ಸಖೀಗೀತ – 17 : ಧ್ವಜ ರಾಜಕಾರಣ… ಗೀತಾ ವಸಂತ್ ಅಂಕಣ …..!

ರಾಷ್ಟ್ರ, ರಾಷ್ಟ್ರೀಯತೆ,  ರಾಷ್ಟ್ರಭಕ್ತಿ ಎಂಬೆಲ್ಲ ಪದಗಳು ಮತ್ತೆ ಮತ್ತೆ ನಮ್ಮನ್ನು ಕಲಕುತ್ತ ಕಿಡಿ ಹೊತ್ತಿಸುವ ಪರಿಕಲ್ಪನೆಗಳಾಗಿ ಮುನ್ನೆಲೆಗೆ ಬರುತ್ತಲೇ ಇರುತ್ತವೆ. ಈಗ ನಡೆಯುತ್ತಿರುವ ಧ್ವಜ ರಾಜಕಾರಣವೂ ಅದರದೇ ಒಂದು ಭಾಗ. ಭಾವನಾತ್ಮಕ ಒತ್ತಡ ಹಾಗೂ ರಾಜಕೀಯ ತಂತ್ರಗಳು ಎದುರು ಬದುರಾದಾಗ ಒಂದಷ್ಟು ಗೊಂದಲಗಳು ಮೂಡುತ್ತವೆ. ಎರಡು ಬಿನ್ನ ಗುಂಪುಗಳು ಸೃಷ್ಟಿಯಾಗಿ ಪರಸ್ಪರ ಕೆಸರೆರಚಾಟದಲ್ಲಿ ತೊಡಗುತ್ತವೆ. ಇದನ್ನೆಲ್ಲ ಸೂಕ್ಷ್ಮವಾಗಿ ಅವಲೋಕಿಸಿದಾಗ ಗೊತ್ತಾಗುವುದೇನೆಂದರೆ ನಾವೇ ಸೃಷ್ಟಿಸಿಕೊಂಡ ಸಂಕೇತಗಳು ನಮ್ಮನ್ನೇ ನಿಯಂತ್ರಿಸತೊಡಗುತ್ತವೆ! ಬಣ್ಣ, ಆಕೃತಿ, ವಸ್ತುಗಳನ್ನು ಸಂಕೇತಗಳನ್ನಾಗಿ ರೂಪಿಸಿಕೊಳ್ಳುವುದು ಮನುಷ್ಯನ  ಪ್ರತಿಭೆ. ಭಾಷೆ ಕೂಡ ಇಂಥ ಸಾಂಕೇತಿಕ ಸೃಷ್ಟಿಯೇ.

ಕೆಂಪು ಕ್ರಾಂತಿ ಸೂಚಕವಾಗಿಯೂ, ಬಿಳಿ ಶಾಂತಿ ದ್ಯೋತಕವಾಗಿಯೂ ಅರ್ಥಸೂಚಕಗಳಾಗುತ್ತವೆ. ಹಸಿರು ಸಮೃದ್ಧಿಗೂ, ನೀಲಿ ಗಹನತೆಗೂ ಸಂಕೇತವಾಗುತ್ತವೆ. ಕೇಸರಿಯು ತ್ಯಾಗ ವೈರಾಗ್ಯಗಳ ಕಥೆ ಹೇಳುತ್ತದೆ. ಹಾಗೆಯೇ ಧ್ವಜವೆಂಬುದು ನಮ್ಮ  ಅಸ್ತಿತ್ವದಸಂಕೇತ. ಗೆಲುವು, ಹೆಮ್ಮೆ, ಕೀರ್ತಿ, ಸ್ವಾಭಿಮಾನ, ಪ್ರೇಮ ಹೀಗೆ ಅದು ಸಾಂದರ್ಭಿಕವಾಗಿ ಭಾವನಾತ್ಮಕ ವಿಸ್ತರಣೆಯನ್ನು ಪಡೆಯುತ್ತ ಹೋಗುತ್ತದೆ. ಯುದ್ಧಗಳಲ್ಲಿ ಧ್ವಜ ರಣೋತ್ಸಾಹದ ಪ್ರತೀಕವಾದರೆ ಶಾಂತಿಗಾಗಿ ಹಾರಾಡುವ ಧ್ವಜ ರಾಜಕೀಯ ಅಸ್ತಿತ್ವದ ಪ್ರತೀಕ. ಅಭಿಮಾನದ ವಿಷಯಕ್ಕೆ ಬಂದಾಗ ಅದು ರಾಷ್ಟ್ರ ಪ್ರೇಮದ ಸಂಕೇತ. ಧ್ವಜ ನೆಟ್ಟು ಸಾಧನೆಯ ಹರ್ಷವನ್ನು ಆಚರಿಸುವುದು ಸಾಹಸಿಗಳ ಒಂದು ಕ್ರಮ. ಒಂದು ಭಾಷೆಯನ್ನಾಡುವ ಜನಸಮುದಾಯವು ಒಂದು ನಿಶ್ಚಿತ ಧ್ವಜವನ್ನು ಹೊಂದುವುದು ಸಾಮುದಾಯಿಕ ಅಸ್ತಿತ್ವದ ಸಂಕೇತ. ಈ ಅಸ್ತಿತ್ವದಲ್ಲಿ ನೆಲ, ಜಲ, ಭಾಷೆ, ಗಡಿ, ಸಂಸ್ಕೃತಿ, ಸಮಾಜ ಎಲ್ಲವೂ ಬೆರೆತಿರುತ್ತವೆ. ಧ್ವಜವೆಂದರೆ ಬರಿಯ ಧ್ವಜವಲ್ಲ, ಅದು ಕನ್ನಡಿಗರ ಸ್ವಾಯತ್ತತೆಯ ಪ್ರತೀಕ ಎಂದಾದಾಗ ಪ್ರಶ್ನೆಗಳು ಎದುರಾಗುತ್ತವೆ.

