ್ಪ.  ಪ್ರತಿ ತಿಂಗಳು ತಲಾ ಏಳು ಕೆ ಜಿ ಅಕ್ಕಿಯನ್ನು ಉಚಿತವಾಗಿ ಒದಗಿಸುತ್ತಿರುವ ಅನ್ನಭಾಗ್ಯ ಯೋಜನೆ ರಾಜ್ಯದ ನಾಲ್ಕು ಕೋಟಿ ಜನ ನೆಮ್ಮದಿಯಿಂದ ಎರಡು ಹೊತ್ತು ಊಟ ಮಾಡುವ ಅವಕಾಶ ಕಲ್ಪಿಸಿದೆ. ಜೊತೆಗೆ ಕಡಿಮೆ ಬೆಲೆಗೆ ಬೇಳೆ ನೀಡುತ್ತಿದ್ದೇವೆ. ಅಕ್ಕಿ ಖರೀದಿಗಾಗಿ ವ್ಯಯ ಮಾಡುತ್ತಿದ್ದ ದುಡಿಮೆಯ ಹಣವನ್ನು ಜೀವನ ಮಟ್ಟದ ಸುಧಾರಣೆಯ  ಇತರ ಉದ್ದೇಶಗಳಿಗೆ ಫಲಾನುಭವಿಗಳು ಬಳಸಬಹುದಾಗಿದೆ.

ರಾಜ್ಯವು ಕಳೆದ ಮೂರು ವರ್ಷಗಳಿಂದ ಸತತವಾಗಿ ಬರದ ಬವಣೆಯಿಂದ ಬಳಲುತ್ತಿದ್ದರೂ ಎಲ್ಲೂ ಯಾರೂ ಅನ್ನಕ್ಕಾಗಿ ಪರಡಾಡುವ ಸ್ಥಿತಿ ಉದ್ಭವವಾಗಲಿಲ್ಲ. ಬರದ ಕಾರಣಕ್ಕಾಗಿ ಸಾವು-ನೋವುಗಳು ಸಂಭವಿಸಲಿಲ್ಲ. ವ್ಯಾಪಕವಾಗಿ ಗುಳೆ ಹೋಗುವ ಸಂಕಷ್ಟ ಎದುರಾಗಲಿಲ್ಲ.  ಇದಕ್ಕೆಲ್ಲಾ ನಮ್ಮ ಅನ್ನಭಾಗ್ಯ ಯೋಜನೆಯ ಸಫಲತೆಯೇ ಸಾಕ್ಷಿ.

ಇದೇ ರೀತಿ ಗರ್ಭಿಣಿ ಹಾಗೂ ಬಾಣಂತಿಯರಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸುವ   ಮಾತೃಪೂರ್ಣ ಯೋಜನೆ ನಮ್ಮ ಸರ್ಕಾರದ ಮಾತೃ ಹೃದಯದ ಕಾಳಜಿಗೆ ಸಾಕ್ಷಿಯಾಗಿದೆ. ಮಹಾತ್ಮ ಗಾಂಧಿ ಅವರ 150 ನೇ ಜನ್ಮ ವರ್ಷಾಚರಣೆಯ ಪ್ರಾರಂಭದ ಸಂಸ್ಮರಣೆಯಲ್ಲಿ ಅಕ್ಟೋಬರ್ 2 ರಿಂದ ರಾಜ್ಯದ ಎಲ್ಲಾ ಅಂಗನವಾಡಿಗಳಿಗೂ ಈ ಯೋಜನೆಯನ್ನು ವಿಸ್ತರಿಸಲಾಗುವುದು. ಸುಮಾರು 12 ಲಕ್ಷ ಮಂದಿ ಇದರ ಲಾಭ ಪಡೆಯಲಿದ್ದಾರೆ.

ಸುಮಾರು ಒಂದು ಕೋಟಿಗೂ ಮಿಗಿಲಾದ ಜನಸಂಖ್ಯೆಯನ್ನು ಹೊಂದಿರುವ ಬೆಂಗಳೂರು ನಗರ ಪ್ರದೇಶದ ಜನತೆಯ ಅದರಲ್ಲಿಯೂ ವಿಶೇಷವಾಗಿ ಇಲ್ಲಿನ  ಶ್ರಮಿಕ ವರ್ಗ ಹಾಗೂ ಬಡ ವಲಸಿಗರ ಹಸಿವನ್ನು ನೀಗಿಸುವ ಉದ್ದೇಶದಿಂದ   ಮಹತ್ವಾಕಾಂಕ್ಷಿ ‘ಇಂದಿರಾ ಕ್ಯಾಂಟೀನ್’ ಯೋಜನೆಗೆ ನಾಳೆಯೇ ಚಾಲನೆ ನೀಡಲಾಗುವುದು.ನಗರದ ಪ್ರತಿ ವಾರ್ಡ್‍ಗೆ ಒಂದರಂತೆ 198 ಇಂದಿರಾ ಕ್ಯಾಂಟೀನ್‍ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಮೊದಲ ಹಂತದಲ್ಲಿ 101 ಇಂದಿರಾ ಕ್ಯಾಂಟೀನ್‍ಗಳು ಪ್ರಾರಂಭವಾಗಲಿವೆ.

ವಿದ್ಯಾರ್ಥಿ ಸಮುದಾಯದ ಬಗ್ಗೆ ನಮ್ಮ ಸರ್ಕಾರ ವಿಶೇಷ ಕಾಳಜಿ ವಹಿಸುತ್ತಾ ಬಂದಿದೆ. ಸ್ವಾತಂತ್ರ್ಯದ ಪ್ರಮುಖ ಆಶಯವಾದ ಸರ್ವರಿಗೂ ಸಮಾನ ಶಿಕ್ಷಣದ ಕನಸು ಈಡೇರಬೇಕು ಎನ್ನುವ ದೃಷ್ಟಿಯಿಂದ ರಾಜ್ಯದಲ್ಲಿ ‘ಶಿಕ್ಷಣ ಹಕ್ಕು’ ಕಾಯಿದೆಯನ್ನು ಯಶಸ್ವಿಯಾಗಿ   ಅನುಷ್ಠಾನ ಮಾಡಿದ್ದೇವೆ.

ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿ ಊಟ, ಅಂಗನವಾಡಿ ಒಳಗೊಂಡಂತೆ 1.08 ಕೋಟಿ ಶಾಲಾ ಮಕ್ಕಳಿಗೆ ವಾರಕ್ಕೆ ಐದು ದಿನ ಹಾಲು ನೀಡುತ್ತಿದ್ದೇವೆ. ಅದೇ ರೀತಿ ವಾರಕ್ಕೆ ಎರಡು ದಿನ ಅಂಗನವಾಡಿ ಮಕ್ಕಳಿಗೆ ಮೊಟ್ಟೆಯನ್ನು   ವಿತರಿಸುವ ಮೂಲಕ ಅಗತ್ಯ ಪೌಷ್ಟಿಕತೆ ಲಭ್ಯವಾಗುವಂತೆ ಮಾಡುವ ಯೋಜನೆಗೆ ಚಾಲನೆ ನೀಡಿದ್ದೇವೆ. ಅಲ್ಲದೆ, 62.59 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, 47.45 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, ಶೂ ಮತ್ತು ಸಾಕ್ಸ್ ಹಾಗೂ ಐದು ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್ ನೀಡಿದ್ದೇವೆ. ವಿದ್ಯಾಸಿರಿ ಯೋಜನೆಯಡಿ 319 ಕೋಟಿ ರೂಪಾಯಿ ವೆಚ್ಚದಲ್ಲಿ 2.7 ಲಕ್ಷ ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿಗೆ ಮಾಸಿಕ 1,500 ರೂಪಾಯಿ ಧನ ಸಹಾಯ ಒದಗಿಸುತ್ತಿದ್ದೇವೆ.

