ಗುಜರಾತ್‌ ರಾಜ್ಯಸಭಾ ಚುನಾವಣೆಯಲ್ಲಿ ನೋಟಾ ಬಳಕೆಗೆ ಸುಪ್ರೀಂ ಒಪ್ಪಿಗೆ : ಕಾಂಗ್ರೆಸ್‌ಗೆ ಹಿನ್ನೆಡೆ

ಗಾಂಧಿನಗರ : ಗುಜರಾತ್‌ ರಾಜ್ಯಸಭಾ ಚುನಾವಣೆಯಲ್ಲಿ ನೋಟಾ (ಮೇಲಿನ ಯಾರೂ ಅಲ್ಲ ಎಂಬ ಬಟನ್)  ಬಳಕೆಗೆ ಅನುಮತಿ ನೀಡಿರುವ ಕೇಂದ್ರ ಚುನಾವಣಾ ಆಯೋಗದ ನಿರ್ಧಾರಕ್ಕೆ ಸುಪ್ರೀಂಕೋರ್ಟ್‌ ಒಪ್ಪಿಗೆ ಸೂಚಿಸಿದೆ. ಇದರಿಂದ ನೋಟಾ ಬಳಕೆಯನ್ನು ತಡೆಯಬೇಕು ಎಂದು ಗುಜರಾತ್‌ ಕಾಂಗ್ರೆಸ್‌ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದ್ದು, ಕಾಂಗ್ರೆಸ್‌ಗೆ ಹಿನ್ನಡೆ ಉಂಟಾಗಿದೆ.

ನೋಟಾ ಆಯ್ಕೆ ಸಂವಿಧಾನಿಕ ವಿಷಯವಾಗಿದೆ. ಈ ಬಗ್ಗೆ ಚರ್ಚೆ ನಡೆಸುವುದು ಅಗತ್ಯ. ಆದ್ದರಿಂದ ಕಾಂಗ್ರೆಸ್ ಸಲ್ಲಿಸಿರುವ ಆಕ್ಷೇಪಣೆಗೆ ಎರಡು ವಾರಗಳಲ್ಲಿ ಉತ್ತರಿಸುವಂತೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ.

2014ರಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ನೋಟಾ ಬಳಕೆ ಕುರಿತಂತೆ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ಆಗ ವಿರೋಧಿಸದ ಕಾಂಗ್ರೆಸ್‌ ಈಗ ನೋಟಾ ಬಳಕೆಯನ್ನು ವಿರೋಧಿಸುತ್ತಿದೆ. ಇಷ್ಟು ವಿಳಂಬವಾಗಿ ವಿರೋಧಿಸಲು ಕಾರಣವೇನು ಎಂದು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ.

Comments are closed.