ರಾಷ್ಟ್ರೀಯ ಐಕ್ಯತೆಗೆ ಸ್ಥಳೀಯ ಅವಶ್ಯಕತೆಯು ತೊಡಕಾಗುತ್ತದೆಯೆ? ಎಂಬುದು ಮುಖ್ಯಪ್ರಶ್ನೆ. ರಾಷ್ಟ್ರದ ಸಾರ್ವಭೌಮತೆ ಹಾಗೂ ಸಮಗ್ರತೆಯನ್ನು ಇದು ಒಡೆಯುವುದಿಲ್ಲವೆ? ಎಂಬುದು ಮುಂದುವರೆದ ಪ್ರಶ್ನೆ. ಭಾಷಾವಾರು ಪ್ರಾಂತ್ಯಗಳ ರಚನೆಯ ಮೂಲಕ ಭಾಷಾಮೂಲವಾದ ರಾಷ್ಟ್ರೀಯತೆಯ ಕಲ್ಪನೆ ತಲೆಯೆತ್ತಿತು. ಒಂದು ಭಾಷೆಯನ್ನಾಡುವ ಸಮೂಹದ ನಂಬಿಕೆ, ಆಶೋತ್ತರ, ಚಿಂತನೆ, ಸಂಸ್ಕೃತಿಗಳು ಒಂದೇ ಆಗಿರುವುದರಿಂದ ಅಲ್ಲಿ ಐಕ್ಯತೆ, ಒಮ್ಮತ ಮೂಡುವುದು ಸುಲಭ. ಆದ್ದರಿಂದ ಕನ್ನಡದ ಮೂಲಕ ಕರ್ನಾಟಕವು ಅಸ್ತಿತ್ವ ಪಡೆಯಿತು. ಭಾಷೆಗೂ, ರಾಜಕಾರಣಕ್ಕೂ ನಡುವೆ ನಂಟೊಂದು ಸ್ಥಾಪಿತವಾಯಿತು. ಸರ್ಕಾರಗಳು ಕನ್ನಡಿಗರ ಸ್ವಾಯತ್ತತೆಯ ಸ್ವರೂಪವೇನು? ಎಂಬುದು ಈಗ ಚರ್ಚೆಯಾಗುತ್ತಿರುವ ವಿಷಯ. ಈ ಪ್ರಶ್ನೆ ಇಂದು ನಿನ್ನೆಯದಲ್ಲ. ಈ ಸಂದರ್ಭದಲ್ಲಿ ಕನ್ನಡ ಧ್ವಜಕ್ಕಾಗಿ ಸಮಿತಿಯೊಂದು ರಚನೆಯಾಗಿ ಆ ದಿಶೆಯಲ್ಲಿ ಕಾರ್ಯ ಪ್ರವೃತ್ತರಾಗಿರುವುದರಿಂದ ಮತ್ತೆ ಈ ಚರ್ಚೆ ಮುನ್ನೆಲೆಗೆ ಬಂದಿದೆ. ಇದೂ ಕೂಡ ಚುನಾವಣಾ ರಾಜಕೀಯದ ಭಾಗ ಎಂಬ ಸಂಶಯ ಹೆಡೆಯೆತ್ತಿದೆ. ಕೇಂದ್ರ ಸರ್ಕಾರವು ಇದು ಒಕ್ಕೂಟ ವ್ಯವಸ್ಥೆಯ ಐಕ್ಯತೆಗೆ ವಿರುದ್ಧವಾದುದೆಂಬ ನಿಲುವನ್ನು ವ್ಯಕ್ತಪಡಿಸಿದೆ. ರಾಷ್ಟ್ರೀಯ ಮಾಧ್ಯಮಗಳಲ್ಲಿ ಇದನ್ನೇ ಚರ್ಚಿಸುತ್ತವೆ.