ಸರ್ಕಾರಿ ಮತ್ತು ಅನುದಾನಿತ ವೈದ್ಯಕೀಯ, ಎಂಜಿನಿಯರಿಂಗ್, ಪಾಲಿಟೆಕ್ನಿಕ್ ಮತ್ತು ಪ್ರಥಮ ದರ್ಜೆ ಕಾಲೇಜುಗಳಿಗೆ ಪ್ರವೇಶ ಪಡೆಯುವ 1.5 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್ ವಿತರಿಸುವ ಮೂಲಕ ಇಂದಿನ ತಂತ್ರಜ್ಞಾನ ಆಧರಿತ ಶಿಕ್ಷಣಕ್ಕೆ ಹಾಗೂ ರಾಜ್ಯದ ಯುವಪೀಳಿಗೆಯನ್ನು ಪ್ರಸಕ್ತ ಉದ್ಯೋಗ ಮಾರುಕಟ್ಟೆಯ ಅಗತ್ಯಕ್ಕೆ ತಕ್ಕಂತೆ ಸಜ್ಜುಗೊಳಿಸಿ ಕೌಶಲ್ಯ ವೃದ್ಧಿಸಲು ಮಹತ್ವಾಕಾಂಕ್ಷಿ ‘ಕೌಶಲ್ಯ ಕರ್ನಾಟಕ’ ಕಾರ್ಯಕ್ರಮವನ್ನು ಜಾರಿಗೊಳಿಸಿದ್ದೇವೆ. ಇದರಡಿ ಪ್ರತಿವರ್ಷ ಐದು ಲಕ್ಷ ಯುವ ಜನತೆಯನ್ನು ತರಬೇತಿಗೊಳಿಸಲು ಯೋಜಿಸಿದ್ದೇವೆ.

ಸಂವಿಧಾನಶಿಲ್ಪಿ ಡಾ ಬಿ. ಆರ್. ಅಂಬೇಡ್ಕರ್ ಅವರ 125 ನೇ ಜನ್ಮ ವರ್ಷಾಚರಣೆಯ ಅಂಗವಾಗಿ ಬೆಂಗಳೂರು ಡಾ ಬಿ. ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್  ಅಂತಾರಾಷ್ಟ್ರೀಯ ಸಂಸ್ಥೆಯನ್ನು ಸ್ಥಾಪಿಸಲಾಗಿದೆ.

ತಾಂತ್ರಿಕ ಶಿಕ್ಷಣದಲ್ಲಿ ವಿದ್ಯಾರ್ಥಿನಿಯರ ದಾಖಲಾತಿ ಪ್ರಮಾಣವನ್ನು ಹೆಚ್ಚಿಸಲು ಪ್ರಸಕ್ತ ಸಾಲಿನಲ್ಲಿ ಸರ್ಕಾರಿ ಪಾಲಿಟೆಕ್ನಿಕ್‍ಗಳಲ್ಲಿ 23 ಹೊಸ ಹಾಸ್ಟೆಲ್‍ಗಳನ್ನು ಸ್ಥಾಪಿಸಲಾಗುವುದು. ರಾಜ್ಯದಲ್ಲಿ ಸಮಗ್ರ ಉನ್ನತ ಶಿಕ್ಷಣವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಲು ವಿಶೇಷವಾದ “ಜ್ಞಾನ ನಗರ” ಪ್ರಾರಂಭಿಸಲು ಯೋಜನೆ ರೂಪಿಸಲಾಗುವುದು.

ಹೈದರಾಬಾದ್-ಕರ್ನಾಟಕದ ಪ್ರದೇಶದಲ್ಲಿ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಉತ್ತೇಜನ ನೀಡುವ ಉದ್ದೇಶದಿಂದ ರಾಯಚೂರು ವಿಶ್ವವಿದ್ಯಾಲಯವನ್ನು ಸ್ಥಾಪಿಸಿ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಎಲ್ಲಾ ಕಾಲೇಜುಗಳನ್ನು ಈ ವಿಶ್ವವಿದ್ಯಾಲಯದ ವ್ಯಾಪ್ತಿಗೆ ತರಲಾಗುವುದು.

ರಾಜ್ಯದ ಎಲ್ಲಾ ಅಡುಗೆ ಅನಿಲ ಸಂಪರ್ಕ ಇಲ್ಲದ ಕುಟುಂಬಗಳಿಗೆ ಉಚಿತವಾಗಿ ಅಡುಗೆ ಅನಿಲ  ಸಂಪರ್ಕ ಕಲ್ಪಿಸಿ, ರಾಜ್ಯವನ್ನು ಸೀಮೆಎಣ್ಣೆ–ಮುಕ್ತ ರಾಜ್ಯವನ್ನಾಗಿ ರೂಪಿಸಲು ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮವಹಿಸಿದ್ದೇವೆ. ಪಡಿತರ ಸೀಮೆಎಣ್ಣೆ  ಯನ್ನು ಬಿಟ್ಟುಕೊಡುವವರಿಗೆ ಪುರ್ನಬೆಳಕು ಯೋಜನೆಯಲ್ಲಿ  ಉಚಿತವಾಗಿ ರೀಚಾರ್ಜಬಲ್  ಎಲ್ ಇ ಡಿ ದೀಪ ನೀಡಲು ಯೋಜಿಸಿದ್ದೇವೆ.

ಕೃಷಿ ನಮ್ಮ ಸರ್ಕಾರದ ಆದ್ಯತೆಯ ಕ್ಷೇತ್ರ. ನಾನು ಮಂಡಿಸಿದ ಪ್ರತಿ ಆಯವ್ಯಯದಲ್ಲೂ ರಾಜ್ಯ ಸರ್ಕಾರದ ಆದಾಯದ ಒಂದು ದೊಡ್ಡ ಪಾಲನ್ನು ಕೃಷಿಗೆ ಮೀಸಲಿರಿಸಿದ್ದೇನೆ. ಪ್ರಸಕ್ತ ಸಾಲಿನ ಆಯವ್ಯಯವನ್ನು ಅವಲೋಕಿಸಿದರೂ ಇದನ್ನು ಕಾಣಬಹುದು.