ಯಾವುದು ಕೇಂದ್ರ? ಎಂಬುದು ಇಲ್ಲಿ ಎದುರಾಗುವ ಮುಖ್ಯಪ್ರಶ್ನೆ. ಇದು ಕೇಂದ್ರ ಸರ್ಕಾರವನ್ನು ವಿರೋಧಿಸುವ ತತ್ಕಾಲೀನ ಪ್ರಶ್ನೆಯಲ್ಲ. ದೆಹಲಿ ಕೇಂದ್ರಿತ ರಾಷ್ಟ್ರದ ಕಲ್ಪನೆ, ಉತ್ತರ ಭಾರತವೇ ಪ್ರಧಾನವಾಗಿರುವ ರಾಷ್ಟ್ರ ರಾಜಕಾರಣ, ರಾಷ್ಟ್ರ ಭಾಷೆಯಾಗಿ ಹಿಂದಿ ಹೇರಿಕೆ ಈ ಎಲ್ಲ ಸಂಗತಿಗಳು ಈ ತಾತ್ವಿಕ ಪ್ರಶ್ನೆಯನ್ನೆತ್ತಲು ಕಾರಣ. ಇವು ದಕ್ಷಿಣ ಭಾರತೀಯರ ಅಸಮಾಧಾನಕ್ಕೂ ಕಾರಣವಾಗುತ್ತ ಬಂದಿವೆ. ಈ ದಿಶೆಯಲ್ಲಿ ತಮಿಳುನಾಡು ಉಗ್ರ ಹೋರಾಟಗಳ ಮುಂಚೂಣಿಯಲ್ಲಿದೆ. ಹಿಂದಿ ಹೇರಿಕೆಯ ವಿರುದ್ಧ ಸಿಡಿದೇಳುವುದು ಕೂಡ ಭಾಷಾಂಧತೆ ಅನ್ನುವುದಕ್ಕಿಂತ ಈ ‘ಕೇಂದ್ರ’ ರಾಜಕಾರಣವನ್ನು ಪ್ರತಿರೋಧಿಸುವ ನಿಲುವಾಗಿ ತೋರುತ್ತದೆ, ಈಶಾನ್ಯ ರಾಜ್ಯಗಳಂತೂ ಭಾರತದ ಭಾಗವಾಗಿರುವುದೋ ಇಲ್ಲವೋ ಎಂಬಷ್ಟು ಅವಜ್ಞೆಗೊಳಗಾಗಿವೆ. ಇವೆಲ್ಲ ಎದ್ದು ಕಾಣುವ ಸಂಗತಿಗಳಾದರೂ ಇನ್ನೂ ಅವ್ಯಕ್ತವಾಗಿರುವ ಸಾಂಸ್ಕೃತಿಕ ಹೇರಿಕೆ, ತಾತ್ವಿಕ ಹೇರಿಕೆಗಳು ಚರ್ಚಾರ್ಹ. ಉತ್ತರಭಾರತ ಕೇಂದ್ರಿತವಾದ ಸಾಂಸ್ಕೃತಿಕ ಸಾಹಿತ್ಯಿಕ ರಚನೆಗಳು ದಕ್ಷಿಣವನ್ನು ನಿಕೃಷ್ಟವಾಗಿ ಕಂಡ ಉದಾಹರಣೆಗಳು ಹೇರಳವಾಗಿ ದೊರೆಯುತ್ತವೆ. ಜನಪ್ರಿಯ ಸಿನಿಮಾ ಸಂಸ್ಕೃತಿಯನ್ನು ತೆಗೆದುಕೊಂಡರೂ, ಹಿಂದಿ ಸಿನೆಮಾಗಳಲ್ಲಿ ದಕ್ಷಿನ ಭಾರತೀಯರನ್ನು, ಅವರ ಭಾಷೆ-ವರ್ತನೆಗಳನ್ನು ಹಾಸ್ಯಕ್ಕಾಗಿ ಬಳಸಿಕೊಳ್ಳುವುದು ಅವರ ಧೋರಣೆಗೆ ಹಿಡಿದ ಕನ್ನಡಿ.

ಭಾರತ ವೈವಿಧ್ಯಗಳ ನಾಡು. ಏಕರೂಪ ಏಕಾಕೃತಿಗೆ ಬಗ್ಗದ ನಿರಂಕುಶ ನಿಲುವು ಈ ನಾಡಿನ ಸಂಸ್ಕೃತಿಯ ಗುಣ. ಭೌಗೋಳಿಕವಾಗಿ, ಭಾಷಿಕವಾಗಿ, ಸಾಂಸ್ಕೃತಿಕವಾಗಿ ಈ ವೈವಿಧ್ಯ ಅಪಾರವಾದುದು. ಭಿನ್ನತೆಯನ್ನು ಗೌರವಿಸುವ, ಸಹಿಷ್ಣುತೆಯಿಂದ ಸ್ವೀಕರಿಸುವ ಈ ಮಣ್ಣಗುಣವನ್ನು ನಾವಿಂದು ಮರೆತಂತಿದೆ. ಆಡಳಿತದ ಹಿತದೃಷ್ಟಿಯಿಂದಲೂ “ವಿವಿಧತೆಯಲ್ಲಿ ಏಕತೆ” ಯೆಂಬುದು ನಮ್ಮ ಘೋಷವಾಕ್ಯವಾಗುವುದು ಅನಿವಾರ್ಯ. ಜವಾಬ್ದಾರಿಯುತ ನಡೆಯಿಂದ ಮಾತ್ರ ಈ ಏಕತೆ ಸಾಧ್ಯವಾಗುತ್ತದೆ. ಸಮಗ್ರತೆ ಹಾಗೂ ಸ್ವಾಯತ್ತತೆಗಳನ್ನು ಸಮತೋಲನಗೊಳಿಸುವ ಅಂತರದೃಷ್ಟಿ ಅದಕ್ಕೆ ಬೇಕು. ಕುವೆಂಪು ಹೇಳುವ ‘ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ ’ ಎಂಬ ಕಲ್ಪನೆ ಇದಕ್ಕೆ ಪುಷ್ಟಿ ಕೊಡುತ್ತದೆ. ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡೂ ರಾಜ್ಯಗಳ ಸ್ವಾಯತ್ತತೆಯನ್ನು ಗೌರವಿಸುವ ಹಾಗೂ ಅದಕ್ಕೆ ಧಕ್ಕೆ ಬಂದಾಗ ಕಾಯುವ ಕಾಳಜಿಯಿದು. ಸ್ವಾಯತ್ತತೆಯೆಂಬುದು ಪ್ರತ್ಯೇಕತೆಯಲ್ಲ ಎಂದು ಅರಿತಾಗ ಗೊಂದಲ ನಿವಾರಣೆಯಾಗುತ್ತದೆ.

ಕನ್ನಡ ಧ್ವಜದ ವಿಚಾರವು ಮುನ್ನೆಲೆಗೆ ಬಂದಾಗ ಇಂಥ ಚರ್ಚೆಗಳೂ ಮುನ್ನೆಲೆಗೆ ಬಂದವು. ಕನ್ನಡ ಧ್ವಜದ ಸೃಷ್ಟಿ ಈಗ ಹೊಸದಾಗಿ ಆಗುತ್ತಿಲ್ಲ ಎಂಬುದು ಗಮನಾರ್ಹ. ಕನ್ನಡಕ್ಕೊಂದು ಧ್ವಜ ಈಗಾಗಲೇ ಅಸ್ತಿತ್ವದಲ್ಲಿದೆ. ಅದು ಕನ್ನಡಿಗರಿಗೆ ಆಪತ್ತು ಎದುರಾದಾಗಲೆಲ್ಲ ಹುಟ್ಟಿಕೊಂಡ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಹಾರಾಡುತ್ತಿದೆ. ಜಾತಿ ಧರ್ಮಗಳನ್ನು ಮೀರಿ ‘ಕನ್ನಡಿಗರೆಂಬ’ ಭಾವನಾತ್ಮಕ ಸಂಗತಿಯ ಅಡಿಯಲ್ಲಿ ಅದು ಕರ್ನಾಟಕದ ಪ್ರಜೆಗಳನ್ನು ಒಗ್ಗೂಡಿಸಿದೆ.