ಕೃಷಿಗೆ 5080 ಕೋಟಿ ರೂ, ತೋಟಗಾರಿಕೆಗೆ 1091 ಕೋಟಿ ರೂ, ಪಶು ಸಂಗೋಪನೆಗೆ 2245 ಕೋಟಿ ರೂ, ರೇಷ್ಮೆ 429 ಕೋಟಿ ರೂ, ಮೀನುಗಾರಿಕೆಗೆ 337 ಕೋಟಿ ರೂ, ನೀರಾವರಿಗೆ 15,929 ಕೋಟಿ ರೂ, ಸಣ್ಣ ನೀರಾವರಿಗೆ 2099 ಕೋಟಿ ರೂ,   ಸಹಕಾರ ಕ್ಷೇತ್ರಕ್ಕೆ 1663 ಕೋಟಿ ರೂ, ವಿದ್ಯುತ್ ಸಬ್ಸಿಡಿಗೆ 9000 ಕೋಟಿ ರೂ, ಹಾಲಿನ ಪ್ರೋತ್ಸಾಹ ಧನಕ್ಕೆ 1206 ಕೋಟಿ ರೂ ಹಾಗೂ ಸಾಲದ ಮೇಲಿನ ಬಡ್ಡಿ ಸಹಾಯಧನಕ್ಕಾಗಿ 800 ಕೋಟಿ ರೂ ಹೀಗೆ ಸುಮಾರು 40,000 ಕೋಟಿ ರೂಪಾಯಿಗಳನ್ನು ಪ್ರಸಕ್ತ ಸಾಲಿನ ಆಯವ್ಯಯ ಪತ್ರದಲ್ಲಿ ರೈತರ ಏಳಿಗೆಗಾಗಿ ನಿಗದಿಪಡಿಸಿದ್ದೇವೆ.

ರಾಜ್ಯದಲ್ಲಿ 1.67 ಲಕ್ಷಕ್ಕೂ ಹೆಚ್ಚು ಕೃಷಿ ಹೊಂಡಗಳ ಹಾಗೂ ಸುಮಾರು 2500 ಪಾಲಿ ಹೌಸ್‍ಗಳ ನಿರ್ಮಾಣ, 78 ಲಕ್ಷ ರೈತರಿಗೆ ಮಣ್ಣು ಆರೋಗ್ಯ ಕಾರ್ಡ್ ವಿತರಣೆ, ಹನಿ ನೀರಾವರಿಗೆ ಎಲ್ಲಾ ವರ್ಗದ ರೈತರಿಗೂ ಶೇಕಡಾ 90 ರಷ್ಟು ಸಹಾಯಧನ, ಸುಮಾರು 13 ಲಕ್ಷ ರೈತರಿಗೆ ಕೃಷಿ ಯಂತ್ರೋಪಕರಣ, ಕೃಷಿ ಯಂತ್ರಧಾರೆ ಯೋಜನೆಯಡಿ  ಆರು ಲಕ್ಷ ರೈತರಿಗೆ ಕೃಷಿ ಸಲಕರಣೆಗಳನ್ನು ಬಾಡಿಗೆಗೆ ನೀಡಿಕೆ,   ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ ಐದು ರೂ ಪ್ರೋತ್ಸಾಹ ಧನ  ಇವು ನಮ್ಮ ಸರ್ಕಾರದ ರೈತಪರ ಯೋಜನೆಗಳು.

ದೇಶದಲ್ಲಿಯೇ ಮೊದಲ ಬಾರಿಗೆ ಶೂನ್ಯ ಬಡ್ಡಿದರದಲ್ಲಿ ಮೂರು ಲಕ್ಷ ರೂ ವರೆಗೆ ಸಾಲ ನೀಡುತ್ತಿದ್ದೇವೆ. ಇದರ ಜೊತೆಗೆ ಶೇಕಡಾ ಮೂರರ ಬಡ್ಡಿ ದರದಲ್ಲಿ  10 ಲಕ್ಷ ರೂ. ವರೆಗೆ ಸಾಲ ನೀಡಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ    4,55,457 ರೈತರಿಗೆ 50,010 ಕೋಟಿ ರೂ ಸಾಲ ನೀಡಲಾಗಿದೆ. ಇದೇ ಅವಧಿಯಲ್ಲಿ 10.7 ಲಕ್ಷ ರೈತರ 2359 ಕೋಟಿ ರೂ ಸಾಲವನ್ನು ಮನ್ನಾ ಮಾಡಲಾಗಿದೆ.

ಇದೀಗ 20-6-2017 ಕ್ಕೆ ಅನ್ವಯವಾಗುವಂತೆ ಸಹಕಾರಿ ಬ್ಯಾಂಕ್‍ಗಳಲ್ಲಿನ ರೈತರ  50 ಸಾವಿರ ವರೆಗಿನ ಬೆಳೆ ಸಾಲ ಮನ್ನಾ ಮಾಡಲಾಗಿದೆ. ಇದರಿಂದಾಗಿ  ರಾಜ್ಯದ 22,27,506 ರೈತರ ಒಟ್ಟು 8165 ಕೋಟಿ ರೂ ಸಾಲ ಮನ್ನಾ ಮಾಡಿದಂತಾಗಿದೆ.

ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರಿಗೆ ನ್ಯಾಯಬದ್ಧ ಬೆಲೆ ದೊರೆಯುವಂತೆ ಮಾಡಲುಜಾರಿಗೆ ತಂದಿರುವ ಆನ್ ಲೈನ್ ಮಾರುಕಟ್ಟೆ ಇಡೀ ದೇಶಕ್ಕೆ ಮಾದರಿಯಾಗಿದೆ. ರಾಜ್ಯದ 157 ಕೃಷಿ ಮಾರುಕಟ್ಟೆಗಳನ್ನು ಈ ವ್ಯವಸ್ಥೆಗೆ ಒಳಪಡಿಸಲಾಗಿದೆ.  ಇದರಿಂದಾಗಿ ರಾಜ್ಯದ ರೈತರ ಆದಾಯ ಶೇಕಡಾ 38 ರಷ್ಟು ಹೆಚ್ಚಿದೆ ಎಂದು ಕೇಂದ್ರದ ನೀತಿ ಆಯೋಗವೇ ಮೆಚ್ಚುಗೆ ವ್ಯಕ್ತಪಡಿಸಿದೆ.

ರಾಜ್ಯವನ್ನು ಗುಡಿಸಲು ಮುಕ್ತವಾಗಿಸಿ, ಸರ್ವರಿಗೂ ಸೂರು ಕಲ್ಪಿಸುವ ಉದ್ದೇಶದಿಂದ  ಈವರೆಗೆ 11.75 ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ ಏಳು ಲಕ್ಷ ಮನೆಗಳನ್ನು ಮಂಜೂರು ಮಾಡಲಾಗಿದೆ. ಆರು ಲಕ್ಷ ಮನೆಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಬೆಂಗಳೂರಿನ ಸುತ್ತ-ಮುತ್ತಲಿನ ಸರ್ಕಾರಿ ಜಮೀನು ಮತ್ತು ಒತ್ತುವರಿಯಿಂದ ತೆರವುಗೊಂಡ ಜಮೀನಿನಲ್ಲಿ ರಾಜೀವ್ ವಸತಿ ಯೋಜನೆಯಡಿಯಲ್ಲಿ ಒಂದು ಲಕ್ಷ ಮನೆಗಳನ್ನು ನಿರ್ಮಿಸಿ, ವಸತಿ-ರಹಿತರಿಗೆ ಒದಗಿಸಲು ಯೋಜಿಸಲಾಗಿದೆ.

ಬಹುಮುಖ್ಯವಾಗಿ ಕ್ರಾಂತಿಕಾರಿಯಾದ ‘ಕರ್ನಾಟಕ ಭೂ ಸುಧಾರಣೆಗಳ (ತಿದ್ದುಪಡಿ) ವಿಧೇಯಕ’ದ ಮೂಲಕ ರಾಜ್ಯದ ಒಟ್ಟು 58,000 ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ ಅಲ್ಲಿನ ನಿವಾಸಿಗಳು ಆಸ್ತಿ ಮಾಲೀಕತ್ವಕ್ಕೆ ಹಕ್ಕುದಾರರಾಗಲು ಅವಕಾಶ ಕಲ್ಪಿಸಿದೆ.

ಇದು ಲಂಬಾಣಿ ತಾಂಡಾ, ಗೊಲ್ಲರಹಟ್ಟಿ, ವಡ್ಡರಹಟ್ಟಿ, ಕುರುಬರಹಟ್ಟಿ, ನಾಯಕನಹಟ್ಟಿ, ಮಜಾರೆ ಗ್ರಾಮ, ಹಾಡಿ, ದೊಡ್ಡಿ, ಪಾಳ್ಯ, ಕ್ಯಾಂಪ್, ಕಾಲೋನಿಗಳ ನಿವಾಸಿಗಳಿಗೆ ನಿಜ ಅರ್ಥದಲ್ಲಿ ಆಸ್ತಿ ಹಕ್ಕಿನ ಸ್ವಾತಂತ್ರ್ಯವನ್ನು ನೀಡಿದೆ.

ರಾಜ್ಯದ ಅತ್ಯಂತ ಪ್ರತಿಭಾವಂತ ಒಂದು ಸಾವಿರ ಯುವ ಕ್ರೀಡಾಪಟುಗಳನ್ನು ಗುರುತಿಸಿ, ಅವರಿಗೆ ಅಗತ್ಯ ಆರ್ಥಿಕ ಮತ್ತಿತರ ಬೆಂಬಲವನ್ನು ನೀಡಲು ‘ಕರ್ನಾಟಕ ಸಹಸ್ರ ಕ್ರೀಡಾ ಪ್ರತಿಭಾ ಯೋಜನೆ’ಯನ್ನು ಪ್ರಸ್ತುತ ಸಾಲಿನಲ್ಲಿ ಜಾರಿಗೆ ತರಲಾಗುತ್ತಿದೆ. ಇದಕ್ಕಾಗಿ ಹತ್ತು ಕೋಟಿ ರೂ ಮೀಸಲಿರಿಸಿದೆ.

‘ಯುವ ಚೈತನ್ಯ’ ಕಾರ್ಯಕ್ರಮದಡಿ ರಾಜ್ಯದ 2,000 ಕ್ರೀಡಾ ಸಂಘಗಳಿಗೆ ತಲಾ ಒಂದು ಲಕ್ಷ ರೂ ಮೌಲ್ಯದ ಕ್ರೀಡಾ ಸಾಮಗ್ರಿಗಳನ್ನು ಒದಗಿಸಲು ಯೋಜಿಸಲಾಗಿದೆ. ತಲಾ ಎರಡು ಕೋಟಿ ರೂ ವೆಚ್ಚದಲ್ಲಿ ಎರಡು ಕ್ರೀಡಾ ವಿಜ್ಞಾನ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ.

ರಾಜ್ಯದ ಬೆಳಗಾವಿ, ಮೈಸೂರು, ಬೆಂಗಳೂರು ಮತ್ತು ಉಡುಪಿಗಳಲ್ಲಿ ತಲಾ ಎರಡು ಕೋಟಿ ರೂ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಜಿಮ್ ಸೌಕರ್ಯಗಳನ್ನು ಕಲ್ಪಿಸಲು ಕ್ರಮಕೈಗೊಳ್ಳಲಾಗಿದೆ.

ಸ್ವಾತಂತ್ರ್ಯದ ಆಶಯಗಳಲ್ಲಿ ಸ್ವಾಸ್ಥ್ಯ ಸಮಾಜದ ನಿರ್ಮಾಣವು ಮಹತ್ವದ್ದಾಗಿದೆ. ಯಶಸ್ವಿನಿ ಯೋಜನೆಯಡಿ ಕಳೆದ ನಾಲ್ಕು ವರ್ಷದ ಅವಧಿಯಲ್ಲಿ 93 ಲಕ್ಷ ಸದಸ್ಯರನ್ನು ನೊಂದಾಯಿಸಲಾಗಿದೆ. ಇದಕ್ಕಾಗಿ ಸರ್ಕಾರವು 555 ಕೋಟಿ ರೂ. ಭರಿಸಿದೆ.  ಈ ಪೈಕಿ 33 ಲಕ್ಷ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಸದಸ್ಯರನ್ನು ಉಚಿತವಾಗಿ ನೊಂದಾಯಿಸಲಾಗಿದೆ. ಯಶಸ್ವಿನಿ ಯೋಜನೆಯಡಿ ಒಂದು ಕೋಟಿ ಮಂದಿಗೆ ವಿಮಾ ಸೌಲಭ್ಯವನ್ನು ನೀಡಲಾಗಿದೆ. ಅಲ್ಲದೆ 31,561 ಮೂತ್ರಪಿಂಡ ಸಮಸ್ಯೆ ಹೊಂದಿರುವ ರೋಗಿಗಳಿಗೆ ಒಟ್ಟು 1.6 ಲಕ್ಷ ಬಾರಿ ಡಯಾಲಿಸಿಸ್ ಮಾಡಲಾಗಿದೆ.

ರಾಜ್ಯದಲ್ಲಿ ಶಿಶು ಮರಣ ಪ್ರಮಾಣವನ್ನು 31 ರಿಂದ 28 ಕ್ಕೆ ಇಳಿಸಲಾಗಿದೆ. ತಾಯಂದಿರ ಮರಣ ಪ್ರಮಾಣವನ್ನು ಪ್ರತಿ ಒಂದು ಲಕ್ಷಕ್ಕೆ 178 ರಿಂದ 133 ಕ್ಕೆ ಇಳಿಸಲಾಗಿದೆ. ಕ್ಯಾನ್ಸರ್, ಹೃದ್ರೋಗಗಳ ಚಿಕಿತ್ಸೆಗೆ ದಾವಣಗೆರೆ, ರಾಮನಗರ, ತುಮಕೂರು,  ವಿಜಯಪುರ ಮತ್ತು ಕೋಲಾರದಲ್ಲಿ ತಲಾ 25 ಕೋಟಿ ರೂ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಸ್ಥಾಪನೆಗೆ ಚಾಲನೆ ನೀಡಲಾಗಿದೆ.

ನಮ್ಮ ಸ್ವಾತಂತ್ರ್ಯವನ್ನು ಅರ್ಥಪೂರ್ಣವಾಗಿಸಬೇಕೆಂದರೆ ಸಾಮಾಜಿಕ ಮತ್ತು ಪ್ರಾದೇಶಿಕ ಅಸಮಾನತೆಯನ್ನು ತೊಡೆಯುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರವು ಪರಿವರ್ತನಾಶೀಲ ಹೆಜ್ಜೆಗಳನ್ನಿರಿಸಿ                             ರಾಜ್ಯದಲ್ಲಿ ಕಲ್ಯಾಣ ಪರ್ವಕ್ಕೆ ಚಾಲನೆ ನೀಡಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸರ್ವತೋಮುಖ ಅಭಿವೃದ್ಧಿಗಾಗಿ ಚಾರಿತ್ರಿಕವಾದ ‘ಕರ್ನಾಟಕ ಪರಿಶಿಷ್ಟ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ ಅಧಿನಿಯಮ, 2013’ ಜಾರಿಗೆ ತಂದಿದ್ದೇವೆ. ಜನಸಂಖ್ಯೆಗೆ ಅನುಗುಣವಾಗಿ  ಶೇಕಡಾ 17.5 ಮತ್ತು ಶೇಕಡಾ 6.95 ಅನುದಾನವನ್ನು ಆಯವ್ಯಯದಲ್ಲಿ ಮೀಸಲಿರಿಸಲಾಗಿದೆ.  ಇದರಡಿ 2013-14 ನೇ ಸಾಲಿನಿಂದ 2016-17 ನೇ ಸಾಲಿನ ಅವಧಿಯಲ್ಲಿ  ಒಟ್ಟು 60,350 ಕೋಟಿ ರೂ ಒದಗಿಸಲಾಗಿದೆ.