ಕನ್ನಡ ಧ್ವಜ ಕನ್ನಡ ಪರ ಹೋರಾಟದ ಸಂಕೇತವೂ ಹೌದು. ಧ್ವಜದ ಹಿನ್ನೆಲೆಯನ್ನು ಗಮನಿಸಿದಾಗ ಇದು ಸ್ಪಷ್ಟವಾಗುತ್ತದೆ. ಕನ್ನಡ ಪರ ಹೋರಾಟಗಾರರಾದ ಮ.ರಾಮಮೂರ್ತಿಯವರು ಇದನ್ನು ರೂಪಿಸಿದರು.ಕರ್ನಾಟಕದಲ್ಲಿ ತಮಿಳರ ಪ್ರಾಬಲ್ಯ ಹಾಗೂ ಕನ್ನಡಿಗರ ಅವಹೇಳನಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಕನ್ನಡಿಗರ ಸ್ವಾಭಿಮಾನವನ್ನು ಜಾಗೃತಗೊಳಿಸುವುದಕ್ಕಾಗಿ ಕನ್ನಡ ಚಳುವಳಿಗಳು ರೂಪತಳೆದವು. ಕನ್ನಡಿಗರ ಹಕ್ಕು ಬಾಧ್ಯತೆಗಳು ನೆಲ, ಜಲ, ನಾಡು, ನುಡಿ, ಗಡಿ ವಿಚಾರಗಳಲ್ಲಿ ಜಾಗೃತಿ ಉಂಟಾಯಿತು. ಕರ್ನಾಟಕದ ಏಕೀಕರಣದ ಸಂದರ್ಭದಲ್ಲಿಯೇ ಮಾಡಿದ್ದ ಈ ಜಾಗೃತಿಗೆ ಹೋರಾಟದ ಸ್ವರೂಪ ಪ್ರಾಪ್ತಿಯಾಯಿತು. ಮ.ರಾಮಮೂರ್ತಿಯವರು ಕಟ್ಟಿದ ‘ಕನ್ನಡ ಪಕ್ಷ’ ದ ಭಾಗವಾಗಿ ಈ ಧ್ವಜ ರೂಪ ತಳೆದಿತ್ತು. ಅದು ಕರ್ನಾಟಕದ ಮೊದಲ ಪ್ರಾದೇಶಿಕ ಪಕ್ಷವೂ ಹೌದು. ಹೀಗೆ ಕನ್ನಡ ಧ್ವಜವು ಭಾವನಾತ್ಮಕ ವಿಸ್ತರಣೆ ಹಾಗೂ ರಾಜಕೀಯ ಜಾಗೃತಿ ಈ ಎರಡೂ ನೆಲೆಯಲ್ಲಿ ಶಕ್ತಿಶಾಲಿ ಸಂಕೇತವಾಗಿ ನಿಂತಿತು.

ಭಾವನಾತ್ಮಕವಾಗಿ ಕಟ್ಟಿಕೊಂಡ ಸಂಕೇತಗಳನ್ನು ಒಡೆಯುವುದು ಸುಲಭವಲ್ಲ. ಅದು ರಾಜಕಿಯ ಪ್ರಜ್ಞೆಯಾಗಿ ಪ್ರಜೆಗಳನ್ನು ಜಾಗೃತ ಸ್ಥಿತಿಯಲ್ಲಿ ಇಡುವುದಾದರೆ ಅದರಲ್ಲಿ ತೊಂದರೆಯೇನಿಲ್ಲ. ಆದರೆ ಪಕ್ಷರಾಜಕಾರಣಕ್ಕಾಗಿ ಧ್ವಜವನ್ನು ಎಳೆದಾಡುವುದು ಬೇಡ. ಕೇಂದ್ರ ಹಾಗೂ ರಾಜ್ಯಗಳ ಅಧಿಕಾರ ವ್ಯಾಪ್ತಿ , ರಾಜ್ಯಕ್ಕೊಂದು ಧ್ವಜ ಬೇಕೋ ಬೇಡವೋ , ಇದು ಸಂವಿಧಾನಾತ್ಮಕವಾಗಿ ಪರಿಹರಿಸಿಕೊಳ್ಳಬೇಕಾದ ಸಂಗತಿ. ರಾಷ್ಟ್ರದ ಸಮಗ್ರತೆ ಹಾಗೂ ರಾಜ್ಯಗಳ ಸ್ವಾಯತ್ತತೆಯನ್ನು ಗೊಂದಲವಿಲ್ಲದೆ ನಿಭಾಯಿಸಲು ಬೇಕಾದ ಅಂತರದೃಷ್ಟಿಗೆ ಕಣ್ತೆರೆಯಬೇಕು ಅಷ್ಟೆ.

Comments are closed.