ಪ್ರಾದೇಶಿಕ ಅಸಮತೋಲನ ನಿವಾರಿಸುವ ಸಲುವಾಗಿ ಹೈದರಾಬಾದ್ – ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿಗಾಗಿ ಕಳೆದ ಮೂರು ವರ್ಷದ ಅವಧಿಯಲ್ಲಿ  2,503 ಕೋಟಿ ರೂ. ಒದಗಿಸಲಾಗಿದೆ. ಹೈದರಾಬಾದ್ – ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಮೂಲಕ 1,500 ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ಅಧಿನಿಯಮ 2016 ಅನ್ವಯ 50 ಲಕ್ಷ ರೂ.  ಮೌಲ್ಯ ಮೀರದ ಕಾಮಗಾರಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಟೆಂಡರ್‍ದಾರರಿಗೆ ಶೇಕಡ 24.10 ಮೀಸಲಾತಿ ನಿಗದಿಪಡಿಸಿ ಅಧಿಸೂಚನೆ ಹೊರಡಿಸಲಾಗಿದೆ.

ಇಡೀ ಭಾರತದಲ್ಲಿಯೇ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡುತ್ತಿರುವ ಏಕೈಕ ರಾಜ್ಯ ನಮ್ಮ ಕರ್ನಾಟಕ ಎಂಬುದು ಹೆಮ್ಮೆಯ ಸಂಗತಿಯಾಗಿದೆ. ಶಿಷ್ಯವೇತನ ಪಡೆಯುತ್ತಿರುವ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರುವ ವಿದ್ಯಾರ್ಥಿಗಳ ಸಂಖ್ಯೆ 5.5 ಲಕ್ಷದಿಂದ 13.18 ಲಕ್ಷಕ್ಕೆ ಏರಿಕೆಯಾಗಿದೆ ಎಂಬುದು ಗಮನಾರ್ಹ.

ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ 20 ಲಕ್ಷ ರೂ. ಶಿಷ್ಯ ವೇತನ ನೀಡುವ ಯೋಜನೆಯಲ್ಲೂ ವಿದ್ಯಾರ್ಥಿಗಳ ಸಂಖ್ಯೆ 20 ರಿಂದ ಇದೀಗ 424 ಕ್ಕೆ ಏರಿಕೆಯಾಗಿದೆ.

ಕಳೆದ 13 ವರ್ಷಗಳಿಂದ ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಸಂಬಂಧಿಸಿದಂತೆ  124 ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರ ವಿದ್ಯಾರ್ಥಿನಿಲಯಗಳು ಕಾರ್ಯ ನಿರ್ವಹಿಸುತ್ತಿದ್ದವು. ಆದರೆ, ಕಳೆದ ನಾಲ್ಕು ವರ್ಷಗಳಲ್ಲಿ 180 ಹೊಸ ವಿದ್ಯಾರ್ಥಿನಿಲಯಗಳನ್ನು ಪ್ರಾರಂಭಿಸಲಾಗಿದೆ ಎಂಬುದು ಗಮನಾರ್ಹ. ಸರ್ಕಾರದ ಈ ಕ್ರಮದಿಂದ ಒಟ್ಟು 17,900 ವಿದ್ಯಾರ್ಥಿಗಳಿಗೆ  ಲಾಭ ದೊರೆತಿದೆ.

ಶಾಲೆಗಳಿಂದ ಹೊರ ಉಳಿದ ಅಲ್ಪಸಂಖ್ಯಾತರ ಮಕ್ಕಳನ್ನು ಮರಳಿ ಶಾಲೆಗೆ ತರಲು  ಈಗಾಗಲೇ ಮುಚ್ಚಲ್ಪಟ್ಟಿರುವ ಸರ್ಕಾರ ಉರ್ದು ಶಾಲೆಗಳ ಸ್ಥಳದಲ್ಲಿ ಮುಂದಿನ ಎರಡು ವರ್ಷಗಳಲ್ಲಿ 200 ಮೌಲಾನ ಆಜಾದ್ ಮಾದರಿ ಶಾಲೆಗಳನ್ನು ಪ್ರಾರಂಭಿಸಲು ಯೋಜಿಸಲಾಗಿದೆ.

ನೀರಾವಾರಿ ನಮ್ಮ ಆದ್ಯತೆಯ ಕ್ಷೇತ್ರಗಳಲ್ಲೊಂದು. ಕಳೆದ ನಾಲ್ಕು ವರ್ಷಗಳಲ್ಲಿ  ಭಾರಿ ಮತ್ತು ಮಧ್ಯಮ ನೀರಾವರಿ ಯೋಜನೆಗಳಿಗೆ ಒಟ್ಟಾರೆ 58,393 ಕೋಟಿ  ರೂ   ಅನುದಾನ ಒದಗಿಸಲಾಗಿದ್ದು 6,40,925 ಎಕರೆ ಪ್ರದೇಶಕ್ಕೆ ನೀರಾವರಿ ಸಾಮಥ್ರ್ಯ ಕಲ್ಪಿಸಲಾಗಿದೆ.                 

ಎತ್ತಿನಹೊಳೆ ಯೋಜನೆಯ 12,912.36 ಕೋಟಿ ರೂ ಸಮಗ್ರ ಯೋಜನಾ ವರದಿಗೆ ಸರ್ಕಾರದಿಂದ ಪರಿಷ್ಕøತ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯಡಿ ಚಿಕ್ಕಮಗಳೂರು, ತುಮಕೂರು,  ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ 5,57,248 ಎಕರೆ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡು ನೀರಾವರಿ ಸೌಲಭ್ಯ ಕಲ್ಪಿಸುವ ಮತ್ತು  367 ಸಣ್ಣ ನೀರಾವರಿ ಕೆರೆಗಳನ್ನು ತುಂಬಿಸುವ 29.9 ಟಿಎಂಸಿ ನೀರಿನ ಬಳಕೆಯ  12,340 ಕೋಟಿ ರೂ. ಮೊತ್ತದ ಪರಿಷ್ಕøತ ಅಂದಾಜಿಗೆ ಅನುಮೋದನೆ ನೀಡಲಾಗಿದೆ. ಎತ್ತಿನಹೊಳೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗಳ ಶೀಘ್ರ ಅನುಷ್ಠಾನಕ್ಕಾಗಿ ಹೊಸ ನಿಗಮವನ್ನು ಸ್ಥಾಪಿಸಲಾಗಿದೆ.

ಕಾವೇರಿ ಕೊಳ್ಳದಡಿ ಶತಮಾನಗಳ ಹಳೆಯದಾದ 23 ಅಣೆಕಟ್ಟು ನಾಲೆಗಳ ಆಧುನೀಕರಣವನ್ನು 1587.75 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದೆ.  ಈ ಪೈಕಿ 13 ಕಾಮಗಾರಿಗಳು ಪೂರ್ಣಗೊಂಡಿವೆ. ಅಲ್ಲದೆ, 33 ನಾಲಾ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದು, 810.21 ಕೋಟಿ ರೂ. ಮೊತ್ತದ ಎಂಟು ಕಾಮಗಾರಿಗಳು ಪೂರ್ಣಗೊಂಡಿದ್ದು, 813.52 ಕೋಟಿ ರೂ. ಮೊತ್ತದ 11 ಕಾಮಗಾರಿಗಳು ಪ್ರಗತಿಯಲ್ಲಿವೆ.

ರಾಜ್ಯದಲ್ಲಿ 18 ಭಾರಿ ಮತ್ತು ಮಧ್ಯಮ ನೀರಾವರಿ ಅಣೆಕಟ್ಟುಗಳನ್ನು ಕೇಂದ್ರ ಜಲ ಆಯೋಗದ ಸಹಯೋಗದೊಂದಿಗೆ ವಿಶ್ವಬ್ಯಾಂಕ್ ನೆರವಿನ ಡ್ರಿಪ್ ಕಾರ್ಯಕ್ರಮದಡಿ 425.60 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ.

ಜನರ ಆರೋಗ್ಯ ರಕ್ಷಣೆ ಉದ್ದೇಶದಿಂದ 9,300 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದ್ದು 1.6 ಕೋಟಿ ಜನ ಇದರ ಲಾಭ ಪಡೆಯುತ್ತಿದ್ದಾರೆ. 1,554 ಕೋಟಿ ರೂ  ವೆಚ್ಚದಲ್ಲಿ 190 ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಅನುಷ್ಠಾನದ ಮೂಲಕ  2,539 ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಲಾಗಿದ್ದು 40 ಲಕ್ಷ ಜನರಿಗೆ ನೀರನ್ನು ಪೂರೈಸಲಾಗುತ್ತಿದೆ.

ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 150 ನೇ ವರ್ಷಾಚರಣೆ ವೇಳೆಗೆ ರಾಜ್ಯವನ್ನು ಸಂಪೂರ್ಣ ಬಯಲು ಬಹಿರ್ದೆಸೆ  ಮುಕ್ತವಾಗಿಸುವ ನೈರ್ಮಲ್ಯ ಕ್ರಾಂತಿಯೆಡೆಗೆ ಹೆಜ್ಜೆಯನ್ನಿರಿಸಿದ್ದೇವೆ. ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಶೌಚಾಲಯ ವ್ಯವಸ್ಥೆಯನ್ನು ಹೊಂದಿರುವ ಗ್ರಾಮೀಣ ಕುಟುಂಬಗಳ ಪ್ರಮಾಣ ಶೇಕಡಾ 35 ರಿಂದ  ಶೇಕಡಾ 70 ಕ್ಕೆ ಹೆಚ್ಚಿದೆ. ‘ಶೌಚಾಲಯಕ್ಕಾಗಿ ಸಮರ’ ಕಾರ್ಯಕ್ರಮದಡಿ   28 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ.

ನನ್ನ ಹಿಂದಿನ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ರಾಜ್ಯದ ಗ್ರಾಮ ಪಂಚಾಯಿತಿಗಳಿಗೆ ವೈ-ಫೈ ಸಂಪರ್ಕ ಕಲ್ಪಿಸುವ ಕಾರ್ಯಕ್ರಮವನ್ನು ಘೋಷಣೆ ಮಾಡಿದ್ದೆ.  ಈ ವಷಾಂತ್ಯದೊಳಗೆ 2500 ಗ್ರಾಮ ಪಂಚಾಯತಿಗಳಿಗೆ ವೈ-ಫೈ ಸೌಲಭ್ಯ ಕಲ್ಪಿಸಲಾಗುವುದು ಎಂದು ಈ ಸಂದರ್ಭದಲ್ಲಿ ಹೇಳಲು ನನಗೆ ಹೆಮ್ಮೆಯಾಗುತ್ತಿದೆ. ರಾಜ್ಯದ ಉಳಿದ   3,500 ಗ್ರಾಮ ಪಂಚಾಯಿತಿಗಳಿಗೆ 2018ರಲ್ಲಿ ವೈ-ಫೈ ಸೌಲಭ್ಯ ಕಲ್ಪಿಸಲಾಗುವುದು.  ಆ ಮೂಲಕ ಕರ್ನಾಟಕವನ್ನು ಸಂಪೂರ್ಣವಾಗಿ ವೈ-ಫೈ ಯುಕ್ತ ರಾಜ್ಯವನ್ನಾಗಿಸಲಾಗುವುದು.

ರಾಜ್ಯವನ್ನು ಕಾಡುತ್ತಿರುವ ಸತತ ಬರಗಾಲ ನಮ್ಮ ಗ್ರಾಮೀಣ ಭಾಗದ ಜನತೆಯನ್ನು ಕಂಗೆಡಿಸದೆ ಇರಲು ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಮರ್ಥ ಅನುಷ್ಠಾನವೂ ಕಾರಣವಾಗಿದೆ. ಯೋಜನೆಯಡಿ 52.7 ಲಕ್ಷ ಕುಟುಂಬಗಳಿಗೆ ಉದ್ಯೋಗ ಚೀಟಿ ನೊಂದಾವಣಿ ಮಾಡಲಾಗಿದ್ದು 24.8 ಕೋಟಿ ಮಾನವ ದಿನಗಳಷ್ಟು ಉದ್ಯೋಗ ನೀಡಲಾಗಿದ್ದು   ಇದಕ್ಕಾಗಿ 7,056 ಕೋಟಿ ರೂ ವೆಚ್ಚ ಮಾಡಲಾಗಿದೆ.

ಕನ್ನಡ ನಾಡಿನ ಭಾಷೆ ಮತ್ತು ಸಂಸ್ಕøತಿಯ ಬಗ್ಗೆ ನಮ್ಮ ಬದ್ದತೆಯ ಪ್ರತೀಕವಾಗಿ  ನಮ್ಮ ಸರ್ಕಾರವು ಸಾಂಸ್ಕøತಿಕ ನೀತಿಯನ್ನು ಜಾರಿಗೆ ತಂದಿದೆ. ಕನ್ನಡ ನಾಡು ನುಡಿಯ ಗರಿಮೆಯನ್ನು ವಿಶ್ವಾದಾದ್ಯಂತ ಪಸರಿಸಲು ಇದೇ ವರ್ಷ ಮೂರನೇ ವಿಶ್ವ ಕನ್ನಡ ಸಮ್ಮೇಳನ ನಡೆಸಲು ತೀರ್ಮಾನಿಸಿದ್ದೇವೆ.

ಹನ್ನೆರಡನೇ ಶತಮಾನದ  ವಚನಕಾರರಿಂದ ಮೂಡಿ ಬಂದ 15 ಸಂಪುಟಗಳ ಸಮಗ್ರ ವಚನಗಳನ್ನು ಎರಡು ಸಂಪುಟಗಳಲ್ಲಿ ಹೊರತರಲಾಗಿದೆ. ಕನ್ನಡ ಭಾಷೆಯ ಬಹು ಮುಖ್ಯ ಸಾಹಿತ್ಯ ಪ್ರಕಾರವಾದ ತತ್ವಪದ ಸಾಹಿತ್ಯವನ್ನು ಈಗಾಗಲೇ 32 ಸಂಪುಟಗಳಲ್ಲಿ ಪ್ರಕಟಿಸಲಾಗಿದೆ.  ಇನ್ನೂ 18 ಸಂಪುಟಗಳನ್ನು ಪ್ರಕಟಿಸಲಾಗುವುದು.

ಕರ್ನಾಟಕವು ಮೊದಲಿನಿಂದಲೂ ಕೈಗಾರಿಕೆ ಹಾಗೂ ಔದ್ಯಮಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ.   2016ನೇ ವರ್ಷದಲ್ಲ್ಲಿ 1,54,173 ಕೋಟಿ ರೂ ಬಂಡವಾಳ  ಹೂಡಿಕೆಯನ್ನು ಆಕರ್ಷಿಸುವ ಮೂಲಕ ದೇಶದಲ್ಲೇ ಕರ್ನಾಟಕವು ಪ್ರಥಮ ಸ್ಥಾನದಲ್ಲಿದೆ. ಅಂತೆಯೇ, 17,293 ಕೋಟಿ ರೂ ಯೋಜನೆಗಳ ಜಾರಿಯಿಂದಾಗಿ 1.6 ಲಕ್ಷ ಜನ ಉದ್ಯೋಗ ಪಡೆದಿದ್ದಾರೆ. ಇದಲ್ಲದೆ ಇನ್ನೂ 2.8 ಲಕ್ಷ ಕೋಟಿ ರೂ ಹೂಡಿಕೆಯ 1,492 ಯೋಜನೆಗಳು ಪ್ರಗತಿಯಲ್ಲಿವೆ.                

ರಾಜ್ಯವು ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳ ಪಾಲಿಗೆ ಭರವಸೆಯ ತಾಣವಾಗಿದೆ. ಕಳೆದ ನಾಲ್ಕು ವರ್ಷದ ಅವಧಿಯಲ್ಲಿ 22,175 ಕೋಟಿ ರೂ ಹೂಡಿಕೆಯ 1.16 ಲಕ್ಷ  ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕಾ ಘಟಕಗಳ ನೊಂದಣಿಯಾಗಿದೆ.  ಇದರಿಂದ 10.3 ಲಕ್ಷ ಜನರಿಗೆ ಉದ್ಯೋಗಾವಕಾಶ ದೊರೆತಿದೆ. ನೂತನ  ಜವಳಿ ನೀತಿಯಿಂದಾಗಿ 1,918 ಕೋಟಿ ರೂ. ಹೂಡಿಕೆಯಾಗಿದ್ದು ಒಂದು ಲಕ್ಷ   ಜನರಿಗೆ ಉದ್ಯೋಗಾವಕಾಶ ದೊರೆತಿದೆ.

ಇದೆಲ್ಲಕ್ಕೂ ಕಳಶವಿಟ್ಟಂತೆ ಬೆಂಗಳೂರನ್ನು ‘ಜಗತ್ತಿನ ಅತ್ಯಂತ ಕ್ರಿಯಾಶೀಲ ನಗರ’ ಎಂದು ವಿಶ್ವ ಆರ್ಥಿಕ ವೇದಿಕೆ ಗುರುತಿಸಿದೆ. ಇಂದು ಬ್ರಾಂಡ್ ಬೆಂಗಳೂರು ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ವಲಯಗಳಲ್ಲಿ ಮಾತ್ರವೇ ಅಲ್ಲದೆ ‘ಭಾರತದ ಸ್ಟಾರ್ಟ್‍ಅಪ್ ರಾಜಧಾನಿ’ ಎನ್ನುವ ಶ್ರೇಯಕ್ಕೂ ಭಾಜನವಾಗಿದೆ. ರಾಜ್ಯವು ದೇಶದಲ್ಲಿಯೇ ವಿಶಿಷ್ಟವೆನಿಸುವ ‘ಸ್ಟಾರ್ಟ್‍ಅಪ್ ನೀತಿ’ಯನ್ನು ಹೊಂದಿದ್ದು ನವೋದ್ಯಮಗಳ ತವರಾಗಿ ಹೊರಹೊಮ್ಮಿದೆ.

ರಾಜ್ಯಕ್ಕೆ ವಿಶ್ವದೆಲ್ಲೆಡೆಯಿಂದ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ವರ್ತಕರ ಅಭಿವೃದ್ಧಿ ಮೇಳ ಹಾಗೂ ಬಂಡವಾಳ ಹೂಡಿಕೆದಾರರ ಶೃಂಗಸಭೆಯನ್ನು ನವೆಂಬರ್ 23-24, 2017 ರಂದು ಆಯೋಜಿಸಲಾಗುವುದು.

ಬೆಂಗಳೂರು ತನ್ನ ವಿಶ್ವವಿಖ್ಯಾತಿಗೆ ತಕ್ಕಂತೆ ಜಾಗತಿಕ ಮೂಲಸೌಕರ್ಯವನ್ನೂ ಹೊಂದುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಕಳೆದ 4 ವರ್ಷದ ಅವಧಿಯಲ್ಲಿ ಮಾಡುತ್ತಾ ಬಂದ ಪ್ರಯತ್ನದ ಫಲವನ್ನು  ಇದೀಗ ನಗರದ ಜನರು ಕಾಣುತ್ತಿದ್ದಾರೆ.

ಇತ್ತೀಚೆಗಷ್ಟೇ 42.3 ಕಿ.ಮಿ. ಉದ್ದದ ಮೊದಲನೇ ಹಂತದ ಮೆಟ್ರೋ ರೈಲು ಯೋಜನೆಯನ್ನು ನಾವು ರಾಷ್ಟ್ರಕ್ಕೆ ಸಮರ್ಪಿಸಿದ್ದು ಎರಡನೇ ಹಂತದ 72 ಕಿ.ಮಿ. ಮೆಟ್ರೋ ಜಾಲದ ಅನುಷ್ಠಾನದ ಕಾಮಗಾರಿಗಳು ಬರದಿಂದ ಸಾಗಿವೆ. 2020ನೇ ಇಸವಿ ವೇಳೆಗೆ ಎರಡನೇ ಹಂತವೂ ಪೂರ್ಣಗೊಳ್ಳಲಿದೆ.

ಎರಡನೇ ‘ಎ’ ಹಂತದ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಎರಡನೇ ‘ಬಿ’ ಹಂತದ ಯೋಜನೆಗೆ ತಾತ್ವಿಕ ಒಪ್ಪಿಗೆ ದೊರೆತಿದೆ. ಪ್ರಸ್ತುತ ನಾವು ಮೂರನೇ ಹಂತದ ಮೆಟ್ರೋ ಯೋಜನೆಯ ಕುರಿತಾಗಿ ಚಿಂತಿಸುತ್ತಿದ್ದು ಇದರಡಿ 92 ಕಿ.ಮಿ. ಜಾಲವನ್ನು ಮೆಟ್ರೋ ಯೋಜನೆಯ ವ್ಯಾಪ್ತಿಗೆ ಒಳಪಡಿಸಲಾಗುವುದು.

ಈ ಮೂರು ಹಂತದ ಯೋಜನೆಗಳು ಪೂರ್ಣಗೊಳ್ಳುವುದರೊಂದಿಗೆ ಬೆಂಗಳೂರು ನಗರವು 2022ನೇ ಇಸವಿ ವೇಳೆಗೆ 250 ಕಿ.ಮಿ. ಬೃಹತ್ ಮೆಟ್ರೋ ಜಾಲವನ್ನು ಹೊಂದಲಿದೆ.

ಬೆಂಗಳೂರು ನಗರದ ಕೊಳಚೆ ಪ್ರದೇಶದ ನಿವಾಸಿಗಳಿಗೆ ಪ್ರತಿ ತಿಂಗಳು ಹತ್ತು ಸಾವಿರ ಲೀಟರ್ ನೀರನ್ನು ಉಚಿತವಾಗಿ ಸರಬರಾಜು ಮಾಡುವ ಮಹತ್ವಾಕಾಂಕ್ಷಿ ಯೋಜನೆಗೆ  ಈಗಾಗಲೇ ಚಾಲನೆ ನೀಡಲಾಗಿದೆ.  ಅಲ್ಲದೆ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕಾಲೋನಿಗಳಲ್ಲಿನ ನಿವಾಸಿಗಳಿಗೂ ಈ ಸೌಲಭ್ಯವನ್ನು ವಿಸ್ತರಿಸಲಾಗುವುದು.  ಇದರಿಂದ ಸುಮಾರು ಒಂದು ಲಕ್ಷ ಕುಟುಂಬಗಳು ಈ ಸೌಲಭ್ಯವನ್ನು ಪಡೆಯಲಿವೆ.

ಬೆಂಗಳೂರು ಜಲಮಂಡಳಿಯು ತ್ಯಾಜ್ಯ ನೀರು ಸಂಸ್ಕರಣೆಯತ್ತ ದಿಟ್ಟ ಹೆಜ್ಜೆಯನ್ನು ಇರಿಸಿ,  ಅನೇಕ ಯೋಜನೆಗಳನ್ನು ಕೈಗೊಂಡಿದೆ. 2020ರ ವೇಳೆಗೆ ನಗರದ ನೂರಕ್ಕೆ ನೂರು ತ್ಯಾಜ್ಯ ನೀರನ್ನು ಸಂಸ್ಕರಿಸುವ ಗುರಿಯನ್ನು ಹೊಂದಲಾಗಿದೆ. ಬೆಂಗಳೂರಿನ ಕೆರೆಗಳ ಸಂರಕ್ಷಣೆಗೆ ಇದು ಮಹತ್ವದ ಕೊಡುಗೆ ನೀಡಲಿದೆ.

ಪ್ರವಾಸೋದ್ಯಮ ಇಲಾಖೆಯ ಸಮಗ್ರ ಮಾಹಿತಿ ಹಾಗೂ ಅದರ ಅಧೀನದಲ್ಲಿರುವ ಸಂಸ್ಥೆಗಳ ಸಮಗ್ರ ಮಾಹಿತಿಯನ್ನು ಒಂದೇ ವೇದಿಕೆಯಡಿ ದೇಶೀಯ ಹಾಗೂ ವಿದೇಶೀ ಪ್ರವಾಸಿಗರಿಗೆ ಒದಗಿಸಲು ಒಂದು ಸಮಗ್ರ ಡಿಜಿಟಲ್ ವೇದಿಕೆ ಅಭಿವೃದ್ಧಿ ಪಡಿಸಲು ಯೋಜಿಸಲಾಗಿದೆ.

ವಿವಿಧ ಧರ್ಮಗಳ ಪ್ರವಾಸಿಗರು ತಮ್ಮ ಪುಣ್ಯ ಕ್ಷೇತ್ರಗಳಿಗೆ ಕಡಿಮೆ ವೆಚ್ಚದಲ್ಲಿ ಭೇಟಿ ನೀಡಲು ಅನುಕೂಲವಾಗುವಂತೆ ಪುನೀತ ಯಾತ್ರೆ ಯೋಜನೆಯಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಬಸ್‍ಗಳಲ್ಲಿ ರಿಯಾಯಿತಿ ದರದಲ್ಲಿ ಸಂಚರಿಸಲು ಅವಕಾಶ ಕಲ್ಪಿಸುವ ಯೋಜನೆಗೆ  ಸಧ್ಯದಲ್ಲೇ ಚಾಲನೆ ನೀಡಲಾಗುವುದು.

ಸ್ವಾತಂತ್ರ್ಯ, ಸಮಾನತೆ ಮತ್ತು ಭಾತೃತ್ವದ ಆಶಯಗಳನ್ನೊಳಗೊಂಡ ಸಾಮಾಜಿಕ ಸ್ವಾತಂತ್ರ್ಯವನ್ನು ಒಳಗೊಳ್ಳದ ರಾಜಕೀಯ ಸ್ವಾತಂತ್ರ್ಯ ಬಹಳ ಕಾಲ ಬಾಳಲಾರದು ಎಂದು ಸಂವಿಧಾನಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ನೀಡಿದ್ದ ಎಚ್ಚರಿಕೆ ನಮ್ಮನ್ನು ಸದಾ ಜಾಗೃತಸ್ಥಿತಿಯಲ್ಲಿಟ್ಟಿದೆ. ಸಂಪತ್ತು, ಅಧಿಕಾರ ಮತ್ತು ಅವಕಾಶ ಸಮಾಜದ ಎಲ್ಲಾ ಜನವರ್ಗಗಳಿಗೂ ಹಂಚಿಕೆ ಮಾಡುವ ಮೂಲಕ ಸಂವಿಧಾನದ ಆಶಯವನ್ನು ಸಾಕಾರಗೊಳಿಸಬೇಕೆಂಬುದು ನಮ್ಮ ಸರ್ಕಾರದ ಉದ್ದೇಶ. ನಾವೆಲ್ಲರೂ ಸ್ವಾತಂತ್ರ್ಯವನ್ನು ಅನುಭವಿಸೋಣ, ಆನಂದಿಸೋಣ. ಸುಭದ್ರ ಭಾರತವನ್ನು ನಿರ್ಮಿಸೋಣ.  ತೆಮ್ಮೆಲ್ಲರಿಗೂ ಮತ್ತೊಮ್ಮೆ ಸ್ವಾತಂತ್ರ್ಯೋತ್ಸವದ ಶುಭಾಶಯಗಳು.

*ಜೈ ಹಿಂದ್-ಜೈ ಕರ್ನಾಟಕ*

4 thoughts on “71 ನೆಯ ಸ್ವಾತಂತ್ರ್ಯೋತ್ಸವ ದಿನಾಚರಣೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ

 • October 16, 2017 at 4:47 PM
  Permalink

  I would like to thank you for the efforts you have put in writing this website. I’m hoping the same high-grade blog post from you in the upcoming also. Actually your creative writing abilities has inspired me to get my own blog now. Actually the blogging is spreading its wings rapidly. Your write up is a great example of it.

 • October 24, 2017 at 3:25 PM
  Permalink

  I don’t even know how I ended up here, but I thought this post was good. I don’t know who you are but definitely you’re going to a famous blogger if you aren’t already 😉 Cheers!

 • October 24, 2017 at 3:42 PM
  Permalink

  Appreciating the time and effort you put into your site and detailed information you present. It’s good to come across a blog every once in a while that isn’t the same out of date rehashed information. Fantastic read! I’ve saved your site and I’m including your RSS feeds to my Google account.

 • October 24, 2017 at 4:07 PM
  Permalink

  You are a very clever individual!

Comments are closed.

Social Media Auto Publish Powered By : XYZScripts.com